ನೋಡಬನ್ನಿ ಹುಬ್ಬಳ್ಳಿ ‘ಶಿವಶಕ್ತಿಧಾಮ’ದ ಸೌಂದರ್ಯ.. ದೇವಾಲಯದ ವೈಶಿಷ್ಟ್ಯವೇನು?


Team Udayavani, Feb 22, 2024, 5:38 PM IST

ನೋಡಬನ್ನಿ ಹುಬ್ಬಳ್ಳಿ ‘ಶಿವಶಕ್ತಿಧಾಮ’ದ  ಸೌಂದರ್ಯ.. ದೇವಾಲಯದ ವೈಶಿಷ್ಟ್ಯವೇನು?

ಸನಾತನ ಹಿಂದು ಧರ್ಮದಲ್ಲಿ ದೇವರು, ದೇವಸ್ಥಾನಗಳಿಗೆ ಇರುವ ಪ್ರಾಮುಖ್ಯ ಅಪಾರ. ಮನೆಗಳಲ್ಲಿಯೂ ದೇವರ ಪೂಜೆ ಮಾಡುತ್ತೇವೆ. ಆದರೆ, ದೇವಸ್ಥಾನಗಳಲ್ಲಿ ಇರುವ ಆಕರ್ಷಣೆಯೇ ಬೇರೆ. ಅವು ನಾಡಿನ ಶಕ್ತಿಕೇಂದ್ರಗಳಿದ್ದಂತೆ. ನಂಬಿಕೆಯ ತಳಹದಿಯ ಮೇಲೆ ನಿರ್ಮಾಣವಾಗುವ ದೇಗುಲಗಳು, ಮನಸ್ಸಿನ ದುಗುಡಗಳನ್ನು ದೂರಮಾಡಿ ನವ ಚೈತನ್ಯ ತುಂಬುವ ಧಾರ್ಮಿಕ ಶ್ರದ್ಧಾ ಕೇಂದ್ರಗಳು. ಉತ್ತರದ ಅಯೋಧ್ಯೆಯಲ್ಲಿ ಅರಳಿನಿಂತ ರಾಮಮಂದಿರದಂತೆ ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪ ಬಳಿ ಬೃಹತ್ ಶಿವಾಲಯ ತಲೆ ಎತ್ತಿನಿಂತಿದೆ. ಹಿಂದು ಧರ್ಮದ ಹಿರಿಮೆ-ಗರಿಮೆಯನ್ನು ಎತ್ತಿ ಹಿಡಿಯುವ ಶ್ರೀ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಹಲವಾರು ಸಂತ-ಶರಣು ಆಗಿಹೋಗಿರುವ ಈ ನೆಲದಲ್ಲಿ ಭಕ್ತಿಯ ಸುಧೆ ಹರಿಸಲು ಕೈಲಾಸನಾಥನ ದೇವಾಲಯ ಸಜ್ಜುಗೊಂಡಿದೆ.

ಹುಬ್ಬಳ್ಳಿಯ ಪಾಲಿಕೊಪ್ಪದಲ್ಲಿ ಭವ್ಯ ‘ಶಿವಶಕ್ತಿಧಾಮ’:

ಪ್ರಸಿದ್ಧ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಶಿರೂರ ಪಾರ್ಕ್‌ನ ತದ್ರೂಪಿ ಅಯ್ಯಪ್ಪಸ್ವಾಮಿ ಮಂದಿರ, ಜೈನ ಮಂದಿರಗಳು, ವರೂರಿನ ನವಗ್ರಹ ತೀರ್ಥ, ಐತಿಹಾಸಿಕ ಉಣಕಲ್ಲ ಚಂದ್ರಮೌಳೇಶ್ವರ ದೇವಸ್ಥಾನ ಹೀಗೆ ಐತಿಹಾಸಿಕ ಹಾಗೂ ನವ್ಯ ಹಲವು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಹೆಸರುವಾಸಿಯಾಗಿರುವ ಹುಬ್ಬಳ್ಳಿ -ಧಾರವಾಡ, ಇದೀಗ ಮತ್ತೊಂದು ಭವ್ಯ ಮಂದಿರದ ಮೂಲಕ ಭಕ್ತರ ಸುಕ್ಷೇತ್ರವಾಗಿ ಹೊರಹೊಮ್ಮುತ್ತಿದೆ.

ತಾಲೂಕಿನ ಪಾಲಿಕೊಪ್ಪ ಬಳಿ ಪುಣೆ-ಬೆಂಗಳೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ‘ಶಿವಶಕ್ತಿಧಾಮ’ವೂ ಭಕ್ತಗಣವನ್ನು ಕೈಬೀಸಿ ಕರೆಯುತ್ತಿದೆ. ಆಕರ್ಷಕ ದೇಗುಲ, ವಿಶಾಲ ದೇವಸ್ಥಾನದ ಆವರಣ ಕಣ್ಮನ ಸೆಳೆಯುತ್ತಿವೆ.

ಶಿವಾ ಎಂದರೆ ಸರ್ವ ಭಕ್ತರ ಆರಾಧ್ಯದೈವ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮಹಾದೇವನಾಗಿದ್ದಾನೆ. ಅಂತಹ ಶಿವನ ಭವ್ಯ ಮಂದಿರ ಇದೀಗ ಹುಬ್ಬಳ್ಳಿ ಸಮೀಪದಲ್ಲಿ ನಿರ್ಮಾಣ ಮಾಡಿರುವುದು ಜನರಿಗೆ ಹೊಸ ಭಕ್ತಿ- ಶ್ರದ್ಧೆಯ ತಾಣವಾಗಿದೆ. ಸಂಪೂರ್ಣ ಶಿಲೆಯಲ್ಲಿ ನಿರ್ಮಿಸಿದ ಇದರ ವಿಶೇಷ ಶೈಲಿಯು ನೋಡುಗರನ್ನು ತನ್ನತ್ತ ಆಕರ್ಷಿಸುವಂತಿದೆ.

