ಹೊಸ ಕಟ್ಟಡ ದಲ್ಲಿನ್ನೂ ಕಾರ್ಯಾರಂಭಗೊಳ್ಳದ ಪಾಲಿಕ್ಲಿನಿಕ್
2.17 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
Team Udayavani, Apr 20, 2022, 10:16 AM IST
ಧಾರವಾಡ: ಜಿಲ್ಲೆಯಲ್ಲಿ 2014ರಿಂದ ಜಿಲ್ಲಾಸ್ಪತ್ರೆ ಪರಿಕಲ್ಪನೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಡಿ ಪಾಲಿಕ್ಲಿನಿಕ್ ಆರಂಭಗೊಂಡು ಏಳು ವರ್ಷಗಳೇ ಸಂದಿದೆ. ಈ ಪಾಲಿಕ್ಲಿನಿಕ್‌ಗೆ ಮಂಜೂರಾಗಿದ್ದ ಹೊಸ ಕಟ್ಟಡ ಕಾಮಗಾರಿ ನಾಲ್ಕು ವರ್ಷಗಳ ಬಳಿಕ ಮುಕ್ತಾಯಗೊಂಡು ಬರೋಬ್ಬರಿ 1 ವರ್ಷವಾದರೂ ಕಾರ್ಯಾರಂಭ ಮಾಡಿಲ್ಲ.
ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರ ಕಚೇರಿ ಎದುರುಗಡೆ 2.17 ಕೋಟಿ ರೂ. ಅನುದಾನದಲ್ಲಿ ಪಾಲಿ ಕ್ಲಿನಿಕ್‌ನ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿದ್ದು, ಕಾರ್ಯಾರಂಭಕ್ಕೆ ಕಾದು ನಿಂತಿದೆ.
ಈ ಹಿಂದೆ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣಗೊಂಡರೂ ಟಿಸಿ ಅಳವಡಿಸಲು ಆಗಿರುವ ವಿಳಂಬದಿಂದ ಕಾರ್ಯಾರಂಭಕ್ಕೆ ಹೊಡೆತ ನೀಡಿತ್ತು. ನೂತನ ಕಟ್ಟಡದ ಕ್ರಿಯಾ ಯೋಜನೆಯಲ್ಲಿ ಟಿಸಿ ಅಳವಡಿಕೆಯ ಬಗ್ಗೆ ಅನುದಾನ ಒದಗಿಸಿರಲಿಲ್ಲ. ಹೀಗಾಗಿ ಈಗ ಕಟ್ಟಡ ನಿರ್ಮಾಣಗೊಂಡು ನಾಲ್ಕು ತಿಂಗಳ ಮೇಲಾದರೂ ಟಿಸಿ ಇಲ್ಲದೇ ವಿದ್ಯುತ್ ಸಂಪರ್ಕದ ಕೊರತೆಯಿಂದ ಕಾರ್ಯಾರಂಭ ಮಾಡದಂತಹ ಅನಿವಾರ್ಯತೆ ಎದುರಾಗಿತ್ತು.
ಇದೀಗ ಟಿಸಿ ಸಮಸ್ಯೆ ನಿವಾರಣೆಯಾಗಿ ಬರೋಬ್ಬರಿ 8 ತಿಂಗಳ ಮೇಲಾದರೂ ಇನ್ನೂ ಹೊಸ ಕಟ್ಟಡದಲ್ಲಿ ಪಾಲಿಕ್ಲಿನಿಕ್ ಕಾರ್ಯಾರಂಭ ಮಾಡುವ ಲಕ್ಷಣಗಳೇ ಕಾಣುತ್ತಿಲ್ಲ. ಹೊಸ ಕಟ್ಟಡದಲ್ಲಿ ಪಾಲಿ ಕ್ಲಿನಿಕ್ ಕಾರ್ಯಾರಂಭಕ್ಕೆ ಸಕಲ ಸಿದ್ಧತೆಯಾಗಿದ್ದರೂ ಕಟ್ಟಡದ ಉದ್ಘಾಟನೆಗೆ ಮಾತ್ರ ಮುಹೂರ್ತ ಸಿಗುತ್ತಿಲ್ಲ.
ಕಟ್ಟಡ ನಿರ್ಮಾಣವಾಗಿ ಬರೋಬ್ಬರಿ ಒಂದು ವರ್ಷ ಗತಿಸಿದರೂ ಹೊಸ ಕಟ್ಟಡದಲ್ಲಿ ಪಾಲಿಕ್ಲಿನಿಕ್ ಕಾರ್ಯಾರಂಭ ಆಗದಿರುವ ಬಗ್ಗೆ ಜಾನುವಾರುಗಳ ಮಾಲೀಕರು ಹಾಗೂ ರೈತರಿಂದ ದೂರುಗಳು ಕೇಳಿ ಬರುತ್ತಿದ್ದರೂ ಸಂಬಂಧಪಟ್ಟವರು ಲಕ್ಷಹರಿಸುತ್ತಿಲ್ಲ.
