ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಪ್ರತಿಭಟನೆ
Team Udayavani, Jan 11, 2017, 12:54 PM IST
ಧಾರವಾಡ: ಇಲ್ಲಿಯ ಮದಿಹಾಳದ ಮೂರುಸಾವಿರಮಠ ಓಣಿಯ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಕ್ಕಾಗಿ ಆಗ್ರಹಿಸಿ ಅಲ್ಲಿನ ನಿವಾಸಿಗಳು ನಗರದ ಡಿಪೋ ಸರ್ಕಲ್ ಬಳಿ ದಿಢೀರ್ ರಸ್ತೆ ತಡೆ ನಡೆಸಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮೂರುಸಾವಿರಮಠದ ಓಣಿಯ ರಸ್ತೆ ಹದಗೆಟ್ಟು ಹೋಗಿದ್ದು, ಇದೀಗ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರೂ ಕಾಮಗಾರಿ ಆರಂಭಗೊಂಡಿಲ್ಲ.
ಆದಷ್ಟು ಬೇಗ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಎರಡು ತಾಸಿಗೂ ಹೆಚ್ಚು ಸಮಯ ರಸ್ತೆ ತಡೆದ ನಿವಾಸಿಗಳು, ಇದಕ್ಕೆ ಸಂಬಂಧಪಟ್ಟವರು ಬಂದು ಮಾಹಿತಿ ನೀಡುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ಪಾಲಿಕೆ ಸದಸ್ಯ ದೀಪಕ್ ಚಿಂಚೋರೆ ಹಾಗೂ ಸಚಿವ ವಿನಯ ಕುಲಕರ್ಣಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಹೊಸದಾಗಿ ನೀಡಬೇಕಾದ ನಳ ಸಂಪರ್ಕ ಹಾಗೂ ನಿರಂತರ ನೀರು ಪೂರೈಕೆಯ ಸಂಪರ್ಕ, ಕಸ ವಿಲೇವಾರಿಗಾಗಿ ಅಗತ್ಯ ಕ್ರಮ ಕೈಗೊಂಡು ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ವಾಹನ ಸಂಚಾರ ತಡೆದ ಕಾರಣಕ್ಕೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಶಹರ ಠಾಣೆ ಪೊಲೀಸರು ಪರವಾನಗಿ ಪಡೆಯದೇ ಪ್ರತಿಭಟಿಸುವುದು ಅಪರಾಧ. ಪ್ರತಿಭಟಿಸದಂತೆ ತಾಕೀತು ಮಾಡಿದರು. ಪಟ್ಟು ಸಡಿಲಿಸದ ಪ್ರತಿಭಟನಕಾರರು, ವಾರ್ಡ್‌ನ ಸದಸ್ಯ ದೀಪಕ್ ಚಿಂಚೋರೆ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುವ ತನಕ ಪ್ರತಿಭಟನೆ ಮುಂದುವರಿಸಿದರು.
ಪ್ರತಿಭಟನೆ ಹಿಂಪಡೆಯಲು ಪೊಲೀಸರು ಮಾಡಿದ ಎಲ್ಲ ಪ್ರಯತ್ನ ಸಂಪೂರ್ಣ ವಿಫಲಗೊಂಡಿತು. ಪರಿಸ್ಥಿತಿ ಅರಿತ ಪೊಲೀಸರು ಪ್ರತಿಭಟನಾಕಾರರ ಬಂಧನಕ್ಕೆ ಸಿದ್ಧತೆ ನಡೆಸಿದ್ದರು. ಅಷ್ಟರೊಳಗೆ ಸ್ಥಳಕ್ಕಾಗಮಿಸಿದ ವಾರ್ಡ್‌ನ ಸದಸ್ಯ ದೀಪಕ್ ಚಿಂಚೋರೆ ಅವರಿಗೆ ಘೇರಾವ್ ಹಾಕಿ ತಕ್ಷಣ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೆಬ್ಬಳ್ಳಿ ಅಗಸಿ ಕಾಮಗಾರಿ ಆರಂಭಗೊಂಡ ಕಾರಣಕ್ಕೆ ಮದಿಹಾಳ ಮಾರ್ಗವಾಗಿ ಮದಿಹಾಳ, ಹೆಬ್ಬಳ್ಳಿ, ನವಲಗುಂದ, ಬ್ಯಾಹಟ್ಟಿ ಬಾಗಲಕೋಟೆಗೆ ಹೋಗುವ ಸಾರಿಗೆ ಬಸ್-ಖಾಸಗಿ ವಾಹನ ಸಂಚಾರದ ಜತೆಗೆ ಆಟೋಗಳ ಓಡಾಟವೂ ಹೆಚ್ಚಿದೆ. ಇವುಗಳಿಂದ ಏಳುವ ಧೂಳು ಅಡುಗೆ ಮನೆಗೆ ನುಗ್ಗುತ್ತದೆ ಎಂದು ಜನತೆ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಚಿಂಚೋರೆ, ಯುಜಿಡಿ ಕಾಮಗಾರಿಯಿಂದಾಗಿ ರಸ್ತೆ ದುರಸ್ತಿ ಕಾರ್ಯ ವಿಳಂಬ ಆಗಿದೆ.