ವಿಶಾಲವಾದ ದೇವಸ್ಥಾನ ಆವರಣದಲ್ಲಿ ಶ್ರೀಆನಂದೇಶ್ವರ(ಶಿವಾ), ಶ್ರೀವಿಜಯಗಣಪತಿ(ಗಣೇಶ) ಹಾಗೂ ಜ್ಞಾನಾಂಬಿಕೆ (ಪಾರ್ವತಿ) ಹೀಗೆ ವಿವಿಧ ದೇಗುಲಗಳು ಇವೆ. ಒಂದೇ ಜಾಗದಲ್ಲಿ ಹಲವು ದೇವರನ್ನು ಕಾಣುವ ಮೂಲಕ ಭಕ್ತಿ ಸಮರ್ಪಿಸಿ ಕೃತಾರ್ಥರಾಗುವ ಅವಕಾಶ ಇಲ್ಲಿ ಸಿಗಲಿದೆ. ಇಲ್ಲಿ ನಿರ್ಮಾಣವಾದ ಪ್ರತಿಯೊಂದು ದೇವಸ್ಥಾನವೂ ವಿಶಿಷ್ಟ ಹಾಗೂ ಪರಂಪರೆಯನ್ನು ಸಾರುವಂತಿವೆ. ಶಿವಾ ದೇವಸ್ಥಾನವನ್ನು ಆಗಮ ಶಿಲ್ಪ ಶಾಸದ ಪ್ರಕಾರ ಸಂರಚನೆ ಮಾಡಿ ನಿರ್ಮಿಸಲಾಗಿದೆ. ವಾಸ್ತುವಿನ ಪ್ರಕಾರ ಹಾಗೂ ಯಾವ ಸ್ಥಾನ ಯಾವ ದೇವರಿಗೆ ಶ್ರೇಷ್ಠ ಎಂಬುದನ್ನು ಪರಿಶೀಲಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಮುಖ್ಯವಾಗಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ತಳಭಾಗದಲ್ಲಿ ಶಿವಲಿಂಗವು ಚೌಕ ಆಕಾರದಲ್ಲಿ ನಿರ್ಮಿಸಲಾಗಿದೆ. ಏಕಶಿಲೆಯ ಮೂರ್ತಿ ಇದಾಗಿದೆ.

ಇಲ್ಲಿನ ಎಲ್ಲ ಮೂರ್ತಿಗಳನ್ನು ವಿಶಿಷ್ಟ ಪದ್ಧತಿಯಲ್ಲಿ ಕೆತ್ತಲಾಗಿದೆ. ಗರ್ಭಗೃಹ ಇದು ನಮ್ಮ ಶಿರ ಅಥವಾ ತಲೆ ಇದ್ದಂತೆ, ಮಹಾಮಂಟಪ, ಧ್ವಜಸ್ಥಂಭ, ರಾಜಗೋಪುರ ಎಲ್ಲವೂ ಅತ್ಯಂತ ಸುಂದರ ಹಾಗೂ ಆಕರ್ಷಕ ರೀತಿಯಲ್ಲಿ ಸಜ್ಜುಗೊಂಡಿವೆ.

ಪೀಠ ಹಾಗೂ ಮೂರ್ತಿಗಳಿಗೆ ಅಷ್ಟಬಂಧನ (ಎಂಟು ರಾಸಾಯನಿಕ, ಪಾರಂಪರಿಕ ಪದ್ಧತಿ) ಅಳವಡಿಸಲಾಗಿದೆ. ಈ ವಿಧಾನವು ದೇವರ ಮೂರ್ತಿ ಕಳೆಗಟ್ಟಲು ಮಹತ್ವದ್ದಾಗಿದೆ. ನಮ್ಮ ಪಾರಂಪರಿಕ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹೇಗಿರಬೇಕು ಎಂಬುದಕ್ಕೆ ಮಾದರಿ ಎಂಬಂತೆ ಶಿವಾ ದೇವಸ್ಥಾನ ನಿರ್ಮಿಸಲಾಗಿದೆ. ಪುರಾತನ ಅನೇಕ ದೇವಾಲಯಗಳಲ್ಲಿ ಈಗಲೂ ಪುಷ್ಕರಣಿ, ನೀರಿನ ಹೊಂಡಗಳು ಕಾಣಸಿಗುತ್ತವೆ. ಅಂತಹ ಪುಷ್ಕರಣಿ ಇಲ್ಲಿಯೂ ಇದೆ. ಅತ್ಯಂತ ಶುದ್ಧ ಜಲ ಇಲ್ಲಿ ಸಂಗ್ರಹವಾಗಿದೆ.

ಬನ್ನಿ ಶಿವಾ ದೇವಾಲಯ ದರ್ಶಿಸಿ…

ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಪಿ.ಬಿ. ರಸ್ತೆ ಮೂಲಕ ಹಾವೇರಿಯತ್ತ ಹೋಗುವಾಗ ಹೊರವಲಯದ ಪಾಲಿಕೊಪ್ಪ ಬಳಿ ಬಲ ಬದಿಯಲ್ಲಿ ವಿಶಾಲ ಹಾಗೂ ಭವ್ಯ ಮಂದಿರ ಗೋಚರಿಸುತ್ತದೆ. ಅದುವೇ ಶಿವಾ ದೇವಾಲಯ. ಆರಾಧನಾ ಟ್ರಸ್ಟ್ ವತಿಯಿಂದ ಆರೂವರೆ ಎಕರೆ ಜಮೀನಿನಲ್ಲಿ ಬೃಹತ್ ದೇವಾಲಯ ನಿರ್ಮಿಸಲಾಗಿದ್ದು, ಭಕ್ತರ ತನು-ಮನಗಳನ್ನು ಸಂತೈಸುವ ತಾಣವಾಗಿದೆ.