ಪಾಲಿಕ್ಲಿನಿಕ್ ಏಳುಬೀಳು: ಪಾಲಿಕ್ಲಿನಿಕ್‌ಗೆ ಸುಸಜ್ಜಿತ ಕಟ್ಟಡ, ತಜ್ಞ ವೈದ್ಯರು ಹಾಗೂ ಏಕ್ಸರೆ ಯಂತ್ರಗಳ ಕೊರತೆ ಇತ್ತು. ಅದಕ್ಕಾಗಿ 2017ರಲ್ಲಿ ಪಾಲಿ ಕ್ಲಿನಿಕ್‌ಗೆ ಹೊಸ ಸುಸಜ್ಜಿತ ಕಟ್ಟಡ ಮಂಜೂರು ಮಾಡಿ, 100 ಅಡಿ ಉದ್ದ ಹಾಗೂ 135 ಅಗಲದ ಜಾಗದಲ್ಲಿ ನಿರ್ಮಿಸಲು 2.17 ಕೋಟಿ ಅನುದಾನ ಒದಗಿಸಿತ್ತು. 2018ರಲ್ಲಿ ಈ ಕಟ್ಟಡ ನಿರ್ಮಾಣ ಹೊಣೆಯನ್ನು ಕರ್ನಾಟಕ ಗೃಹ ಮಂಡಳಿಗೆ ನೀಡಲಾಗಿತ್ತು.
ಆದರೆ ಈ ಮಂಡಳಿಯು ಎಂಜಿನಿಯರ್ ತಂಡದಿಂದ ಇಲ್ಲಿ ಕಟ್ಟಡ ನಿರ್ಮಾಣ ಮಾಡಬಹುದೆಂಬ ಬಗ್ಗೆ ಸರ್ವೇ ಹಾಗೂ ತಪಾಸಣೆ ಮಾಡಿಸಿ ಪ್ರಮಾಣಪತ್ರ ಪಡೆದ ಬಳಿಕ 2019ರ ಜನೆವರಿ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಿದರೂ ಕಟ್ಟಡ ಕಾಮಗಾರಿ ಆರಂಭ ಆಗಲೇ ಇಲ್ಲ. ಇದಲ್ಲದೇ ಆ ವರ್ಷ ಸುರಿದ ಮಳೆಯಿಂದ ಈ ಜಾಗದ ತೆಗ್ಗು ಪ್ರದೇಶದಲ್ಲಿ ನೀರು ತುಂಬಿದ್ದರಿಂದ ಆರು ತಿಂಗಳ ಕಾಲ ಕಾಮಗಾರಿಯೇ ಆಗಲಿಲ್ಲ, ಇದಾದ ಬಳಿಕ ಇದೀಗ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸುಸಜ್ಜಿತ ಕಟ್ಟಡದಲ್ಲಿ ಸೇವೆ ನೀಡಲು ಸಿದ್ಧಗೊಂಡು ನಿಂತಿದೆ.
ಹಳೇ ಕಟ್ಟಡಲ್ಲಿಯೇ ಇನ್ನೂ ಕಾರ್ಯಾಚರಣೆ: ಹೊಸ ಕಟ್ಟಡವಿದ್ದರೂ ಕಾರ್ಯಾರಂಭವಿಲ್ಲದ ಕಾರಣ ಹಳೇ ಕಟ್ಟಡದಲ್ಲಿಯೇ ಸಾಗಿರುವ ಪಾಲಿಕ್ಲಿನಿಕ್‌ನಿಂದ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ತಾತ್ಕಾಲಿಕವಾಗಿ ಇದ್ದ ಶಸ್ತ್ರಚಿಕಿತ್ಸೆ ಕೊಠಡಿಯನ್ನೂ ಹೊಸ ಕಟ್ಟಡಕ್ಕಾಗಿ ನೆಲಸಮ ಮಾಡಿರುವ ಕಾರಣ ಈಗ ಶಸ್ತ್ರಚಿಕಿತ್ಸೆಯ ಕೊಠಡಿಯ ಕೊರತೆ ಇದೆ. ಹೀಗಾಗಿ ಕ್ಲಿನಿಕ್‌ನ ಆವರಣದ ಗಿಡಗಳಿಗೆ ಜಾನುವಾರು ಕಟ್ಟಿ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಕಟ್ಟಡದ ಎದುರೇ ಶಸ್ತ್ರಚಿಕಿತ್ಸೆ ಸಾಗುವಂತಾಗಿದೆ. ಅಲ್ಲದೇ ತಜ್ಞ ವೈದ್ಯರು, ಸಿಬ್ಬಂದಿ ಕೊರತೆಯಿಂದ ಶಸ್ತ್ರಚಿಕಿತ್ಸೆ ಪಡೆಯಲು ಜಾನುವಾರುಗಳು ಕಾದು ನಿಲ್ಲುವ ಸ್ಥಿತಿ ಸಾಮಾನ್ಯವಾಗಿಬಿಟ್ಟಿದೆ.
