ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ: ಶೆಟ್ಟರ್
Team Udayavani, Mar 12, 2017, 3:45 AM IST
ಹುಬ್ಬಳ್ಳಿ: ರಾಜ್ಯದಲ್ಲಿ 2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಪ್ರಧಾನಿ ಮೋದಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಎದುರಿಸಲಾಗುವುದು. ಯಡಿಯೂರಪ್ಪ ಅವರನ್ನು ಮತ್ತೂಮ್ಮೆ ಮುಖ್ಯಮಂತ್ರಿ ಮಾಡುತ್ತೇವೆ. ಇದು ನಮ್ಮ ಗುರಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವು ರೈತ ವಿರೋಧಿ ಹಾಗೂ ದುರಾಡಳಿತ ನಡೆಸುತ್ತಿದೆ. ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿಯು 150ಕ್ಕೂ ಅಧಿಕ ಸ್ಥಾನ ಪಡೆಯಲಿದ್ದು, ಪಂಚರಾಜ್ಯಗಳ ಚುನಾವಣೆ ಅದಕ್ಕೆ ದಿಕ್ಸೂಚಿ ಆಗಲಿದೆ ಎಂದರು.
ಮಹಾದಾಯಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಲಿ:
ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಹಲವಾರು ಬಾರಿ ಮನವಿ ಮಾಡಿದರೂ ಅವರು ಕ್ಯಾರೆ ಎನ್ನಲಿಲ್ಲ. ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಆ ಪಕ್ಷದವರು ಅಲ್ಲಿಯ ನಾಯಕರನ್ನು ಮನವೊಲಿಸಬೇಕು ಎಂದು ಹೇಳುತ್ತಿದ್ದರು. ಮನೋಹರ ಪರಿಕ್ಕರ ಚುನಾವಣೆಯ ನಂತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣಗಳಿವೆ. ಆದ್ದರಿಂದ ಮಹದಾಯಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಕಾಂಗ್ರೆಸ್ ಮೇಲೆ ಹೆಚ್ಚು ಬಿದ್ದಿದ್ದು, ಆ ನಿಟ್ಟಿನಲ್ಲಿ ಅದು ಕಾರ್ಯ ನಿರ್ವಹಿಸಬೇಕು. ಬಿಜೆಪಿ ಸಹ ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ಶೆಟ್ಟರ್ ಹೇಳಿದರು.