Covid ವಾರಿಯರ್ಸ್ ಗೆ ಅನಿಲ್ ಶ್ರೀರಕ್ಷೆ; Covid ಆಸ್ಪತ್ರೆಗೆ ಬಯೋ ಪ್ಯೂರಿಫೈಯರ್ ಕೊಡುಗೆ
ಬಡವರ ಅನುಕೂಲತೆಗೆ ಮನುಕುಲಕ್ಕಾಗಿ ಭಿಕ್ಷೆ ಅಭಿಯಾನ
Team Udayavani, Sep 15, 2020, 2:00 AM IST
ಈ ಹಿಂದೆ ಜಿಸಿಎಲ್ ಕ್ರಿಕೆಟ್ ಮೂಲಕ ಯುವ ಜನರ ಮನ ಗೆದ್ದಿದ್ದ ಗದುಗಿನ ಬಿಜೆಪಿ ಯುವ ನಾಯಕ ಅನಿಲ್ ಮೆಣಸಿನಕಾಯಿ ಇತ್ತೀಚೆಗೆ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ ‘ಮನುಕುಲಕ್ಕಾಗಿ ಭಿಕ್ಷೆ’ ಅಭಿಯಾನ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇದೀಗ ಪ್ರಧಾನಿ ಹಾಗೂ ನೆಚ್ಚಿನ ನಾಯಕ ನರೇಂದ್ರ ಮೋದಿ ಅವರ ಜನ್ಮದಿನದ (ಸೆ.17) ಪ್ರಯುಕ್ತ ಕೋವಿಡ್ ವಾರ್ಡ್‌ಗಳಲ್ಲಿ ಮಹಾಮಾರಿ ಕೋವಿಡ್ 19 ವಿರುದ್ಧ ಸಮರ ಸಾರಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಸೋಂಕಿತರಿಗೆ ಪರಿಶುದ್ಧ ಗಾಳಿ ಕಲ್ಪಿಸಲು ಅತ್ಯಾಧುನಿಕ ಬಯೋ ಪ್ಯೂರಿಫೈಯರ್ ಯಂತ್ರ ಒದಗಿಸುವ ಮೂಲಕ ಕೋವಿಡ್ ವಾರಿಯರ್ಸ್ ಗಳ ರಕ್ಷಣೆಗೆ ನಿಂತಿದ್ದಾರೆ.
ದೇಶಾದ್ಯಂತ ಕೋವಿಡ್ 19 ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಗಗನಮುಖಿಯಾಗಿದೆ. ಪರಿಣಾಮ ನಿಗದಿತ ಕೋವಿಡ್ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಐಸಿಯು ಹಾಗೂ ಸಾಮಾನ್ಯ ವಾರ್ಡ್‌ಗಳಲ್ಲೂ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಆತಂಕದಲ್ಲೇ ಕರ್ತವ್ಯ ನಿರ್ವಹಿಸುವಂತಾಗಿದೆ.
ಜನರ ಪ್ರಾಣ ರಕ್ಷಣೆಗಾಗಿ ವೈದ್ಯಕೀಯ ಸಿಬ್ಬಂದಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ 19 ಸೋಂಕಿತರಿಗೆ ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ.
ಆಸ್ಪತ್ರೆಗಳ ಐಸಿಯು ಹಾಗೂ ಸದಾ ಬಾಗಿಲು ಮುಚ್ಚಿರುವ ವಾರ್ಡ್‌ಗಳಲ್ಲಿ ಆರೋಗ್ಯವಂತರಿಗೂ ವೈರಾಣುಗಳು ಹರಡುವಿಕೆ ಸಾಧ್ಯತೆ ತುಸು ಹೆಚ್ಚು. ಇದೇ ಕಾರಣಕ್ಕೆ ಹಲವೆಡೆ ವೈದ್ಯರು, ವೈದ್ಯಕೀಯ ಸಿಬ್ಬಂದಿಗೂ ಕೋವಿಡ್ ಹರಡುತ್ತಿದೆ. ಈಗಾಗಲೇ ಜಿಲ್ಲೆಯ ಮುಂಡರಗಿ ತಾಲೂಕು ವೈದ್ಯಾಧಿ ಕಾರಿ ಡಾ| ಬಸವರಾಜ್ ಹಾಗೂ ಮತ್ತೋರ್ವ ವೈದ್ಯಕೀಯ ಸಿಬ್ಬಂದಿ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ ಎನ್ನುತ್ತಾರೆ ತಜ್ಞರು.
ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆ ಕುರಿತು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಗಂಭೀರವಾಗಿ ಚಿಂತನೆ ನಡೆಸಿ ತಮ್ಮ ಬೆಂಬಲಿಗರು ಹಾಗೂ ದಾನಿಗಳ ನೆರವಿನೊಂದಿಗೆ ಸುಮಾರು 15 ಲಕ್ಷ ರೂ. ಮೌಲ್ಯದಲ್ಲಿ ರಾಡಾರ್ಕ್ ಮೆಡಿಕಲ್ ಇನ್ನೋವೇಷನ್ಸ್ ಪ್ರೈ.ಲಿ. ತಯಾರಿಸಿದ ಬಯೋ ಪ್ಯೂರಿಫೈಯರ್ 250 ಎಂಎಫ್ ಯಂತ್ರವನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ದೇಣಿಗೆ ನೀಡಿದ್ದಾರೆ.
ಸದ್ಯ ದಂಡಪ್ಪ ಮಾನ್ವಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸೆ.17ರಂದು ಪ್ರಧಾನಿ ಮೋದಿ ಅವರ ಜನ್ಮದಿನದಂದು ಜಿಲ್ಲೆಯ ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ಶಾಸಕರಾದ ಕಳಕಪ್ಪ ಜಿ. ಬಂಡಿ, ರಾಮಣ್ಣ ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಸಮ್ಮುಖದಲ್ಲಿ ಅನಿಲ್ ಮೆಣಸಿನಕಾಯಿ ಕೊಡಮಾಡುವ ಅತ್ಯಾಧುನಿಕ ಜೈವಿಕ ಗಾಳಿ ಶುದ್ಧೀಕರಣ ಯಂತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಆಯುಷ್ ಇಲಾಖೆಯ ಕೋವಿಡ್ ಆಸ್ಪತ್ರೆಗೆ ವಿಧ್ಯುಕ್ತವಾಗಿ ಹಸ್ತಾಂತರಿಸುವರು.
ಸೆನ್ಸಾರ್ ಸ್ಯಾನಿಟೈಸರ್ ಯಂತ್ರ ದೇಣಿಗೆ
ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಅನಿಲ್ ಮೆಣಸಿನಕಾಯಿ ಅವರ ಬೆಂಬಲಿಗ ಹಾಗೂ ಉದ್ಯಮಿ ಸಾದಿಕ್ ಮನಿಯಾರ್ ಅವರು ಸುಮಾರು 10 ಸಾವಿರ ರೂ. ಮೌಲ್ಯದ ಸೆನ್ಸಾರ್ ಸ್ಯಾನಿಟೈಸರ್ ಯಂತ್ರ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.
ಪ್ರಧಾನಿ ಮೋದಿ ಸ್ಟಾರ್ಟ್‌ಅಪ್ ಪ್ರೇರಣೆ
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ‘ಮೇಕಿನ್ ಇಂಡಿಯಾ’ ಯೋಜನೆಯಡಿ ನುರಿತ ವೈದ್ಯರು ಹಾಗೂ ಇಂಜಿನಿಯರ್‌ಗಳ ಸ್ನೇಹಿತರ ಬಳಗ ಬೆಂಗಳೂರಿನಲ್ಲಿ ರಾಡಾರ್ಕ್ ಮೆಡಿಕಲ್ ಇನ್ನೋವೇಷನ್ಸ್ ಪ್ರೈ.ಲಿ. ಹುಟ್ಟು ಹಾಕಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಧಾರಿತ ಉಪಕರಣಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.
ಕಳೆದ ಮಾರ್ಚ್‌ನಿಂದ ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಭಯದ ನೆರಳಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ನಿವಾರಣೆಗೆ ಬೆಂಗಳೂರಿನ ರಾಡಾರ್ಕ್ ಮೆಡಿಕಲ್ ಇನ್ನೋವೇಷನ್ಸ್ ಸಂಸ್ಥೆ ಬಯೋ ಪ್ಯೂರಿಫೈಯರ್ ಸಿದ್ಧಪಡಿಸಿದೆ. ಅದಕ್ಕಾಗಿ ಜರ್ಮನಿಯಿಂದ ಶೇ.20 ಬಿಡಿ ಭಾಗಗಳನ್ನು ಆಮದು ಮಾಡಿಕೊಂಡಿದ್ದು, ಇನ್ನುಳಿದಂತೆ ಸ್ಥಳೀಯವಾಗಿ ಲಭ್ಯವಿರುವ ಶೇ.80 ಬಿಡಿ ಭಾಗಗಳನ್ನು ಬಳಸಿಕೊಳ್ಳಲಾಗಿದೆ. ದೇಸಿಯವಾಗಿ ಸಿದ್ಧಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ರಾಜ್ಯದ 2ನೇ ಯಂತ್ರ ಗದಗಿಗೆ: ಬಯೋ ಪ್ಯೂರಿಫೈಯರ್ ವಿಶೇಷತೆ
ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ತಯಾರಿಸಿರುವ ಬಯೋ ಪ್ಯೂರಿಫೈಯರ್ ಯಂತ್ರಕ್ಕೆ ಯುಎಸ್ ಫುಡ್ ಆ್ಯಂಡ್ ಡ್ರಗ್ ಸಂಸ್ಥೆ ಹಾಗೂ ಯೂರೋಪಿಯನ್ ಸ್ಟ್ಯಾಂಡರ್ಡ್ ಮಾನ್ಯತೆ ಲಭಿಸಿದೆ. ಈಗಾಗಲೇ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸರ್ಕಾರಿ ಸ್ವಾಯತ್ತ ಸಂಸ್ಥೆಯಲ್ಲಿ ಈ ಯಂತ್ರ ಅಳವಡಿಸಲಾಗಿದೆ. ಮತ್ತೊಂದು ಯಂತ್ರವನ್ನು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಮತ್ತು ಅವರ ಗೆಳೆಯರ ಬಳಗ ಗದಗಿನ ಜಿಮ್ಸ್‌ಗೆ ಕೊಡಿಸಿದ್ದಾರೆ.
ಕೋವಿಡ್ 19 ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ವಾರ್ಡ್‌ಗಳ ಸಾಮರ್ಥ್ಯಕ್ಕಿಂತ ರೋಗಿಗಳ ಸಂಖ್ಯೆ ಹೆಚ್ಚಿದ್ದರೆ, ವೈರಾಣುಗಳು ಗಾಳಿಯಲ್ಲಿ ತೇಲಾಡುವ ಸಾಧ್ಯತೆಗಳೂ ಹೆಚ್ಚು. ಇದರಿಂದ ರೋಗಿಗಳು ಚೇತರಿಕೆ ವಿಳಂಬವಾಗುವುದರ ಜತೆಗೆ ವೈದ್ಯಕೀಯ ಸಿಬ್ಬಂದಿ, ವೈದ್ಯರಿಗೂ ಸೋಂಕು ಹರಡುವ ಅಪಾಯ ಹೆಚ್ಚು. ಹೀಗಾಗಿ ವಾರ್ಡ್‌ಗಳಲ್ಲಿ ವೈರಾಣು ಮತ್ತು ರೋಗಾಣುಗಳನ್ನು ನಿರ್ಮೂಲನೆಗಾಗಿ ಬಯೋ ಪ್ಯೂರಿಫೈಯರ್ ತಯಾರಿಸಲಾಗಿದೆ.
