![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Mar 21, 2020, 12:48 PM IST
ಸಾಂದರ್ಭಿಕ ಚಿತ್ರ
ಧಾರವಾಡ: ಘಮಘಮಿಸುವ ಅನ್ನದ ಅಕ್ಕಿ ಬೆಳೆಯುತ್ತಿದ್ದ ಭತ್ತದ ಗದ್ದೆಗಳು ಇದೀಗ ಸಮತಟ್ಟಾಗಿವೆ. ಬಿಸಿ ಬಿಸಿಯಾದ ರೊಟ್ಟಿಗೆ ಅಗತ್ಯವಾದ ಹಿಂಗಾರಿ ಬಿಳಿಜೋಳ ಬೆಳೆಯುತ್ತಿದ್ದ ಹಕ್ಕಲು ಪ್ರದೇಶಗಳಲ್ಲೂ ಇದೀಗ ಕಬ್ಬಿನ ನಾಟಿ ಸಾಗಿದೆ. ಅಷ್ಟೇ ಏಕೆ ವರ್ಷಪೂರ್ತಿ ಮನೆಗೆಲ್ಲ ಉಚಿತವಾಗಿ ಲಭಿಸುತ್ತಿದ್ದ ಪೌಷ್ಟಿಕ ದ್ವಿದಳ ಧಾನ್ಯ ಬೆಳೆಯುವ ಭೂಮಿಯನ್ನು ಈ ವರ್ಷ ಕಬ್ಬು ಅತಿಕ್ರಮಿಸಿಕೊಂಡಾಗಿದೆ.
ಹೌದು. ಭತ್ತ, ಜೋಳ, ಗೋಧಿಯಂತಹ ಪ್ರಧಾನ ಆಹಾರ ಬೆಳೆಗಳು ಹಾಗೂ ಹೆಸರು, ಕಡಲೆ ಸೇರಿದಂತೆ 12ಕ್ಕೂ ಅಧಿಕ ದ್ವಿದಳ ಧಾನ್ಯ ಬೆಳೆಯುತ್ತಿದ್ದ ಜಿಲ್ಲೆಯ ರೈತರೀಗ ಕಬ್ಬು ಬೆಳೆ ಮೊರೆ ಹೋಗಿದ್ದಾರೆ. ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ಪ್ರಮಾಣ ಕಳೆದ ಎರಡು ವರ್ಷದಲ್ಲಿ ಶೇ.30 ಹೆಚ್ಚಾಗಿದೆ. ರೈತರ ಹೊಲಗಳ ತುಂಬಾ ಏಕಪ್ರಬೇಧದ ಬೆಳೆ ಕಬ್ಬು ಅತಿಕ್ರಮಿಸಿಕೊಂಡಿದ್ದು ಬೇರೆ ಯಾವ ಬೆಳೆಯೂ ಕಾಣಸಿಗದಂತಾಗಿದೆ.
ಜಿಲ್ಲೆಯಲ್ಲಿ ಒಟ್ಟು 3 ಲಕ್ಷಕ್ಕೂ ಅಧಿಕ ಹೆಕ್ಟೇರ್ ಭೂಮಿ ಉತ್ತಮ ಕೃಷಿ ಮಾಡಲು ಲಭ್ಯವಿದೆ. ಈ ಭೂಮಿ ವಿಶೇಷ ಜೈವಿಕ ವಲಯವಾಗಿದ್ದು, 60ಕ್ಕೂ ಹೆಚ್ಚು ಪ್ರಬೇಧದ ಆಹಾರ ಸಸ್ಯಗಳು ಉತ್ತಮ ಫಸಲು ಕೊಡುವುದಕ್ಕೆ ಯೋಗ್ಯವಾಗಿದೆ. ಇದನ್ನು 25 ವರ್ಷಗಳ ಹಿಂದೆಯೇ ಧಾರವಾಡದ ಕೃವಿವಿ ವಿಜ್ಞಾನಿಗಳು ಸಂಶೋಧನೆ ನಡೆಸಿ ಸಾಬೀತು ಪಡಿಸಿದ್ದಾರೆ.