ಕೆಲ ಮನೆಗಳಿಗೆ 24×7 ನೀರಿನ ಸಂಪರ್ಕ ಕಲ್ಪಿಸಬೇಕು. ಒಂದು ವಾರದಲ್ಲಿ ರಿಪೇರಿ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಹೊಸ ಸಂಪರ್ಕ ಪಡೆಯಲು ಹಣ ತುಂಬಬೇಕು. ಅದನ್ನು ಎರಡು ದಿನದಲ್ಲಿ ತುಂಬಿದರೆ ನಳದ ಸಂಪರ್ಕ ಕಲ್ಪಿಸುವಂತೆ ಸ್ಥಳಕ್ಕೆ ಸಂಬಂಧಿಸಿದ ಪಾಲಿಕೆ ಅಧಿಧಿಕಾರಿಗಳನ್ನು ಕರೆದು ಆದೇಶ ಮಾಡಿದರು.
ಸಂಚಾರ ಅಸ್ತವ್ಯಸ್ತ: ಮೂರು ಗಂಟೆಗಳ ಕಾಲ ಡಿಪೋ ಸರ್ಕಲ್ ಬಂದ್ ಮಾಡಿದ ಪರಿಣಾಮ ತ್ತ ಕಡೆ ಡಿಪೋ ವೃತ್ತದಿಂದ ಶಿವಾಜಿ ವೃತ್ತವರೆಗೆ, ಅತ್ತ ಮರುಘಾಮಠದವರೆಗೂ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳು ನಿಂತಿದ್ದವು. ಜನತೆ ಅಲ್ಲಿಂದ ಇಳಿದು ಸಿಬಿಟಿಗೆ ನಡೆದು ಹೋಗುವ ದೃಶ್ಯ ಕಂಡವು.
ನಂತರ ರಸ್ತೆಗಳ ದುರಸ್ತಿಯ ವಾಗ್ಧಾನ ಮಾಡಿದ್ದರಿಂದ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆಯನ್ನು ಕೊನೆಗೂ ಹಿಂಪಡೆದರು. ಈ ವೇಳೆಗೆ ಪುನಃ ಜನತೆ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯತು. ನಂತರ ಡಿಪೋದ ಒಳಗಡೆ ಬಸ್ ಸಂಚರಿಸಲು ಅವಕಾಶ ಕಲ್ಪಿಸಲಾಯಿತು.
ಬಿಜೆಪಿ ಮುಖಂಡ ಅರವಿಂದ ಏಗನಗೌಡರ, ಜಯಶ್ರೀ ಕದಗಕರ, ಗಂಗಮ್ಮ ಕೊಟೂರ, ಲಲಿತಾ ಗಣೇಶಕರ, ನಾಗವ್ವ ಬುಡನಕೇರಿ, ಸಂತೋಷ ಕೊಟೂರ, ಸತೀಶ ಬಡನಕರ, ಮಂಜುಳಾ ಹಡಪದ, ಎನ್.ಜೆ.ಹೆಬ್ಬಳ್ಳಿಕೇರಿ ಸೇರಿದಂತೆ ನೂರಾರು ಮಹಿಳೆಯರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.