ಬಯೋ ಪ್ಯೂರಿಫೈಯರ್‌ಗೆ ಅಳವಡಿಸಿರುವ ಕೊಳವೆಯಿಂದ ಕೋಣೆಯ ಗಾಳಿ ತೆಗೆದುಕೊಂಡು, 6 ಹಂತಗಳಲ್ಲಿ ಸಂಸ್ಕರಿಸಲಾಗುತ್ತದೆ. ಗಾಳಿಯಲ್ಲಿ ಸ್ವೀಕೃತಗೊಳ್ಳುವ ಎಲ್ಲ ಬಗೆಯ ಕ್ರಿಮಿ ಕೀಟಗಳು, ವೈರಾಣು, ರೋಗಾಣು, ಶಿಲೀಂಧ್ರ (ಫಂಗಸ್) ಮತ್ತು ಕೆಮಿಕಲ್‌ಯುಕ್ತ ವಾಸನೆ, ದುರ್ಗಂಧ, ಧೂಳನ್ನೂ ನಾಶಪಡಿಸಿ, ಶುದ್ಧ ಗಾಳಿ ಹೊರ ಸೂಸುತ್ತದೆ. ಸುಮಾರು 4000 ಸಾವಿರ ಚೌರಾಸ್ ಫೂಟ್‌ವರೆಗಿನ ಗಾಳಿಯನ್ನೂ ಶುದ್ಧೀಕರಿಸುತ್ತದೆ. ಪ್ರತಿ ಗಂಟೆಗೆ 150 ರಿಂದ 300 ಎಂ3 ಶುದ್ಧ ಗಾಳಿ ನೀಡುತ್ತದೆ. ಈ ಯಂತ್ರದ ನೆರವಿನಿಂದ ಕೋಣೆಯಲ್ಲಿರುವ ವಾಯುವಿನ ಗುಣಮಟ್ಟವನ್ನೂ ಅರಿಯಬಹುದು.
ಬಯೋ ಪ್ಯೂರಿಫೈಯರ್ ಬಳಕೆಯಿಂದ ಐಸಿಯು, ವಾರ್ಡ್ ಹಾಗೂ ಆಸ್ಪತ್ರೆಯ ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ನಿರಾತಂಕವಾಗಿ ಶುದ್ಧಗಾಳಿಯಿಂದ ಉಸಿರಾಡಬಹುದು. ಮೊದಲಿಗೆ ಶಸ್ತ್ರ ಚಿಕಿತ್ಸಾ ಘಟಕ, ಐಸಿಯು ಹಾಗೂ ವಾರ್ಡ್‌ಗಳಿಗೆ ಸೀಮಿತವಾಗಿ ಇದನ್ನು ತಯಾರಿಸಲಾಗಿತ್ತು. ಆ ನಂತರ ಸಾಕಷ್ಟು ಬದಲಾವಣೆಗಳೊಂದಿಗೆ ಆಸ್ಪತ್ರೆಯ ಯಾವುದೇ ಮೂಲೆಗೂ ಕೊಂಡೊಯ್ಯುವಂತೆ ವಿನ್ಯಾಸಗೊಳಿಸಲಾಗಿದೆ.
ಜತೆಗೆ ತಾರಾ ಹೋಟೆಲ್, ಸಿನಿಮಾ ಥಿಯೇಟರ್, ಸಭಾಂಗಣ, ಶಾಲಾ- ಕಾಲೇಜುಗಳಲ್ಲೂ ಇದನ್ನು ಬಳಕೆ ಮಾಡಹುದು. ಆದರೆ, ಆಸ್ಪತ್ರೆಗಳಿಗೆ ಮೊದಲ ಆದ್ಯತೆಯಾಗಿ ಇದನ್ನು ತಯಾರಿಸಲಾಗಿದೆ. ನೋಡಲು ಸಣ್ಣ ಜನರೇಟರ್ ಮಾದರಿಯಲ್ಲಿದ್ದು, ಸುಮಾರು 4 ಅಡಿ ಎತ್ತರ, 4 ಉದ್ದ ಹಾಗೂ 2 ಅಡಿ ಅಗಲವಿದ್ದು, ಕಾಲುಗಳಿಗೆ ಚಕ್ರಗಳನ್ನು ಅಳವಡಿಸಲಾಗಿದೆ. ಹೀಗಾಗಿ ಬೇಕಾದಲ್ಲಿಗೆ ಸುಲಭವಾಗಿ ಕೊಂಡೊಯ್ಯಬಹುದು ಎನ್ನುತ್ತಾರೆ ರಾಡಾರ್ಕ್ ಮೆಡಿಕಲ್ ಇನ್ನೋವೇಷನ್ಸ್ ಪ್ರೈ.ಲಿ.ನ ಡಾ| ಮುರಳಿ ಮೋಹನ.
