ಹುಬ್ಬಳ್ಳಿ: ಆಟೋರಿಕ್ಷಾಗಳು, ಖಾಸಗಿ ವಾಹನಗಳು ಅಷ್ಟೇ ಯಾಕೆ ಸಾರಿಗೆ ಸಂಸ್ಥೆ ಕೆಲ ಬಸ್‌ಗಳು ಹೆಚ್ಚಿನ ಹೊಗೆ ಉಗುಳುತ್ತಿವೆ. ಸ್ವತಃ ಪಾಲಿಕೆ ಪೌರಕಾರ್ಮಿಕರೇ ಒಣತ್ಯಾಜ್ಯ ಗುಡ್ಡೆ ಹಾಕಿ ಬೆಂಕಿ ಹಚ್ಚುತ್ತಾರೆ. ಹದಗೆಟ್ಟ ರಸ್ತೆಗಳು ಧೂಳೆಬ್ಬಿಸುತ್ತಿವೆ. ಇದೆಲ್ಲದರ ಪರಿಣಾಮ ಅವಳಿ ನಗರದಲ್ಲಿ ವಾಯುಮಾಲಿನ್ಯ ಮಿತಿಮೀರುತ್ತಿದೆ. ಕ್ರಮ ಕೈಗೊಳ್ಳಬೇಕಾದವರು ಮೌನಕ್ಕೆ ಜಾರಿದ್ದಾರೆ.
ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪ್ರಕಾರ ವಾಯುಮಾಲಿನ್ಯ ಮಿತಿಮೀರಿದ ನಾಲ್ಕು ಮಹಾನಗರಗಳಲ್ಲಿ ಹುಬ್ಬಳ್ಳಿ- ಧಾರವಾಡವೂ ಸೇರಿದೆ. ಒಂದು ಕಾಲಕ್ಕೆ ನಿವೃತ್ತರ ನೆಚ್ಚಿನ ತಾಣವೆಂದೇ ಧಾರವಾಡ ಬಿಂಬಿತವಾಗಿತ್ತು. ಇಂದು ನಗರದ ಸ್ಥಿತಿ ಕಂಡು ಇಲ್ಲಿ ಯಾಕೆ ನಾವು ಇದ್ದೇವೋ ಎಂದು ಪಶ್ಚಾತಾಪ ಪಡುವಂತಾಗಿದೆ. ಪರಿಸರ ಸಂರಕ್ಷಣೆ, ಪರಿಸರ ಮಾಲಿನ್ಯ ತಡೆ ಬಗ್ಗೆ ಭಾಷಣ, ಘೋಷಣೆಗಳು ಮೊಳಗುತ್ತಿವೆಯಾದರೂ, ಸಂರಕ್ಷಣೆ ಕ್ರಮದಲ್ಲಿ ಯಾವುದೇ ಯತ್ನವೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಹುಬ್ಬಳ್ಳಿ-ಧಾರವಾಡ ಸ್ಥಿತಿ ಸಾಕ್ಷಿ ಹೇಳುತ್ತಿದೆ.
ಹೊಗೆ ಬಂಡಿಗಳ ಇಲ್ಲಿ ಕೇಳ್ಳೋರೇ ಇಲ್ಲ!:
ಅವಳಿ ನಗರದಲ್ಲಿ ಆಟೋರಿಕ್ಷಾಗಳು, ಖಾಸಗಿ ಹಾಗೂ ಸಾರಿಗೆ ಸಂಸ್ಥೆ ಬಸ್‌ಗಳು, ಲಾರಿ, ಟಂಟಂ, ಮಿನಿ ಸರಕು ಸಾಗಣೆ ಹಾಗೂ ಇನ್ನಿತರ ವಾಹನಗಳು ಮಿತಿ ಮೀರಿ ಹೊಗೆ ಉಗುಳುತ್ತಿವೆ. ಸುಮಾರು 24 ಸಾವಿರಕ್ಕೂ ಅಧಿಕ ಆಟೋರಿಕ್ಷಾಗಳು ನೋಂದಣಿಯಾಗಿವೆ. ನೋಂದಣಿಯಾಗದ ಸುಮಾರು 30-35ರಷ್ಟು ಆಟೋಗಳು ಓಡಾಡುತ್ತಿವೆ ಎನ್ನಲಾಗುತ್ತಿದೆ. ಶೇ.15-25 ಆಟೋರಿಕ್ಷಾಗಳು ಮಿತಿಮೀರಿದ ಹೊಗೆ ಉಗುಳುತ್ತಿವೆ. ಇದರಲ್ಲಿ ಅನೇಕವು 15-20 ವರ್ಷ ಹಳೆಯದ್ದಾಗಿವೆ. ಪೆಟ್ರೋಲ್ ಬದಲು ಸೀಮೆಎಣ್ಣೆ ಇಲ್ಲವೆ ಕಲಬೆರೆಕೆ ಪೆಟ್ರೋಲ್ ಬಳಕೆಯೂ ಇದಕ್ಕೆ ಕಾರಣ. ವಾಯವ್ಯ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಬಸ್‌ಗಳು, ಬೇಂದ್ರೆ ಸಾರಿಗೆ ಬಸ್‌ಗಳು, ಲಾರಿ-ಟಿಪ್ಪರ್‌ಗಳು, ಪ್ರಯಾಣಿಕರು ಹಾಗೂ ಸರಕು ಸಾಗಣೆ ಟಂಟಂ, ಮಿನಿ ವಾಹನಗಳು, ಕೆಲವೊಂದು ಬೈಕ್‌ಗಳು, ಕಾರು ಇನ್ನಿತರ ವಾಹನಗಳು ಮಿತಿಮೀರಿದ ಹೊಗೆ ಹೊರ ಹಾಕುತ್ತಿವೆ. ಹೊಗೆ ಉಗುಳುವ ವಾಹನಗಳ ವಿರುದ್ಧ ಯಾರು ಕ್ರಮ ತೆಗೆದುಕೊಳ್ಳಬೇಕು ಎಂಬ ಪ್ರಶ್ನೆಯೂ ಕಾಡುತ್ತಿದೆ. ಪೊಲೀಸರನ್ನು ಕೇಳಿದರೆ ಪ್ರಾದೇಶಿಕ ಸಾರಿಗೆ ಇಲಾಖೆಯವರ ಕೆಲಸ ಎನ್ನುತ್ತಾರೆ. ಆರ್‌ಟಿಒದವರನ್ನು ಕೇಳಿದರೆ ನಮ್ಮಲ್ಲಿಯೇ ಪರಿಸರ ನಿಯಂತ್ರಣ ವಿಭಾಗವಿದೆ ಅವರು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ. ಈ ವಿಭಾಗದವರು ಇದ್ದಾರೋ ಇಲ್ಲವೋ ಎಂಬ ಸಂದೇಹ ಒಂದೆಡೆಯಾದರೆ, ಈ ವಿಭಾಗಕ್ಕೆ ಸವಾಲು ಹಾಕುವ ಮಟ್ಟಿಗೆ ವಾಹನಗಳು ಹೊಗೆ ಉಗುಳುತ್ತಿವೆ ಎಂಬುದು ಮಾತ್ರ ಸ್ಪಷ್ಟ.
ಜಾಗೃತಿ ಮೂಡಿಸೋರೇ ಹಾಕ್ತಾರೆ ಬೆಂಕಿ:
ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಕುರಿತಾಗಿ ಅನೇಕ ಒತ್ತಾಯಗಳು ಕೇಳಿ ಬಂದಿವೆ. ಸುಪ್ರೀಂ ಕೋರ್ಟ್ ವೈಜ್ಞಾನಿಕ ವಿಲೇವಾರಿಗೆ ಆದೇಶಿಸಿದೆ. ಆದರೂ ಅವಳಿ ನಗರದಲ್ಲಿನ ತ್ಯಾಜ್ಯ ವಿಲೇವಾರಿ ಚಿತ್ರಣದಲ್ಲಿ ಮಹತ್ವದ ಬದಲಾವಣೆಯಂತೂ ಆಗಿಲ್ಲ. ತ್ಯಾಜ್ಯಕ್ಕೆ ಬೆಂಕಿ ಹಚ್ಚಬಾರದು ಎಂಬ ಆದೇಶದ ನಡುವೆಯೂ ಸ್ವತಃ ಪಾಲಿಕೆ ಪೌರಕಾರ್ಮಿಕರೇ ವಿವಿಧ ವಾರ್ಡ್‌ಗಳಲ್ಲಿ ಒಣತ್ಯಾಜ್ಯ ಗುಡ್ಡೆ ಹಾಕಿ ಬೆಂಕಿ ಹಚ್ಚುತ್ತಿದ್ದಾರೆ. ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದನ್ನು ಕಟ್ಟುನಿಟ್ಟಾಗಿ ತಡೆದಿದ್ದೇವೆ ಎನ್ನುವ, ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ಪರಿಸರ ದೃಷ್ಟಿಯಿಂದ ಮಾರಕ ಹಾಗೂ ಅಪರಾಧ ಎಂದು ಪ್ರಚಾರ ಮಾಡುವ ಪಾಲಿಕೆಯವರೇ ಸ್ವತಃ ಬೆಂಕಿ ಹಚ್ಚುತ್ತಿದ್ದು, ಇದನ್ನು ತಡೆಯುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಅವಳಿ ನಗರದಲ್ಲಿ ನಿತ್ಯ ಸುಮಾರು 400 ಟನ್ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಕ್ರಮ ಇಂದಿಗೂ ಸಾಧ್ಯವಾಗಿಲ್ಲ. ತ್ಯಾಜ್ಯ ಸಂಗ್ರಹ ಪ್ರದೇಶದಲ್ಲಿ ಬಯೋಗ್ಯಾಸ್‌ನಿಂದ ನೈಸರ್ಗಿಕವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ, ಕೆಲವೊಮ್ಮೆ ಆಕಸ್ಮಿಕ ಇಲ್ಲವೆ ಉದ್ದೇಶಪೂರ್ವಕವಾಗಿಯೇ ಬೆಂಕಿ ಹೊತ್ತಿಸುವ ಪ್ರಕರಣಗಳು ಇಲ್ಲದಿಲ್ಲ.
