ಕೃಷಿ ಉತ್ಪನ್ನ ಸಂಸ್ಕರಣೆ ಉದ್ಯಮ ನೆಗೆತಕ್ಕೆ ಬೇಕು ಉತ್ತೇಜನ
Team Udayavani, Nov 24, 2017, 1:09 PM IST
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕೃಷಿ ಉತ್ಪನ್ನ ಸಂಸ್ಕರಣೆ ಉದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಉದ್ಯಮದ ನೆಗೆತಕ್ಕೆ ಸರಕಾರದ ಉತ್ತೇಜನ ಅಗತ್ಯವಾಗಿದೆ. ಮುಖ್ಯವಾಗಿ ರಾಜ್ಯ ಸರಕಾರದಿಂದ ಕೃಷಿ ಉತ್ಪನ್ನ ಸಂಸ್ಕರಣೆ ಹಾಗೂ ರಫ್ತು ಉದ್ಯಮಕ್ಕೆ ಬಲ ತುಂಬುವ ಕೆಲಸ ಆಗಬೇಕಾಗಿದೆ.
ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯೂ ಕೃಷಿ ವೈವಿಧ್ಯತೆ ಹೊಂದಿದ್ದು, ಒಂದೊಂದು ರೀತಿಯ ಕೃಷಿ ಉತ್ಪನ್ನಗಳಿಗೆ ಖ್ಯಾತಿ ಹೊಂದಿದೆ. ಆಹಾರಧಾನ್ಯ, ವಾಣಿಜ್ಯ ಬೆಳೆಗಳು ಹಾಗೂ ತೋಟಗಾರಿಕಾ ಉತ್ಪನ್ನಗಳು ಇಲ್ಲಿ ಹೇರಳವಾಗಿದ್ದರೂ ಅವುಗಳ ಮೌಲ್ಯವರ್ಧನೆ ಹಾಗೂ ಸಂಸ್ಕರಣೆ ಪ್ರಮಾಣ ಅತ್ಯಲ್ಪ. ಇದ್ದ ಉದ್ಯಮಗಳು ಹಲವು ಸಮಸ್ಯೆ ಎದುರಿಸುತ್ತಿವೆ.
ಬೆಳೆ ವೈವಿಧ್ಯತೆ ತಾಣ: ಉತ್ತರ ಕರ್ನಾಟಕ ಭತ್ತ, ಮೆಕ್ಕೆಜೋಳ, ಜೋಳ, ಸಜ್ಜೆ, ಸಿರಿಧಾನ್ಯಗಳು, ನೆಲಗಡಲೆ, ಕಡಲೆ, ಉಳ್ಳಾಗಡ್ಡಿ, ಮೆಣಸಿನಕಾಯಿ, ವಿವಿಧ ತರಕಾರಿಗಳು ಅಲ್ಲದೆ ತೋಟಗಾರಿಕಾ ಬೆಳೆಗಳಾದ ದಾಳಿಂಬೆ, ಪಪ್ಪಾಯ, ಬಾಳೆ, ಚಿಕ್ಕು, ಪೇರಲ, ಮಾವು ಇನ್ನಿತರ ಹಣ್ಣುಗಳ ಬೆಳೆ ಬೆಳೆ ವೈವಿಧ್ಯತೆ ಪ್ರದೇಶವಾಗಿದೆ.
ಆದರೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಪ್ರಮಾಣ ಶೇ.5-10ನ್ನೂ ದಾಟಿಲ್ಲ. ರೈತರು ತಾವು ಬೆಳೆದ ಬೆಳೆಗಳನ್ನು ಯಾವ ಮೌಲ್ಯವರ್ಧನೆಯೂ ಇಲ್ಲದೆ ನೇರವಾಗಿ ಮಾರಾಟ ಮಾಡುತ್ತಿದ್ದು, ದಲ್ಲಾಳಿಗಳು ಕೇಳಿದ ಬೆಲೆಗೆ ನೀಡಬೇಕಾಗಿದೆ. ಹೆಚ್ಚು ದಿನ ಬಾಳಿಕೆ ಬಾರದ ಹಣ್ಣು ಹಾಗೂ ಉಳ್ಳಾಗಡ್ಡಿ, ತರಕಾರಿ, ಸೊಪ್ಪು ಸೇರಿದಂತೆ ವಿವಿಧ ಉತ್ಪನ್ನಗಳು ಸುಗ್ಗಿ ವೇಳೆ ಮಾರುಕಟ್ಟೆಗೆ ಹೋದರೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದೆ ವಹಿವಾಟು ಶಾಸ್ತ್ರ ಮುಗಿಸುತ್ತವೆ.
