ಬದಲಾಯ್ತು ನೋಡಿದಿರಾ..ಗೋಕುಲ
Team Udayavani, Oct 16, 2017, 2:15 PM IST
ಹುಬ್ಬಳ್ಳಿ: ಅಂತಾರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣ, ಇನ್ಫೋಸಿಸ್ ಐಟಿ ಕಂಪನಿ, ದೇಶದ ಅತಿದೊಡ್ಡ ಕೌಶಲಾಭಿವೃದ್ಧಿ ಹಾಗೂ ನವೋದ್ಯಮ ಪ್ರೋತ್ಸಾಹ ಕೇಂದ್ರ, ದೇಶಪಾಂಡೆ ಪ್ರತಿಷ್ಠಾನ ಹೀಗೆ ದೇಶ-ವಿದೇಶ ಖ್ಯಾತಿಯ ಕಂಪನಿ, ಸಂಸ್ಥೆಗಳಿಗೆ ಆಶ್ರಯ ನೀಡಿದ ಖ್ಯಾತಿ ಗೋಕುಲ ಗ್ರಾಮದ್ದು.
ಆದರೆ ಅದರ ಚಿತ್ರಣವೇ ಈಗ ಬದಲಾಗಿದೆ. ಅಡಿ ಜಾಗವೂ ಚಿನ್ನ, ವಜ್ರದ ರೂಪ ತಾಳಿದೆ. ಎರಡು ದಶಕಗಳ ಹಿಂದಿನ ಗೋಕುಲ ಗ್ರಾಮಕ್ಕೂ ಇಂದಿನ ಗೋಕುಲಕ್ಕೂ ಅಜಗಜಾಂತರ ಗೋಚರಿಸುತ್ತಿದೆ. ಈ ಹಿಂದೆ ಗೋಕುಲ ಗ್ರಾಮ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುವ ಮೂಲಕ ನಗರೀಕರಣದ ಸ್ಪರ್ಶ ಪಡೆದುಕೊಂಡಿತ್ತಾದರೂ, ಅಲ್ಲಲ್ಲಿ ಒಂದೆರಡು ಸಣ್ಣ ಹಾಗೂ ಮಧ್ಯಮ ಉದ್ಯಮಗಳು ನೆಲೆ ಕಂಡುಕೊಂಡಿದ್ದವು.
ರಿಯಲ್ ಎಸ್ಟೇಟ್ ತನ್ನದೇ ಮಹತ್ವ ಬೀರಿದ್ದರ ಪರಿಣಾಮ ಕೃಷಿ ಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೊಂಡಿತು. ಎಂಜನಿಯರಿಂಗ್ ಕಾಲೇಜು ಸೇರಿದಂತೆ ಇನ್ನಿತರ ಶಿಕ್ಷಣ ಸಂಸ್ಥೆಗಳು ನೆಲೆ ಕಂಡುಕೊಂಡವು. ಕಳೆದೊಂದು ದಶಕದಿಂದ ತಲೆ ಎತ್ತಿದ ಅಭಿವೃದ್ಧಿ ಕಾರ್ಯಗಳು ಗೋಕುಲದ ಪ್ರತಿಷ್ಠೆ ಹೆಚ್ಚುವಂತೆ ಮಾಡಿವೆ.
ಎಪ್ಪತ್ತರ ದಶಕದಕಲ್ಲಿ ವಿಮಾನ ನಿಲ್ದಾಣಕ್ಕಾಗಿ ಗೋಕುಲ ಹಾಗೂ ಉಣಕಲ್ಲ ಗ್ರಾಮಗಳ ಒಂದಿಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಗೋಕುಲ ಗ್ರಾಮದ 2859 ಎಕರೆ ಭೂಮಿ ವಿವಿಧ ಉದ್ಯಮದಾರರು ಹಾಗೂ ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಆಕರ್ಷಿಸಿತ್ತು. ವಿಮಾನ ನಿಲ್ದಾಣ ಆರಂಭದಿಂದ ಗೋಕುಲ ಗ್ರಾಮದ ಖದರ್ ಬದಲಾಯಿತು. ಈಗಂತೂ ಗೋಕುಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ದಾಖಲಿಸುವಂತಾಗಿದೆ.
ವಿಮಾನ ನಿಲ್ದಾಣ, ವಿಶ್ವವಿಖ್ಯಾತ ಐಟಿ ಕಂಪನಿಗಳು, ಸಾಮಾಜಿಕ ಉದ್ಯಮ ಚಿಂತನೆ ಸಂಸ್ಥೆಗಳು ನೆಲೆಗೊಳ್ಳುವ ಮೂಲಕ ಗೋಕುಲ ಗ್ರಾಮ ಪ್ರತಿಷ್ಠಿತ ಪ್ರದೇಶದ ಹಣೆಪಟ್ಟಿ ಹೊತ್ತಿದ್ದು, ಭೂಮಿ ಬೆಲೆ ಗಗನಮುಖೀಯಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಗೋಕುಲ ಮತ್ತಷ್ಟು ಬದಲಾವಣೆ, ಅಭಿವೃದ್ಧಿ ಯೋಜನೆಗಳಿಗೆ ನೆಲೆಯಾಗಲು ಸಜ್ಜುಗೊಂಡಿದೆ.
ಹೇಗಿತ್ತು ಹೇಗಾಯ್ತು ಗೊತ್ತಾ?
