ಮುತ್ತಲ ನಂಬಿದವರ ಬದುಕು ಮಂಕು
ಪರಿಸರ ಸ್ನೇಹಿ ಊಟದೆಲೆಗೆ ಕುತ್ತು ತಂದ ಕಬ್ಬು
Team Udayavani, Apr 18, 2022, 11:30 AM IST
ಧಾರವಾಡ: ಯಜ್ಞ-ಯಾಗಾದಿಗಳಿಗೆ ಬೇಕು ಇದರ ಕಟ್ಟಿಗೆ. ಸಾಕ್ಷಾತ್ ಶಿವನೇ ಪಾರ್ವತಿಯೊಂದಿಗೆ ಊಟ ಮಾಡಲು ಬೇಕಂತೆ ಇದೆ ಎಲೆ. ಸಂಪ್ರದಾಯಸ್ಥ ಮಠಗಳಲ್ಲಿ ಇಂದಿಗೂ ಪ್ರಸಾದಕ್ಕೆ ಇದರ ಎಲೆಯೇ ಬಳಕೆಯಾಗುತ್ತದೆ. ಪುರಾಣ ಇತಿಹಾಸ ಏನೇ ಇದ್ದರೂ, ಸಾವಿರಾರು ಬಡವರಿಗೆ ಅನ್ನ ಹಾಕುವ ಕಾರ್ಯವನ್ನು ಇಂದಿಗೂ ಮಾಡುತ್ತಿದೆ ಈ ಮುತ್ತುಗದ ಎಲೆ.
ಧಾರವಾಡ, ಉತ್ತರ ಕನ್ನಡ, ಹಾವೇರಿ ಮತ್ತು ಬೆಳಗಾವಿ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತು, ಪರಿಸರ ಸಮತೋಲನ ಕಾಯುವುದರ ಜತೆಗೆ ಬಡವರ ಹೊಟ್ಟೆಗೆ ಅನ್ನದ ಮಾರ್ಗ ತೋರಿಸಿದ್ದ ಮುತ್ತುಗದ ಎಲೆ(ಮುತ್ತಲೆಲೆ) ಸಂತತಿಯೇ ನಶಿಸುತ್ತಿದೆ.
ಇದನ್ನು ನಂಬಿಕೊಂಡು ಜೀವನ ಮಾಡುತ್ತಿದ್ದ ಸಾವಿರಾರು ಕುಟುಂಬಗಳಿಗೆ ಸಂಕಷ್ಟ ಶುರುವಾಗಿದ್ದು, ಗ್ರಾಮೀಣರಿಗೆ ಖರ್ಚಿಲ್ಲದ ಈ ಎಲೆಗಳ ಬಳಕೆಯಿಂದ ನಡೆಯುತ್ತಿದ್ದ ಕಿರು ಉದ್ಯಮವೊಂದು ನಿಧಾನಕ್ಕೆ ತೆರೆಗೆ ಸರಿಯುತ್ತಿದೆ.
ಉತ್ತರ ಕರ್ನಾಟಕ ಸೇರಿದಂತೆ ಆಂಧ್ರ, ತೆಲಂಗಾಣ, ಗೋವಾ ಮತ್ತು ಮಹಾರಾಷ್ಟ್ರಕ್ಕೂ ರಫ್ತಾಗುವ ಧಾರವಾಡ ತಾಲೂಕಿನ ಮುತ್ತುಗದ ಊಟದೆಲೆ ಉದ್ಯಮಕ್ಕೆ ಕಳೆದ ನಾಲ್ಕೈದು ವರ್ಷಗಳಿಂದ ಕಬ್ಬು ಬೆಳೆ ವಿಪರೀತ ಕಾಟ ಕೊಡುತ್ತಿದ್ದು, ಉದ್ಯಮ ನಂಬಿದವರು ಇದನ್ನು ಕೈ ಬಿಟ್ಟು ಇನ್ನಿತರೆ ಕೂಲಿ ಕೆಲಸಗಳತ್ತ ಸಾಗುತ್ತಿದ್ದಾರೆ.
