ಯುವಪಡೆಯಿಂದ ಮನೆ ಬಾಗಿಲಿಗೇ ಜನೌಷಧಿ
ಬೇಡಿಕೆಯಿಟ್ಟ ಅರ್ಧಗಂಟೆಯಲ್ಲಿ ಡೆಲಿವರಿ ! ಉತ್ಸಾಹಿ ಯುವಕರ ತಂಡದ ಮಾದರಿ ಸೇವೆ , ಔಷಧದ ದುಡ್ಡಷ್ಟೇ ಸ್ವೀಕಾರ-ಹೆಚ್ಚುವರಿ ಶುಲ್ಕವಿಲ್ಲ!
Team Udayavani, May 31, 2021, 6:30 PM IST
ವರದಿ : ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೊರೊನಾ ಕರ್ಫ್ಯೂ ಸಂಕಷ್ಟದಲ್ಲಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುವ ಜನೌಷಧಿ ಕೇಂದ್ರದ ಔಷಧಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಕೇಂದ್ರಗಳು ಮುಂದೆ ಬಂದಿವೆ.
ಇಲ್ಲಿನ ಕೇಂದ್ರವೊಂದಕ್ಕೆ ಬೇಡಿಕೆ ಸಲ್ಲಿಸಿದ ಅರ್ಧ ಗಂಟೆಯಲ್ಲಿ ಔಷಧಿಗಳನ್ನು ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ಉತ್ಸಾಹಿ ಯುವಕರ ತಂಡ ಕಾರ್ಯನಿರತವಾಗಿದೆ. ಈಗಾಗಲೇ ಕೆಲ ಔಷಧಿ ಅಂಗಡಿಗಳು ಫೋನ್ ಮೂಲಕ ಬೇಡಿಕೆ ಸಲ್ಲಿಸಿದವರಿಗೆ ಅವರ ಮನೆ ಬಾಗಲಿಗೆ ತಲುಪಿಸುವ ಕೆಲಸ ಮಾಡುತ್ತಿವೆ. ಆದರೆ ಕೇಂದ್ರದ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಮಂತ್ರಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರದ ಔಷಧಿ, ಮಾತ್ರೆಗಳ ಬೆಲೆ ತೀರ ಕಡಿಮೆ. ಹೀಗಿರುವಾಗ ದುಡಿಮೆಯಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಅತ್ಯಂತ ಕಡಿಮೆ ಹಾಗೂ ಗುಣಮಟ್ಟದ ಔಷಧಿಗಳನ್ನು ಅವರ ಮನೆಗಳಿಗೆ ತಲುಪಿಸುವ ಅಗತ್ಯವಿದೆ. ಇದನ್ನರಿತ ಇಲ್ಲಿನ ವಿಜಯನಗರದ ತಿರುಪತಿ ಬಜಾರ್‌ನಲ್ಲಿರುವ ಜನೌಷಧಿ ಕೇಂದ್ರದ ಮಾಲೀಕ ರಾಜು ಬದ್ದಿ ಅವರು ಇರುವ ತಂತ್ರಜ್ಞಾನ ಬಳಸಿಕೊಂಡು ಔಷಧಿಗಳನ್ನು ಮನೆ ಬಾಗಿಲಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಅರ್ಧ ಗಂಟೆಯಲ್ಲಿ ಬಾಗಿಲಿಗೆ: ಬೇಡಿಕೆ ಸಲ್ಲಿಸುವವರು ಜನೌಷಧಿ ಕೇಂದ್ರದ ವಾಟ್ಸ್‌ಆ್ಯಪ್ ನಂಬರಿಗೆ ವೈದ್ಯರ ಚೀಟಿ ಕಳುಹಿಸಬೇಕು. ಅಥವಾ ಫೋನ್ ಮಾಡಿ ಬೇಡಿಕೆ ಸಲ್ಲಿಸಲೂಬಹುದು. ಅವರ ಮನೆಯ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನೀಡಿದರೆ ಬೇಡಿಕೆ ಸಲ್ಲಿಸಿದ ಅರ್ಧ ಗಂಟೆಯಲ್ಲಿ ಔಷಧಿ ಮನೆ ಬಾಗಿಲಿಗೆ ಬರಲಿದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಬೇಡಿಕೆ ಸಲ್ಲಿಸಿದ ಔಷಧಿಯ ದರ ಮಾತ್ರ ಪಾವತಿ ಮಾಡಿದರೆ ಸಾಕು. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಫೋನ್ ಮೂಲಕ ಬೇಡಿಕೆ ಸಲ್ಲಿಸಿ ಅಗತ್ಯ ಔಷಧಿಗಳನ್ನು ಕುಳಿತಲ್ಲೇ ಪಡೆದುಕೊಳ್ಳಬಹುದು.
ನಿತ್ಯ 10-12 ಬೇಡಿಕೆ: ಕಳೆದ ಒಂದು ವಾರದಿಂದ ಈ ಕಾರ್ಯ ಆರಂಭವಾಗಿದ್ದು, ನಿತ್ಯ 10-12 ಬೇಡಿಕೆಗಳು ಸಲ್ಲಿಕೆಯಾಗುತ್ತಿವೆ. ಆರಂಭದಲ್ಲಿ ಸುತ್ತಮುತ್ತಲಿನ ಜನರು ಬೇಡಿಕೆ ಸಲ್ಲಿಸುತ್ತಿದ್ದರು. ಇದೀಗ ಮಹಾನಗರದ ವಿವಿಧೆಡೆಯಿಂದ ಬೇಡಿಕೆ ಬರುತ್ತಿವೆ. ಇದಕ್ಕಾಗಿ ಇಬ್ಬರು ಯುವಕರು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಬಂದ ಬೇಡಿಕೆಗಳನ್ನು ಕೋರಿಯರ್ ಮೂಲಕ ಕಳುಹಿಸುವ ಕೆಲಸ ಮಾಡಿದ್ದಾರೆ. ಇನ್ನೂ ಜಿಲ್ಲೆಯ ಕೆಲ ಗ್ರಾಮಗಳಿಂದ ಬಂದಿರುವ ಬೇಡಿಕೆಯನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಒಂದಿಷ್ಟು ಮಾತ್ರೆಗಳು ಇರುವಾಗಲೇ ಬೇಡಿಕೆ ಸಲ್ಲಿಸುವುದು ಉತ್ತಮ.
ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಮೆಡಿಕಲ್ ಸ್ಟೋರ್‌ಗಳಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಕೆಲವರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಮನೆಗಳಲ್ಲಿ ಕೇವಲ ಹಿರಿಯ ನಾಗರಿಕರಿದ್ದಾರೆ. ವಾಟ್ಸ್‌ಆ್ಯಪ್ ಬಳಸದವರು ಪಕ್ಕದ ಮನೆಯವರಿಂದ ವೈದ್ಯರ ಚೀಟಿಯನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ ಔಷಧಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆ, ಮಧುಮೇಹ, ಹೃದ್ರೋಗ ಕಾಯಿಲೆಯ ಔಷಧಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಕೆಯಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.