ಗಬ್ಬು ನಾರುತ್ತಿದೆ ಬಿಆರ್‌ಟಿಎಸ್ ಬಸ್
|ಕಸ ಮುಟ್ಟದ ಪಾಲಿಕೆ ಸಿಬ್ಬಂದಿ |ಸ್ವಚ್ಛತೆಗೂ ನೀರಿನ ಬರ |ಚಿಗರಿ ಬಸ್‌ನಲ್ಲೇ ಕಸ ಸಾಗಾಟ |ಅಧಿಕಾರಿಗಳು ಮೌನ
Team Udayavani, Jun 28, 2019, 9:31 AM IST
ಹುಬ್ಬಳ್ಳಿ: ಚಿಗರಿ ಬಸ್‌ನಲ್ಲಿ ಕಸ ಸಾಗಿಸುತ್ತಿರುವುದು.
ಹುಬ್ಬಳ್ಳಿ: ಹು-ಧಾ ಬಿಆರ್‌ಟಿಎಸ್ ಬಸ್ ನಿಲ್ದಾಣಗಳಲ್ಲಿ ನೀರಿನ ವ್ಯವಸ್ಥೆಯಿಲ್ಲದ ಪರಿಣಾಮ ಸ್ವಚ್ಛತೆಗೆ ದೊಡ್ಡ ಸಮಸ್ಯೆ ಎದುರಾಗಿದ್ದು, ಚಿಗರಿ ಬಸ್‌ನಲ್ಲೇ ನೀರು ಹಾಗೂ ಕಸ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಮುಖವಾಗಿ ಕೆಲ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿರುವುದು ಪ್ರಾಯೋಗಿಕ ಹಂತದಲ್ಲಿ ಬೆಳಕಿಗೆ ಬಂದಿದ್ದವು. ಇದರಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಆದರೆ ಇದೀಗ ಬಸ್ ನಿಲ್ದಾಣ ಸ್ವಚ್ಛತೆಗೂ ನೀರಿನ ತೊಂದರೆ ಎದುರಾಗಿದ್ದು, ಅಕ್ಕಪಕ್ಕದ ಹೊಟೇಲ್, ಪಾರ್ಕ್, ಸಾರ್ವಜನಿಕ ನಲ್ಲಿಗಳಿಂದ ನೀರು ತಂದು ಬಸ್ ನಿಲ್ದಾಣಗಳನ್ನು ಸ್ವಚ್ಛ ಮಾಡುವಂತಾಗಿದೆ. ನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುವ ಬಸ್ ನಿಲ್ದಾಣ ದಿನಕ್ಕೊಮ್ಮೆ ಮಾತ್ರ ಸ್ವಚ್ಛವಾಗುತ್ತಿದೆ.
ಹು-ಧಾ ನಗರದ ಮಧ್ಯೆ ಇರುವ 33 ಬಸ್ ನಿಲ್ದಾಣಗಳ ಪೈಕಿ ಸುಮಾರು 30 ಬಸ್ ನಿಲ್ದಾಣಗಳ ಸ್ವಚ್ಛತೆಗೆ ನೀರಿನ ಕೊರತೆಯಿದೆ. ಏಜೆನ್ಸಿಯ ಸ್ವಚ್ಛತಾ ಸಿಬ್ಬಂದಿಯೇ ಅಲ್ಲಲ್ಲಿ ಕಾಡಿ ಬೇಡಿ ನೀರು ತಂದು ನಿಲ್ದಾಣ ಸ್ವಚ್ಛ ಮಾಡುತ್ತಿದ್ದಾರೆ. ಬೇರೆಡೆಯಿಂದ ನೀರು ಹೊತ್ತು ಬರುವ ಪರಿಸ್ಥಿತಿ ಇರುವುದರಿಂದ ನಿತ್ಯ ಒಂದೇ ಕೊಡ ನೀರಿನಲ್ಲಿ ಇಡೀ ಬಸ್ ನಿಲ್ದಾಣ ಸ್ವಚ್ಛಗೊಳಿಸುವಂತಾಗಿದೆ. ಸ್ವಚ್ಛತೆಗೆ ಬೇಕಾದ ನೀರನ್ನು ಕೂಡ ಚಿಗರಿ ಬಸ್ಸಿನಲ್ಲೇ ತಂದೆ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ.