130ಕ್ಕೂ ಅಧಿಕ ಮಠಗಳಿಗೆ ಊಟದೆಲೆ! ಮಹಾರಾಷ್ಟ್ರದ ಅವಧೂತ ಪರಂಪರೆಯ ಅನೇಕ ಮಠಗಳು ಸೇರಿದಂತೆ ಗೋವಾ ಮತ್ತು ಉತ್ತರ ಕರ್ನಾಟಕ ಭಾಗದ ಬ್ರಾಹ್ಮಣ ಮಠಗಳಿಗೆ ಮುತ್ತುಗದ ಎಲೆ ಊಟದ ಪಂಕ್ತಿಗಳ ಕಳೆ ಹೆಚ್ಚಿಸಿದೆ. ಅಷ್ಟೇಯಲ್ಲ ಧಾರ್ಮಿಕವಾಗಿ ಕೂಡ ಈ ಎಲೆಗೆ ಮಹತ್ವದ ಸ್ಥಾನವಿದ್ದು ನವಗ್ರಹ ವನಗಳ ಪೈಕಿ ಮುತ್ತುಗಕ್ಕೆ ಮೊದಲ ಪ್ರಾಧಾನ್ಯತೆ. ಆಲ, ಅಶ್ವತ್ಥ, ಮಾವು, ಹಲಸು, ಅಡವಿ ನೆಲ್ಲಿಯಂತೆಯೇ ಮುತ್ತುಗಕ್ಕೂ ಶ್ರೇಷ್ಠತೆ ನೀಡಲಾಗಿದ್ದು, ಯಜ್ಞಕ್ಕೂ ಇದರ ಕಟ್ಟಿಗೆ ಬಳಕೆಯಾಗುತ್ತದೆ. ಕಟ್ಟಾ ಸಂಪ್ರದಾಯ ಪಾಲಿಸುವ ಮಠಗಳು ಬಾಳೆ ಎಲೆ ಅಥವಾ ಮುತ್ತುಗದ ಎಲೆಯನ್ನು ಮಠದ ಪ್ರಸಾದ ಸೇವನೆಗೆ ಬಳಸುತ್ತವೆ. ಅದೂ ಅಲ್ಲದೇ ಇಂದಿಗೂ ಉತ್ತರ ಕರ್ನಾಟಕ ಭಾಗದ ಕೆಲವಷ್ಟು ಸಂಪ್ರದಾಯಸ್ಥ ಕುಟುಂಬಗಳು ವರ್ಷಪೂರ್ತಿಯಾಗಿ ಮುತ್ತುಗದ ಎಲೆಯಲ್ಲಿಯೇ ಊಟ ಮಾಡುತ್ತವೆ.
ಮುಕ್ಕಾಯಿತು ಉದ್ಯಮ: ಕಳೆದ ಹತ್ತು ವರ್ಷಗಳಿಂದ ಧಾರವಾಡ ಸೇರಿ ಸುತ್ತಲಿನ ಜಿಲ್ಲೆಗಳಲ್ಲಿ ಕಬ್ಬು ಬೆಳೆ ಎಲ್ಲಾ ಬೆಳೆಗಳನ್ನು ಹೊಸಕಿ ಹಾಕಿದೆ. ಇಲ್ಲಿನ ದೇಶಿ ತಳಿ ಭತ್ತ, ದ್ವಿದಳ ಧಾನ್ಯಗಳು ತೆರೆಗೆ ಸರಿದ ಬೆನ್ನಲ್ಲೇ ಇದೀಗ ಕಿರು ಉದ್ಯಮವೊಂದು ಕಬ್ಬಿನ ಮಾಯಾಜಾಲಕ್ಕೆ ಸಿಲುಕಿ ತತ್ತರಿಸುತ್ತಿದೆ. ರೈತರು ತಮ್ಮ ಹೊಲಗಳಲ್ಲಿ ದನಕರುಗಳು ಮೇಯಲು ಬಿಟ್ಟಿದ್ದ ಅಡವಿ, ಬದುಗಳು, ಕೇಡು, ಖರಾಬ್, ಮೇಡು, ಮೂಲೆ, ಹಳ್ಳ ಮತ್ತು ಕೊಳ್ಳಗಳನ್ನು ದೈತ್ಯ ಜೆಸಿಬಿಗಳನ್ನು ಬಳಸಿ ಸಮ ಮಾಡಿ ಎಲ್ಲೆಡೆಯೂ ಕಬ್ಬು ಬೆಳೆಯುತ್ತಿದ್ದಾರೆ. ಅದರಲ್ಲೂ ಕಲಘಟಗಿ, ಧಾರವಾಡ, ಅಳ್ನಾವರ, ಹಳಿಯಾಳ, ಮುಂಡಗೋಡ, ಖಾನಾಪುರ, ಹಾನಗಲ್ ತಾಲೂಕುಗಳ ಅರೆಮಲೆನಾಡು ಗುಡ್ಡಗಾಡು ಪ್ರದೇಶಕ್ಕೂ ಕಬ್ಬು ಪ್ರವೇಶ ಪಡೆದಿದ್ದರಿಂದ ಅಲ್ಲಿನ ಮುತ್ತುಗದ ನಾಟುಗಳು ನೆಲ ಕಚ್ಚಿವೆ. ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಈ ಕಿರು ಉದ್ಯಮಕ್ಕೆ ಈ ತಾಲೂಕುಗಳಿಂದಲೇ ಮುತ್ತಗದ ಎಲೆ ಪೂರೈಕೆಯಾಗುತ್ತಿತ್ತು. ಇದೀಗ ಇದು ಸಂಪೂರ್ಣ ನಿಂತು ಹೋಗಿದೆ.