ಉದ್ಯಮ ನೆಗೆತ ಅವಶ್ಯ: ಉತ್ತರ ಕರ್ನಾಟಕದಲ್ಲಿ ಆಹಾರ ಸಂಸ್ಕರಣೆ ಉದ್ಯಮ ಕೇವಲ ಬೆರಳೆಣಿಕೆಯಷ್ಟು ಎಂದು ಹೇಳಬಹುದು. ಸಣ್ಣಪುಟ್ಟ ಉದ್ಯಮಗಳು ಅಲ್ಲಲ್ಲಿ ಇವೆಯಾದರೂ, ದೊಡ್ಡ ಪ್ರಮಾಣದ ಉದ್ಯಮಗಳು ಅತ್ಯಲ್ಪ. ಇತ್ತೀಚೆಗೆ ಗುಜರಾತ್‌ನ ಅಂಬುಜಾ ಕಂಪೆನಿ ಹಾವೇರಿ ಜಿಲ್ಲೆಯಲ್ಲಿ ಉದ್ಯಮ ಆರಂಭಿಸಿ ಮೆಕ್ಕೆಜೋಳ ಸಂಸ್ಕರಣೆ, ಮೌಲ್ಯವರ್ಧನೆಗೆ ಮುಂದಾಗಿರುವುದು ಅನೇಕ ರೈತರಿಗೆ ನೆರವು ದೊರೆತಂತಾಗಿದೆ.
ಅದೇ ರೀತಿ ಹುಬ್ಬಳ್ಳಿಯಲ್ಲಿ ಕೆನ್ ಅಗ್ರಿಟೆಕ್ ಕಂಪೆನಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಮಿಡಿಸೌತೇಕಾಯಿಯನ್ನು ರಷ್ಯಾ, ಅಮೆರಿಕ ಇನ್ನಿತರ ದೇಶಗಳಿಗೆ ರಫ್ತು ಮಾಡುತ್ತಿದೆ. ಆರಂಭದಲ್ಲಿ ರೈತರ ಮನವೊಲಿಕೆ ಸಮಸ್ಯೆ ಎದುರಿಸಿದ್ದ ಕಂಪೆನಿ ಇದೀಗ ಉತ್ತಮ ನಡೆ ಕಂಡುಕೊಂಡಿದೆ. ಹಲವಾರು ರೈತರು ಖರೀದಿ ಒಡಂಬಡಿಕೆಯೊಂದಿಗೆ ಮಿಡಿ ಸೌತೇಕಾಯಿ ಬೆಳೆಯಲ್ಲಿ ತೊಡಗಿದ್ದಾರೆ.
ನ್ಯಾನೋμಕ್ಸ್ ಕಂಪೆನಿ ಗೋಡಂಬಿ, ಶೇಂಗಾ ಇನ್ನಿತರ ಉತ್ಪನ್ನಗಳ ಗ್ರೇಡಿಂಗ್ ಯಂತ್ರಗಳ ಮೂಲಕ ಉತ್ಪನ್ನಗಳ ಮೌಲ್ಯವರ್ಧನೆಗೆ ಪೂರಕ ರೀತಿಯಲ್ಲಿ ಉದ್ಯಮ ಆರಂಭಿಸಿದ್ದು, ಯಶಸ್ಸಿನ ನಡೆ ಕಂಡಿದೆ. ರಾಯಚೂರು ಇನ್ನಿತರ ಕಡೆಗಳಲ್ಲಿ ಪಪ್ಪಾಯ ಇನ್ನಿತರ ಹಣ್ಣುಗಳನ್ನು ಬಳಸಿ ಜಾಮ್ ತಯಾರಿಕೆ ಮಾಡಲಾಗುತ್ತಿದ್ದು, ಇದು ಸಣ್ಣ ಪ್ರಮಾಣದಲ್ಲಿದೆ.
