ಬಂಧುತ್ವಕ್ಕೆ ಕುತ್ತು ತಂದ ಕೋವಿಡ್
ಸೋಂಕಿತರನ್ನು ಅಸ್ಪೃಶ್ಯತೆಯಿಂದ ಕಾಣುತ್ತಿರುವ ಸಮಾಜ
Team Udayavani, Jul 1, 2020, 3:17 PM IST
ಧಾರವಾಡ: ಬಂಧುಗಳು ಸಮೀಪ ಸುಳಿಯುತ್ತಿಲ್ಲ, ಒಡ ಹುಟ್ಟಿದವರು ಸಂಶಯದ ಪಿಶಾಚಿಗಳಂತೆ ನಮ್ಮನ್ನು ದೂರವಿಟ್ಟಿದ್ದಾರೆ, ಹುಟ್ಟುಹಬ್ಬ, ದೀಪಾವಳಿ ಹಬ್ಬಕ್ಕೆ ಮನೆಗೆ ಬಂದು ಹೋಳಿಗೆ ಉಂಡು ಹೋದ ಗೆಳೆಯರು ಇದೀಗ ನಮ್ಮ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ. ನಾವೇನು ದೇಶದ್ರೋಹಿಗಳಾ? ಕೊಲೆಗಡುಕರಾ? ಅತ್ಯಾಚಾರಿಗಳಾ? ಈ ಪ್ರಭುತ್ವಕ್ಕೆ ನಮ್ಮ ಶಾಪ ತಟ್ಟಲಿ.
ಹೌದು, ಹೀಗೆ ಪ್ರಶ್ನೆಗಳನ್ನು ಹಾಕಿ ಸರ್ಕಾರಕ್ಕೆ ಶಾಪ ಹಾಕುತ್ತಿರುವುದು ಬೇರೆ ಯಾರೂ ಅಲ್ಲ. ತಮಗೆ ಅರಿವಿಲ್ಲದಂತೆಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಗುಣಮುಖರಾದವರು. ಕೋವಿಡ್ ಸೋಂಕು ವಿಪರೀತವಾಗಿ ಜಿಲ್ಲೆಯಲ್ಲಿ ಹಬ್ಬುತ್ತಿರುವುದು ಜನರಲ್ಲಿ ಆತಂಕವನ್ನುಂಟು ಮಾಡುತ್ತಿರುವುದು ಒಂದೆಡೆಯಾದರೆ, ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು ಮತ್ತು ಗುಣಮುಖರಾಗಿ ಮನೆಗೆ ಬಂದವರನ್ನು ಸಮಾಜ ನೋಡಿಕೊಳ್ಳುತ್ತಿರುವ ರೀತಿಗೆ ಅವರು ಬೇಸತ್ತು ಹೋಗಿದ್ದಾರೆ.
ಈ ವಿಚಾರವಾಗಿ ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದ್ದರೂ ಇದೊಂದು ಸಾಮಾಜಿಕ ಪಿಡುಗಿನ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕೊವಿಡ್-19 ಸೋಂಕಿತರನ್ನು ತೀವ್ರ ತಾತ್ಸಾರ ಭಾವದಿಂದ ಕಾಣಲಾಗುತ್ತಿದ್ದು, ಇದು ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ಮರಳಿದವರಲ್ಲಿ ಮಾನಸಿಕ ಒತ್ತಡ, ಮಾನಸಿಕ ಖನ್ನತೆಯನ್ನುಂಟು ಮಾಡುತ್ತಿದೆ.
