Team Udayavani, Apr 12, 2019, 4:03 PM IST
ಧಾರವಾಡ: ರಾಜ್ಯದಲ್ಲಿ ಲಿಂಗಾಯತ ಸಮಾಜ ಮೂಲೆಗುಂಪು ಮಾಡುವ ಹುನ್ನಾರ ನಡೆದಿದ್ದು, ಇದರಿಂದಲೇ
ಕಳೆದ ವಿಧಾನಸಭೆ ಚುನಾವಣೆಯಲ್ಲೂ ನನಗೆ ಸೋಲಾಗಿದೆ. ಈಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ
ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವ ತನಕ ವಿರಮಿಸುವುದಿಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಚನ್ನಬಸವೇಶ್ವರ ನಗರದಲ್ಲಿರುವ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿಂದಿನ ಚುನಾವಣೆಯಲ್ಲಿ 9 ಜನ ಲಿಂಗಾಯತ ಸಮಾಜದವರನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ಒಬ್ಬರಿಗೂ ಮಂತ್ರಿ ಪದವಿ ನೀಡಲಿಲ್ಲ.
ಇದಕ್ಕೆಲ್ಲ ಪ್ರಹ್ಲಾದ ಜೋಶಿ ಅವರ ಕುತಂತ್ರ ಬುದ್ಧಿಯೇ ಕಾರಣ. ಈ ಸಲ ಸಮಾಜ ಬಾಂಧವರು ತಮಗೆ ಬೆಂಬಲಿಸುವ ಮೂಲಕ ಬಹುಮತ ನೀಡಬೇಕು ಎಂದರು.
ಜನರ ಸಮಸ್ಯೆಗಳಿಗೆ ಹಗಲು- ರಾತ್ರಿಯೂ ಸ್ಪಂದಿಸುತ್ತಿದ್ದೇನೆ. ಅಲ್ಪಸಂಖ್ಯಾತರ, ದಲಿತರ ಮನೆಗೆ ಮತ ಕೇಳಲು ಹೋದರೆ, ನಾವು ನಿಮಗೆ ನೀಡುತ್ತೇವೆ. ನಿಮ್ಮ ಸಮಾಜದ ಕಡೆಗೆ ಸ್ವಲ್ಪ ಗಮನಿಸುವಂತೆ ಬುದ್ಧಿ ಹೇಳುತ್ತಾರೆ. ಅಷ್ಟರಮಟ್ಟಿಗೆ ಲಿಂಗಾಯತ ಸಮಾಜ ಹಾಳಾಗಿದೆ. ಇದೀಗ ಚುನಾವಣೆಯ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಮುರುಘಾಮಠದ ಸ್ವಾಮಿ ಕರಕೊಂಡು ಬಂದ್ರು. ಅವನಿಗೆ ದುಡ್ಡು ಕೊಟ್ಟು ಹ್ಯಾಂಡ್‌ಬಿಲ್ ಹಂಚೋಕೆ ಹೇಳ್ತಾರೆ. ಇದೆಲ್ಲ ಜೋಶಿಯ ದುರ್ಬುದ್ಧಿ. ಯಡಿಯೂರಪ್ಪ ಜೈಲಿಗೆ ಹೋಗಲು ಜೋಶಿಯೇ ಕಾರಣ ಎಂದು ದೂರಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಡಿ.ಕೆ.
ನಾಯ್ಕರ್ ನಂತರ ಸಮರ್ಥ ಲೋಕಸಭಾ ಸದಸ್ಯರ ಆಯ್ಕೆಯೇ ನಡೆದಿಲ್ಲ. ಇದರಿಂದ ಧಾರವಾಡದ ಅಭಿವೃದ್ಧಿ ಹಿನ್ನಡೆಯಾಗಿದೆ.
ಕ್ಷೇತ್ರದ ಏಳು ಲಕ್ಷ ಲಿಂಗಾಯತ ಮತದಾರರು ವಿನಯ ಕುಲಕರ್ಣಿಗೆ ಮತ ಹಾಕುವಂತೆ ಮನವಿ ಮಾಡಿದರು.
ರಾಜಣ್ಣ ಕೊರವಿ, ಶಿವಾನಂದ ಅಂಬಡಗಟ್ಟಿ ಮಾತನಾಡಿದರು. ನಾಗರಾಜ ಟ್ಟಣಶೆಟ್ಟಿ, ದಶರತ್ ದೇಸಾಯಿ, ವಿಶ್ರಾಂತ ಕುಲಸಚಿವ ಬಿ.ವಿ.ಕಲಿವಾಳ, ನಾಗರಾಜ ಹಂಪಣ್ಣವರ, ಗಂಗಾಧರ, ಪಿ.ಎಚ್. ನೀರಲಕೇರಿ, ಸತೀಶ ತುರಮರಿ ಇನ್ನಿತರರಿದ್ದರು.
