ಮತ್ತೆ ಬೀಗಮುದ್ರೆ ಹಾಕಿ
Team Udayavani, Jul 18, 2017, 12:50 PM IST
ಹುಬ್ಬಳ್ಳಿ: ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳಲ್ಲಿ ಕರಬಾಕಿ ಇದ್ದ ಮಳಿಗೆಗಳಿಗೆ ಪಾಲಿಕೆಯಿಂದ ಹಾಕಿದ್ದ ಬೀಗ ಮುರಿದ ಪ್ರಕರಣಗಳಿಗೆ ಸಂಬಂಧಿಸಿ ಅಂತಹ ಮಳಿಗೆಗಳಿಗೆ ತಕ್ಷಣವೇ ಬೀಗಮುದ್ರೆ ಹಾಕುವಂತೆ ಮಹಾಪೌರರು ಪಾಲಿಕೆ ಆಯುಕ್ತರಿಗೆ ಆದೇಶಿಸಿದರು.
ಬಿಜೆಪಿಯ ವೀರಣ್ಣ ಸವಡಿ ವಿಷಯ ಪ್ರಸ್ತಾಪಿಸಿ, ಆಯುಕ್ತರು ಮಳಿಗೆಗಳ ವಿರುದ್ಧ ಕ್ರಮದ ಬಗ್ಗೆ ತೆರಿಗೆ ನಿರ್ಧರಣ ಹಾಗೂ ಹಣಕಾಸು ಸ್ಥಾಯಿ ಸಮಿತಿಗೆ ವರದಿ ಕಳುಹಿಸಲಾಗಿದ್ದು, ಶಿಫಾರಸು ಬಂದ ನಂತರ ಕ್ರಮಕೈಗೊಳ್ಳುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದನ್ನು ಸ್ಥಾಯಿ ಸಮಿತಿಗೆ ಕಳುಹಿಸುವ ಅಗತ್ಯವೇ ಇರಲಿಲ್ಲ.
ಅಲ್ಲದೆ ಸ್ಥಾಯಿ ಸಮಿತಿಯಿಂದ ಕ್ರಮಕ್ಕೆ ಶಿಫಾರಸು ಮಾಡಿದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. ಆಯುಕ್ತರು ಒತ್ತಡಕ್ಕೆ ಮಣಿದು ಕ್ರಮ ಕೈಗೊಳ್ಳುತ್ತಿಲ್ಲ. ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯ ಡಾ| ಪಾಂಡುರಂಗ ಪಾಟೀಲ ಮಾತನಾಡಿದರು.
ಪಾಲಿಕೆ ಸಾಮಾನ್ಯ ಸಭೆ ಕೈಗೊಂಡ ನಿರ್ಣಯವನ್ನು ಆಯುಕ್ತರು 60 ದಿನಗಳ ಒಳಗೆ ಜಾರಿ ಮಾಡಬೇಕು. ಇಲ್ಲವೆ ಮಾಹಿತಿ ಕೋರಿ ಸರಕಾರಕ್ಕೆ ಪತ್ರ ಬರೆಯಬೇಕು. ಎರಡನ್ನೂ ಮಾಡದಿದ್ದರೆ ಏನರ್ಥ ಎಂದರು. ಅಂಗಡಿಕಾರರ ವಿರುದ್ಧ ಸೂಕ್ತ ಕ್ರಮದ ಆದೇಶ ಹೊರಡಿಸಿದ್ದಾಗಿ ಆಯುಕ್ತರು ಹೇಳಿದರು. ಮಹಾಪೌರರು ತಕ್ಷಣವೇ ನಿಯಮ ಉಲ್ಲಂ ಸಿದ ಮಳಿಗೆಗಳಿಗೆ ಬೀಗ ಹಾಕುವಂತೆ ಸೂಚಿಸಿದರು.
ವಸೂಲಿಗೆ ಸೂಚನೆ: ಹುಬ್ಬಳ್ಳಿಯ ಭಾರತ್ ಮಿಲ್ ಬಳಿಯ ಜಾಗವೊಂದನ್ನು ಖಾಸಗಿಯವರು ವಾಹನಗಳ ನಿಲುಗಡೆಗೆ ಬಳಸುತ್ತಿದ್ದು, ಅದರಿಂದ ಸುಮಾರು 66.50ಲಕ್ಷ ರೂ. ಕರ ಬಾಕಿ ಇದೆ. ಈ ಬಗ್ಗೆ ಯಾವುದೇ ಕ್ರಮ ಇಲ್ಲವಾಗಿದೆ ಎಂದು ಕಾಂಗ್ರೆಸ್‌ನ ದೀಪಕ ಚಿಂಚೋರೆ ಗಮನ ಸೆಳೆಯುವ ಗೊತ್ತುವಳಿ ಮಂಡಿಸಿದರು.
ಬಾಕಿ ಬರುವವರೆಗೆ ಪಾರ್ಕಿಂಗ್ ಜಾಗಕ್ಕೆ ಬೀಗ ಹಾಕಬೇಕು ಎಂದು ಒತ್ತಾಯಿಸಿದರು. ಬಿಜೆಪಿಯ ಶಿವು ಹಿರೇಮಠ ಸಾಥ್ ನೀಡಿದರು. ಆಯುಕ್ತರು ಸಮಜಾಯಿಷಿ ನೀಡಿ, ಈ ಹಿಂದೆ ಸೀಜ್ ಮಾಡಲಾಗಿತ್ತು. ಆದರೆ, ಅಂತಹ ಅಧಿಕಾರ ಪಾಲಿಕೆಗೆ ಇಲ್ಲ ಎಂದು ಸರಕಾರದಿಂದ ಆದೇಶ ಬಂದಿದ್ದರಿಂದ ತೆರವು ಮಾಡಬೇಕಾಯಿತು ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಾ| ಪಾಂಡುರಂಗ ಪಾಟೀಲ, ಪರವಾನಗಿ ವಿಚಾರದಲ್ಲಿ ಬೀಗ ಹಾಕಿದ್ದಕ್ಕೆ ಅಧಿಕಾರ ಇಲ್ಲ ಎಂದು ಹೇಳಲಾಗಿತ್ತು. ಪಾಲಿಕೆಗೆ ಬರಬೇಕಾದ ಕರ ಬಾಕಿಗೆ ಬೀಗ ಹಾಕಲು ಕಾಯ್ದೆಯಲ್ಲಿ ಬಲವಾದ ಅವಕಾಶವಿದೆ. ಮೊದಲು ಬೀಗ ಹಾಕಿ, ಕರ ವಸೂಲಿಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಮಹಾಪೌರ ಡಿ.ಕೆ. ಚವ್ಹಾಣ 24 ಗಂಟೆ ಒಳಗೆ ಅದಕ್ಕೆ ಬೀಗ ಹಾಕುವಂತೆ ಸೂಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.