ಅಂಧತ್ವ ನಿವಾರಣೆಗೆ ಸಕ್ಷಮ ಅಭಿಯಾನ
Team Udayavani, Sep 19, 2018, 5:19 PM IST
ಹುಬ್ಬಳ್ಳಿ: ನೇತ್ರದಾನದ ಬಗ್ಗೆ ಹೆಚ್ಚಿನ ಜನರಲ್ಲಿ ಅರಿವಿರದಿದ್ದರಿಂದಾಗಿ ನೇತ್ರದಾನಕ್ಕಾಗಿ ಅಂಧರು ಕಾಯುವಂತಾಗಿದೆ. ಇದನ್ನು ಮನಗಂಡ ಅಂಧ ವೈದ್ಯರೊಬ್ಬರು ನೇತ್ರದಾನ ಬಗ್ಗೆ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ. ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ (ಕಿಮ್ಸ್) ಸಮುದಾಯ ಆರೋಗ್ಯ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸುನೀಲ್ ಗೋಖಲೆ ‘ಸಕ್ಷಮ’ (ಸಮದೃಷ್ಟಿ, ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲ) ಸಂಸ್ಥೆಯ ಸಹಯೋಗದೊಂದಿಗೆ ನೇತ್ರದಾನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಸಕ್ಷಮ ಸಂಸ್ಥೆಯ ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷರಾಗಿರುವ ಡಾ| ಸುನೀಲ್ ಗೋಖಲೆ ಶಾಲಾ-ಕಾಲೇಜುಗಳಿಗೆ ತೆರಳಿ ಉಪನ್ಯಾಸ ಮೂಲಕ ನೇತ್ರದಾನ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ. ಉಪನ್ಯಾಸಕರಾಗಿರುವ ಡಾ| ಗೋಖಲೆ ಅವರಿಗೆ ಯುವಜನರಿಗೆ ಮನವರಿಕೆ ಮಾಡಿಕೊಡುವ ಜಾಣ್ಮೆಯಿದೆ. ಇದರಿಂದಾಗಿ ಅವರ ಉಪನ್ಯಾಸಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳ ಮನ ಮುಟ್ಟುತ್ತವೆ. ಅನೇಕರು ಇವರ ಮಾತಿನ ಮೋಡಿಯಿಂದ ನೇತ್ರದಾನ ಮಾಡುವುದಾಗಿ ಶಪಥ ಪತ್ರ ಬರೆದುಕೊಟ್ಟಿದ್ದಾರೆ.
ಸಕ್ಷಮ ಸಂಸ್ಥೆ 2020 ರೊಳಗೆ ಕಾರ್ನಿಯಾ ಅಂಧತ್ವ ಮುಕ್ತ ಭಾರತ ನಿರ್ಮಿಸಲು ‘ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ’ ಹಮ್ಮಿಕೊಂಡಿದ್ದು, ಇದನ್ನು ಸಾಕಾರಗೊಳಿಸುವ ದಿಸೆಯಲ್ಲಿ ಸಂಸ್ಥೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉಪನ್ಯಾಸಗಳು, ಜಾಗೃತಿ ಜಾಥಾ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂಧರು ಜೀವನದ ಪ್ರತಿಯೊಂದು ಕ್ಷಣವೂ ಅನುಭವಿಸುವ ಗಾಢಾಂಧಕಾರದ ಬದುಕನ್ನು ಸಾಮಾನ್ಯರಿಗೆ ತಿಳಿಸಿಕೊಡುವ ಉದ್ದೇಶದಿಂದ ಪ್ರತಿ ವರ್ಷ ‘ಬ್ಲೈಂಡ್ ಫೋಲ್ಡೆಡ್ ವಾಕ್ ರ್ಯಾಲಿ’ ಆಯೋಜಿಸಲಾಗುತ್ತದೆ. ಇದರಲ್ಲಿ ಸಾಮಾನ್ಯ ದೃಷ್ಟಿ ಹೊಂದಿದವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಾರೆ.