ಜಿಲ್ಲೆಯಲ್ಲಿ ಈವರೆಗೂ 328 ಜನರ ಪೈಕಿ 129 ಜನರು ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಆರು ಜನ ಸಾವನ್ನಪ್ಪಿದ್ದು, ಈ ಆರೂ ಪ್ರಕರಣಗಳ ಸಾವಿಗೆ ಬಹು ಅಂಗಾಂಗ ವೈಫಲ್ಯ ಪ್ರಮುಖ ಕಾರಣ ಎನ್ನಲಾಗಿದೆ. ಹೀಗಿರುವಾಗ ಸೋಂಕಿಗೆ ಒಳಗಾಗುವುದು ಅವರ ತಪ್ಪಿನಿಂದಲೇ ಎನ್ನುವ ನಿರ್ಧಾರಕ್ಕೆ ಎಲ್ಲರೂ ಬರುವುದು ದೊಡ್ಡ ಪ್ರಮಾದವೇ ಆಗಿದೆ. ಸೊಂಕು ಹರಡುತ್ತಿರುವ ರೀತಿ ನೋಡಿದರೆ ಮುಂಬರುವ ದಿನಗಳಲ್ಲಿ ಯಾರಿಗೆ ಬೇಕಾದರೂ ತಗುಲಬಹುದು. ಹೀಗಾಗಿ ಈ ರೋಗದ ಕುರಿತ ಕೀಳರಿಮೆ ಸರಿಯಲ್ಲವೇ ಅಲ್ಲ.
ಚಿಕಿತ್ಸೆಗೆ ಹ್ಯಾಟ್ಸ್ ಅಪ್: ಕೋವಿಡ್ ಸೋಂಕು ಗೊತ್ತಿಲ್ಲದೆಯೋ, ಗೊತ್ತಿಧ್ದೋ ನಮಗೆ ಅಂಟಿಕೊಂಡಿದ್ದು ಸತ್ಯವಾದರೂ ಅದರಿಂದ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ನಮಗೆ ದಾಖಲು ಮಾಡಲಾಯಿತು. ಅಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿರುವುದು ಸತ್ಯ. ವೈದ್ಯರಿಗೆ, ನರ್ಸ್ ಗಳಿಗೆ ನಾವು ಚಿರಋಣಿಗಳು. ಅಲ್ಲಿ ಕಾಲ ಕಾಲಕ್ಕೆ ಔಷಧಿ, ಮಾತ್ರೆ, ತಪಾಸಣೆ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಜಿಲ್ಲಾಡಳಿತ ಒಂದಲ್ಲ ಹತ್ತಾರು ತೊಂದರೆಗಳ ಮಧ್ಯೆಯೂ ನಮಗೆ ಸಾಕಷ್ಟು ಅನುಕೂಲಗಳನ್ನೇ ಮಾಡಿಕೊಟ್ಟಿತ್ತು. ಹೀಗಾಗಿ ಅವರಿಗೆ ನಾವು ಕೈ ಮುಗಿಯುತ್ತೇವೆ ಎನ್ನುತ್ತಿದ್ದಾರೆ ಸೊಂಕಿನಿಂದ ಗುಣಮುಖರಾದವರು.
ಹಳ್ಳಿಗಳಲ್ಲೂ ಕೋವಿಡ್ ಅಸ್ಪೃಶ್ಯತೆ: ಕೇವಲ ನಗರಕ್ಕೆ ಸೀಮಿತವಾಗಿದ್ದ ಕೋವಿಡ್ ಸೋಂಕು ಇದೀಗ ಹಳ್ಳಿಗಳತ್ತ ವಿಪರೀತ ಪ್ರಮಾಣದಲ್ಲಿ ತಗುಲುತ್ತಿದ್ದು, ಇಗಾಗಲೇ ಧಾರವಾಡ ತಾಲೂಕಿನ ಮೊರಬ, ಶಿರಕೋಳದಂತಹ ದೈತ್ಯ ಹಳ್ಳಿಗಳು ಕೋವಿಡ್ ದಿಂದ ಹೈರಾನಾಗಿದ್ದು, ಇಲ್ಲಿ ಕೊರೊನಾ ಸೋಂಕು ತಗುಲಿದ ಮನೆತನಗಳನ್ನು ತೀವ್ರ ಅಸ್ಪೃಶ್ಯತಾ ಭಾವದಿಂದ ನೋಡಲಾಗುತ್ತಿದೆ.