ಇಂತಹ ಭೂಮಿಯಲ್ಲಿ 18 ತಳಿ ದೇಶಿ ಭತ್ತ, 20ತಳಿ ಅಭಿವೃದ್ಧಿ ಪಡೆಸಿದೆ. ಹೈಬ್ರಿಡ್ ಭತ್ತ, 8 ಬಗೆಯ ಜೋಳ, 18 ಬಗೆಯ ಗೋದಿ, 2 ತರದರಾಗಿ, 34 ಬಗೆಯ ತೋಟಗಾರಿಕೆ ಬೆಳೆ ಸೇರಿದಂತೆ ಉತ್ತಮ ಆಹಾರ ಬೆಳೆಗಳನ್ನು ಬೆಳೆಯಬಹುದಾಗಿದೆ. ಒಟ್ಟಿನಲ್ಲಿ ಈ ಭೂಮಿಯಲ್ಲಿ ಪೌಷ್ಟಿಕ ಆಹಾರಗಳನ್ನು ಉತ್ಕೃಷ್ಟ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದ್ದು ಇದೊಂದು ಉತ್ತಮ ಅನ್ನದ ಬಟ್ಟಲಾಗಿತ್ತು. ಇದೀಗ ಈ ಎಲ್ಲ ಭೂಮಿಯಲ್ಲೂ ಏಕ ಪ್ರಬೇಧದ ಕಬ್ಬು ಬೆಳೆ ರಾರಾಜಿಸುತ್ತಿದೆ.
ವಾಣಿಜ್ಯ ಬೆಳೆಗೆ ಜೈಕಾರ: ಆಹಾರ ಬೆಳೆಯಿಂದ ವಾಣಿಜ್ಯ ಬೆಳೆಯ ಬೆನ್ನಟ್ಟಿದ ಜಿಲ್ಲೆಯ ರೈತರು ಕಳೆದ ಹತ್ತು ವರ್ಷಗಳಲ್ಲಿ ಸಮಗ್ರ ಕೃಷಿಯಿಂದ ವಿಮುಖರಾಗಿ ಏಕಪ್ರಬೇಧ ಕಬ್ಬು ಬೆಳೆ ಹಿಂದೆ ಬಿದ್ದಿದ್ದಾರೆ. 2010ರಲ್ಲಿ ಜಿಲ್ಲೆಯಲ್ಲಿ ಕೇವಲ 14,000 ಎಕರೆಗೆ ಸೀಮಿತವಾಗಿದ್ದ ಕಬ್ಬಿನ ಬೆಳೆ ಕೇವಲ ಹತ್ತೇ ವರ್ಷಗಳಲ್ಲಿ ಅಂದರೆ 2020ಕ್ಕೆ ಬರೋಬ್ಬರಿ 1.93 ಲಕ್ಷ ಎಕರೆ ಭೂಮಿಗೆ ಏರಿಕೆ ಕಂಡಿದೆ. ಧಾರವಾಡ, ಅಳ್ನಾವರ, ಕಲಘಟಗಿ ಹಾಗೂ ಹುಬ್ಬಳ್ಳಿ ತಾಲೂಕಿನ ಭಾಗಶಃ ಪ್ರದೇಶ ಸಂಪೂರ್ಣ ಕಬ್ಬು ಬೆಳೆಯಿಂದ ಆವೃತವಾಗಿದ್ದು, ರೈತರು ಬರೀ ಕಬ್ಬು ಬೆಳೆಗೆ ಜೈ ಎನ್ನುತ್ತಿದ್ದಾರೆ.
ಕಲಘಟಗಿ ತಾಲೂಕಿನ 91 ಸಾವಿರ ಎಕರೆ ಪ್ರದೇಶ ಕಬ್ಬು ಬೆಳೆ ಆವರಿಸಿದ್ದರೆ, ಧಾರವಾಡ ತಾಲೂಕಿನ 76 ಸಾವಿರ ಎಕರೆ, ಅಳ್ನಾವರ ತಾಲೂಕಿನ 25 ಸಾವಿರ ಎಕರೆ, ಹುಬ್ಬಳ್ಳಿ ತಾಲೂಕಿನ 1000 ಎಕರೆ ಪ್ರದೇಶದಲ್ಲಿ ಕಬ್ಬಿದೆ. ಇನ್ನು ಕಬ್ಬು ಬೆಳೆ ಆಕ್ರಮಿಸುತ್ತಿರುವ ಭೂಮಿ ಹೊರತು ಪಡಿಸಿದರೆ ಮುಂಗಾರಿನಲ್ಲಿ ಬರೀ ಗೋವಿನಜೋಳ ಮತ್ತು ಸೋಯಾ ಅವರೆ ಬಿತ್ತನೆ ಪ್ರಮಾಣ ಅತ್ಯಧಿಕವಾಗುತ್ತಿದೆ.