ಭಾವುಕಗೊಂಡ ವಿನಯ್
ಕಟ್ಟಡ ದುರಂತದಲ್ಲಿ ವಿನಾ ಕಾರಣ ನನ್ನ ಹೆಸರು ಹಾಳು ಮಾಡುತ್ತಿದ್ದಾರೆ. ಆ ಕಟ್ಟಡ ನನಗೆ ಸಂಬಂಧವೇ ಇಲ್ಲ.ಅದು ನಮ್ಮ ಮಾವನವರಿಗೆ ಸೇರಿದ್ದು, ನಾಲ್ಕು ಜನ ಮಾಲೀಕರಲ್ಲಿ ಬಿಜೆಪಿಯವರು ಇದ್ದಾರೆ. ಆ ಕಟ್ಟಡ ಯಾವಾಗ ಕಟ್ಟಿಧ್ದೋ ನನಗೆ ಗೊತ್ತಿಲ್ಲ. ಕೊಂಡಿ ಮಂಚಣ್ಣನ್ನಂತೆ ಪ್ರಹ್ಲಾದ್ ಜೋಶಿ ಕುತಂತ್ರ ಮಾಡಿ ನನ್ನ ಹೆಸರು ಹಾಳು ಮಾಡುತ್ತಿದ್ದಾರೆ.
ಕಟ್ಟಡ ಬಿದ್ದಾಗ ಜೀವ ರಕ್ಷಣೆಗೆ ನಾಲ್ಕು ದಿನಾ ಅಲ್ಲಿಂದ ನಾನು ಕದಲಲಿಲ್ಲ. ಇವರೆಲ್ಲ ಬಂದ್ರು ಪೋಟೊ ತೆಗೆಸಿಕೊಂಡು
ವಾಪಸ್ ಹೋದರು. ನನ್ನ ಮಾವನಿಗೆ 72 ವರ್ಷ ಅವರು ಜೈಲಲ್ಲಿದ್ದಾರೆ. ಇರಲಿ ಅವರು ಕಟ್ಟಿದ ಬಿಲ್ಡಿಂಗ್ ಬಿದ್ದಿದೆ. ನಾನು
ಅವರ ಮುಖಾ ನೋಡಲು ಸಹ ಹೋಗಿಲ್ಲ ಎಂದು ವಿನಯ್ ಭಾವುಕರಾದರು.
ಕೈ-ದಳ ಮೈತ್ರಿಗೆ ಜೈ ಎಂದ ಬಾಬಾಗೌಡ ಪಾಟೀಲ
ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರು ಅಚ್ಚರಿ ಬೆಳವಣಿಗೆಯಲ್ಲಿ ಗುರುವಾರ ಕೈ-ದಳದ ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪರವಾಗಿ ನಿಂತಿದ್ದಾರೆ. ಅಷ್ಟೇಯಲ್ಲ, ನಗರ ಮತ್ತು ಕೆಲವು ತಾಲೂಕಿನ ಹಳ್ಳಿಗಳಿಗೂ ಭೇಟಿ ಕೊಟ್ಟು ಮತ ಯಾಚಿಸಿದ್ದಾರೆ. ಧಾರವಾಡ ತಾಲೂಕಿನಿಂದ ರೈತಸಂಘದಿಂದ ಗೆಲುವು ಸಾಧಿಸಿ ಶಾಸಕರಾಗಿದ್ದ ಅವರು ಈ ಭಾಗದಲ್ಲಿ ಇನ್ನೂ ತಮ್ಮ ವರ್ಚಸ್ಸು ಇಟ್ಟುಕೊಂಡಿದ್ದು ಕಳೆದ ಬಾರಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಈ ಬಾರಿ ಕೈ ಅಭ್ಯರ್ಥಿ ವಿನಯ್ ಬೆಂಬಲಕ್ಕೆ ನಿಂತಿದ್ದಾರೆ.
ಲಿಂಗಾಯತ ಮಹಾಸಭಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. 3ರಷ್ಟಿರುವ ಜನ ದೇಶದ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದು, ಇವರಿಂದ ಬಡವರು ಉದ್ಧಾರ ಆಗಿಲ್ಲ. ಶೇ. 50ರಷ್ಟಿರುವ ಲಿಂಗಾಯತ ಸಮಾಜ ಇದರ ಒಳಮರ್ಮ ಅರಿಯಬೇಕು ಎಂದು ಹೇಳಿದರು.
ಶ್ರಮ ವಹಿಸಿ ದುಡಿದು ಉತ್ಪಾದನೆ ಮಾಡುವ ಹಾಗೂ ಸೇವೆ ಮಾಡುವ ರೈತರನ್ನೂ ಕಡೆಗಣಿಸಿ ದೇಶದ ರಾಜಕಾರಣ ನಡೆದಿದೆ. ಈಗ ಎಚ್ಚೆತ್ತು ವಿನಯ ಕುಲಕರ್ಣಿಗೆ ಮತ ಹಾಕಬೇಕು. ದೇಶದಲ್ಲಿ ಮೋದಿ ಹವಾ ಇರುವುದು ಸುಳ್ಳು. ಅದು ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರವೇ ಇದೆ. ಈ ಸಲ ದೇಶದಲ್ಲಿ ಮಹಾಘಟಬಂಧನದಿಂದ ಬದಲಾವಣೆಯ ಗಾಳಿ ಬೀಸಿದ್ದು, ಮೋದಿಯ ಹವಾಠುಸ್ ಆಗಲಿದೆ ಎಂದು ಕುಟುಕಿದರು.