ಹಳ್ಳಿಗಳು ಪರಸ್ಪರ ಪ್ರೀತಿ, ಬಂಧುತ್ವ ಮತ್ತು ಕೊಡುಕೊಳ್ಳುವಿಕೆ ಅಷ್ಟೇಯಲ್ಲ, ಸಂಕಷ್ಟದಲ್ಲಿ ಯಾರೂ ಹೇಳದೆ ಒಬ್ಬರಿಗೊಬ್ಬರು ಸ್ಪಂದಿಸುವ ಮನೊಭಾವವಿತ್ತು. ಇದೀಗ ಕೋವಿಡ್‌ನ ಭಯ ಮತ್ತು ಆತಂಕಗಳು ಇಡೀ ಹಳ್ಳಿಗರಲ್ಲಿಯೇ ಪರಿಸ್ಪರ ಅಪನಂಬಿಕೆ ಸೃಷ್ಟಿಯಾಗುವಂತಾಗಿದೆ. ಕೋವಿಡ್ ಸಂತೆ, ಪೇಟೆ, ಕೃಷಿ ಚಟುವಟಿಕೆ ನೆಪದಲ್ಲಿ ಇನ್ನಷ್ಟು ಹಳ್ಳಿಗರನ್ನು ಪೀಡಿಸುವುದಂತೂ ಸತ್ಯ. ಹೀಗಾಗಿ ಕೋವಿಡ್ ಭಯಾನಕ ಕಾಯಿಲೆ ಅಲ್ಲ, ಇಲ್ಲಿ ಮುನ್ನೆಚ್ಚರಿಕೆ ಮುಖ್ಯ, ರೋಗಿಯ ತಾತ್ಸಾರ ಸರಿಯಲ್ಲ ಎನ್ನುವ ಜಾಗೃತಿ ಹೆಚ್ಚಬೇಕಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.
ಕೋವಿಡ್ ಗೆದ್ದವರು ಯೋಧರೇ : ಕೋವಿಡ್ ವಿರುದ್ಧ ಹೋರಾಟ ಮಾಡುವ ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರದ ಎಲ್ಲರನ್ನು ಕೋವಿಡ್ ಯೋಧರೆಂದು ಹೇಳಿ ಹುರುದುಂಬಿಸಿಯಾಗಿದೆ. ಆದರೆ ನಿಜಕ್ಕೂ ಕೋವಿಡ್ ವಿರುದ್ಧ ಹೋರಾಡಿ ಗೆದ್ದು ಬಂದವರು ಕೂಡ ಕೋವಿಡ್ ಯೋಧರೇ ಆಗಿದ್ದಾರೆ. ಅದರಲ್ಲೂ ಪ್ಲಾಸ್ಮಾ ಥೆರಪಿಗೆ ಒಳಗಾಗಿ ಬಂದವರು ತಮ್ಮ ದೇಹದಲ್ಲಿನ ಆಂಟಿಬಾಡಿಸ್‌ಗಳನ್ನು ದಾನರೂಪದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಕೊಟ್ಟು ಬರುತ್ತಿದ್ದು, ಅದು ಇನ್ನೊಬ್ಬ ಕೋವಿಡ್ ರೋಗಿಯನ್ನು ಗುಣಮುಖಗೊಳಿಸಲು ಅನುಕೂಲವಾಗುತ್ತದೆ. ಹೀಗಾಗಿ ಕೋವಿಡ್ ಗೆದ್ದು ಬಂದವರನ್ನು ಗೌರವದಿಂದ ಕಾಣಬೇಕಿದೆ ಎನ್ನುತ್ತಿದೆ ವೈದ್ಯಲೋಕ.
ತಾತ್ಸಾರ ಸರಣಿ ಆತ್ಮಹತ್ಯೆಗೆ ಕಾರಣ: ಡಾ| ಪಾಂಡುರಂಗಿ : ಕೋವಿಡ್ ಸೋಂಕಿತರನ್ನು ಮತ್ತು ಸೊಂಕಿನಿಂದ ಗುಣಮುಖರಾದವರನ್ನು ತಾತ್ಸಾರ ಭಾವದಿಂದ, ಅಸಡ್ಡೆಯಿಂದ ನೋಡದೆ ಮಾನವೀಯತೆಯಿಂದ ನೋಡಬೇಕು. ಪ್ಲಾಸ್ಮಾ ಥೆರಪಿ ಮಾಡಿಸಿಕೊಂಡವರು ಇನ್ನೊಬ್ಬ ರೋಗಿಯನ್ನು ಉಳಿಸಿದಂತೆ. ಅವರ ಜೀವನ ಸಾರ್ಥಕವಾದದ್ದು, ಯಾವುದೇ ಕಾರಣಕ್ಕೂ ಅವರನ್ನು ನಿರ್ಲಕ್ಷಿಸಬಾರದು. ಇದು ಇನ್ನೊಂದು ಸಾಮಾಜಿಕ ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಸಾಮಾಜಿಕ ತಾತ್ಸಾರ ಕೋವಿಡ್ ಸೋಂಕಿತರಲ್ಲಿ ಖನ್ನತೆ, ಒತ್ತಡ ಸೃಷ್ಟಿಸಿ ಜಿಗುಪ್ಸೆ ಹೆಚ್ಚಾಗಿ ಅವರನ್ನು ಆತ್ಮಹತ್ಯೆಗೂ ಪ್ರೇರೆಪಿಸಬಹುದು. ಹೀಗಾಗಿ ಅವರನ್ನು ಗೌರವದಿಂದ ಕಾಣಬೇಕಿದೆ ಎನ್ನುತ್ತಾರೆ ಮನೋರೋಗ ತಜ್ಞ ಡಾ|ಆನಂದ ಪಾಂಡುರಂಗಿ.