ಪಾಲಿಕ್ಲಿನಿಕ್‌ನ ಹೊಸ ಕಟ್ಟಡದಲ್ಲಿ ಟಿಸಿ ಅಳವಡಿಕೆ ವಿಳಂಬದಿಂದ ವಿದ್ಯುತ್ ಪೂರೈಕೆ ತಡವಾಗಿತ್ತು. ಇದೀಗ ಈ ಸಮಸ್ಯೆ ಬಗೆಹರಿದಿದ್ದು, ಪೂರ್ಣ ಪ್ರಮಾಣದಲ್ಲಿ ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ. ಈ ಹೊಸ ಕಟ್ಟಡದ ಉದ್ಘಾಟನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ದಿನಾಂಕ ನಿಗದಿ ಮಾಡಲಾಗುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಉದ್ಘಾಟನೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. –ಉಮೇಶ ಎನ್. ಕೊಂಡಿ ಉಪನಿರ್ದೇಶಕರು (ಆಡಳಿತ), ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ತಜ್ಞ ವೈದ್ಯರು -ಸಿಬ್ಬಂದಿ ಕೊರತೆ: ಹೊಸ ಕಟ್ಟಡದಲ್ಲಿ ಚಿಕ್ಕ ಮತ್ತು ದೊಡ್ಡ ಜಾನುವಾರುಗಳಿಗಾಗಿ ಪ್ರತ್ಯೇಕ ಎರಡು ಶಸ್ತ್ರಚಿಕಿತ್ಸಾ ಕೊಠಡಿಗಳಿದ್ದು, ಪ್ರಯೋಗಾಲಯವೂ ಇದೆ. ಆದರೆ ಅದಕ್ಕೆ ಬೇಕಾದ ಸಾಮಗ್ರಿಗಳ ಕೊರತೆ ಇದೆ. ಸ್ಕ್ಯಾನಿಂಗ್ ಯಂತ್ರವಿದೆ, ಆದರೆ ಈವರೆಗೂ ಎಕ್ಸರೇ ಯಂತ್ರದ ಕೊರತೆ ನೀಗಿಲ್ಲ. ಹಳೇ ಕಟ್ಟಡದಲ್ಲಿಯೇ ಸ್ಕ್ಯಾನಿಂಗ್ ಯಂತ್ರ ಸೇವೆ ನೀಡಲಾಗುತ್ತಿದ್ದು, ಎಕ್ಸರೇ ಸೇವೆ ಆರಂಭಿಸಿಲ್ಲ. ಪಶುಗಳಿಗೆ ಔಷಧ ಶಾಸ್ತ್ರ, ಶಸ್ತ್ರಚಿಕಿತ್ಸೆ ಹಾಗೂ ಬಂಜೆತನ ನಿವಾರಣೆ-ಪ್ರಸೂತಿ ಶಾಸ್ತ್ರ ಈ ಮೂರು ವಿಭಾಗದಲ್ಲಿ ತಜ್ಞ ವೈದ್ಯರನ್ನು ಕೊಡಬೇಕೆಂಬುದೇ ಈ ಪಾಲಿ ಕ್ಲಿನಿಕ್ ಉದ್ದೇಶ. ಆದರೆ ಈಗ ಪಾಲಿಕ್ಲಿನಿಕ್ ನಲ್ಲಿ ಉಪನಿರ್ದೇಶಕರು, ಪ್ರಥಮ ದರ್ಜೆ ಸಹಾಯಕ, 1ಡಿ ಗ್ರೂಪ್ ಹುದ್ದೆಯ ಕಾರ್ಯ ನಿರ್ವಹಣೆ ಇದೆ. ಉಳಿದಂತೆ ಶಸ್ತ್ರಚಿಕಿತ್ಸಕರು, ಮುಖ್ಯ ವೈದ್ಯಾಧಿಕಾರಿ, ಮೂರು ಡಿ ಗ್ರೂಪ್ ಹುದ್ದೆಗಳು ಖಾಲಿ ಇವೆ. ಇದಲ್ಲದೇ ಪಾಲಿಕ್ಲಿನಿಕ್‌ಗೆ ನೀಡಿರುವ ಆಂಬ್ಯುಲೆನ್ಸ್ ವಾಹನಕ್ಕೆ ಚಾಲಕರಿಲ್ಲ. ಪ್ರಯೋಗಾಲಯಕ್ಕೂ ಸಿಬ್ಬಂದಿ ಕೊರತೆ ಇದೆ.
-ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.