ಅತ್ಯಂತ ಸುಂದರ ಹಾಗೂ ಹಸಿರು ಉದ್ಯಾನದ ಮಧ್ಯ ತಲೆ ಎತ್ತಿರುವ ಮಂದಿರ ಆಹ್ಲಾದಕರ ವಾತಾವರಣದಲ್ಲಿ ಭಕ್ತರಿಗೆ ತಂಪೆರೆಯುತ್ತದೆ.

ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನಗಳ ಪ್ರಾಂಗಣದಲ್ಲಿ ಶಿವಾ ದೇವಾಲಯ, ಪಾರ್ವತಿ ದೇವಾಲಯ, ಗಣಪತಿ, ಶನೈಶ್ಚರ, ನವಗ್ರಹ, ಕಾಳಭೈರವ ದೇವಸ್ಥಾನಗಳಿವೆ. ಆವರಣದಲ್ಲಿ ಒಂದು ಸುತ್ತು ಹಾಕಿದರೆ ಎಲ್ಲ ದೇವರ ದರ್ಶನ ಪಡೆದು ಪುನೀತರಾಗುವ ತಾಣ ಇದಾಗಿದೆ.

ಈ ದೇವಾಲಯ ಒಳಗೆ ಪ್ರವೇಶಿಸುವ ಮುನ್ನ ಮಹಾದ್ವಾರ ಕತ್ತು ಮೇಲೆತ್ತಿ ನೋಡುವಂತೆ ಮಾಡುತ್ತದೆ. ಇದನ್ನು ನೋಡುತ್ತಿದ್ದಂತೆ ಮನದಲ್ಲಿ ಭಕ್ತಿಯ ಭಾವ ಮೂಡುತ್ತದೆ. ಹಾಗೆಯೇ ಒಳ ಪ್ರವೇಶ ಪಡೆಯುತ್ತಿದ್ದಂತೆಯೇ ರಥಬೀದಿ, ರಾಜಗೋಪುರ, ಹೋಮಕುಂಡ ಕಣ್ಣಿಗೆ ಬೀಳುತ್ತವೆ. ಶಿವನನ್ನು ಕಣ್ತುಂಬಿಕೊಳ್ಳಲು ಕುಳಿತರೆ ಸಾಕು ಮನಸು ಹೂವಿನಂತೆ ಅರಳಲು ಆರಂಭಿಸುತ್ತದೆ. ನಂತರ ಪಾರ್ವತಿದೇವಿ, ಗಣೇಶನ ಮೂರ್ತಿಯ ದರ್ಶನ ಮಾಡಿದಾಗ ಮನಸು ಹಗುರವಾಗುತ್ತದೆ. ಒಂದು ಸುತ್ತು ಹಾಕುವವರೆಗೆ ಇಳಿ ಸಂಜೆ ಆಗುವಷ್ಟು ಅತ್ಯದ್ಭುತ ಕಲ್ಪನೆಯೊಂದಿಗೆ ಈ ದೇವಸ್ಥಾನ ನಿರ್ಮಿಸಲಾಗಿದೆ.

ತಮಿಳುನಾಡಿನ ಕೆ. ಸ್ವಾಮಿನಾಥನ್ ಸ್ಥಪತಿ (ಆರ್ಕಿಟೆಕ್ಟ್) ಇದರ ಉಸ್ತುವಾರಿ ವಹಿಸಿದ್ದು, ಮಣಿ ಸೂಪರ್‌ವೈಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸತತ 4 ವರ್ಷದಿಂದ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮಧುರೈನ 50 ಶಿಲ್ಪಿಗಳು ನಿತ್ಯ ಕಾಯಕದಲ್ಲಿ ತೊಡಗಿದ್ದರು. ದೊಡ್ಡಬಳ್ಳಾಪುರದಿಂದ ಕಲ್ಲುಗಳನ್ನು ತರಿಸಿ, ಬೃಹತ್ ದೇವಾಲಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ತಮಿಳುನಾಡಿನ ವಾಲಜಾಬಾದ್‌ನಿಂದ ಕಪ್ಪು ಶಿಲೆಗಳನ್ನು ತರಿಸಿ, ವಿಗ್ರಹ ಕೆತ್ತಲಾಗಿದೆ. ಕವಚ, ಕಳಶ, ಪ್ರಭಾವಳಿಗಳನ್ನು ಕುಂಭಕೋಣಂನಿಂದ ತರಿಸಲಾಗಿದೆ.

ಶಿವಾ ದೇವಾಲಯ ಆಕರ್ಷಣೆ:

