ಅರಣ್ಯವಾಸಿಗಳ ಒಕ್ಕಲೆಬ್ಬಿಸಲು ನೋಟಿಸ್
|30 ದಿನಗಳಲ್ಲಿ ಮನೆ ಖಾಲಿಗೆ ಸೂಚನೆ |ಕಂಗಾಲಾದ 150ಕ್ಕೂ ಅಧಿಕ ಕುಟುಂಬ |ಉಗ್ರ ಹೋರಾಟಕ್ಕೆ ನಡೆದಿದೆ ಸಿದ್ಧತೆ
Team Udayavani, Jul 17, 2019, 9:28 AM IST
ಧಾರವಾಡ: ಇವರಿಗೆ ಮನೆ ಜಾಗೆಯನ್ನು ಸರ್ಕಾರವೇ ತೋರಿಸಿದೆ. ಮನೆಗಳನ್ನು ಕೂಡ ಸರ್ಕಾರವೇ ಕಟ್ಟಿಕೊಟ್ಟಿದೆ. ಈ ಮನೆಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಸರ್ಕಾರವೇ ನೀಡಿದೆ, ಅಷ್ಟೇಯಲ್ಲ, ಸಿಮೆಂಟ್ ರಸ್ತೆಯನ್ನು ಕೂಡ ಸರ್ಕಾರವೇ ತನ್ನ ಸ್ವಂತ ಹಣ ಖರ್ಚು ಮಾಡಿ ನಿರ್ಮಿಸಿಕೊಟ್ಟಿದೆ. ಆದರೆ ಇದೀಗ ಈ ಇಡೀ ಕಾಲೋನಿಗಳೇ ಅಕ್ರಮವಾಗಿದ್ದು, ಒಂದು ತಿಂಗಳಲ್ಲಿ ಇಲ್ಲಿನ ಮನೆ ಖಾಲಿ ಮಾಡಿ ಎಂದು ಕೂಡ ಇದೇ ಸರ್ಕಾರ ಹೇಳುತ್ತಿದೆ!
ಹೌದು, ಧಾರವಾಡ ಜಿಲ್ಲೆ ಕಲಕೇರಿ ಗ್ರಾಪಂ ವ್ಯಾಪ್ತಿಯಲ್ಲಿನ ಕಲಕೇರಿ, ದೇವಗಿರಿ, ಲಾಳಗಟ್ಟಿ, ಹುಣಸಿಕುಮರಿ ಮತ್ತು ಉಡದ ನಾಗಲಾವಿ ಗ್ರಾಮಗಳಲ್ಲಿ. 1960ಕ್ಕಿಂತಲೂ ಪೂರ್ವದಲ್ಲಿಯೇ ವಾಸಿಸುತ್ತ ಬಂದ ಕುಟುಂಬಗಳಿಗೆ 1984ರಲ್ಲಿ ಜನತಾ ಪ್ಲಾಟ್‌ಗಳನ್ನು ನಿರ್ಮಿಸಿ ಕೊಡಲಾಗಿದೆ. ಇದಾದ ನಂತರ ಅವರಿಗೆ ಮನೆಪಟ್ಟಿ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಅಷ್ಟೇಯಲ್ಲ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಈ ಮನೆಗಳನ್ನು ನಿರ್ಮಿಸಲಾಗಿದೆ.
ಆದರೆ, ಇದ್ದಕ್ಕಿದ್ದಂತೆ ಜು.7ರಂದು ಧಾರವಾಡದ ಸಹಾಯಕ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನಿಮ್ಮ ಕುಟುಂಬಗಳು ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಅತಿಕ್ರಮಿಸಿಕೊಂಡು ಮನೆ ನಿರ್ಮಿಸಿಕೊಂಡಿವೆ. ಈ ಮನೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಕೂಡ ಸಲ್ಲಿಸಿಲ್ಲ. ಅರಣ್ಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಲಾಗಿ ಧಾರವಾಡ ತಾಲೂಕಿನ ಕಲಕೇರಿ ಗ್ರಾಪಂ ವ್ಯಾಪ್ತಿಯ ದೇವಗಿರಿಯ 34 ಗುಂಟೆ ಜಾಗದಲ್ಲಿನ ಮನೆಗಳು, ಕಲಕೇರಿ-19,ಲಾಳಗಟ್ಟಿ,-20,ಹುಣಸಿಕುಮರಿ-20, ಉಡದ ನಾಗಲಾವಿ-35 ಸೇರಿದಂತೆ ಒಟ್ಟು 150ಕ್ಕೂ ಅಧಿಕ ಕುಟುಂಬಗಳು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿವೆ. ಕೂಡಲೇ ಇವುಗಳನ್ನು ತೆರುವುಗೊಳಿಸಬೇಕು ಎಂದು ಪ್ರತಿ ಮನೆಗೂ ನೋಟಿಸ್ ನೀಡಲಾಗಿದೆ.