ಹುಬ್ಬಳ್ಳಿಯಲ್ಲಿ ಮಾವಿನಹಣ್ಣು ಸಂಸ್ಕರಣೆ ನಿಟ್ಟಿನಲ್ಲಿ ಎಕ್ಸ್‌ಲ್ ಫುಡ್ ಉದ್ಯಮ ಕಾರ್ಯ ನಿರ್ವಹಿಸುತ್ತಿದೆ. ಅದೇ ರೀತಿ ರೈತರೊಂದಿಗೆ ನೇರ ಸಂಪರ್ಕ ಹೊಂದಿ ಸಾವಯವ ಪದ್ಧತಿಯ ತರಕಾರಿಗಳನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಫ್ರೆಶ್‌ಬಾಕ್ಸ್ ಎಂಬ ನವೋದ್ಯಮ ಆರಂಭಗೊಂಡಿದೆ.
ವಿದೇಶದಲ್ಲಿ ಸಾಫ್ಟ್ವೇರ್ ಎಂಜಿನೀಯರಾಗಿದ್ದರೂ ಹುದ್ದೆ ತೊರೆದು ತಾಯಿನೆಲಕ್ಕೆ ಆಗಮಿಸಿದ ಯುವ ನವೋದ್ಯಮಿಯೊಬ್ಬರು ಸಿರಿಧಾನ್ಯಗಳ ಮಹತ್ವ ತಿಳಿಸುವ ನಿಟ್ಟಿನಲ್ಲಿ ಮಿಲೆಟ್‌ಮಂಕ್ ಆರಂಭಿಸಿದ್ದು, ಇದರ ಮೂಲಕ ಸಿರಿಧಾನ್ಯಗಳ ಮೌಲ್ಯವರ್ಧನೆ ಉತ್ಪನ್ನಗಳ ನೀಡಿಕೆ ಮಹತ್ವದ ಕಾರ್ಯಕ್ಕೆ ಮುಂದಡಿ ಇರಿಸಿದ್ದಾರೆ.
ಇಲ್ಲಿವರೆಗೆ ನೆಲೆಕಂಡುಕೊಂಡ ಸಣ್ಣ, ಮಧ್ಯಮ ಹಾಗೂ ದೊಡ್ಡ ಪ್ರಮಾಣದ ಕೃಷಿ ಸಂಸ್ಕರಣೆ ಪೂರಕ ಉದ್ಯಮಗಳು ಸ್ವಯಂ ಶ್ರಮದೊಂದಿಗೆ ಎದ್ದು ನಿಂತಿವೆಯಾದರೂ, ಸರಕಾರದಿಂದ ಹೆಚ್ಚಿನ ನೆರವು ಪಡೆದುಕೊಂಡಿಲ್ಲ.
ರಾಜ್ಯ ಸರಕಾರ ಕೈಗಾರಿಕಾ ನೀತಿ ರೂಪಿಸಿ ಉತ್ತರ ಕರ್ನಾಟಕಕ್ಕೆ ಒತ್ತು ನೀಡಲಾಗಿದೆ ಎಂದು ಹೇಳುತ್ತಿದೆಯಾದರೂ ಈ ಭಾಗಕ್ಕೆ ಅಗತ್ಯವಿರುವ ಕೃಷಿ ಸಂಸ್ಕರಣೆ ಉದ್ಯಮಕ್ಕೆ ಹೆಚ್ಚಿನ ಆಸಕ್ತಿ ತೋರಬೇಕು. ಕೃಷಿ ಸಂಸ್ಕರಣೆ ನವೋದ್ಯಮಕ್ಕೆ ಹಲವು ಉದ್ಯಮಿಗಳು ಉತ್ಸುಕರಾಗಿದ್ದು ಅವರಿಗೆ ಅಗತ್ಯ ಉತ್ತೇಜನ ನೀಡಬೇಕದಲ್ಲದೆ, ರಫ್ತು ವಿಚಾರದಲ್ಲಿನ ಕೆಲ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಬೇಕಿದೆ.
ಇದೇಮೊದಲ ಬಾರಿಗೆ ಟೈ ಹುಬ್ಬಳ್ಳಿ ಕೃಷಿ ಸಂಸ್ಕರಣೆ ಉದ್ಯಮ ಉತ್ತೇಜನಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ಹಾಗೂ ಟೈ ಹುಬ್ಬಳ್ಳಿ ಸಹಕಾರ, ಪ್ರೋತ್ಸಾಹ, ನೆರವಿನೊಂದಿಗೆ ಕೃಷಿ ಸಂಸ್ಕರಣೆ ಉದ್ಯಮ ಉತ್ತಮ ನೆಗೆತ ಕಾಣುವ ನಿರೀಕ್ಷೆ ಈ ಭಾಗದ ಜನತೆಯದ್ದಾಗಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.