ಏಡ್ಸ್ ರೋಗಿಗಳಿಗೆ ಒಂದು ಪಕ್ಷ ಎಲ್ಲರೂ ಕಿಂಚಿತ್ತು ಮರ್ಯಾದೆ ಕೊಡುತ್ತಿದ್ದಾರೆ. ಆದರೆ ನಮ್ಮನ್ನು ಅವರಿಗಿಂತಲೂ ಕಡೆಯಾಗಿ ನೋಡುತ್ತಿದ್ದಾರೆ. ಯಾರೋ ಅಂಟಿಸಿಕೊಂಡು ದೇಶದೊಳಕ್ಕೆ ಬಂದು ಬಿಟ್ಟ ವೈರಸ್ ನಮಗೆ ಅರಿವಿಲ್ಲದೇ ಅಂಟಿಕೊಂಡರೆ ಅದಕ್ಕೆ ನಾವು ಜವಾಬ್ದಾರರೇ? ನಿಜ ಹೇಳ್ತೇನೆ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತಿದೆ. -ದೇವಾನಂದ, (ಹೆಸರು ಬದಲಿಸಲಾಗಿದೆ), ಗುಣಮುಖರಾದ ವ್ಯಕ್ತಿ, ಧಾರವಾಡ
ನಾನು ಹಳೆ ಮೈಸೂರು ಪ್ರಾಂತ್ಯದ ಕಡೆಯ ಜಿಲ್ಲೆಯವನು. ಕೋಲಾರದಿಂದ ಬಂದು ಹುಬ್ಬಳ್ಳಿಯಲ್ಲಿ ಸಣ್ಣ ಉದ್ಯೋಗ ಮಾಡಿ ಬದುಕು ಕಟ್ಟಿಕೊಂಡಿದ್ದೆ. ಕೋವಿಡ್ ಸೋಂಕಿನಿಂದ ಗುಣಮುಖನಾಗಿ ಮನೆಗೆ ಬಂದರೆ ನಮ್ಮ ಮಾಲೀಕ ನನ್ನನ್ನು ಕರೆದುಕೊಳ್ಳಲಿಲ್ಲ. ಈಗ ದಿನಕ್ಕೆ 400 ರೂ. ಕೊಟ್ಟು ಲಾಡ್ಜ್ ನಲ್ಲಿದ್ದೇನೆ. ಸಮಾಜ ಹೀಗೆ ತಿರಸ್ಕರಿಸಿದರೆ ನಾನು ಎಲ್ಲಿಗೆ ಹೋಗಲಿ? -ಜೀವನ್ ರೆಡ್ಡಿ, (ಹೆಸರು ಬದಲಿಸಲಾಗಿದೆ) ಗುಣಮುಖರಾದ ವ್ಯಕ್ತಿ, ಕೋಲಾರ
ಚಿಕಿತ್ಸೆ ನಂತರ ಕೊವಿಡ್‌ನಿಂದ ಗುಣಮುಖರಾದ ವ್ಯಕ್ತಿಗಳು ಸಾಮಾಜಿಕ ತಾರತಮ್ಯಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದೇನೆ. -ನಿತೇಶ್ ಪಾಟೀಲ, ಜಿಲ್ಲಾಧಿಕಾರಿ
-ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.