ಕಂಗಾಲಾದ ರೈತರು: ಅರಣ್ಯ ಇಲಾಖೆ ನೋಟಿಸ್‌ನಿಂದ ತೀವ್ರ ಕಂಗಾಲಾಗಿರುವ ಈ ಐದು ಹಳ್ಳಿಯ ಜನರು ದಿಕ್ಕು ತೋಚದಂತಾಗಿದ್ದಾರೆ. ಇದ್ದಕ್ಕಿದ್ದಂತೆ ಬಂದು ಎಲ್ಲರನ್ನು ಮನೆಯಿಂದ ಹೊರ ಹಾಕುತ್ತೇವೆ ಎಂದು ಹೇಳಿದರೆ ಹೇಗೆ ? ನಾವಿಲ್ಲಿ 1960ರಿಂದಲೂ ವಾಸ ಮಾಡುತ್ತಿದ್ದೇವೆ. ಸ್ವತಃ ಸರ್ಕಾರವೇ ನಮಗೆ ಜನತಾ ಮನೆಗಳನ್ನು ಕಟ್ಟಿಕೊಟ್ಟಿದೆ. ಇಲ್ಲಿವರೆಗೂ ಮನೆಪಟ್ಟಿ, ವಿದ್ಯುತ್ ಬಿಲ್, ನೀರಿನ ಬಿಲ್ಗಳನ್ನು ತುಂಬಿಸಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಜನತಾ ಮನೆಗಳನ್ನು ನಿರ್ಮಿಸುವಾಗ ಸ್ವತಃ ಅಂದಿನ ಅರಣ್ಯ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಜಾಗೆಯನ್ನು ತೋರಿಸಿ ಅಲ್ಲಿ ಟ್ರೆಂಚ್‌ಗಳನ್ನು ಹಾಕಿ ಅಷ್ಟರ ಒಳಗಡೆಯೇ ಮನೆ ನಿರ್ಮಿಸಿಕೊಳ್ಳುವಂತೆ ಹೇಳಿ ಹೋಗಿದ್ದಾರೆ. ಅಷ್ಟೇಯಲ್ಲ ಈವರೆಗಿನ ಎಲ್ಲಾ ಸೌಲಭ್ಯಗಳು ಗ್ರಾಪಂ ಮತ್ತು ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ವಸತಿ ಇಲಾಖೆಯಿಂದಲೇ ಪಡೆದುಕೊಂಡಿದ್ದೇವೆ. ಅಂದು ಇಲ್ಲದ ತಕರಾರು ಇಂದೇಕೆ? ಇದ್ದಕ್ಕಿದ್ದಂತೆ ಬಂದು ಮನೆ ಖಾಲಿ ಮಾಡಿ ಎಂದರೆ ಹೇಗೆ ಎನ್ನುತ್ತಿದ್ದಾರೆ.
ಎಲ್ಲರಿಗೂ ನೀರು, ನೆರಳು, ಊಟ ಕೊಡುವ ಭರವಸೆ ನೀಡುವ ಸರ್ಕಾರಗಳಿಂದ ಒಕ್ಕಲೆಬ್ಬಿಸುವ ಗುಮ್ಮ ಸದಾ ಜನರನ್ನು ಕಾಡುತ್ತಲೇ ಇದೆ. ಅರಣ್ಯ ಇಲಾಖೆ ಭೂಮಿಯಲ್ಲಿ ಮನೆಗಳನ್ನು ಕಟ್ಟಿದ್ದೀರಿ ಕೂಡಲೇ ಇವುಗಳನ್ನ ತೆರುವುಗೊಳಿಸಿ ಎಂದು ಹೇಳುತ್ತಿರುವ ಅಧಿಕಾರಿ ವರ್ಗಕ್ಕೆ ಏನು ಹೇಳಬೇಕು ಎನ್ನುವ ಪ್ರಶ್ನೆ ಈ ಗ್ರಾಮಸ್ಥರದ್ದು.
ಹೋರಾಟದ ಎಚ್ಚರಿಕೆ: ಅಜ್ಜ-ಅಪ್ಪನ ಕಾಲದಿಂದಲೂ ಇಲ್ಲಿದ್ದೇವೆ. ಕೂಲಿ-ನಾಲಿ ಮಾಡಿ ಮನೆ ಕಟ್ಟಿಕೊಂಡು ಜೀವನ ಮಾಡಿದ್ದೇವೆ. ಒಂದು ವೇಳೆ ಇಲ್ಲಿಂದ ಒಕ್ಕಲು ಎಬ್ಬಿಸಲು ಬಂದರೆ ನಮ್ಮ ಜೀವ ಕೊಡುತ್ತೇವೆಯೇ ಹೊರತು ಎಂದಿಗೂ ನಾವು ನಮ್ಮ ಜಾಗೆಯನ್ನು ಬಿಟ್ಟು ಕೊಡುವುದಿಲ್ಲ. ಸರ್ಕಾರವೇ ನಮಗೆ ಜನತಾ ಪ್ಲಾಟ್‌ಗಳನ್ನು ನಿರ್ಮಿಸಿಕೊಟ್ಟು,ಇದೀಗ ಇಲ್ಲಿಂದು ಎದ್ದು ಹೋಗಿ ಎಂದರೆ ಹೇಗೆ? ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ. ಅಂತಹ ಪ್ರಸಂಗ ಬಂದರೆ ಹೋರಾಟ ಅನಿವಾರ್ಯವಾಗುತ್ತದೆ ಎನ್ನುತ್ತಿದ್ದಾರೆ ಸಂತ್ರಸ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.