ಹುಬ್ಬಳ್ಳಿಯಲ್ಲಿ ಬಹುತೇಕ ನೀರಸ
Team Udayavani, Jun 13, 2017, 4:37 PM IST
ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಜೋಡಣೆ ಹಾಗೂ ರಾಜ್ಯದಲ್ಲಿ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 8:30 ಗಂಟೆಯಿಂದಲೇ ದೂರ ಸ್ಥಳಗಳ ಹಾಗೂ ನಗರ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು.
ನಗರದ ಹೊರವಲಯಗಳಿಂದ ದೂರದ ಸ್ಥಳಗಳ ಬಸ್ ಸಂಚಾರ ಕೈಗೊಳ್ಳಲಾಯಿತು. ನಗರದ ಕೆಲವೇ ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸಿದ್ದು ಬಿಟ್ಟರೆ ಬಹುತೇಕ ಶಾಲಾ-ಕಾಲೇಜುಗಳು, ಪೆಟ್ರೋಲ್ ಬಂಕ್, ಚಿತ್ರಮಂದಿರ, ಬ್ಯಾಂಕ್, ಸರಕಾರಿ ಕಚೇರಿಗಳು, ಹೊಟೇಲ್‌ಗಳು, ಮಾರಾಟ ಮಳಿಗೆಗಳು ಬಹುತೇಕ ಎಂದಿನಂತೆ ಕಾರ್ಯನಿರ್ವಹಿಸಿದವು.
ಬೆಳಗ್ಗೆ 6:30ಕ್ಕೆ ಹೋರಾಟಗಾರರು ಹೊಸೂರ ಡಿಪೋ ಬಂದ್ ಮಾಡಿ ಬಸ್‌ಗಳನ್ನು ಹೊರಗೆ ಬಿಡದಂತೆ ಮನವಿ ಮಾಡಿದರು. ಕೆಲ ಹೊತ್ತು ಗೇಟ್ ಬಳಿ ಘೋಷಣೆ ಕೂಗಿದರು. ಹೊಸೂರ ಸರ್ಕಲ್‌ನಲ್ಲಿ ರಸ್ತೆ ಬಂದ್ ಮಾಡಲು ಯತ್ನಿಸಿದಾಗ ಬೈಕ್ ಸವಾರರು ಹಾಗೂ ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹೊಸ ಬಸ್ ನಿಲ್ದಾಣ ಎದುರು ರಿಕ್ಷಾ ಚಾಲಕರು ಬಸ್‌ಗಳನ್ನು ತಡೆದು ರಸ್ತಾ ರೋಕೋ ನಡೆಸಿದರು.
ಹೋರಾಟಗಾರರು ಚನ್ನಮ್ಮ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ ಅಟೋ ಚಾಲಕರು ಹಾಗೂ ಮಾಲಿಕರ ಸಂಘದ ವತಿಯಿಂದ ಲಕ್ಷ್ಮಿ ಕಾಂಪ್ಲೆಕ್ಸ್‌ನಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆ ಮಾಡಿ ಚನ್ನಮ್ಮ ವೃತ್ತದಲ್ಲಿ ಪ್ರತಿಕೃತಿ ದಹನ ಮಾಡಲಾಯಿತು.
ಚನ್ನಮ್ಮ ವೃತ್ತದಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿಯನ್ನು ಗಲ್ಲಿಗೇರಿಸಿ ಪ್ರತಿಭಟಿಸಿದರು. ಕರ್ನಾಟಕ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ವತಿಯಿಂದ ಅರೆಬೆತ್ತಲೆ ಮೆರವಣಿಗೆ ಹಾಗೂ ವೃತ್ತದ ಸುತ್ತಲೂ ಉರುಳುವ ಮೂಲಕ ಪ್ರತಿಭಟನೆ ನಡೆಯಿತು.
ಕನ್ನಡ ಪರ ಹೋರಾಟಗಾರರು ಕೋರ್ಟ್ ವೃತ್ತ, ಕೇಶ್ವಾಪುರ, ದೇಶಪಾಂಡೆ ನಗರ ಸೇರಿದಂತೆ ಕೆಲವೆಡೆ ಅಂಗಡಿ, ಕಚೇರಿ ಹಾಗೂ ಶೋರೂಮ್‌ಗಳನ್ನು ಬಂದ್ ಮಾಡಿಸಿದರಾದರೂ, ಹೋರಾಟಗಾರರು ನಿರ್ಗಮಿಸಿದ ಕೆಲ ಹೊತ್ತಿನ ನಂತರ ಅಂಗಡಿಗಳು ಬಾಗಿಲು ತೆರೆದಿರುವುದು ಕಂಡು ಬಂತು.
ಸಂಸದರ ಮನೆಗೆ ಭದ್ರತೆ: ಬಂದ್ ಹಿನ್ನೆಲೆಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರ ನಿವಾಸ ಹಾಗೂ ಕಚೇರಿಗೆ ಭದ್ರತೆ ಒದಗಿಸಲಾಗಿತ್ತು. ಸಂಸದ ಜೋಶಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಕೇಶ್ವಾಪುರದ ಅನಂತ ಎಕ್ಸಿಕ್ಯೂಟಿವ್ ಹೊಟೇಲ್‌ಗೆ ಮುತ್ತಿಗೆ ಹಾಕಲು ಹೋರಾಟಗಾರರು ಆಗಮಿಸಿದರಾದರೂ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.
