ಪೌರತ್ವ ಸಮಸ್ಯೆ: ನಮ್ಮ ನೋವು ಯಾರಿಗೆ ಹೇಳುವುದು?
ಸಿಂಧನೂರು ಕ್ಯಾಂಪ್‌ನಲ್ಲಿರುವ ಬಾಂಗ್ಲಾ ಹಿಂದೂ ವಲಸಿಗರ ಅಳಲು
Team Udayavani, Dec 21, 2019, 6:15 AM IST
ಸಾಂದರ್ಭಿಕ ಚಿತ್ರ.
ಹುಬ್ಬಳ್ಳಿ: ನಮ್ಮ ನೋವು ಏನೆಂದು ಹೇಳ್ಳೋದು. ಕಳೆದೆರಡು ವರ್ಷಗಳಿಂದ ನಾಗ ರಿಕತ್ವದ ಸಮಸ್ಯೆ ಬಿಗಡಾಯಿಸಿದೆ, ಪೂರ್ವ ಪಾಕಿಸ್ಥಾನದಿಂದ ಬಂದ ನನ್ನ ತಂದೆಗೆ ನಾಗರಿಕತ್ವವಿದೆ. ಭಾರತದಲ್ಲಿಯೇ ಜನಿಸಿದರೂ ನನಗೆ, ನನ್ನ ಮಗನಿಗೆ ನಾಗರಿಕತ್ವ ವಿಲ್ಲ. ನನ್ನ ಪತ್ನಿ ಇಲ್ಲಿನವಳೇ ಆಗಿದ್ದರೂ ನನ್ನನ್ನು ಮದುವೆಯಾಗಿರುವುದಕ್ಕೆ ಆಕೆಗೂ ನಾಗ ರಿಕತ್ವ ಕೇಳುತ್ತಾರೆ, ಜಾತಿ ಸರ್ಟಿಫಿಕೆಟ್ ಇಲ್ಲದೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ…
– ಇದು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬಾಂಗ್ಲಾ ವಲಸಿಗರ ಪುನರ್ವಸತಿ ಕೇಂದ್ರ (ಆರ್.ಎಚ್. ಕ್ಯಾಂಪ್) ನಿವಾಸಿ ಪ್ರದೀಪ ದಾಸ್ ಅಳಲು. ಇದು ಕೇವಲ ನನ್ನೊಬ್ಬನ ಸಮಸ್ಯೆಯಲ್ಲ. ಸಿಂಧನೂರು ತಾಲೂಕಿನಲ್ಲಿರುವ ನಾಲ್ಕು ಪುನರ್ವಸತಿ ಕ್ಯಾಂಪ್‌ಗ್ಳಲ್ಲಿನ ಅನೇಕರ ಸ್ಥಿತಿಯೂ ಇದೆ ಆಗಿದೆ ಎಂದರು.
ಪೂರ್ವ ಪಾಕಿಸ್ಥಾನದಿಂದ 1967-68ರಿಂದ 1970ರ ಸುಮಾರಿಗೆ, 1975ರಲ್ಲಿ ಹಾಗೂ ಅಯೋಧ್ಯೆ ಘಟನೆ ಅನಂತರ 1992ರ ಸುಮಾರಿಗೆ ವಲಸೆ ಬಂದು ಇಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ಹಲವು ಸಮಸ್ಯೆಗೆ ಸಿಲುಕಿವೆ. ಉನ್ನತ ವ್ಯಾಸಂಗ ಮಾಡಿದರೂ ಜಾತಿ ಪ್ರಮಾಣಪತ್ರ, ನಾಗರಿಕತ್ವ ಸಮಸ್ಯೆಯಿಂದ ಯುವಕರು ಉದ್ಯೋಗ ವಂಚಿತರಾಗಿದ್ದಾರೆ.
ಈ ಬಗ್ಗೆ ಕ್ಯಾಂಪ್ ನಿವಾಸಿಗಳಾದ ಸುನಿಲ ಮೇಸ್ತ್ರಿ, ಪ್ರದೀಪ ದಾಸ್ “ಉದಯವಾಣಿ’ ಯೊಂದಿಗೆ ಅನಿಸಿಕೆ ಹಂಚಿಕೊಂಡರು.