ಶಿವಾ ದೇವಾಲಯವು ಬಹಳಷ್ಟು ಆಕರ್ಷಣೆಯಿಂದ ಕೂಡಿದೆ. ಗರ್ಭಗುಡಿಯಲ್ಲಿ ಶಿವನ ಮೂರ್ತಿ ಇದೆ. ಮುಂದಿನ ಮಹಾಮಂಟಪದಲ್ಲಿ ನಂದಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿ ಮುಂದೆ ದ್ವಾರಪಾಲಕರು ಇದ್ದಾರೆ. ಅದರ ಬಳಿ ಚಂಡಿಕೇಶ್ವರ ದೇವಸ್ಥಾನವಿದೆ. ನಂತರ ಪಾರ್ವತಿ ದೇವಾಲಯ ನಿರ್ಮಿಸಲಾಗಿದೆ. ಶಿವಾ ದೇವಾಲಯದ ಬಲಕ್ಕೆ ಗಣಪತಿ ದೇವಸ್ಥಾನವಿದ್ದು, ಅದರ ಮುಂದೆ ಹೋಮಕುಂಡ ನಿರ್ಮಿಸಿದ್ದು, ಹೋಮ-ಹವನ ಕೈಂಕರ್ಯ ನಡೆಸಲು ಯೋಗ್ಯ ಸ್ಥಳವಾಗಿದೆ. ಶನೈಶ್ಚರ, ನವಗ್ರಹ ಹಾಗೂ ಕಾಳಭೈರವೇಶ್ವರ ದೇವರ ದರ್ಶನವೂ ಭಕ್ತರಿಗೆ ಸಿಗಲಿದೆ. ಒಂದೇ ಸುತ್ತು ಹಾಕಿದರೆ ಇಷ್ಟೆಲ್ಲ ದೇವಸ್ಥಾನಗಳನ್ನು ನೋಡಿ ಪಾಪ ಕಳೆದು ಪುಣ್ಯ ಪ್ರಾಪ್ತಿ ಮಾಡಿಕೊಳ್ಳಲು ಪ್ರಶಸ್ತ ಸ್ಥಳವಾಗಿದೆ ಎಂಬುದು ಭಕ್ತರ ಅಂಬೋಣ.

ಏಕಶಿಲೆ ಧ್ವಜಸ್ತಂಭ : 

ದೇವಸ್ಥಾನಕ್ಕೆ ಮುಕುಟ ಪ್ರಾಯ ಧ್ವಜಸ್ತಂಭ. ಇದು 32 ಅಡಿ ಎತ್ತರವಿದ್ದು, ಏಕಶಿಲೆಯಲ್ಲಿ ನಿರ್ಮಿಸಲಾಗಿದೆ. ಬೇರೆಡೆ ತುಂಡಾದ ಕಲ್ಲುಗಳನ್ನು ಒಂದರ ಮೇಲೊಂದು ಇಟ್ಟಿರುವುದನ್ನು ನೋಡಿದ್ದೇವೆ. ಇದು ಏಕಶಿಲೆ. ಹಾಗಾಗಿ, ಈ ಧ್ವಜಸ್ತಂಭ ಬಹಳಷ್ಟು ಆಕರ್ಷಣೆಯಿಂದ ಕೂಡಿದೆ. ರಾಜಗೋಪುರ 60 ಅಡಿ ಎತ್ತರವಿದೆ. 5 ಅಂತಸ್ತುಗಳನ್ನು ಹೊಂದಿದ್ದು, ಪಂಚವರ್ಣಗಳು ಕಣ್ಣಿಗೆ ಮುದ ನೀಡಿ ಭಕ್ತಿ ಭಾವ ತುಂಬುತ್ತವೆ.

ಸೇವಾ ಕೈಂಕರ್ಯ ಕೊಠಡಿಗಳು : 

ದೇವಸ್ಥಾನ ಪ್ರಾಂಗಣದ ರಾಜಗೋಪುರ ಬಳಿ ಸೇವಾ ಕಚೇರಿ, ನೈವೇದ್ಯ ತಯಾರಿಕೆಗೆ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿಯೇ ನೈವೇದ್ಯ ತಯಾರಿಸಿ ದೇವರಿಗೆ ಸಮರ್ಪಿಸಲಾಗುತ್ತಿದೆ. ಪ್ರಶಸ್ತ ಸ್ಥಳದಲ್ಲಿ ಇದನ್ನು ನಿರ್ಮಿಸಿದ್ದು, ಶುಚಿಯಾಗಿ ಮಡಿಯಿಂದ ದೇವರಿಗೆ ನೈವೇದ್ಯ ಅರ್ಪಿಸಲು ಅನುಕೂಲವಾಗಿದೆ. ಸೇವಾ ಕಚೇರಿಯಿಂದ ದೇವರಿಗೆ ಅಗತ್ಯ ಸೇವಾ ಕೈಂಕರ್ಯ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಹಾದ್ವಾರದ ಬಳಿ ಸೆಕ್ಯೂರಿಟಿ ಕೊಠಡಿಗಳಿವೆ. ಪೂಜಾ ಕೊಠಡಿ, ಬಜಾರ್ ಸ್ಟ್ರೀಟ್, ಪಾದರಕ್ಷೆ ಇಡುವ ಕೊಠಡಿಗಳಿವೆ.

ವಿಶಿಷ್ಟ ಗೋಶಾಲೆ : 

ದೇವಸ್ಥಾನದ ಆವರಣದಲ್ಲಿ ವಿಶಿಷ್ಟವಾಗಿ ಗೋಶಾಲೆ ನಿರ್ಮಿಸಲಾಗಿದೆ. ಇಲ್ಲಿ ಗೋಮಾತೆಗೆ ಪೂಜೆ, ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಒಟ್ಟು 20 ಗೋವುಗಳು ನಿಂತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನ ಪಡೆಯುವುದಲ್ಲದೆ, ಗೋಮಾತೆಯನ್ನೂ ಪೂಜಿಸಿ ಕೃತಾರ್ಥರಾಗಲು ಸೂಕ್ತ ಸ್ಥಳವಾಗಿದೆ. ಕಲ್ಯಾಣಿ, ಕೆರೆ ಹಾಗೂ ಬಾವಿಗಳನ್ನು ನಿರ್ಮಿಸಲಾಗಿದೆ.