ಕೇಶ್ವಾಪುರ ರಸ್ತೆಯಿಂದ ಹೊಟೇಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಪೊಲೀಸ್ ಜೀಪ್ ನಿಲ್ಲಿಸಿದ್ದರಿಂದ ಹೋರಾಟಗಾರರು ಅಲ್ಲಿಯೇ ಕೆಲ ಹೊತ್ತು ನಿಂತು ಅಲ್ಲಿಂದ ನಿರ್ಗಮಿಸಿದರು. ಬಿಎಸ್‌ಎನ್‌ಎಲ್ ಕಚೇರಿಗೆ ಮುತ್ತಿಗೆ ಯತ್ನ: ಹೋರಾಟಗಾರರು ರೈಲ್ವೆ ನಿಲ್ದಾಣ ಸಮೀಪದ ಬಿಎಸ್‌ಎನ್ ಎಲ್ ಕಚೇರಿಗೆ ಬೀಗ ಹಾಕಲು ಹೋಗಿದ್ದರು.
ಆದರೆ ಅಲ್ಲಿ ಸಿಬ್ಬಂದಿ ಒಳಗೆ ಕೆಲಸ ಮಾಡುತ್ತಿದ್ದು, ಬಾಗಿಲು ಮುಚ್ಚಿದ್ದರಿಂದ ಹೋರಾಟಗಾರರು ಹಿಂದಿರುಗಬೇಕಾಯಿತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೇಂದ್ರೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಇಲ್ಲದಿದ್ದರಿಂದ ಅಟೋದವರ ಆಟಾಟೋಪ ಜೋರಾಗಿತ್ತು.
ಹುಬ್ಬಳ್ಳಿಯಿಂದ ಧಾರವಾಡ ದವರೆಗೆ ಪ್ರತಿಯೊಬ್ಬ ಪ್ರಯಾಣಿಕರಿಗೆ ತಲಾ 100ರೂ. ಪಡೆದರೆ, ನವನಗರದಿಂದ ಚನ್ನಮ್ಮ ವೃತ್ತದವರೆಗೆ ತಲಾ 50 ರೂ. ಪಡೆದರು. ಬಸ್‌ಗಳ ಸೇವೆ ಇರದಿದ್ದರಿಂದ ಅನೇಕರು ರೈಲ್ವೆಗಳ ಮೂಲಕ ಪ್ರಯಾಣಿಸಿದರು. ಹಳೆ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ಅನೇಕರು ನಡೆಯುತ್ತಲೇ ಹೋಗುತ್ತಿದ್ದುದು ಕಂಡು ಬಂತು.
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡುವುದಾಗಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದರು. ಆದರೆ ಹುಬ್ಬಳ್ಳಿಯಲ್ಲಿ ಚನ್ನಮ್ಮ ವೃತ್ತದಲ್ಲಿದ್ದ ಹೋರಾಟಗಾರರು ತಮ್ಮ ಹೋರಾಟವನ್ನು ಮಧ್ಯಾಹ್ನ 2:30ರ ವೇಳೆಗೆ ಕೊನೆಗೊಳಿಸಿದರು. ಮಳೆ ಕೂಡ ಹೋರಾಟಕ್ಕೆ ಅಡ್ಡಿಯಾಯಿತು.
ಮಳೆ ಆರಂಭವಾಗುತ್ತಿದ್ದಂತೆಯೇ ಪಕ್ಕದ ಅಂಗಡಿಗಳನ್ನು ಆಶ್ರಯಿಸುತ್ತಿದ್ದ ಹೋರಾಟಗಾರರು ಮಳೆ ನಿಂತ ಮೇಲೆ ವೃತ್ತಕ್ಕೆ ಬರುತ್ತಿದ್ದರು. ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ, ಜೆಡಿಎಸ್, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ದಳ, ಕರ್ನಾಟಕ ಸಂಗ್ರಾಮ ಸೇನೆ, ಆರ್ಯವೈಶ್ಯ ಸಂಘ, ಹುಬ್ಬಳ್ಳಿ ಅಟೋ ಚಾಲಕರ ಹಾಗೂ ಮಾಲಿಕರ ಸಂಘ, ಲಕ್ಷ್ಮಣ ಹಿರೇಕೆರೂರ ಅಟೋ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ರಾಜಣ್ಣ ಕೊರವಿ, ಸಿದ್ದು ತೇಜಿ, ವೀರಣ್ಣ ಮಳಗಿ, ಮಹೇಶ ಪತ್ತಾರ, ಅಮೃತ ಇಜಾರಿ, ಹೇಮನಗೌಡ ಬಸನಗೌಡರ, ಮಂಜುನಾಥ ಲೂತಿಮಠ, ಶಿವಣ್ಣ ಹುಬ್ಬಳ್ಳಿ, ಕುಮಾರಸ್ವಾಮಿ ಹಿರೇಮಠ, ಶೇಖರಯ್ಯ ಮಠಪತಿ, ನಾಗರಾಜ ಬಡಿಗೇರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Desi Swara: ಮುದ್ದಣ್ಣನ ಶ್ರೀ ರಾಮಾಶ್ವಮೇಧಂ ಪುಸ್ತಕ ಸಮರ್ಪಣೆ
ತನಿಖೆಗೆ ನನ್ನ ಸಹಕಾರವಿದೆ… ಈ ವಿಚಾರದಲ್ಲಿ ಪತ್ನಿ ಹೆಸರು ತರಬೇಡಿ: ರಾಜ್ ಕುಂದ್ರಾ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
Bengaluru: ಕಬ್ಬನ್ ಪಾರ್ಕ್‌ನಲ್ಲಿ ಪುಷ್ಪ ಪ್ರದರ್ಶನ
S.Africa: ಫಿಕ್ಸಿಂಗ್ ಕೇಸ್‌ನಲ್ಲಿ ಜೈಲು ಪಾಲಾದ ದ. ಆಫ್ರಿಕಾದ ಮಾಜಿ ನಂಬರ್ 1 ಬೌಲರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.