ವಾಯವ್ಯ ಸಾರಿಗೆಯಿಂದ ಆಕ್ಸಿಜನ್ ಬಸ್
ಎಲ್ಲಾ ವಿಭಾಗಗಳಲ್ಲೂ ಒಂದೆರಡು ಬಸ್ ಸಜ್ಜು | ಜಿಲ್ಲಾಡಳಿತ, ಆರೋಗ್ಯ ಇಲಾಖೆ ಜತೆ ಕೈ ಜೋಡಿಸಲು ಸಿದ್ಧ !
Team Udayavani, May 18, 2021, 2:03 PM IST
ವರದಿ: ಹೇಮರೆಡ್ಡಿ ಸೈದಾಪೂರ
ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಲು ಮುಂದಾಗಿದೆ.
ಆಯಾ ಜಿಲ್ಲಾಡಳಿತದ ಬೇಡಿಕೆ ಮೇರೆಗೆ ಆಕ್ಸಿಜನ್ ಬಸ್‌ಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಂಡಿದ್ದು, ಸಂಸ್ಥೆ ವ್ಯಾಪ್ತಿಯ ಎಲ್ಲಾ ವಿಭಾಗಗಳಲ್ಲೂ ಮೊದಲ ಹಂತದಲ್ಲಿ ಒಂದೆರಡು ಬಸ್ ಸಜ್ಜುಗೊಳಿಸಲಾಗುತ್ತಿದೆ. ಮೊದಲ ಅಲೆ ಸಂದರ್ಭದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯ ಎಲ್ಲಾ ಜಿಲ್ಲಾಡಳಿತಗಳ ಬೇಡಿಕೆ ಮೇರೆಗೆ ಫೀವರ್ ಕ್ಲಿನಿಕ್, ಗಂಟಲು ದ್ರವ ತಪಾಸಣೆಗೆ ಅಗತ್ಯ ಬಸ್‌ಗಳನ್ನು ನೀಡಲಾಗಿತ್ತು. ಇದರಿಂದ ಕಳೆದ ಬಾರಿಯ ಲಾಕ್‌ಡೌನ್ ಸಂದರ್ಭದಲ್ಲಿ ಜನರು ಹೊರಗೆ ಬಾರದಂತಹ ಪರಿಸ್ಥಿತಿ ನಿಮಾಣವಾಗಿತ್ತು. ಹೀಗಾಗಿ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಪ್ರದೇಶಗಳಿಗೆ ತೆರಳಿ ಗಂಟಲು ದ್ರವ ಸಂಗ್ರಹಣೆ, ಅಲ್ಲಿನ ಜನರ ಆರೋಗ್ಯ ತಪಾಸಣೆಗೆ ಈ ಬಸ್‌ಗಳು ಸಾಕಷ್ಟು ಅನುಕೂಲಗಳಾಗಿದ್ದವು. ಈ ಕಾರ್ಯಗಳಿಗೆ ತಕ್ಕಂತೆ ಬಸ್‌ನೊಳಗೆ ಮಾರ್ಪಾಡು ಮಾಡಲಾಗಿತ್ತು. ಎರಡನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಸಮಸ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಪೂರಕವಾಗಿ ಬಸ್‌ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಈಗಾಗಲೇ ಬಿಎಂಟಿಸಿ ವ್ಯಾಪ್ತಿಯಲ್ಲಿ ಆಕ್ಸಿಜನ್ ಬಸ್ ಸಿದ್ಧಪಡಿಸಿದ್ದು, ಇದರಿಂದ ಅಲ್ಲಿನ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಉಸಿರಾಟ ಸಮಸ್ಯೆ ಉಂಟಾದವರು ಒಂದಿಷ್ಟು ಸಮಯ ಬಸ್‌ನಲ್ಲೇ ಕುಳಿತುಕೊಂಡು ಆಕ್ಸಿಜನ್ ಪಡೆಯುತ್ತಿದ್ದಾರೆ.