ಕಸ ಮುಟ್ಟದ ಪಾಲಿಕೆ, ಬಸ್ಸಿನಲ್ಲಿ ಸಾಗಾಟ: ಬಸ್ ನಿಲ್ದಾಣದ ಕಸವನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಮುಟ್ಟುತ್ತಿಲ್ಲ. ಬೆಳಗಿನ ಜಾವ ಕಸದ ಚೀಲವನ್ನು ನಿಲ್ದಾಣದ ಮುಂದಿಟ್ಟರೆ ತೆಗೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ಕಸ ಗೂಡಿಸುವ ಸಿಬ್ಬಂದಿ ಕಸವನ್ನು ಬಸ್‌ನಲ್ಲಿ ಹಾಕಿಕೊಂಡು ದೂರ ಖಾಲಿ ನಿವೇಶನಗಳಲ್ಲಿ ಕಸ ಬೀಸಾಡುತ್ತಿದ್ದಾರೆ. ಕಸ ತೆಗೆದುಕೊಂಡು ಹೋಗುವ ಕುರಿತು ಪಾಲಿಕೆ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಸ್ವಚ್ಛತಾ ಸಿಬ್ಬಂದಿ ಅಳಲಾಗಿದೆ.
ಕ್ಷೀಣಿಸಿದ ಸಿಬ್ಬಂದಿ ಸಂಖ್ಯೆ: ಸ್ವಚ್ಛತಾ ಕಾರ್ಯವನ್ನು 2 ಏಜೆನ್ಸಿಗಳಿಗೆ ನೀಡಲಾಗಿದ್ದು, ಪ್ರಾಯೋಗಿಕವಾಗಿ ಆರಂಭವಾದ ಸಂದರ್ಭದಲ್ಲಿ ನಿಲ್ದಾಣಕ್ಕೆ ಒಬ್ಬರಂತೆ ನಿಯೋಜಿಸಲಾಗಿತ್ತು. ಆದರೆ ಇದೀಗ ಎರಡು ನಿಲ್ದಾಣಗಳಿಗೆ ಓರ್ವ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಎರಡೂ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ತೆರಳಿದ ನಂತರ ನಿಲ್ದಾಣದ ಸ್ವಚ್ಛತೆ ಕೇಳ್ಳೋರಿಲ್ಲದಂತಾಗುತ್ತಿದೆ. ಮಳೆಗಾಲದಲ್ಲಿ ಸಾಕಷ್ಟು ರಾಡಿಯಾಗುವುದರಿಂದ ಇಂದಿನ ಕಸ ಮಾರನೇ ದಿನ ಸ್ವಚ್ಛಗೊಳಿಸಲಾಗುತ್ತದೆ. ಹೀಗಾಗಿ ಕೆಲ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಓಡಾಡುವ ನಿಲ್ದಾಣಗಳು ಕಸದ ತೊಟ್ಟಿಯಾಗಿ ಮಾರ್ಪಟ್ಟಿರುತ್ತವೆ. ಇನ್ನೂ ಪ್ಲಾಟ್ಫಾರ್ಮ್ಗಳ ಸ್ವಚ್ಛತೆ ಯಾರದೋ ಎನ್ನುವ ಗೊಂದಲದಿಂದ ತಿಪ್ಪೆಯಾಗಿ ಪರಿಣಮಿಸಿದೆ.
ಆಗುತ್ತಿಲ್ಲ ಕಸ ವಿಲೇವಾರಿ: ನಿಲ್ದಾಣದಲ್ಲಿರುವ ಡಬ್ಬಿಗಳ ಕಸ ಮೂರ್‍ನಾಲ್ಕು ದಿನಗಳಿಗೊಮ್ಮೆ ವಿಲೇವಾರಿಯಾಗುತ್ತಿದೆ. ಈ ಕಸದ ಡಬ್ಬಿಗಳಿಗೆ ಹೊದಿಸುವ ಪ್ಲಾಸ್ಟಿಕ್ ಬ್ಯಾಗ್‌ವೊಂದನ್ನು ಮೂರ್‍ನಾಲ್ಕು ದಿನ ಬಳಕೆ ಮಾಡುವಂತೆ ಗುತ್ತಿಗೆದಾರರು ಸಿಬ್ಬಂದಿಗೆ ಸೂಚಿಸಿದ ಪರಿಣಾಮ ಡಬ್ಬಿ ಕಸ ನಿತ್ಯ ವಿಲೇವಾರಿಯಾಗುತ್ತಿಲ್ಲ. ಎಲೆ ಅಡಕೆ, ಗುಟ್ಕಾ ಉಗುಳಿರುವುದು ಸೇರಿದಂತೆ ಕಸ ಮೂರ್‍ನಾಲ್ಕು ದಿನಗಳಿಗೊಮ್ಮೆ ವಿಲೇವಾರಿಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.