15 ವರ್ಷ ಮೇಲ್ಪಟ್ಟ ಆಟೋರಿಕ್ಷಾಗಳನ್ನು ಸೀಜ್ ಮಾಡಲು ಹಾಗೂ ಹೊಗೆ ಉಗುಳುವಿಕೆ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ವಾಹನಗಳ ಪರಿಸರ ಮಾಲಿನ್ಯ ಪ್ರಮಾಣ ಕುರಿತು ತಪಾಸಣೆಗೆ ಕ್ರಮ ಕೈಗೊಳ್ಳಲಾಗುವುದು. ಹೊಸ ಆಟೋರಿಕ್ಷಾಗಳ ಪರವಾನಗಿ ನೀಡಲಾಗುತ್ತಿಲ್ಲ. • ಅಪ್ಪಯ್ಯ ನಾಲತ್ವಾಡಮಠ, ಆರ್‌ಟಿಒ, ಧಾರವಾಡ ಪೂರ್ವ
ಧೂಳು, ವಾಯುಮಾಲಿನ್ಯದಿಂದಾಗಿ ಅವಳಿ ನಗರದಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆ, ಸೋಂಕು ಪ್ರಮಾಣ ಹೆಚ್ಚತೊಡಗಿದೆ. ಅಸ್ತಮಾ, ಅಲರ್ಜಿ ಇದ್ದವರಿಗೆ ಸಮಸ್ಯೆ ಹೆಚ್ಚಿದ್ದರೆ, ಹೊಸಬರಿಗೂ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳತೊಡಗಿವೆ.
• ಡಾ| ಪ್ರಭು ಬಿರಾದಾರ, ವೈದ್ಯಾಧಿಕಾರಿ, ಮಹಾನಗರ ಪಾಲಿಕೆ
ಅವಳಿ ನಗರದಲ್ಲಿ 15 ವರ್ಷ ಮೇಲ್ಪಟ್ಟ ಆಟೋರಿಕ್ಷಾಗಳನ್ನು ನಿಷೇಧಿಸುವ ಬದಲು ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಹೊಗೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಸಂಘದಿಂದ ಜಾಗೃತಿ ಕಾರ್ಯ ಮಾಡಲಾಗುತ್ತಿದೆ. ವಾಯುಮಾಲಿನ್ಯಕ್ಕೆ ಆಟೋರಿಕ್ಷಾಗಳಿಗಿಂತ ಬಸ್, ಲಾರಿಗಳ ಕೊಡುಗೆ ದೊಡ್ಡದಿದೆ.
• ಶೇಖರಯ್ಯ ಮಠಪತಿ, ಆಟೋರಿಕ್ಷಾ ಮಾಲೀಕರ-ಚಾಲಕರ ಸಂಘದ ಅಧ್ಯಕ್ಷ
ಧೂಳಿನ ಗೋಳಿನ ಕಥೆ..:
ಅವಳಿ ನಗರದ ಬಹುತೇಕ ರಸ್ತೆಗಳು ಹದಗೆಟ್ಟಿವೆ, ಪ್ರಮುಖ ರಸ್ತೆಗಳ ದುರಸ್ತಿ ಕೈಗೊಳ್ಳಲಾಗುತ್ತಿದೆ. ಇದರಿಂದ ಯಾವುದೇ ಭಾಗಕ್ಕೆ ಹೋದರೂ ಧೂಳು ಇದ್ದೇ ಇದೆ. ಬಿಸಿಲಾದರೆ ಧೂಳು, ಮಳೆಯಾದರೆ ರಾಡಿ ಎನ್ನುವ ಸ್ಥಿತಿಯಲ್ಲಿ ರಸ್ತೆಗಳಿವೆ. ಧೂಳು, ಹೊಗೆಯಿಂದಾಗಿ ಶ್ವಾಸಕೋಶ ಸಂಬಂಧಿ ರೋಗಗಳಾದ ಅಸ್ತಮಾ, ದಮ್ಮು, ಇನ್ನಿತರ ಸೋಂಕುಗಳು ಹಾಗೂ ಅಲರ್ಜಿ ಪ್ರಮಾಣ ಹೆಚ್ಚತೊಡಗಿದೆ. ಬಿಆರ್‌ಟಿಎಸ್, ರಸ್ತೆ ಅಗಲೀಕರಣ ಇನ್ನಿತರ ಕಾರಣಗಳಿಗೆ ಮರಗಳ ಮಾರಣಹೋಮ ನಡೆಯುತ್ತಿದೆ. ಇದ್ದ ಮರಗಳ ಸುತ್ತ ಕಾಂಕ್ರಿಟ್ ಹಾಕುವ ಮೂಲಕ ಮರಗಳು ನೀರು ಇಂಗಿಕೊಳ್ಳುವ ಅವಕಾಶ ಕಸಿಯಲಾಗುತ್ತಿದೆ.
•ಅಮರೇಗೌಡ ಗೋನವಾರ