ನಾಳೆ ಮತದಾನ-ಸಕಲ ಸಜ್ಜು: ದೀಪಾ
Team Udayavani, Apr 22, 2019, 10:57 AM IST
ಧಾರವಾಡ: ಧಾರವಾಡ ಲೋಕಸಭಾ ಚುನಾವಣೆಗೆ ಏ.23ರಂದು ಮತದಾನ ನಡೆಯಲಿದ್ದು, ಅದಕ್ಕಾಗಿ ಜಿಲ್ಲೆಯಲ್ಲಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಯಾದ ಡಿಸಿ ದೀಪಾ ಚೋಳನ್ ಹೇಳಿದರು.
ನಗರದಲ್ಲಿ ರವಿವಾರ ಡಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 8,75,479 ಪುರುಷ, 8,49,750 ಮಹಿಳೆಯರು ಮತ್ತು 106 ತೃತೀಯ ಲಿಂಗಿಗಳು ಸೇರಿ ಒಟ್ಟು 17,25,335 ಮತದಾರರಿದ್ದು, 1872 ಮತಗಟ್ಟೆಗಳಿವೆ. ಈ ಮತಗಟ್ಟೆಗಳಲ್ಲಿ 2208 ಕಂಟ್ರೋಲ್ ಯುನಿಟ್, 2820 ವಿವಿಪ್ಯಾಟ್ ಹಾಗೂ 4408 ಮತಯಂತ್ರಗಳನ್ನು ಬಳಸಲಾಗುತ್ತಿದೆ ಎಂದರು.
18-19 ವರ್ಷ ವಯೋಮಾನದ 19549 ಪುರುಷ ಹಾಗೂ 13595 ಮಹಿಳೆಯರು ಸೇರಿ ಒಟ್ಟು 33144 ನವ ಭಾರತೀಯ ಪ್ರಜೆಗಳು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮತದಾನ ಮಾಡಲಿದ್ದಾರೆ. ವಿವಿಧ ಸೇನಾ-ಅರೆಸೇನಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2051 ಪುರುಷ ಮತ್ತು 54 ಮಹಿಳೆಯರು ಸೇರಿ ಒಟ್ಟಾರೆ 2105 ಸೇವಾ ಮತದಾರರು ಇದ್ದಾರೆ. ಚುನಾವಣೆಗೆ ನಿಯೋಜಿಸಲ್ಪಟ್ಟಿರುವ ಎಲ್ಲ 10,109 ಸಿಬ್ಬಂದಿ, 3268 ಸ್ವಯಂ ಸೇವಕರು ಹಾಗೂ 1872 ಮತಗಟ್ಟೆ ಮಟ್ಟದ ಅಧಿಕಾರಿಗಳು, ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಚುನಾವಣೆ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಪೂರ್ಣಗೊಂಡಿವೆ ಎಂದರು.
19 ಅಭ್ಯರ್ಥಿಗಳು ಕಣದಲ್ಲಿ: ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದು, ರಾಷ್ಟ್ರೀಯ ಪಕ್ಷಗಳಿಂದ 3, ನೋಂದಾಯಿತ ಪಕ್ಷಗಳಿಂದ 6, ಪಕ್ಷೇತರ ಅಭ್ಯರ್ಥಿಗಳು-10 ಜನ ಕಣದಲ್ಲಿದ್ದಾರೆ. ಶೇ.18 ರಿಸರ್ವ್ ಒಳಗೊಂಡಂತೆ ಮತದಾನಕ್ಕೆ ಅವಶ್ಯವಿರುವ 4408 ಮತಯಂತ್ರಗಳು, ಶೇ.18 ರಿಸರ್ವ್ ಒಳಗೊಂಡಂತೆ 2208 ಕಂಟ್ರೋಲ್ ಯುನಿಟ್ ಹಾಗೂ ಶೇ.28 ರಿಸರ್ವ್ ಒಳಗೊಂಡಂತೆ 2820 ವಿ.ವಿ.ಪ್ಯಾಟ್ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರಥಮ ಹಂತದ ರ್‍ಯಾಂಡ್‌ಮೈಸೇಷನ್ ಮೂಲಕ ಎಲ್ಲ ವಿಧಾನಸಭಾ ಮತಕ್ಷೇತ್ರಗಳಿಗೆ ಮರು ಹಂಚಿಕೆ ಮಾಡಲಾಗಿರುತ್ತದೆ. ಹೆಚ್ಚುವರಿಯಾಗಿ ಅವಶ್ಯವಿರುವ 2247 ವಿದ್ಯುನ್ಮಾನ ಮತಯಂತ್ರ ಗಳನ್ನು ಮುಖ್ಯ ಚುನಾವಣಾ ಆಯೋಗದಿಂದ ಹಂಚಿಕೆ ಮಾಡಲಾಗಿದೆ ಎಂದರು.