ಎರಡು ವರ್ಷಗಳಿಂದ ಸಮಸ್ಯೆ ಉಲ್ಬಣ
1970ರ ಸುಮಾರಿಗೆ ಪೂರ್ವ ಪಾಕಿಸ್ಥಾನ (ಬಾಂಗ್ಲಾ) ದಲ್ಲಿ ಹಿಂದೂಗಳಾದ ನಮ್ಮ ಮೇಲೆ ಸಾಕಷ್ಟು ದೌರ್ಜನ್ಯ, ಹಿಂಸೆ ಹಿನ್ನೆಲೆಯಲ್ಲಿ ನಮ್ಮ ತಂದೆ ಯವರು ಬಾಂಗ್ಲಾದ ಬಿಲ್‌ಪಾಪ್ಲಲಾ ಗ್ರಾಮ ದಿಂದ ಭಾರತಕ್ಕೆ ವಲಸೆ ಬಂದರು. ನಾನಾಗ 12 ವರ್ಷದ ಬಾಲಕ. ನಾವು ಬಂದು ನೆಲೆ ನಿಂತಿದ್ದು ಕೇಂದ್ರ ಸರಕಾರ ಗುರುತಿಸಿದ ಸಿಂಧನೂರಿನ ಆರ್.ಎಚ್. ಕ್ಯಾಂಪ್‌ಗ್ಳಲ್ಲಿ. ನಮಗೆ 1981ರಲ್ಲಿ ನಾಗರಿಕತ್ವ ನೀಡಲಾಗಿತ್ತು ಎಂಬುದು ಸುನಿಲ ಮೇಸ್ತ್ರಿ ಅನಿಸಿಕೆ.
ನನ್ನ ತಂದೆಗೆ ನಾಗರಿಕತ್ವ ನೀಡಲಾಗಿದೆ. ಭಾರತದಲ್ಲಿಯೇ ಜನಿಸಿದ ನನಗೆ, ನನ್ನ ಮಗನಿಗೆ ನಾಗರಿಕತ್ವ ಇಲ್ಲ. ಪಶ್ಚಿಮ ಬಂಗಾಲದ ಹುಡುಗಿಯನ್ನು ಮದುವೆಯಾಗಿದ್ದೇನೆ. ನನ್ನ ಪತ್ನಿಗೆ ನಾಗರಿಕತ್ವ ಕೇಳುತ್ತಿದ್ದಾರೆ. ಇಲ್ಲಿಯವರೆಗೆ ನಾಗರಿಕತ್ವದ ಸಮಸ್ಯೆ ಇರಲಿಲ್ಲ. ಕಳೆದೆರಡು ವರ್ಷಗಳಿಂದ ನಾಗರಿಕತ್ವದ ಸಮಸ್ಯೆ ಉಲ್ಬಣಗೊಂಡಿದೆ ಎಂಬುದು ಪ್ರದೀಪ ದಾಸ್ ಅಭಿಮತ.
ಈ ಹಿಂದೆ ಕಲಬುರಗಿ ವಿಭಾಗಾಧಿಕಾರಿಯವರು ರಾಯಚೂರು ಜಿಲ್ಲಾಧಿಕಾರಿಗಳ ಮೂಲಕ ನಾಗರಿಕತ್ವ ಪತ್ರ ನೀಡುತ್ತಿದ್ದರು. ಕ್ರಮೇಣ ಅದನ್ನು ನಿಲ್ಲಿಸಲಾಯಿತು. ಅನೇಕರಿಗೆ ಮತದಾನ, ಪಡಿತರ ಚೀಟಿ ಇನ್ನಿತರ ಸೌಲಭ್ಯ ದೊರೆತಿದ್ದರಿಂದ ನಾವು ನಾಗರಿಕತ್ವ ಪತ್ರದ ಬಗ್ಗೆ ಗಮನ ನೀಡಲಿಲ್ಲ. ಕೆಲವು ವರ್ಷಗಳಿಂದ ಮತ್ತೆ ನಾಗರಿಕತ್ವ ಕೇಳಲಾರಂಭಿಸಿದ್ದರಿಂದ, ನಾಗರಿಕತ್ವ ಪತ್ರದ ಮನವಿಗೆ ಅಧಿಕಾರಿಗಳು ಅಂತಹ ಪತ್ರ ನೀಡಿಕೆ ಆದೇಶ ನಮಗಿಲ್ಲ ಎಂದು ಸಾಗಹಾಕುತ್ತಿದ್ದಾರೆ ಎಂದು ಇವರಿಬ್ಬರು ಹೇಳುತ್ತಾರೆ.