ಸಂಸ್ಥೆಯ ವತಿಯಿಂದ ಕಾರ್ನಿಯಾ ಅಂಧತ್ವಕ್ಕೀಡಾದವರ ಪಟ್ಟಿಯನ್ನು ಮಾಡಲಾಗುತ್ತಿದೆ. ದಾನದ ಮೂಲಕ ನೇತ್ರಗಳು ಸಿಕ್ಕಾಗ ಕಾರ್ನಿಯಾ ಅಂಧತ್ವಕ್ಕೀಡಾದವರನ್ನು ಕರೆಸಿ ಜೋಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಗತ್ತಲ್ಲಿ 4.5 ಕೋಟಿ ಜನರು ಅಂಧರಿದ್ದು, ಅವರಲ್ಲಿ ನಮ್ಮ ದೇಶದಲ್ಲಿ 30 ಲಕ್ಷ ಅಂಧತ್ವದಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ ಇದಕ್ಕೆ 25,000 ಜನರು ಸೇರ್ಪಡೆಗೊಳ್ಳುತ್ತಿದ್ದಾರೆ. ಪ್ರತಿ ವರ್ಷ ದೇಶದಲ್ಲಿ ಸುಮಾರು 1 ಕೋಟಿ ಜನರು ಸಾಯುತ್ತಿದ್ದಾರೆ. ಅವರ ಎರಡೂ ಕಣ್ಣುಗಳ 2 ಕಾರ್ನಿಯಾ ಪಡೆಯಬಹುದು. ಆದರೆ ಪ್ರಸ್ತುತ ವರ್ಷಕ್ಕೆ ಕೇವಲ 40ರಿಂದ 50,000 ಕಣ್ಣುಗಳು ಮಾತ್ರ ಸಿಗುತ್ತಿವೆ. ಜಾಗೃತಿಯ ಕೊರತೆಯಿಂದಾಗಿ ಕಣ್ಣುಗಳು ದೇಹದೊಂದಿಗೆ ಮಣ್ಣಿನಲ್ಲಿ ಸೇರುತ್ತಿವೆ ಇಲ್ಲವೇ ಸುಟ್ಟು ಬೂದಿಯಾಗುತ್ತಿವೆ.
ಬೇಡಿಕೆ ಹಾಗೂ ಪೂರೈಕೆ ಮಧ್ಯೆ ಅಂತರ ಹೆಚ್ಚಾಗುತ್ತಿದೆ. ಬೇಡಿಕೆ ಪ್ರಮಾಣಕ್ಕನುಗುಣವಾಗಿ ನೇತ್ರಗಳನ್ನು ಪೂರೈಸಲು ಪ್ರಸ್ತುತ ನಡೆಯುತ್ತಿರುವ ನೇತ್ರದಾನ 10 ಪಟ್ಟು ಹೆಚ್ಚಾಗಬೇಕು. ಪ್ರತಿ ವರ್ಷ 5-6 ಲಕ್ಷ ಜನರು ನೇತ್ರದಾನಕ್ಕೆ ಮುಂದಾಗುವುದು ಅವಶ್ಯಕವಾಗಿದೆ. ವೈದ್ಯರು, ಮೃತ ವ್ಯಕ್ತಿಗಳ ಸಂಬಂಧಿಕರು ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಿಂದ ಯೋಜನೆ ಯಶಸ್ವಿಗೊಳ್ಳಲು ಸಾಧ್ಯ.
ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಅಕಸ್ಮಾತ್ ಆಗಿ ಕಣ್ಣಿನಲ್ಲಿ ರಾಸಾಯನಿಕ ದ್ರವ ಹೋಗಿ ಕಣ್ಣು ಕಳೆದುಕೊಂಡಿರುವ ಡಾ| ಸುನೀಲ್ ಗೋಖಲೆ ಅವರು ತಮ್ಮ ವೃತ್ತಿಯೊಂದಿಗೆ ಕಣ್ಣಿಲ್ಲದವರ ಬಾಳು ಬೆಳಗುವ ದಿಸೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಪ್ರಶಂಸನೀಯವಾಗಿದ್ದು, ನಮ್ಮೊಂದಿಗೆ ನಮ್ಮ ಕಣ್ಣುಗಳು ನಾಶವಾಗಲು ಅವಕಾಶ ನೀಡದೇ ನೇತ್ರದಾನ ಮಾಡುವ ಜನರ ಸಂಖ್ಯೆ ಹೆಚ್ಚಾದರೆ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ. ನಮ್ಮ ದೇಶ ಕಾರ್ನಿಯಾ ಅಂಧತ್ವ ಮುಕ್ತವಾಗಲು ಸಾಧ್ಯವಾಗುವುದು.