ಸಮಸ್ಯೆಗೆ ಕಡಿವಾಣ
ಬಯಲು ಹಾಗೂ ಸಹಜವಾಗಿ ಗಾಳಿ ಬರುವಂತಹ ಪ್ರದೇಶಗಳಿಗಿಂತ ಕೋವಿಡ್ ವಾರ್ಡ್‌ಗಳು ಹೆಚ್ಚು ಸೂಕ್ಷ್ಮ ಮತ್ತು ಅಪಾಯಕಾರಿ. ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುತ್ತಾರೆ. ಮುಖಕ್ಕೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಪಿಪಿಇ ಕಿಟ್ ಧರಿಸಿಯೇ ಕರ್ತವ್ಯ ನಿರ್ವಹಿಸುತ್ತಾರೆ. ವಾರ್ಡ್‌ಗಳಲ್ಲಿರುವ ಸೋಂಕಿತರು ಸೀನುವುದು, ಕೆಮ್ಮುವುದರಿಂದಲೂ ವೈರಸ್ ಗಾಳಿಯಲ್ಲಿ ಬೆರೆಯುತ್ತದೆ. ಅಲ್ಲದೇ, ಕೋಣೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ರೋಗಿಗಳಿರುವುದು ಹಾಗೂ ಐಸೋಲೇಟೆಡ್ ವಾರ್ಡ್‌ಗಳು ಹವಾ ನಿಯಂತ್ರಣದಿಂದ ಕೂಡಿರುತ್ತವೆ. ಹೀಗಾಗಿ ನೈಸರ್ಗಿಕ ಗಾಳಿ ಕೊರತೆಯಾದಾಗ ಅಲ್ಲಿನ ವಾತಾವರಣ ಸಮಸ್ಯಾತ್ಮಕವಾಗಿ ಪರಿಣಮಿಸುತ್ತದೆ. ಇದೇ ಕಾರಣದಿಂದ ಜಿಮ್ಸ್ ಸೇರಿದಂತೆ ಕೋವಿಡ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅನೇಕ ವೈದ್ಯರು ಹಾಗೂ ಸಿಬ್ಬಂದಿಗೆ ಕೋವಿಡ್ 19 ತಗುಲಿತ್ತು. ಹೀಗಾಗಿ ಬಯೋ ಪ್ಯೂರಿಫೈರ್‌ನಿಂದ ಈ ಸಮಸ್ಯೆಗೆ ಕಡಿವಾಣ ಬೀಳಲಿದೆ ಎಂಬುದು ಜಿಮ್ಸ್ ವೈದ್ಯರ ಅಭಿಪ್ರಾಯ.
ಕೋವಿಡ್-19 ಸೋಂಕು ಜಗತ್ತಿನ ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಇನ್ನೂ ವಾಕ್ಸಿನ್ ಸಿಗದೇ ಸಂಕಷ್ಟದ ಸನ್ನಿವೇಶ ಸೃಷ್ಟಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹಸಿದವರ ಹೊಟ್ಟೆ ತುಂಬಿಸುವ ‘ಮನುಕುಲಕ್ಕಾಗಿ ಭಿಕ್ಷೆ’ ಅಭಿಯಾನಕ್ಕೆ ದಾನಿಗಳು ಕೈಜೋಡಿಸಿದ್ದರಿಂದ 18 ಸಾವಿರ ಕುಟುಂಬಗಳಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಧಾನ್ಯಗಳ ಕಿಟ್ ವಿತರಿಸಲಾಯಿತು. ಆದರೆ ಕೋವಿಡ್ ಸೋಂಕಿತರ ಜೀವ ರಕ್ಷಣೆಗಾಗಿ ಹೋರಾಡುತ್ತಿರುವ ವೈದ್ಯರ ರಕ್ಷಣೆಗಾಗಿ ಸ್ನೇಹಿತರು ಮತ್ತು ದಾನಿಗಳ ನೆರವಿನಿಂದ ಈ ಯಂತ್ರ ನೀಡಿದ್ದೇವೆ.