ಬೃಹತ್ ಊಟದ ಮನೆ : 

ದೇವಸ್ಥಾನಕ್ಕೆ ಬಂದ ಭಕ್ತರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಬೃಹತ್ ಊಟದ ಮನೆ ನಿರ್ಮಿಸಲಾಗಿದೆ. ಅತ್ಯಾಧುನಿಕ ಊಟದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ವಿಐಪಿ, ಭಕ್ತರು, ಅರ್ಚಕರು ಊಟ ಮಾಡಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಋತ್ವಿಕರು ಉಳಿದುಕೊಳ್ಳಲು 6 ಕೊಠಡಿಗಳು ಇವೆ. ಇದಕ್ಕೆ ಅರ್ಚಕರ ವಸತಿ ಗೃಹವೆಂದು ಹೆಸರಿಡಲಾಗಿದೆ. 4 ಕೊಠಡಿಗಳಿದ್ದು, ಎರಡು ಒನ್‌ಬಿಎಚ್‌ಕೆ ರೂಮ್‌ಗಳಿವೆ. ಗೆಸ್ಟ್ ಹೌಸ್ ಜಿ ಪ್ಲಸ್ 2 ಇದ್ದು, ಕೆಳಮಹಡಿಯಲ್ಲಿ 3 ಕೊಠಡಿಗಳಿವೆ. ಒಂದು ಊಟದ ಮನೆ ಹಾಗೂ ಸಭಾಂಗಣ ಇದೆ. ಮೊದಲ ಮಹಡಿಯಲ್ಲಿ 7 ರೂಮ್‌ಗಳಿದ್ದು, ಎರಡನೇ ಮಹಡಿಯಲ್ಲಿ ಪ್ರವಚನ ಸಭಾಗೃಹ ನಿರ್ಮಿಸಲಾಗಿದೆ.

ಇನ್ನೊಂದು ಸಮುಚ್ಛಯದ ಕೆಳಮಹಡಿಯಲ್ಲಿ ಪ್ರಸಾದ ನಿಲಯವಿದೆ. 20 ವಿಐಪಿಗಳು ಊಟ ಮಾಡಬಹುದು. ಹಾಲ್‌ನಲ್ಲಿ 60 ಜನರು ಕುಳಿತು ಊಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ 200 ಜನರು ಕುಳಿತು ಊಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಎರಡನೇ ಮಹಡಿಯಲ್ಲಿ ಕನ್ವೆನ್ಷನ್ ಸಭಾಗೃಹವಿದೆ. ಪಕ್ಕದಲ್ಲಿಯೇ ಮಹಿಳೆಯರು, ಪುರುಷರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಭಕ್ತರು ಹೋಗಿ ಬರಲು 2 ಲಿಫ್ಟ್ ಹಾಗೂ ಊಟದ ಸಾಮಗ್ರಿ, ಪಾತ್ರೆ ಕಳುಹಿಸಲು ಡಂಬ್ ಎಲಿವೇಟರ್ ಇದೆ.

ಭದ್ರತೆಗೆ ವಿಶೇಷ ಕಾಳಜಿ: 

ಬೇರೆ ಬೇರೆ ಕಡೆಗಳಿಂದ ಬರುವ ಭಕ್ತರಿಗೆ ಹಲವು ಅನುಕೂಲಗಳನ್ನು ಒದಗಿಸಲಾಗಿದೆ. ಇದೇ ರೀತಿ ಭದ್ರತೆಗೂ ಗಮನ ನೀಡಲಾಗಿದೆ. ದೇವಸ್ಥಾನದ ಆವರಣದಲ್ಲಿ 60 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 3 ಪಿಟಿಜೆಡ್ ಕ್ಯಾಮರಾಗಳಿವೆ. ಇದರ ವಿಶಿಷ್ಟತೆ ಎಂದರೆ ಬರುವ ಮತ್ತು ಹೋಗುವ ವ್ಯಕ್ತಿಗಳ ಭಾವಚಿತ್ರವನ್ನು ಸ್ಪಷ್ಟವಾಗಿ ಸೆರೆ ಹಿಡಿಯಲಿದೆ. ವಾಹನದ ಸಂಖ್ಯೆ ಸೆರೆ ಹಿಡಿಯಲು ಮತ್ತೊಂದು ವಿಶಿಷ್ಟ ಕ್ಯಾಮರಾ ಅಳವಡಿಸಲಾಗಿದೆ. ಹೀಗೆ ಅತ್ಯದ್ಭುತ ಸಿಸಿ ಕ್ಯಾಮರಾಗಳನ್ನು ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದೆ.

ಪಾರ್ಕಿಂಗ್ ಸ್ಥಳ ಗುರುತು : 

ಬೃಹತ್ತಾಗಿ ದೇವಸ್ಥಾನ ನಿರ್ಮಿಸಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹಾಗಾಗಿ, ದೊಡ್ಡದಾಗಿ ಪಾರ್ಕಿಂಗ್ ಸ್ಥಳವನ್ನು ಕಾದಿರಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಸುಮಾರು 60 ವಾಹನಗಳನ್ನು ನಿಲ್ಲಿಸಲು ಪ್ರತ್ಯೇಕ ಸ್ಥಳ ಕಾಯ್ದಿರಿಸಲಾಗಿದೆ. ಸರತಿ ಸಾಲಿನಲ್ಲಿ ವಾಹನಗಳನ್ನು ನಿಲ್ಲಿಸಿ ದೇವರ ದರ್ಶನ ಪಡೆದು ಹೋಗಲು ಪ್ರದೇಶವನ್ನು ನಿಗದಿಪಡಿಸಲಾಗಿದೆ.