ಅಗತ್ಯ ಇರುವ ಸ್ಥಳಗಳಿಗೆ ಈ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಇದೇ ನಿಟ್ಟಿನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ರಾಜ್ಯದ ಎಲ್ಲಾ ಕಡೆಯೂ ಆಕ್ಸಿಜನ್ ಬಸ್‌ಗಳನ್ನು ಸಿದ್ಧಪಡಿಸಬೇಕೆನ್ನುವ ಸೂಚನೆ ನೀಡಿದ್ದು, ಸಂಸ್ಥೆ ವ್ಯಾಪ್ತಿಯಲ್ಲಿ 9 ವಿಭಾಗಗಳಲ್ಲಿ ಬಸ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಪೂರ್ವ ಸಿದ್ಧತೆ: ಉತ್ತರ ಕನ್ನಡ, ಧಾರವಾಡ ಸೇರಿದಂತೆ ಕೆಲ ವಿಭಾಗಗಳಲ್ಲಿ ಬಸ್‌ಗಳನ್ನು ಆಕ್ಸಿಜನ್ ಬಸ್ ಗಳನ್ನಾಗಿ ಮಾರ್ಪಾಡು ಮಾಡಲು ಬೇಕಾದ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಆಕ್ಸಿಜನ್ ಸಿಲಿಂಡರ್, ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಸಲು ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಇವುಗಳಿಗೆ ಬೇಕಾದ ವಿದ್ಯುತ್ ಸೌಲಭ್ಯ, ಬಸ್ ಚಾಲಕನಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೂಡಲು ವ್ಯವಸ್ಥೆ, ವೈರಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಇದಕ್ಕೆ ಬೇಡಿಕೆ ಹಾಗೂ ಸಿಲಿಂಡರ್, ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಒದಗಿಸುತ್ತಿದ್ದಂತೆ ಒಂದು ದಿನದಲ್ಲೇ ಅಳವಡಿಸಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ತಗ್ಗಿದ ಆಂಬ್ಯುಲೆನ್ ಮೇಲಿನ ಒತ್ತಡ: ನಗರ ಪ್ರದೇಶಗಳಿಂದ ತಾಲೂಕು ಕೇಂದ್ರಗಳಿಗೆ ಆಕ್ಸಿಜನ್ ಸಿಲಿಂಡರ್ ಸಾಗಿಸಲು ಆಂಬ್ಯುಲೆನ್ಸ್‌ಗಳನ್ನು ಬಳಸಲಾಗುತ್ತಿತ್ತು. ಇದರಿಂದ ರೋಗಿಗಳ ಸೇವೆಗೆ ಸಾಕಷ್ಟು ಹಿನ್ನಡೆಯಾಗುತ್ತಿತ್ತು. ಹೀಗಾಗಿ ಸಾರಿಗೆ ಸಂಸ್ಥೆಯಿಂದ ಜಿಲ್ಲಾಡಳಿತಕ್ಕೆ ಐದು ವಾಹನಗಳನ್ನು ನೀಡಲಾಗಿದೆ. ಇವುಗಳನ್ನು ಬಳಸಿ ಸಿಲಿಂಡರ್ ಸಾಗಾಟ, ಇತರೆ ವೈದ್ಯಕೀಯ ಪರಿಕರಗಳ ಸಾಗಿಸಲು ಬಳಸಲಾಗುತ್ತಿದೆ. ಇದರಿಂದ ಆಂಬ್ಯುಲೆನ್ಸ್‌ಗಳ ಮೇಲಿನ ಒತ್ತಡ ಕಡಿಮೆಯಾಗಿ ರೋಗಿಗಳ ಸೇವೆಗೆ ಅನುಕೂಲವಾಗಿದೆ. ಸದ್ಯ ಸಾರಿಗೆ ಸೇವೆ ಇಲ್ಲದ ಪರಿಣಾಮ ಸಿಬ್ಬಂದಿ, ವಾಹನಗಳಿಗೆ ಕೊರತೆಯಿಲ್ಲ. ಸಂಸ್ಥೆಯ ವ್ಯಾಪ್ತಿಯ ಯಾವ ಜಿಲ್ಲಾಡಳಿತ ಬೇಡಿಕೆ ಸಲ್ಲಿಸಿದರೂ ಅಗತ್ಯ ನೆರವು ನೀಡಲು ನಾವು ಸಿದ್ಧರಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸುತ್ತೇವೆ ಎನ್ನುತ್ತಾರೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ.
ಗ್ರಾಮೀಣ ಭಾಗಗಳಿಗೆ ಅಗತ್ಯ: ಕೆಲ ನಗರ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಇಳಿಮುಖ ಕಾಣುತ್ತಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಗ್ರಾಮೀಣ ಭಾಗ ಇದೀಗ ಕೊರೊನಾ ಹಾಟ್ ಸ್ಪಾಟ್‌ಗಳಾಗುತ್ತಿವೆ. ಇದನ್ನು ನಿಭಾಯಿಸುವುದು ಅಷ್ಟೊಂದು ಸುಲಭವಲ್ಲದ ಕಾರಣ ಈ ಭಾಗಗಳಿಗೆ ಆಕ್ಸಿಜನ್ ಬಸ್‌ಗಳು ಸಾಕಷ್ಟು ಸಹಕಾರಿಯಾಗಲಿವೆ. ತಾಲೂಕು ಕೇಂದ್ರಗಳಲ್ಲಿ ಆಕ್ಸಿಜನ್ ಬೆಡ್ ಗಳು ನಿರೀಕ್ಷಿತ ಪ್ರಮಾಣದಲ್ಲಿ ಇರಲ್ಲ. ಇಂತಹ ಸಂದರ್ಭದಲ್ಲಿ ಆಕ್ಸಿಜನ್ ಬೆಡ್‌ಗಳಿಗೆ ಬೇಡಿಕೆಯುಂಟಾದರೆ ಕೆಲ ಸಮಯವಾದರೂ ಆಕ್ಸಿಜನ್ ಬಸ್‌ಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ನಂತರ ನಗರ ಪ್ರದೇಶದ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ಮೂಲಕ ಕಳುಹಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.