ಬಿಗ್ ಮಿಶ್ರಾ ಪೇಡಾದಿಂದ ಹೊಸ ಉತ್ಪನ್ನ
Team Udayavani, Jun 8, 2018, 5:09 PM IST
ಹುಬ್ಬಳ್ಳಿ: ಧಾರವಾಡ ಪೇಡಾ ಇನ್ನಿತರ ತಿನಿಸುಗಳ ತಯಾರಿಕೆಯಲ್ಲಿ ಖ್ಯಾತಿ ಹೊಂದಿರುವ ಧಾರವಾಡ ಮಿಶ್ರಾ ಪೇಡಾ ಮತ್ತು ಆಹಾರ ಸಂಸ್ಕರಣೆ ಉದ್ಯಮ, ಇನ್ನಷ್ಟು ಹೊಸ ಉತ್ಪನ್ನಗಳೊಂದಿಗೆ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ. ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಚಿನ್ನ, ಬೆಳ್ಳಿ, ನಗದು ರೂಪದ ಕೊಡುಗೆ ಘೋಷಿಸಿದೆ. ಬಿಗ್‌ಮಿಶ್ರಾ ಪೇಡಾ ಬ್ರಾಂಡ್‌ನಡಿ ಪೇಡಾ ಸೇರಿದಂತೆ ವಿವಿಧ ತಿನಿಸು ಹಾಗೂ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದೀಗ ಡೈರಿ ಉತ್ಪನ್ನಗಳು, ಮಸಾಲೆ, ಸಿದ್ಧ ಆಹಾರದಂತಹ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಥಾ ವಾಗ್‌ಮಲ್‌ನ ಮುಖ್ಯಸ್ಥ ಹಾಗೂ ಬಿಗ್ ಮಿಶ್ರಾ ಪೇಡಾ ಉತ್ಪನ್ನಗಳ ಮಾರ್ಕೆಟಿಂಗ್ ಮತ್ತು ಸ್ಟ್ರಾಟಜಿಕ್ ಮುಖ್ಯಸ್ಥ ರಮೇಶ ಬಾಫಣಾ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಿಶ್ರಾ ಪೇಡಾ ಉತ್ಪನ್ನಗಳ ಮಾರುಕಟ್ಟೆ ಪಾಲುದಾರಿಕೆಯನ್ನು ಮುಥಾ ವಾಗ್‌ಮಲ್ ಸಂಸ್ಥೆ ಪಡೆದಿದೆ ಎಂದರು.
ಬಿಗ್ ಮಿಶ್ರಾ ಪೇಡಾ ಉತ್ಪನ್ನಗಳು ಈಗಾಗಲೇ ರಾಜ್ಯದ ವಿವಿಧೆಡೆ ಅಲ್ಲದೆ ಗೋವಾ ಹಾಗೂ ಮಹಾರಾಷ್ಟ್ರದಲ್ಲೂ ಮಾರಾಟವಾಗುತ್ತಿವೆ. ಮಾರುಕಟ್ಟೆಯನ್ನು ಇನ್ನಷ್ಟು ವಿಸರಿಸಲಾಗುತ್ತಿದ್ದು, ಗ್ರಾಹಕರಿಗೆ ಬೇಕಾಗುವ ಹಲವು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದರು. ಬಿಗ್ ಮಿಶ್ರಾ ಪೇಡಾ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 75ಕೋಟಿ ರೂ.ಗಳ ವಹಿವಾಟು ನಡೆಸಿದ್ದು,ಅದನ್ನು 150ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
2020ರ ವೇಳೆಗೆ ನಂಬರ್ ಒನ್ ಗುರಿ: ಮುಕೇಶ ಬಾಫಣಾ ಮಾತನಾಡಿ, ಬಿಗ್ ಮಿಶ್ರಾ ಪೇಡಾ ದಕ್ಷಿಣ ಭಾರತದ ಅತಿದೊಡ್ಡ ಸಿಹಿ ತಿನಿಸು ತಯಾರಿಕೆ ಸಂಸ್ಥೆಯಾಗಿದ್ದು, ಇದೀಗ ಚಿಪ್ಸ್, ರಸ್ಕ್, ಕುಕ್ಕೀಸ್, ಮಸಾಲಾ, ಕುಲ್ಫಿ, ಸಿದ್ಧ ಆಹಾರ ಉತ್ಪನ್ನಗಳನ್ನು ಹೊರ ತರಲಾಗಿದೆ.ಶೀಘ್ರವೇ ಸುಗಂಧ ಅಡಿಗೆಪುಡಿ, ಪಾನ್ ಮಸಾಲ ಸೇರಿದಂತೆ ವಿವಿಧ ಉತ್ಪನ್ನಗಳು ಹೊರಬರಲಿವೆ. 2020ರ ವೇಳೆಗೆ ಸಂಸ್ಥೆ ನಂಬರ್ ಒನ್ ಸ್ಥಾನಕ್ಕೇರುವ ಗುರಿ ಹೊಂದಿದೆ ಎಂದರು.
ಬಿಗ್‌ಮಿಶ್ರಾ ಪೇಡಾದಿಂದ ಕೇವಲ 5ರೂ. ಗಳಲ್ಲಿ ದೊರೆಯುವಂತೆ ಹಲ್ವಾ, ಸೋನ್ ಪಾಪಡಿ ಇನ್ನಿತರ ಸಿಹಿ ತಿನಿಸುಗಳ ಸಣ್ಣ ಪಾಕೆಟ್ ಹೊರತರಲಾಗಿದೆ. ವಿಶೇಷವಾಗಿ ಪಟ್ಟಣ ಹಾಗೂ ಗ್ರಾಮೀಣ ರಿಟೇಲ್ ಗಳನ್ನು ತಲುಪುವ ಉದ್ದೇಶ ಹೊಂದಲಾಗಿದೆ ಎಂದರು. ಮೊದಲ ಹಂತದಲ್ಲಿ ಸುಮಾರು 5-10 ಸಾವಿರ ರಿಟೇಲ್‌ಗಳನ್ನು ತಲುಪುವ ನಂತರದಲ್ಲಿ ರಾಜ್ಯದ ಸುಮಾರು 1ಲಕ್ಷ ಅಂಗಡಿಗಳನ್ನು ತಲುಪುವ ಗುರಿ ಹೊಂದಲಾಗಿದೆ. ಬಿಗ್ ಮಿಶ್ರಾ ಪೇಡಾದ 121 ರೂ. ಮೌಲ್ಯದ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಸ್ಕ್ರ್ಯಾಚ್ ಕರೋ ಸೋನಾ ಚಾಂದೀ ಜೀತೋ ಕೊಡುಗೆಯಡಿ ಒಂದು ಗ್ರಾಂ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು, ನಗದು ಬಹುಮಾನ ನೀಡಲಾಗುತ್ತದೆ ಎಂದರು. ಶ್ರೀಧರ ಶೆಟ್ಟಿ, ರಾಜುಭಾಯಿ ಲೊಂಕಡ್, ಬೋರ್ಕರ್, ಲದ್ದಡ, ಅರುಣ ಜಾಧವ, ಸುಭಾಸಸಿಂಗ್ ಜಮಾದಾರ ಇನ್ನಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.