ಸ್ಥಳೀಯರಿಂದಲೇ ಸಮುಚ್ಛಯ ನಿರ್ಮಾಣ: 

ದೇವಸ್ಥಾನದ ಗರ್ಭಗುಡಿ, ಗೋಪುರ ಹಾಗೂ ಪ್ರಾಂಗಣವನ್ನು ತಮಿಳುನಾಡು ಮೂಲದವರು ನಿರ್ಮಿಸಿದ್ದಾರೆ. ವಸತಿ ಸಮುಚ್ಛಯವನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದು, ವಿಶಿಷ್ಟವಾಗಿ ಕಾಣುತ್ತಿವೆ. ಪ್ರತಿಯೊಂದು ಕೊಠಡಿಯೂ ಅತ್ಯದ್ಭುತವಾಗಿ ನಿರ್ಮಿಸಲಾಗಿದೆ. ಶೌಚಾಲಯ, ವಾಸದ ಕೊಠಡಿ, ಬಾತ್‌ರೂಮ್‌ಗಳನ್ನು ಅಂದವಾಗಿ ಕಟ್ಟಲಾಗಿದೆ. ಇದರಿಂದ ಸ್ಥಳೀಯವಾಗಿಯೇ ಬಹಳಷ್ಟು ಜನರು ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ.

ರಥಬೀದಿಯ ವೈಭವ: 

ಮಹಾದ್ವಾರ ದಾಟುತ್ತಿದ್ದಂತೆ ರಥಬೀದಿಯು ಕಣ್ಣಿಗೆ ಕಾಣಲಿದೆ. ಅದರಲ್ಲಿ ಸಾಗುತ್ತಿದ್ದಂತೆ ಕೃಷ್ಣದೇವರಾಯ ಕಾಲದ ವೈಭವವು ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದರೊಳಗೆ ಪ್ರವೇಶ ಮಾಡುತ್ತಿದ್ದಂತೆ ಮನಸಿಗೆ ಮುದ ನೀಡುತ್ತದೆ. ಇತರ ಕಟ್ಟಡಗಳ ಮೇಲೆ ನಿಂತು ನೋಡಿದರೆ, ಅತ್ಯದ್ಭುತವೆನಿಸುತ್ತದೆ. ರಥಬೀದಿಯ ಪರಿಕಲ್ಪನೆ ಎಷ್ಟೊಂದು ಪರಿಪೂರ್ಣವಾಗಿ ಅನುಷ್ಠಾನಗೊಂಡಿದೆ ಎಂದರೆ ನೋಡುಗರು ಅಚ್ಚರಿಪಡುತ್ತಾರೆ.

ಹೊರ ಸಭಾಗೃಹದ ಅಂದ : 

ದೇವಸ್ಥಾನ ಪ್ರಾಂಗಣದಲ್ಲಿ ಸಭಾಗೃಹ ನಿರ್ಮಿಸಲಾಗಿದೆ. ಏನಾದರೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ ಇದರ ಸೊಬಗು ಮತ್ತಷ್ಟು ಹೆಚ್ಚಲಿದೆ. ಸಭಾಗೃಹದ ಕೆಳಗೆ 4 ನೀರಿನ ಟ್ಯಾಂಕ್‌ಗಳಿವೆ. ಪ್ರತಿ ಟ್ಯಾಂಕ್‌ನಲ್ಲಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯವಿದೆ. ಸುತ್ತಮುತ್ತ ಹುಲ್ಲು ಹಾಸು ಹಾಕಲಾಗಿದ್ದು, ಇದರಿಂದ ಸಭಾಗೃಹದ ಅಂದ ಹೆಚ್ಚಿದೆ.

ಸ್ವಾಮೀಜಿ, ಮುನಿಗಳ ವಸತಿಗೆ ವ್ಯವಸ್ಥೆ: 

ಪುಣೆ-ಬೆಂಗಳೂರು ಹೆದ್ದಾರಿಯಾಗಿರುವುದರಿಂದ ನಿತ್ಯ ಹತ್ತಾರು ಹಿಂದು ಸ್ವಾಮೀಜಿಗಳು, ಜೈನ ಮುನಿಗಳು ಈ ಮಾರ್ಗವಾಗಿ ಸಂಚರಿಸುತ್ತಾರೆ. ಈ ಹೆದ್ದಾರಿಗೆ ಹೊಂದಿಕೊಂಡು ಶಿವಾ ದೇವಾಲಯ ನಿರ್ಮಾಣ ಆಗಿರುವುದರಿಂದ ಅನೇಕ ಜನರು ಭೇಟಿ ನೀಡುತ್ತಾರೆ. ಇದೇ ರೀತಿ ಸ್ವಾಮೀಜಿಗಳು ದೇವಾಲಯಕ್ಕೆ ಬರಲಿದ್ದು, ಅವರಿಗಾಗಿ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ. ಪೂಜಾ ಕೈಂಕರ್ಯಕ್ಕೂ ಅವರಿಗೆ ಇಲ್ಲಿ ವ್ಯವಸ್ಥೆ ಇದೆ.

ಕೆಲ ಸ್ವಾಮೀಜಿಗಳು ತಮ್ಮ ಎಲ್ಲ ಅವಶ್ಯಕತೆಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಅಂಥವರಿಗಾಗಿ ಪ್ರತ್ಯೇಕ ಅಡುಗೆ ಮನೆ ನಿರ್ಮಿಸಲಾಗಿದೆ. ಗ್ಯಾಸ್ ಒಲೆಯನ್ನು ಕೆಲವರು ಬಳಸುವುದಿಲ್ಲ. ಹಾಗಾಗಿ, ಇಲ್ಲಿ ಸೌದೆಯ ಒಲೆಯನ್ನೂ ಮಾಡಲಾಗಿದೆ. ಸ್ನಾನ ಮಾಡಲು ಶುದ್ಧ ನೀರಿಗಾಗಿ ಇಲ್ಲಿ ಬಾವಿ ಇದೆ. ನೀರು ಸೇದಿ ಸ್ನಾನ ಮಾಡಬಹುದಾಗಿದೆ. ಈ ಎಲ್ಲ ಸೌಕರ್ಯಗಳಿಂದಾಗಿ ಸಾಧು-ಸಂತರ ನಾಡೆಂದು ಪ್ರಸಿದ್ಧಿಯಾಗಿರುವ ಧಾರವಾಡ ಜಿಲ್ಲೆಯಲ್ಲಿ ಇದೊಂದು ವಿಶಿಷ್ಟ ದೇವಾಲಯವಾಗಿ ಕಂಡು ಬರುತ್ತದೆ. ಸ್ವಾಮೀಜಿಗಳು ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡುತ್ತಾರೆ. ಅಂತಹ ಸ್ವಾಮೀಜಿಗಳಿಗಾಗಿ ತಾವೇ ಊಟ ಸಿದ್ಧಪಡಿಸಿಕೊಳ್ಳಲು, ನಿಯಮಾವಳಿ ಪಾಲಿಸಲು ಸಕಲ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಮಡಿಯಿಂದ ಅಡುಗೆ ಮಾಡಿಕೊಂಡು ಊಟ ಮಾಡಬಹುದು.