ನೂರಾರು ವರ್ಷಗಳಿಂದ ಬಳಕೆ: ಅರೆಮಲೆನಾಡು ಪ್ರದೇಶದ ಕಾಡು, ಕಾಡಿನಂಚಿನ ಹೊಲಗಳು, ಕೆರೆಕುಂಟೆಗಳ ಅಂಗಳ, ಗೋಮಾಳಗಳು, ಗಾಂವಠಾಣಾ ಪಡ ಜಾಗೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಲ್ಲುವ ಮುತ್ತುಗದ ಗಿಡಗಳ ಎಲೆಗಳನ್ನು ನೂರಾರು ವರ್ಷಗಳಿಂದ ಜನ ಊಟಕ್ಕೆ ಬಳಕೆ ಮಾಡಿಕೊಂಡು ಬಂದಿದ್ದಾರೆ. ಪ್ರತಿವರ್ಷದ ವಸಂತಕ್ಕೆ ಹಚ್ಚ ಹಸಿರಾಗಿ ಚಿಗುರಿ ನಿಲ್ಲುವ ಎಲೆಗಳನ್ನು ಕಿತ್ತು ತಂದು ಬಿಸಿಲಿನಲ್ಲಿ ಒಣಗಿಸಿಡಲಾಗುತ್ತದೆ. ನಂತರ ಚಿಕ್ಕ ಚಿಕ್ಕ ಹತ್ತಾರು ಎಲೆಗಳನ್ನು ಒಟ್ಟಾಗಿಸಿ ಹೆಣೆದು ಊಟಕ್ಕೆ ಬಳಕೆಯಾಗುವಂತೆ ಸಿದ್ಧಗೊಳಿಸಲಾಗುತ್ತದೆ. ಸದ್ಯಕ್ಕೆ ನೂರು ಎಲೆಗಳ ಒಂದು ಕಟ್ಟಿಗೆ 150 ರೂ. ಬೆಲೆ ಇದೆ. 1950-1990ರ ದಶಕದವರೆಗೂ ಮದುವೆ, ಜಾತ್ರೆಗಳು, ಹಬ್ಬಗಳು, ಹೆಚ್ಚು ಜನ ಸೇರಿ ಭೋಜನ ಸೇವಿಸುವ ಎಲ್ಲಾ ಕಾರ್ಯಗಳಿಗೂ ಮುತ್ತುಗದ ಎಲೆ ಬಳಕೆಯಾಗುತ್ತಿತ್ತು. ನಂತರ ಪ್ಲಾಸ್ಟಿಕ್ ಹಾವಳಿಯಿಂದ ಮುತ್ತಗದ ಬಳಕೆ ಕಡಿಮೆಯಾಗುತ್ತ ಬಂತು.
ಲಕ್ಷ ಲಕ್ಷ ಆದಾಯಕ್ಕೆ ಖೋತಾ: ಮುತ್ತುಗದ ಉದ್ಯಮ ಕಣ್ಣಿಗೆ ಕಾಣದಂತೆ ಆದಾಯ ತರುವ ಉದ್ಯಮ. ಮಳೆಗಾಲದಲ್ಲಿ ಬಡವರ ಕೈಯಲ್ಲಿ ಹಣವಿಲ್ಲದಾಗ ಮುತ್ತಗದ ಎಲೆಯೇ ಮನೆಯ ಸಂತಿ ಪೇಟೆ ಮತ್ತು ಸಣ್ಣಪುಟ್ಟ ಆಸ್ಪತ್ರೆ ಖರ್ಚುಗಳನ್ನು ನೀಗಿಸುತ್ತದೆ. ಅಷ್ಟೇಯಲ್ಲ, ಒಂದೊಂದು ಕುಟುಂಬಗಳು ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಎಲೆ ಮಾರಾಟ ಮಾಡಿ ವರ್ಷಪೂರ್ತಿ ಖರ್ಚು ಹೊರ ಹಾಕುತ್ತವೆ. ಅಂತಹ ಕುಟುಂಬಗಳಿಗೆ ವರ್ಷದಿಂದ ವರ್ಷಕ್ಕೆ ಮುತ್ತುಗ ಕಡಿಮೆಯಾಗುತ್ತಿರುವುದು ತೀವ್ರ ಸಂಕಷ್ಟ ತಂದಿಟ್ಟಂತಾಗಿದೆ.