ಶೇ.98 ಸ್ಲಿಪ್ ಹಂಚಿಕೆ: ಧಾರವಾಡ ಲೋಕಸಭಾ ವ್ಯಾಪ್ತಿಗೆ ಬರುವ ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಹೊಸ ಕಟ್ಟಡದಲ್ಲಿ ಮಾದರಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಒಟ್ಟು 17,25,335 ಮತದಾರರಿಗೆ ವೋಟರ್ ಸ್ಲಿಪ್ ಹಂಚಿಕೆ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೇ.98ಹಂಚಿಕೆ ಕಾರ್ಯ ಪೂರ್ಣಗೊಂಡಿರುತ್ತದೆ. ಜಿಲ್ಲೆಯಲ್ಲಿರುವ ಒಟ್ಟು 3,82,700 ಕುಟುಂಬಗಳಿಗೆ, ಪ್ರತಿ ಕುಟುಂಬಕ್ಕೆ ಒಂದರಂತೆ ಮತದಾರರ ಮಾರ್ಗದರ್ಶಿ ಪುಸ್ತಕ ಹಂಚಿಕೆ ಕಾರ್ಯ ಪ್ರಗತಿಯಲ್ಲಿರುತ್ತದೆ. ಹೊಸದಾಗಿ ನೋಂದಾಯಿತರಾದ ಒಟ್ಟು 42,172 ಮತದಾರರಿಗೆ ಗುರುತಿನ ಚೀಟಿ ಹಂಚಿಕೆ ಮಾಡಲಾಗಿರುತ್ತದೆ ಎಂದರು.
ಮಸ್ಟರಿಂಗ್ ಸ್ಥಳದಿಂದ ಎಲ್ಲ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು 363 ಮಾರ್ಗಗಳನ್ನು ಗುರುತಿಸಲಾಗಿದೆ. 167 ಜೀಪು, 180 ಸಾರಿಗೆ ಬಸ್‌ಗಳು, 184 ಖಾಸಗಿ ಮ್ಯಾಕ್ಸಿಕ್ಯಾಬ್‌ಗಳು ಹಾಗೂ 21 ಇತರೆ ವಾಹನಗಳು ಸೇರಿ ಒಟ್ಟು 552 ವಾಹನಗಳನ್ನು ನಿಯೋಜಿಸಲಾಗಿದೆ. ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಮತದಾರರ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಈ ಬೂತ್‌ಗಳಲ್ಲಿ ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಯಾದಿಯೊಂದಿಗೆ ಹಾಜರಿರುತ್ತಾರೆ ಎಂದರು.
ಪೊಲೀಸ್ ಸಿಬ್ಬಂದಿ ನಿಯೋಜನೆ: ಏ.23 ರಂದು ಮತದಾನ ದಿನದಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಒಟ್ಟಾರೆ 3334 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 391 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತಗಟ್ಟೆಗಳ ಪೈಕಿ 208 ಮತಗಟ್ಟೆಗಳಿಗೆ ಮೈಕ್ರೋ ಆಬ್ಸರ್ವರ್ಗಳನ್ನು, 102 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್, 64 ಮತಗಟ್ಟೆಗಳಿಗೆ ಸಿಎಪಿಎಫ್ ಪೊಲೀಸ್ ´ೋರ್ಸ್ ಮತ್ತು 17 ಮತಗಟ್ಟೆಗಳಿಗೆ ವಿಡಿಯೋಗ್ರಾಫಿ ವ್ಯವಸ್ಥೆ ಕಲ್ಪಿಸಿ ನಿಗಾ ವಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಕೃವಿವಿಯಲ್ಲಿ ಭದ್ರತಾ ಕೊಠಡಿ: ಮತದಾನ ನಂತರ ಎಲ್ಲ ಮತಯಂತ್ರಗಳನ್ನು ಕೃಷಿ ವಿವಿಯಲ್ಲಿ ನಿರ್ಮಿಸಲಾಗಿರುವ ಜಿಲ್ಲಾ ಭದ್ರತಾ ಕೊಠಡಿಗೆ ಅಂದೇ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ತಂದು ಭದ್ರತಾ ಕೊಠಡಿಯಲ್ಲಿರಿಸಿ ಭದ್ರಪಡಿಸಲಾಗುವುದು ಎಂದರು.
ರಾಜ್ಯಕ್ಕೆ ದ್ವಿತೀಯ ಸ್ಥಾನ: ಮತದಾರರ ಸಹಾಯವಾಣಿ 1950 ಅಥವಾ 0836-1950ಸಂಖ್ಯೆಗೆ ಒಟ್ಟು 1231 ಕರೆಗಳು ಸ್ವೀಕೃತವಾಗಿವೆ. ಇವುಗಳಲ್ಲಿ ಮತದಾರರ ಯಾದಿಗೆ ಸಂಬಂಧಿಸಿದ 08 ದೂರುಗಳು, ಉಳಿದ 1223 ಕರೆಗಳು ಮತದಾರರ ಯಾದಿ ಹಾಗೂ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದ ಕರೆಗಳು ಸ್ವೀಕೃತವಾಗಿರುತ್ತವೆ. ಸಿವಿಜಿಲ್ ದೂರು ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 218 ದೂರುಗಳು ಸ್ವೀಕೃತವಾಗಿದ್ದು, ಎಲ್ಲಾ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ತುರ್ತು ದೂರು ನಿರ್ವಹಣೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಡಿಸಿ ಡಾ|ಸುರೇಶ ಇಟ್ನಾಳ, ಎನ್‌ಐಸಿ ಜಿಲ್ಲಾ ಅಧಿಕಾರಿ ಮೀನಾಕುಮಾರಿ, ಜಿಲ್ಲಾ ವಿವಿಧ ಸಮಿತಿಗಳ ವರದಿ ನೋಡಲ್ ಅಧಿಕಾರಿ ಕವಿತಾ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.