ಗೋಕುಲ ಗ್ರಾಮ 2859 ಎಕರೆ ಭೂಮಿ ಹೊಂದಿತ್ತು. ಕೃಷಿಯೋಗ್ಯ ಭೂಮಿಯಲ್ಲಿ ಶೇಂಗಾ, ಜೋಳ, ಸೊಯಾಬಿನ್, ಮೆಕ್ಕೆಜೋಳ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿತ್ತು. ಹೈನುಗಾರಿಕೆಯೂ ಉತ್ತಮವಾಗಿತ್ತು. 1995ರ ಸುಮಾರಿಗೆ ಗ್ರಾಮದ ಸರಹದ್ದಿನಲ್ಲಿ ಕೆಲವು ಕೈಗಾರಿಕೆಗಳು ತಲೆ ಎತ್ತಿದವು.
ಕಿರ್ಲೋಸ್ಕರ್ ಕಂಪನಿ ಈ ಭಾಗದ ಸಾಕಷ್ಟು ಯುವಕರಿಗೆ ಉದ್ಯೋಗ ನೀಡಿತು. ಕೈಗಾರಿಕೆಗಳ ಆಗಮನ ಪರಿಣಾಮ ಶೇ.85ರಷ್ಟು ಕೃಷಿ ಕಾರ್ಯ ಕಡಿಮೆಯಾಗಿ ಕ್ರಮೇಣ ಹೈನುಗಾರಿಕೆ ಬಹುತೇಕ ಮಾಯವಾಗಿತ್ತು. ಇದೀಗ ಬಹುತೇಕ ನಗರ ಜೀವನಕ್ಕೆ ಹೊಂದಿಕೊಂಡಂತಾಗಿದೆ. ಅಲ್ಲಿಂದ ಬದಲಾಗುತ್ತ ಬಂದ ಮಗ್ಗುಲು ಈಗ ಹೆಮ್ಮರವಾಗಿ ಬೆಳೆದು ನಿಂತಿದೆ.
ಶುರುವಾಯ್ತು ಸ್ವಾಧೀನ ಪ್ರಕ್ರಿಯೆ
ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಉದ್ದೇಶದಿಂದ 1971ರಲ್ಲಿ ಗೋಕುಲ ಗ್ರಾಮದ 300 ಹಾಗೂ ಉಣಕಲ್ಲ ಗ್ರಾಮದ 100 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 1982ರಲ್ಲಿ ಸುಮಾರು 71.80 ಎಕರೆ ಭೂಮಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನವಾಗಿತ್ತು.
1995ರಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ 48 ಎಕರೆ ಭೂಮಿ ಕೈಬಿಟ್ಟು ಹೋಗಿತ್ತು. ನಂತರದಲ್ಲಿ ವಿವಿಧ ಕಾರ್ಯಗಳಿಗಾಗಿ ಭೂ ಸ್ವಾಧೀನ ಮುಂದುವರಿಯಿತು. ಈಗ ಹಸಿರು ಕಳೆದುಕೊಂಡ ಭೂಮಿ ಬೆತ್ತಲಾಗಿ ನಿಂತಿದೆ. ಹಣವಂತರ ರುದ್ರನರ್ತನಕ್ಕೆ ವೇದಿಕೆಯಾಗಿ ನಲುಗುತ್ತಿದೆ.
ಎಕರೆಗೆ ನಾಲ್ಕು ಕೋಟಿಗೂ ಅಧಿಕ!
ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿ ಗೋಕುಲ ಗ್ರಾಮ ವ್ಯಾಪ್ತಿಯಲ್ಲಿ ಆರಂಭವಾಗುತ್ತಿದ್ದಂತೆ ಇಲ್ಲಿನ ಭೂಮಿ ದರ ಗಗನಕ್ಕೇರಿತು. ಇನ್ಫೋಸಿಸ್ ಮುಂಭಾಗದಲ್ಲಿರುವ ಒಂದು ಎಕರೆ ಜಮೀನು ನಾಲ್ಕು ಕೋಟಿ ರೂ. ಕಡಿಮೆಯಿಲ್ಲ. ಇನ್ಫೋಸಿಸ್ ಇರುವ ಕಡೆ ವಿಪ್ರೋ ಕಂಪನಿ ಬರಲಿದೆ ಎನ್ನುವುದು ಇಲ್ಲಿನ ಭೂ ಒಡೆಯರ ಲೆಕ್ಕಾಚಾರ.
ಹೀಗಾಗಿ ತಮ್ಮ ಭೂಮಿಗೆ ಇನ್ನಷ್ಟು ಬೇಡಿಕೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ರಾಜಕೀಯ ನಾಯಕರೊಬ್ಬರು ವಿಪ್ರೋ ಕಂಪನಿಯನ್ನು ಗಮನದಲ್ಲಿಟ್ಟುಕೊಂಡು ಒಂದಿಷ್ಟು ಭೂಮಿ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅನ್ನದಾತರ ಜಮೀನು ಈಗ ಉದ್ಯಮಿಗಳ ಕಪಿಮುಷ್ಟಿಯಲ್ಲಿದೆ. ಭೂ ಮಾಲೀಕ ಪುಡಿಗಾಸಿಗೆ ಮಾರಾಟ ಮಾಡಿ ಸಪ್ಪೆ ಮೋರೆ ಹಾಕಿ ಕುಳಿತಿದ್ದಾನೆ.
* ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.