ಕಬ್ಬಿಗೆ ವರವಾದ ನೆರೆ: ಕಳೆದ ವರ್ಷದ ನೆರೆಹಾವಳಿಯಿಂದ ಜಿಲ್ಲೆಯಲ್ಲಿ ನೀರಿನ ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಕೊಳವೆ ಬಾವಿಗಳು ಇದೀಗ ಉತ್ತಮ ಸ್ಥಿತಿಯಲ್ಲೇ ಇದ್ದು, ಕೆರೆ, ಕುಂಟೆಗಳಲ್ಲಿ ನೀರು ನಿಂತಿದೆ. ರೈತರು ಇದೇ ನೀರಿನ ಆಸರೆಯನ್ನಾಗಿಟ್ಟುಕೊಂಡು ಕಳೆದ ವರ್ಷಕ್ಕಿಂತ ಹೆಚ್ಚಿನ ಭೂಮಿಗೆ ನೀರು ಹಾಯಿಸಿ ಇದೀಗ ಮತ್ತಷ್ಟು ಕಬ್ಬು ಬೆಳೆಯು ತ್ತಿದ್ದಾರೆ. ಕಳೆದ ವರ್ಷ ಕೊರೆಸಿದ್ದರೂನೀರು ಬರದೇ ಹೋಗಿದ್ದ ಕೊಳವೆಬಾವಿಗಳಲ್ಲಿ ನೀರು ಬರುತ್ತಿರುವುದೇ ಕಬ್ಬಿನ ಮೋಹಕ್ಕೆ ಮತ್ತಷ್ಟು ರೈತರು ಇಳಿಯುವಂತೆ ಮಾಡಿದೆ.
ಕಾರ್ಖಾನೆ ಅಭಯವಿಲ್ಲ: ಇನ್ನೊಂದೆಡೆ ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ಎಲ್ಲಾ ಕಬ್ಬನ್ನು ಖರೀದಿಸುತ್ತಿದ್ದ ಹಳಿಯಾಳದ ಪ್ಯಾರಿ ಶುಗರ್ ಕಂಪನಿ ಕಳೆದ ವರ್ಷವೇ ನೇರವಾಗಿ ಕರಾರು ಒಪ್ಪಂದದ ಕಬ್ಬು ಖರೀದಿಯನ್ನು ಸ್ಥಗಿತಗೊಳಿಸಿದೆ. ಅಂದರೆ ಕಬ್ಬು ಬೆಳೆಯಲು ಪ್ರೋತ್ಸಾಹ ನೀಡಿ, ನಂತರ ಕಟಾವು ಮಾಡಿಸಿಕೊಂಡು ಕಾರ್ಖಾನೆಗೆ ಪಡೆಯುತ್ತಿದ್ದ ಒಪ್ಪಂದಗಳು ಮುರಿದು ಬಿದ್ದಿವೆ. ಇದೀಗ ನೇರವಾಗಿ ರೈತರು ತಮಗೆ ತಿಳಿದ ಕಾರ್ಖಾನೆಗೆ ಕಬ್ಬು ಕಳುಹಿಸಬಹುದಾಗಿದೆ.
2019ರಲ್ಲಿ ಜಿಲ್ಲೆಯಲ್ಲಿ ಬೆಳೆದ 2.5 ಲಕ್ಷ ಟನ್‌ಗಳಷ್ಟು ಕಬ್ಬನ್ನು ಬೆಳಗಾವಿ ಜಿಲ್ಲೆಯ ಕಬ್ಬು ಕಾರ್ಖಾನೆಗಳು ಕೊಂಡುಕೊಂಡಿವೆ. 2020ರ ಕಬ್ಬನ್ನು ಅವು ಕೊಳ್ಳುತ್ತವೆ ಎನ್ನುವ ಧೈರ್ಯದ ಮೇಲೆ ರೈತರು ಬೇಕಾಬಿಟ್ಟಿಯಾಗಿ ಕಬ್ಬು ಬೆಳೆಯುತ್ತಿದ್ದು, ಒಂದು ಬೇಳೆ ಆ ಕಾರ್ಖಾನೆಗಳು ಕಬ್ಬನ್ನು ತಿರಸ್ಕರಿಸಿದರೆ ಜಿಲ್ಲೆಯ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ.
ಭತ್ತಕ್ಕೆ ಉತ್ತಮ ಬೆಲೆ ಇಲ್ಲದಿರುವುದಕ್ಕೆ ಕಬ್ಬು ಬೆಳೆಯುತ್ತಿದ್ದೇವೆ. ಈ ವರ್ಷ ನನ್ನ ಹೊಲದಲ್ಲಿ ಕಬ್ಬಿನ ಬೆಳೆ ದ್ವಿಗುಣಗೊಂಡಿದೆ. ಕಳೆದ ವರ್ಷ ಕಷ್ಟಪಟ್ಟು ಕಬ್ಬು ಕಳೆಸಿದೆವು. ಮುಂದಿನ ವರ್ಷವೂ ಹಾಗೆ ಮಾಡುವುದು ಇದ್ದೇ ಇದೆ.-ಬಸನಗೌಡ ಪಾಟೀಲ, ದಾಸ್ತಿಕೊಪ್ಪ ರೈತ
-ಬಸವರಾಜ ಹೊಂಗಲ್
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.