ಮಾಡರ್ನ್ ಕಿಚನ್: 

ಶಿವಾ, ಪಾರ್ವತಿ, ಗಣಪತಿ, ಶನೈಶ್ಚರ ಹೀಗೆ ವಿವಿಧ ದೇಗುಲಗಳು ಒಂದೇ ಆವರಣದಲ್ಲಿ ಇರುವುದರಿಂದ ನಿರಂತರವಾಗಿ ಒಂದಿಲ್ಲೊಂದು ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ಅನ್ನಸಂತರ್ಪಣೆಯೂ ನಡೆಯುತ್ತವೆ. ಎಷ್ಟೇ ಜನ ಬಂದರೂ ಏಕಕಾಲಕ್ಕೆ ಶೀಘ್ರವಾಗಿ ಅಡುಗೆ ಮಾಡುವ ಸಲುವಾಗಿ ಮಾಡರ್ನ್ ಕಿಚನ್ ಇಲ್ಲಿ ಸಿದ್ಧ ಪಡಿಸಲಾಗಿದೆ. ಅಡುಗೆ ಮಾಡಲು ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲಾಗಿದೆ. ಪ್ರಸಾದಕ್ಕಾಗಿ ಎರಡು ಮಹಡಿಯ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಲ್‌ಟಿ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ಎಲ್ಲವನ್ನೂ ಅತ್ಯಾಧುನಿಕ ಸೌಲಭ್ಯಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ.

ಪ್ರವಚನಕ್ಕೆ ಸಭಾಗೃಹ : 

ದೇವಾಲಯಕ್ಕೆ ಬಂದು ಕೆಲವು ದಿನ ಸ್ವಾಮೀಜಿಗಳು ಇಲ್ಲಿಯೇ ಇರಬಹುದಾಗಿದೆ. ಹೀಗೆ ಇರುವ ಸ್ವಾಮೀಜಿಗಳು ಪಾಠ, ಪ್ರವಚನ ಮಾಡಲು ಸಭಾಗೃಹ ನಿರ್ಮಿಸಲಾಗಿದೆ. ಜ್ಞಾನ ಹಾಗೂ ಅನ್ನದಾಸೋಹ ಎರಡನ್ನೂ ಇಲ್ಲಿ ಮಾಡಬಹುದಾಗಿದೆ. ವಸತಿಗಾಗಿ ವಸತಿ ಸಮುಚ್ಛಯಗಳಿದ್ದು, ಅದರಲ್ಲಿ ಸ್ವಾಮೀಜಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಭಕ್ತರಿಗೂ ಇರಲು ಅವಕಾಶಗಳಿವೆ. ಸ್ವಾಮೀಜಿಗಳು, ಸಾರ್ವಜನಿಕ ಭಕ್ತರಿಗಾಗಿ ಸ್ಪೆಷಲ್ ರೂಮ್ಸ್, ಡಾರ್ಮಿಟರಿ, ಪ್ರಸಾದ ಕೊಠಡಿ, ದೊಡ್ಡ ಸಭಾಭವನ ಹೀಗೆ ಎಲ್ಲ ಸೌಲಭ್ಯಗಳು ದೇವಾಲಯ ಆವರಣದಲ್ಲಿ ಸಜ್ಜುಗೊಂಡಿವೆ.

ಸಾಂಪ್ರದಾಯಿಕ ಹೋಮಕುಂಡ: 

ಹಿಂದು ಪರಂಪರೆಯಲ್ಲಿ ಹೋಮ-ಹವನಕ್ಕೆ ವಿಶೇಷ ಪ್ರಾತಿನಿಧ್ಯ ಇದೆ. ವಾತಾವರಣ ಶುದ್ಧಿ, ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಹೋಮ-ಹವನ ಮಾಡುವ ಸಂಪ್ರದಾಯ ಇದೆ. ಇದಕ್ಕಾಗಿ ಶಿವಾ ದೇವಾಲಯದ ಗಣಪತಿ ಗುಡಿ ಎದುರು ಸಾಂಪ್ರದಾಯಿಕವಾಗಿ ಹೋಮಕುಂಡ ನಿರ್ಮಿಸಲಾಗಿದೆ. ಬಹುತೇಕ ಗಣಪತಿ ಗುಡಿ ಎದುರು ಇರುವಂತೆ ಹೋಮಕುಂಡವನ್ನು ಅಚ್ಚುಕಟ್ಟಾಗಿ ಒಂದಿಷ್ಟು ವಿಶಾಲ ಜಾಗದ ಮಧ್ಯೆ ನಿರ್ಮಿಸಲಾಗಿದೆ. ಪೂಜೆ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಇದ್ದಾಗ ಇಲ್ಲಿ ಹೋಮ-ಹವನಗಳು ನಡೆಯಲಿವೆ.

