ನೀಲಗಿರಿ ಎಂಬ ಬಕಾಸುರ
| ಅಂತರ್ಜಲ ಕುಸಿಯುವಂತೆ ಮಾಡಿದ ಜಲ ರಾಕ್ಷಸ ಸಸ್ಯ | ಪಶು-ಪಕ್ಷಿಗಳಿಗೂ ಕಂಟಕವಾದ ತೋಪುಗಳು | ಹೈನುಗಾರಿಕೆಗೂ ಬಂತೀಗ ಕುತ್ತು
Team Udayavani, Jul 10, 2019, 9:27 AM IST
ಧಾರವಾಡ: ಜಿಲ್ಲೆಯ ಅರಣ್ಯ ಮಧ್ಯ ಬೆಳೆದು ನಿಂತ ಅಕೇಶಿಯಾ ಗಿಡಗಳು.
ಧಾರವಾಡ: ಒಂದು ನೀಲಗಿರಿ ಸಸಿ ನೆಟ್ಟರೆ ಹರಿಯುವ ಹಳ್ಳಕ್ಕೆ ಒಂದು ನೀರೆತ್ತುವ ಪಂಪ್‌ಸೆಟ್ ಇಟ್ಟಂತೆ. ದಿನವೊಂದಕ್ಕೆ 15 ಮೀಟರ್ ಎತ್ತರದ ಒಂದು ನೀಲಗಿರಿ ಗಿಡ ಬರೊಬ್ಬರಿ 20 ಲೀಟರ್ ನೀರು ಕುಡಿಯುತ್ತದೆ. ಇನ್ನು ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆಟ್ಟಿರುವ ನೀಲಗಿರಿಗೆ ದಿನಕ್ಕೆ ಎಷ್ಟು ಕೋಟಿ ಲೀಟರ್ ನೀರು ಬೇಕಾಗಬಹುದು ನೀವೇ ಊಹಿಸಿ.
ಇದು ನೀಲಗಿರಿ ಎಂಬ ಜಲಬಕಾಸುರನಿಗೆ ಜಿಲ್ಲೆಯ ಜೀವ ಸಂಕುಲ ಮತ್ತು ಅಂತರ್ಜಲ ಬಲಿಯಾದ ದುರಂತ ಕತೆ.
ಜಿಲ್ಲೆಯಲ್ಲಿ ಮೊದಲು ನೈಸರ್ಗಿಕ ಕಾಡು ಮತ್ತು ದೇಶಿ ಸಸ್ಯಗಳ ಸಂಪತ್ತು ಅಧಿಕವಾಗಿತ್ತು. 80ರ ದಶಕದಲ್ಲಿ ಕಂದಾಯ ಇಲಾಖೆಗೆ ಸೇರಿದ ಸುಮಾರು 5 ಸಾವಿರ ಎಕರೆಗೂ ಅಧಿಕ ಜಾಗದಲ್ಲಿ ನೀಲಗಿರಿ ತೋಪುಗಳನ್ನು ಬೆಳೆಸಲಾಯಿತು. ನೀಲಗಿರಿ ಬೆಳೆದ ಸ್ಥಳದಲ್ಲಿ ಇಂದು ಬೇರೆ ಯಾವ ಸಸ್ಯವೂ ಜೀವಂತವಾಗಿಲ್ಲ. ಅದೊಂದು ಗೂಂಡಾ ಬೆಳೆಯಾಗಿ ಸೆಟೆದು ನಿಂತಿದೆಯಷ್ಟೇ.
ಮೊದಲು ಇಲ್ಲಿನ ಸಣ್ಣ ಕೆರೆ ಕುಂಟೆಗಳು,ಒರತೆ ಮತ್ತು ನೀರಿನ ಬಾವಿಗಳಲ್ಲಿ ಜನವರಿ ತಿಂಗಳಿನವರೆಗೂ ತಿಳಿಯಾದ ಮತ್ತು ಕುಡಿಯಲು ಯೋಗ್ಯವಾದ ಅಂತರ್ಜಲವಿರುತ್ತಿತ್ತು. ಯಾವಾಗ ನೀಲಗಿರಿ ತೋಪುಗಳು ಎತ್ತರಕ್ಕೆ ಬೆಳೆಯಲಾರಂಭಿಸಿದವೋ, ಅದರ ಹತ್ತು ಪಟ್ಟು ಆಳಕ್ಕೆ ಅಂತರ್ಜಲ ಕುಸಿಯುತ್ತ ಹೋಯಿತು. ಇದೀಗ ನೀಲಗಿರಿ ತೋಪುಗಳ ಸುತ್ತಲಿನ ಭೂಮಿಯಲ್ಲಿ ಕನಿಷ್ಠ 400 ಅಡಿಗೆ ಅಂತರ್ಜಲ ಕುಸಿದು ಹೋಗಿದೆ. ಬಾವಿಗಳು ಬತ್ತಿ ಹೋಗಿವೆ. ಕೊಳವೆ ಬಾವಿಗಳು ಕೂಡ ಮಳೆಗಾಲದಲ್ಲಿ ಮಾತ್ರ ನೀರು ಹೊರ ಹಾಕುತ್ತಿವೆ. ಬರಗಾಲ ದೂರದ ಮಾತು, ಬೇಸಿಗೆ ಕಾಲ ಬಂತೆಂದರೆ ಸಾಕು ಬೋರ್‌ವೆಲ್ಗಳು