– ಅನಿಲ್ ಮೆಣಸಿನಕಾಯಿ, ಬಿಜೆಪಿ ಯುವ ನಾಯಕ.
ಇತ್ತೀಚೆಗೆ ರಾಜ್ಯ ಮತ್ತು ದೇಶದಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದೆ. ವೈದ್ಯರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. 7 ದಿನ ಕೆಲಸ, 7ದಿನ ಕ್ವಾರಂಟೈನ್‌ಗೆ ಹೋಗುತ್ತಿದ್ದಾರೆ. ಅನೇಕ ವೈದ್ಯರು ಕೆಲ ತಿಂಗಳಿಂದ ಮನೆ ಹಾಗೂ ಕುಟುಂಬವನ್ನೇ ನೋಡಿಲ್ಲ. ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸುವ ವೈದ್ಯರ ರಕ್ಷಣೆಗಾಗಿ ಬಯೋ ಪ್ಯೂರಿಫೈಯರ್ ಯಂತ್ರ ಒದಗಿಸುವತ್ತಿರುವ ಅನಿಲ್ ಮೆಣಸಿನಕಾಯಿ ಅವರ ಕಾರ್ಯ ಅಭಿನಂದನೀಯ. ಅದರಂತೆ ಎಲ್ಲ ಜಿಲ್ಲೆಗಳಲ್ಲಿ ದಾನಿಗಳು ಮುಂದೆ ಬರಬೇಕು. ಅಗತ್ಯವಾದರೆ, ಇಲಾಖೆಯಿಂದಲೇ ಈ ಯಂತ್ರ ಅಳವಡಿಕೆಗೆ ಕ್ರಮ ವಹಿಸಲಾಗುವುದು.
– ಬಿ.ಶ್ರೀರಾಮುಲು, ಆರೋಗ್ಯ ಸಚಿವರು
ಲಾಕ್‌ಡೌನ್ ಸಂದರ್ಭದಲ್ಲಿ ಮನುಕುಲಕ್ಕಾಗಿ ಭಿಕ್ಷೆ ಅಭಿಯಾನ ಮೂಲಕ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ ಅನಿಲ್ ಮೆಣಸಿನಕಾಯಿ ಈಗ ಆಸ್ಪತ್ರೆಗೆ ಬಯೋ ಪ್ಯೂರಿಫೈಯರ್ ಕೊಡುಗೆ ನೀಡುವ ಮೂಲಕ ಮತ್ತೊಮ್ಮೆ ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಇದು ಇತರರಿಗೆ ಪ್ರೇರಣೆಯಾಗಬೇಕು.
– ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು
ಕೋವಿಡ್ 19 ರೋಗಿಗಳನ್ನು ಗುಣಪಡಿಸಲು ವೈದ್ಯರು ದಿನದ 24 ಗಂಟೆಗಳ ಕಾಲ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದರಿಂದ ವೈದ್ಯರೂ ಅಪಾಯ ಎದುರಿಸುವಂತಾಗಿದೆ. ಹೀಗಾಗಿ ಬಯೋ ಪ್ಯೂರಿಫೈಯರ್ ಎಂಬ ಗಾಳಿ ಶುದ್ಧೀಕರಣ ಯಂತ್ರ ದೇಣಿಗೆಯಾಗಿ ನೀಡಿರುವ ಅನಿಲ್ ಮೆಣಸಿನಕಾಯಿ ಮತ್ತು ಸ್ನೇಹಿಯರ ಕಾರ್ಯ ಶ್ಲಾಘನೀಯ.