ಜಾತಿ ಪ್ರಮಾಣ ಪತ್ರ ಸಮಸ್ಯೆ
ನಮ್ಮಲ್ಲಿ ನಮಸೂದ್ರ, ಪಾಂಡ್ರೊ, ಕ್ಷತ್ರಿಯ, ರಾಜವಂಶಿ ಜಾತಿಗಳು ಪ್ರಮುಖವಾಗಿವೆ. ಆದರೆ ಈ ಹೆಸರಿನ ಜಾತಿಗಳು ಕರ್ನಾಟಕದ ಜಾತಿ ಪಟ್ಟಿಯಲ್ಲಿ ಇಲ್ಲವಾಗಿದ್ದು, ನಮಗೆ ಜಾತಿ ಪ್ರಮಾಣ ಪತ್ರವೇ ಸಿಗುತ್ತಿಲ್ಲ. ಪಶ್ಚಿಮ ಬಂಗಾಲ ಸರಕಾರ 76 ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಗುರುತಿಸಿದ್ದು, ಅದರಲ್ಲಿ ನಮಸೂದ್ರವೂ ಒಂದಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನಮಸೂದ್ರ, ಪಾಂಡ್ರೊ, ರಾಜವಂಶಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿ ಕೇಂದ್ರಕ್ಕೆ ಸಲ್ಲಿಸಿದ್ದು, ತಾಂತ್ರಿಕ ತೊಂದರೆಯಿಂದಾಗಿ ಅದು ಜಾರಿಯಾಗಿಲ್ಲ.
ಇವರೆಲ್ಲ ಎಲ್ಲಿಂದ ವಲಸೆ ಬಂದವರು?
ಪೂರ್ವ ಪಾಕಿಸ್ಥಾನ(ಬಾಂಗ್ಲಾ)ದಿಂದ ವಲಸೆ ಬಂದಿರುವ ಹಿಂದೂ ಕುಟುಂಬದವರು ನಾಲ್ಕು ಪುನರ್ವಸತಿ ಕ್ಯಾಂಪ್‌ಗ್ಳಲ್ಲಿ ನೆಲೆ ಕಂಡುಕೊಂಡಿದ್ದರೆ, ಒಂದರಲ್ಲಿ ಬರ್ಮಾ, ಶ್ರೀಲಂಕಾ ವಲಸಿಗರು ನೆಲೆಸಿದ್ದಾರೆ. 1967-68ರಲ್ಲಿ ಕೇಂದ್ರ ಸರಕಾರ ಸಿಂಧನೂರು ತಾಲೂಕಿನಲ್ಲಿ ಐದು ಪುನರ್ವಸತಿ ಕೇಂದ್ರಗಳನ್ನು ಆರಂಭಿಸಿತ್ತು. ಅದರಲ್ಲಿ ನಾಲ್ಕು ಕೇಂದ್ರಗಳು ಬಾಂಗ್ಲಾ ದಿಂದ ಬಂದ ವಲಸಿಗರಿಗೆ ಮೀಸಲಿರಿಸಲಾಗಿತ್ತು. ಬಾಂಗ್ಲಾ ದಿಂದ ಸುಮಾರು 932 ಕುಟುಂಬಗಳ ಒಟ್ಟು 5,425 ಜನ ಆಗಮಿಸಿದ್ದರು. ಸುಮಾರು 5,318 ಎಕರೆ ಭೂಮಿಯನ್ನು ಈ ನಾಲ್ಕು ಕೇಂದ್ರಗಳಿಗೆ ಮೀಸಲಿರಿಸಿ ಪ್ರತಿ ಕುಟುಂಬಕ್ಕೆ ನಿವೇಶನ, ಕೃಷಿಗೆ ತಲಾ 5 ಎಕರೆ ಭೂಮಿ ನೀಡಲಾಗಿತ್ತು. ಐದು ಪುನರ್ವತಿ ಕೇಂದ್ರ ಗಳಿಗೆ ಮಹಾವೀರ ನಗರ, ಸರ್ವಗಣಪುರ, ರವೀಂದ್ರ ನಗರ, ಗಾಂಧಿನಗರ, ರಾಮಕೃಷ್ಣ ನಗರ ಎಂದು ಹೆಸರಿಸ ಲಾಗಿತು. ಇವುಗಳಿಗೆ ಕಂದಾಯ ಗ್ರಾಮ ಸ್ಥಾನ ವನ್ನು ನೀಡಲಾಗಿದೆ. ಪ್ರಸ್ತುತ ಐದು ಕ್ಯಾಂಪ್‌ಗ್ಳಲ್ಲಿ 30 ಸಾವಿರ ಜನಸಂಖ್ಯೆ ಇದ್ದು, 12 ಸಾವಿರಕ್ಕೂ ಅಧಿಕ ಮತದಾರರು ಇದ್ದಾರೆ. ಅನೇಕರಿಗೆ ಇನ್ನೂ ನಾಗರಿಕತ್ವ ಸಿಕ್ಕಿಲ್ಲ.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.