ಬಿಕ್ಕಳಿಕೆ ಶುರು ಮಾಡುತ್ತಿವೆ. ಪೇಪರ್‌ಮಿಲ್ ಮತ್ತು ಮನೆ ಬಳಕೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಅಗ್ಗಕ್ಕೆ ಸಿಕ್ಕುವ ನೀಲಗಿರಿ ಕಟ್ಟಿಗೆ ಉತ್ತಮ ಎಂದು ಬಿಂಬಿಸಿಯೇ ಇದನ್ನು ಎಲ್ಲೆಂದರಲ್ಲಿ ನೆಡಲಾಗಿದೆ. ಜಿಲ್ಲೆಯಲ್ಲಿನ ಸೂಕ್ಷ್ಮ ಜೀವಿಗಳ ವಲಯಗಳೆಲ್ಲವೂ ನೀಲಗಿರಿ ಮತ್ತು ಅಕೇಶಿಯಾದಿಂದ ಆವೃತವಾದ ನಂತರ ಅಲ್ಲಿನ ಜೈವಿಕ ಪರಿಸರವೇ ದಿಕ್ಕೆಟ್ಟು ಹೋಗಿದೆ. ಬಣದೂರು ವ್ಯಾಪ್ತಿಯಲ್ಲಿ ಅತೀ ಹೆಚ್ಚು ನವಿಲುಗಳು ಓಡಾಡುತ್ತಿದ್ದ ಕಾಡಿನ ಮಧ್ಯ ಆಕೇಶಿಯಾ ತೋಪುಗಳು ಮೇಲೆದ್ದಿದ್ದರಿಂದ ಅಲ್ಲಿ ನವಿಲು, ಜಿಂಕೆಗಳ ಸಂಖ್ಯೆಯೇ ಕುಸಿದು ಹೋಗಿದೆ.
ಕಾಡಿನ ಮಧ್ಯ ತೂರಿ ಬಂದ ನೀಲಗಿರಿ: ಬರೀ ನೆಡುತೋಪುಗಳಿಗೆ ಸೀಮಿತವಾಗಿದ್ದರೆ ನೀಲಗಿರಿ ನಂತರದ ಬರ ಕಾಮಗಾರಿಗಳ ಸಂದರ್ಭದಲ್ಲಿ ಜಿಲ್ಲೆಯ ಪಶ್ಚಿಮಘಟ್ಟದ ಕಾಡುಗಳನ್ನು ಆವರಿಸಿಕೊಂಡಿತು. ಇಲ್ಲಿನ ಹೊಲ್ತಿಕೋಟೆ, ಹುನಸಿಕುಮರಿ, ಕಲಕೇರಿ, ಬಣದೂರಿನಲ್ಲಿರುವ ಸಾಗವಾನಿ ಮತ್ತು ಕರಿಮತ್ತಿಯ ದಟ್ಟಾರಣ್ಯದ ಮಧ್ಯದಲ್ಲಿಯೇ ನೀಲಗಿರಿ ಗಿಡಗಳನ್ನು ನೆಟ್ಟು ಪೋಷಿಸಲಾಯಿತು. ಅರಣ್ಯದ ಮಧ್ಯದ ಗುಂಡಿಗಳಲ್ಲಿ ನಿಲ್ಲುತ್ತಿದ್ದ ಮತ್ತು ತೆಳುವಾಗಿ ಹರಿಯುತ್ತಿದ್ದ ನೀರನ್ನೆಲ್ಲ ನೀಲಗಿರಿ ಗಿಡಮರಗಳು ಸೀಟಿ ಕುಡಿದು ಅಲ್ಲಿಯೂ ಅಂತರ್ಜಲ ಕುಸಿಯುವಂತೆ ಮಾಡಿವೆ.
80ರ ದಶಕದಲ್ಲಿ ಅಂದಿನ ರಾಜ್ಯದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಮಾಡಿದ ಅತೀ ದೊಡ್ಡ ತಪ್ಪೊಂದರ ಪರಿಣಾಮ ಧಾರವಾಡ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯವೇ ಇಂದು ತೊಂದರೆ ಅನುಭವಿಸುವಂತಾಗಿದೆ. ನೀಲಗಿರಿಯ ತೊಂದರೆಗಳು ಮನದಟ್ಟಾಗಲು ಮೂರು ದಶಕ ಬೇಕಾಯಿತು. ಇದೀಗ ಸರ್ಕಾರ 2017ರಲ್ಲಿ ನೀಲಗಿರಿ ಮತ್ತು ಅಕೇಶಿಯಾ ಬೆಳೆಸುವುದು ಮತ್ತು ನೆಡುವುದನ್ನು ನಿಷೇಧಿಸಿದೆ. ಆದರೆ ನೆಟ್ಟ ಗಿಡಗಳನ್ನು ಬೇರು ಸಮೇತ ಕೀಳಲು ಇನ್ನು 3 ದಶಕಗಳು ಬೇಕೆನ್ನುತ್ತಿದ್ದಾರೆ ಪರಿಸರ ತಜ್ಞರು ಮತ್ತು ಅರಣ್ಯ ಇಲಾಖೆ.