– ಶಿವಕುಮಾರ ಉದಾಸಿ, ಸಂಸದ
ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಸೋತರೂ, ಚಿಂತಿಸದೇ ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಅಭಿನಂದನಾರ್ಹ. ಕೋವಿಡ್ ಆಸ್ಪತ್ರೆಗೆ ಬಯೋ ಪ್ಯೂರಿಫೈಯರ್ ಯಂತ್ರ ಒದಗಿಸುವ ಮೂಲಕ ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಕೋವಿಡ್ 19 ವಾರಿಯರ್ಸ್ ಗಳ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದಾರೆ.
– ವಿಜಯ ಮಹಾಂತೇಶ್, ಆರ್‌ಎಸ್‌ಎಸ್ ವಿಭಾಗ ಪ್ರಚಾರಕ
ಅನಿಲ್ ಮೆಣಸಿನಕಾಯಿ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ಇದ್ದವರು, ಶ್ರೀಮಂತರೂ ಮಾಡದ ಕೆಲಸವನ್ನು ಏನೂ ಇಲ್ಲದ ವ್ಯಕ್ತಿ ಇಷ್ಟೆಲ್ಲಾ ಮಾಡುತ್ತಾರೆ ಎಂಬುದು ವಿಶೇಷ. ಈ ಹಿಂದೆ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಬೆಂಬಲಿಗರು, ದಾನಿಗಳ ನೆರವಿನಿಂದ ಬಡವರಿಗೆ ಆಹಾರ ಕಿಟ್ ವಿತರಿಸಿದ್ದ ಅವರು ಇದೀಗ ಕೋವಿಡ್ ವಾರಿಯರ್ಸ್ ಗಾಗಿ ಬಯೋ ಪ್ಯೂರಿಫೈಯರ್ ಒದಗಿಸುತ್ತಿರುವುದು ನಿಜಕ್ಕೂ ಇತರರಿಗೆ ಪ್ರೇರಣಾದಾಯಕ.
– ಕಳಕಪ್ಪ ಬಂಡಿ, ರೋಣ ಮತಕ್ಷೇತ್ರದ ಶಾಸಕರು
ಅನಿಲ್ ಮೆಣಸಿನಕಾಯಿ ಎರಡು ಬಾರಿ ಎಂಎಲ್‌ಎ ಚುನಾವಣೆಯಲ್ಲಿ ಸೋತರೂ, ಕ್ಷೇತ್ರದ ಜನರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಗದಗಿನಲ್ಲಿ 20 ವರ್ಷ ರಾಜಕಾರಣ ಮಾಡಿದರೂ ಮಾಡದ ಕೆಲಸವನ್ನು ಅನಿಲ್ ಮಾಡಿ ತೋರಿಸುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲ ಸಮಾನ ಮನಸ್ಕರರನ್ನು ಕಟ್ಟಿಕೊಂಡು ರೈತರಿಂದ ದಾನ ಪಡೆದು, ಬಡವರಿಗೆ ವಿತರಿಸಿದರು. ಇದೀಗ ಏರ್ ಪ್ಯೂರಿಫೈಯರ್ ಒದಗಿಸಿರುವುದು ಗದಗಿನ ಜನರ ಕುರಿತ ಅವರ ಕಾಳಜಿ ತೋರಿಸುತ್ತದೆ.
– ಕಾಂತಿಲಾಲ್ ಬನ್ಸಾಲಿ, ಬಿಜೆಪಿ ನಾಯಕ
ಕಳೆದೊಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ಕೋವಿಡ್ ಆಸ್ಪತ್ರೆಯ ಐಸಿಯು ವಾರ್ಡ್ ಗಾಳಿಯಲ್ಲೂ ವೈರಾಣುಗಳು ತೇಲಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅನಿಲ್ ಮೆಣಸಿನಕಾಯಿ ಮತ್ತವರ ಬೆಂಬಲಿಗರು ನೀಡಿರುವ ಜೈವಿಕ ಗಾಳಿ ಶುದ್ಧೀಕರಣ ಘಟಕದಿಂದ ಆಸ್ಪತ್ರೆಯ ವೈದ್ಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲಿದೆ.
– ಡಾ| ಸತೀಶ್ ಬಸರಿಗಿಡದ, ಜಿಲ್ಲಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ವಿದ್ಯಾರ್ಥಿಗಳಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.