ಪ್ಲಾಸ್ಟಿಕ್‌ಗೆ ಪರ್ಯಾಯ: ಪ್ಲಾಸ್ಟಿಕ್ ಬರುವ ಮುಂಚೆ ಚಿಕ್ಕ ಚಿಕ್ಕ ಹೋಟೆಲ್‌ಗಳು, ಮದುವೆ ಸಮಾರಂಭಗಳು, ಜಾತ್ರೆಗಳಲ್ಲಿ ಸಾವಿರ ಸಾವಿರ ಜನರು ಇದೇ ಮುತ್ತುಗದ ಎಲೆಗಳನ್ನೇ ಊಟಕ್ಕೆ ಬಳಸುತ್ತಿದ್ದರು. ಬಳಕೆ ನಂತರ ತಿಪ್ಪೆಗೆ ಚೆಲ್ಲಿದರೆ ಕೇವಲ ಆರು ತಿಂಗಳಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿದ್ದ ಮುತ್ತಗ ಅಷ್ಟೊಂದು ಪರಿಸರ ಸ್ನೇಹಿಯಾಗಿತ್ತು. ಆದರೆ ಇಂದು ಈ ಎಲೆ ಮತ್ತು ಎಲೆಯನ್ನು ನಂಬಿ ಬದುಕುತ್ತಿದ್ದ ಕುಟುಂಬಗಳಿಗೆ ಕನ್ನ ಬಿದ್ದಂತಾಗಿದೆ.
ಮುತ್ತುಗವನ್ನು ಉಳಿಸಲು ಅಗತ್ಯ ಕ್ರಮ ವಹಿಸಬೇಕು. ಮುತ್ತುಗ ಗಿಡಗಳನ್ನು ಕಡಿಯದಂತೆ ಕಠಿಣ ನಿಯಮ ಮಾಡಬೇಕು ಮತ್ತು ಮರಳಿ ಅರಣ್ಯ ಇಲಾಖೆ ಮುತ್ತುಗದ ಗಿಡಗಳನ್ನು ಅಲ್ಲಲ್ಲಿ ಬೆಳೆಸಬೇಕು. –ಪ್ರಕಾಶ ಗೌಡರ, ಪರಿಸರ ತಜ್ಞ
ಕಬ್ಬು ಬೆಳೆಯುವ ಅವಸರದಲ್ಲಿ ರೈತರು ತಮ್ಮ ಹೊಲಗಳಲ್ಲಿನ ಎಲ್ಲಾ ದೇಶಿ ಗಿಡ-ಮರ-ಬಳ್ಳಿಗಳನ್ನು ಕಿತ್ತು ಹಾಕುತ್ತಿದ್ದಾರೆ. ಇದು ಅಪಾಯಕಾರಿ ನಡೆ. ಪಕ್ಷಿಗಳು ರೈತರ ಮಿತ್ರರು. ಜೀವ ವೈವಿಧ್ಯದ ಸಮತೋಲನಕ್ಕಾಗಿ ಮುತ್ತುಗ ಉಳಿಯಬೇಕು. –ಸುಗುಣೇಂದ್ರತೀರ್ಥ ಭಂಡಾರಿ, ಮಠಗಳಿಗೆ ಮುತ್ತುಗ ರಫ್ತು ಮಾಡುವ ವ್ಯಾಪಾರಿ
ಕೆರೆಕುಂಟೆ, ಗೋಮಾಳ, ಗುಡ್ಡದ ಬದುಗಳಲ್ಲಿನ ಮುತ್ತುಗ ವರ್ಷದಿಂದ ವರ್ಷಕ್ಕೆ ಮಾಯವಾಗುತ್ತಿದೆ. ಐದು ವರ್ಷಗಳ ಹಿಂದೆ 2 ಲಕ್ಷ ರೂ. ಮೌಲ್ಯದ ಮುತ್ತಲೆಲೆ ಮಾರಾಟ ಮಾಡಿದ್ದೆ. ಕಳೆದ ವರ್ಷ ಎಲೆ ಸಿಕ್ಕದೇ ಇರುವುದರಿಂದ ಬರೀ 50 ಸಾವಿರ ರೂ. ಸಿಕ್ಕಿದೆ. –ದುರುಗಪ್ಪ ಹರಿಜನ, ಮುತ್ತುಗದ ಎಲೆ ಸಿದ್ಧಪಡಿಸುವ ಕಾರ್ಮಿಕ
-ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.