ಹಳ್ಳಿಗರ ಬದುಕು ಕಿತ್ತ ನೀಲಗಿರಿ: ದಡ್ಡ ಕಮಲಾಪೂರ ಎಂಬ ಪುಟ್ಟಯ ಎಲ್ಲಾ ಕುಟುಂಬಗಳು ಹೈನುಗಾರಿಕೆ ಮತ್ತು ಕುರುಚಲು ಕಾಡಿನ ನೇರಳೆ, ಕವಳಿ, ಶಿವಪರಗಿ, ಪರಗಿ ಹಣ್ಣುಗಳು, ತೊಂಡೆ, ಅಡವಿ ಮಡಿವಾಳ, ಹಾಗಲುಕಾಯಿಗಳನ್ನೇ ಆಯ್ದುಕೊಂಡು ತಂದು ಉಪ ಜೀವನ ಸಾಗಿಸುತ್ತಿದ್ದರು. 80ರ ದಶಕದಲ್ಲಿ ಈ ಭಾಗದಲ್ಲಿ ನೆಟ್ಟ ನೀಲಗಿರಿ ತೋಪುಗಳಿಂದ ಇಲ್ಲಿನ ಕುರುಚಲು ಕಾಡೆಲ್ಲವೂ ಮಾಯವಾಗಿದೆ ಅಷ್ಟೇಯಲ್ಲ, ಅಲ್ಲಿಗ ಬರೀ ಕಾಂಗ್ರೆಸ್, ಯುಪಟೋರಿಯಂ ಕಸ ರಾಕ್ಷಸ ಸ್ವರೂಪ ಪಡೆದಿದೆ.
ವೀರಾಪುರ, ರಾಮಾಪುರ, ಕಲ್ಲಾಪುರ, ದುರ್ಗದ ಕೇರಿ, ಕನ್ನಿಕೊಪ್ಪ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಸರ್ಕಾರಿ ಜಾಗೆಯಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆಟ್ಟಿರುವ ನೀಲಗಿರಿ ಈಗಾಗಲೇ ಮೂರು ಬಾರಿ ಕಟಾವ್ ಆಗಿದ್ದು, ಮತ್ತೆ ಬೆಳೆದು ನಿಂತಿದೆ. ಕಟಾವ್ ನಂತರ ಒಂದಕ್ಕೆ ಮೂರು ಟಿಸಿಳು ಒಡೆಯುವ ನೀಲಗಿರಿ ಅಂತರ್ಜಲವನ್ನು ವಿಪರೀತವಾಗಿ ಹೀರುತ್ತಿದ್ದು, ಈ ಜಾಗದಲ್ಲಿ ಮತ್ತೆ ದೇಶಿ ಕಾಡು ಹುಟ್ಟಬೇಕಾದರೆ ದಶಕಗಳೇ ಕಾಯಬೇಕು.
ಸರ್ಕಾರ ನೀಲಗಿರಿಯನ್ನೇನೋ ನಿಷೇಧಿಸಿದೆ. ಆದರೆ ಇರುವ ನೀಲಗಿರಿ ತೋಪುಗಳನ್ನು ಬೇರು ಸಮೇತ ಕಿತ್ತು ಹಾಕುವುದು ಸವಾಲಾಗಿದೆ. ಒಂದು ನೀಲಗಿರಿ ಬೆಳೆಸಲು ತಗಲುವ ವೆಚ್ಚ 10 ರೂ.ಗಳಾದರೆ, ಬೇರು ಸಮೇತ ಕಿತ್ತು ಹಾಕಲು 200 ರೂ. ವ್ಯಯಿಸಬೇಕಿದೆ. ಇದು ಸದ್ಯಕ್ಕಂತೂ ಅಸಾಧ್ಯ. ಕಟಾವು ಮಾಡಿದ ಗಿಡದಿಂದ ಕನಿಷ್ಠ 5 ರೆಂಬೆಗಳು ಐದೇ ವರ್ಷದಲ್ಲಿ 10 ಮೀಟರ್ ಎತ್ತರಕ್ಕೆ ಬೆಳೆದು ನಿಲ್ಲುವ ಶಕ್ತಿ ನೀಲಗಿರಿ ಸಸ್ಯಕ್ಕಿದೆ. ಹೀಗಾಗಿ ನೀಲಗಿರಿ ಎಂಬ ರಕ್ತಬೀಜಾಸುರನ ಅಂತ್ಯವಾಗಲು ದಶಕಗಳೇ ಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.