ಸುಸಜ್ಜಿತ ಪುಷ್ಕರಣಿ: 

ದೇವಾಲಯ ಆವರಣದಲ್ಲಿ ಪುಷ್ಕರಣಿ ಗಮನ ಸೆಳೆಯುತ್ತದೆ. ಸದಾ ನೀರಿನಿಂದ ತುಂಬಿಕೊಂಡು ಭಕ್ತರ ಮನ ತಂಪುಗೊಳಿಸಲಿದೆ. ಸುತ್ತಲೂ ಮೆಟ್ಟಿಲುಗಳು, ಮಧ್ಯದಲ್ಲಿ ಹೆಚ್ಚು ಆಳವಾಗಿ ನಿರ್ಮಿಸಿದ ಪುಷ್ಕರಣಿಯಲ್ಲಿ ದೇವರ ತೆಪ್ಪೋತ್ಸವ ನೆರವೇರಿಸಲು ಅನುಕೂಲವಾಗಿದೆ.

ದೇವಸ್ಥಾನ ಆವರಣದಲ್ಲಿ ಇನ್ನೊಂದು ಆಕರ್ಷಣೆ ಎಂದರೆ ಮಳೆ ನೀರು ಸಂಗ್ರಹದ ತೊಟ್ಟಿ ನಿರ್ಮಿಸಿರುವುದು. ದೇಗುಲ ವ್ಯಾಪ್ತಿಯಲ್ಲಿ ಬೀಳುವ ಪ್ರತಿಯೊಂದು ಮಳೆ ನೀರಿನ ಹನಿಯೂ ಇಲ್ಲಿಗೆ ಹರಿದು ಬರುತ್ತದೆ. ಮಳೆ ನೀರನ್ನು ಹೊರಗಡೆ ಬಿಡುವುದಿಲ್ಲ. ಸುಮಾರು ಒಂದು ಲಕ್ಷ ಲೀಟರ್ ಸಾಮರ್ಥ್ಯದ ತೊಟ್ಟಿ ಕಟ್ಟಲಾಗಿದೆ.

ದೇವರ ಮೂರ್ತಿಗಳು: 

ಶಿವಾ ದೇವಾಲಯ ಆವರಣದಲ್ಲಿರುವ ವಿವಿಧ ಗುಡಿಗಳಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಶನೈಶ್ಚರ ದೇಗುಲದಲ್ಲಿ ಸುಮಾರು 2.5 ಅಡಿ ಎತ್ತರದ ಮೂರ್ತಿ ಇದೆ. ಪಾರ್ವತಿ ದೇಗುಲದಲ್ಲಿ 2.5 ಅಡಿ ಎತ್ತರದ ಪಾರ್ವತಿ ಮೂರ್ತಿ ಇದೆ.

ಮೂರುವರೇ ಅಡಿ ಎತ್ತರದ ಗಣೇಶ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ಇದೇ ರೀತಿ ಕಾಳಭೈರವ, ಚಂಡಿಕೇಶ್ವರ ಮೂರ್ತಿಗಳು ಇಲ್ಲಿವೆ. ಆವರಣದಲ್ಲಿ ಒಂದೂವರೆ ಅಡಿ ಎತ್ತರದ ಮೂರ್ತಿಗಳಿರುವ ನವಗ್ರಹ ನಿರ್ಮಿಸಲಾಗಿದೆ.

ದ್ರಾವಿಡ ಶೈಲಿಯ ದೇವಾಲಯ: 

ದೇವಾಲಯದ ರಾಜಗೋಪುರ ಸುಮಾರು 60 ಅಡಿ ಎತ್ತರವಿದೆ. ಇದರಲ್ಲಿ ವಿವಿಧ ದೇವತೆಗಳ ವಿಗ್ರಹಗಳು ಇವೆ. ಬ್ರಹ್ಮ, ಚಂದ್ರ- ಸೂರ್ಯರ ಚಿತ್ರಣಗಳಿವೆ. ರಾಜಗೋಪುರದಿಂದ ಶಿವಾ ದೇವಾಲಯಕ್ಕೆ ಪ್ರವೇಶವಿದ್ದು, ಮುಖ್ಯ ಗರ್ಭಗುಡಿ 55 ಅಡಿ ಎತ್ತರವಿದೆ. ಅದರಲ್ಲಿ ಮೂರುವರೇ ಅಡಿ ಎತ್ತರದ ಶಿವಲಿಂಗ, ಎದುರಿನಲ್ಲಿ ನಂದಿ ಮೂರ್ತಿ ಇವೆ. ದೇಗುಲಗಳು ಸಂಪೂರ್ಣ ಶಿಲ್ಪಗಳಿಂದ ತಯಾರಾಗಿವೆ.

ಮುರುಡೇಶ್ವರದ ಗೋಪುರ, ದೇಗುಲ ನಿರ್ಮಿಸಿದ್ದ ಸ್ವಾಮಿನಾಥನ್ ಸ್ಥಪತಿ ಅವರ ಉಸ್ತುವಾರಿಯಲ್ಲಿ ಶಿವಾ ದೇವಾಲಯ ನಿರ್ಮಿಸಲಾಗಿದೆ. ಸ್ವಾಮಿನಾಥನ್ ಅವರ ಪುತ್ರ ವೆಂಕಟಕೃಷ್ಣ ಡಿಸೈನ್, ಡ್ರಾಯಿಂಗ್ ರಚನೆ ಮಾಡಿದ್ದಾರೆ. ರಾಮಕೃಷ್ಣ ಅವರ ಪುತ್ರ ಮಗೇಶ್ವರ ಶಿಲ್ಪಕಲೆ ರಚನೆ ಮಾಡಿದ್ದಾರೆ. ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ಶಿವಾ ದೇವಾಲಯ ಮೂಡಿ ಬಂದಿದೆ. ಮುಖ್ಯ ಮಹಾದ್ವಾರವು 40 ಅಡಿ ಎತ್ತರ ಇದೆ. ರಾಘವೇಂದ್ರ ಅವರು ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.