ನೇತ್ರದಾನ ಮಾಡೋದು ಹೇಗೆ?
ನೇತ್ರದಾನ ಸಂಪ್ರದಾಯವಾಗಬೇಕು. ನೇತ್ರದಾನ ಮಹಾದಾನವಾಗಿದ್ದು, ಮೃತ ವ್ಯಕ್ತಿಯ ಕಣ್ಣುಗಳನ್ನು 6 ಗಂಟೆಗಳಲ್ಲಿ ತೆಗೆದುಕೊಳ್ಳುವುದು ಮುಖ್ಯ. ವ್ಯಕ್ತಿ ಮೃತಪಟ್ಟ ನಂತರ ವ್ಯಕ್ತಿಯ ತಲೆ ಕೆಳಗೆ ದಿಂಬನ್ನಿಟ್ಟು, ರೆಪ್ಪೆ ಮುಚ್ಚಿ, ಕಣ್ಣಿನ ಮೇಲೆ ತಂಪು ಬಟ್ಟೆ ಇಡಬೇಕು. ಫ್ಯಾನ್, ಎಸಿ ಬಂದ್ ಮಾಡಬೇಕು. ಕೂಡಲೇ ಹತ್ತಿರದ ನೇತ್ರ ಬ್ಯಾಂಕ್‌ಗೆ ಕರೆ ಮಾಡಿದರೆ ಅವರು ಬಂದು 20 ನಿಮಿಷಗಳಲ್ಲಿ ಕಣ್ಣಿನ ಕಾರ್ನಿಯಾ ತೆಗೆದುಕೊಂಡು ಹೋಗುತ್ತಾರೆ. ಮತ್ತೆ ರೆಪ್ಪೆ ಮುಚ್ಚುವುದರಿಂದ ನೇತ್ರ ಪಡೆದಿರುವುದು ಗೊತ್ತಾಗುವುದಿಲ್ಲ. ಮೂರು ತಿಂಗಳ ಶಿಶುವಿನಿಂದ ವಯೋವೃದ್ಧರವರೆಗೆ ಯಾರಾದರೂ ನೇತ್ರದಾನ ಮಾಡಬಹುದು. ಒಬ್ಬ ವ್ಯಕ್ತಿಯ ಕಣ್ಣುಗಳು ಇಬ್ಬರು ಕಾರ್ನಿಯಾ ಅಂಧರ ಬಾಳಿಗೆ ಬೆಳಕು ನೀಡಬಲ್ಲವು.
ಶ್ರೀಲಂಕಾದಲ್ಲಿ ಮೃತಪಟ್ಟ ವ್ಯಕ್ತಿಗಳಲ್ಲಿ ಶೇ.80 ಜನರ ಕಣ್ಣುಗಳನ್ನು ದಾನ ಮಾಡಲಾಗುತ್ತಿದೆ. ಬೌದ್ಧ ಸಂಪ್ರದಾಯ ನೇತ್ರದಾನಕ್ಕೆ ಆದ್ಯತೆ ನೀಡುವುದೇ ಇದಕ್ಕೆ ಕಾರಣ. ಪುಟ್ಟ ದೇಶ ಶ್ರೀಲಂಕಾದಿಂದ ಕಣ್ಣುಗಳನ್ನು ರಪು¤ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ನೇತ್ರದಾನ ಕುರಿತು ಅರಿವು ಮೂಡಿಸಬೇಕು. ಶಾಲಾ-ಕಾಲೇಜು ಮಕ್ಕಳಿಗೆ ತಿಳಿವಳಿಕೆ ನೀಡುವುದು ಮುಖ್ಯ. ಈ ದಿಸೆಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಕ್ಷಮ ಸಂಸ್ಥೆ ವತಿಯಿಂದ ಮಾಡಲಾಗುತ್ತಿದೆ. ನೇತ್ರದಾನ ಕುಟುಂಬದ ಸಂಪ್ರದಾಯವಾಗಬೇಕು.
. ಡಾ| ಸುನೀಲ್ ಗೋಖಲೆ, ಸಕ್ಷಮ ಸಂಸ್ಥೆಯ ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷ
ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.