ಬಿಸರಳ್ಳಿಯಲ್ಲಿ ಟ್ರಾನ್ಸ್‌ಫಾರ್ಮರ್ ಗೋಳು
Team Udayavani, Nov 19, 2019, 11:57 AM IST
ಕಲಘಟಗಿ: ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ತಾಲೂಕಿನಾದ್ಯಂತ ಜರುಗಿರುವ ವಿದ್ಯುತ್ ಸಮಸ್ಯೆಗಳಿಗೆ ಇದುವರೆಗೂ ಮುಕ್ತಿ ದೊರಕಿಲ್ಲ. ಇದರಿಂದ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವುದರ ಜೊತೆಗೆ ಜೀವ ಭಯದಲ್ಲಿ ಬದುಕುವಂತಾಗಿದೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಾಲಿರುವ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳನ್ನು ಇಂದಿಗೂ ಸರಿ ಮಾಡುವಲ್ಲಿ ಹೆಸ್ಕಾಂ ಇಲಾಖೆ ವಿಫಲವಾಗಿದೆ. ತಾಲೂಕಿನ ಬಿಸರಳ್ಳಿ ಗ್ರಾಮದ ರೈತ ಕಲ್ಲಯ್ಯಸ್ವಾಮಿ ಕಂದ್ಲಿ ಎಂಬುವರ ಹೊಲದಲ್ಲಿ ಸುಮಾರು ನಾಲ್ಕು ತಿಂಗಳ ಹಿಂದೆಯೇ ವಿದ್ಯುತ್ ಪರಿವರ್ತಕ ಕಂಬದ ಸಹಿತ ಬಿದ್ದಿರುವುದನ್ನು ಇದುವರೆಗೂ ಸರಿ ಮಾಡಿಲ್ಲ. ಇದರಿಂದಾಗಿ ರೈತ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
ಈ ಪರಿವರ್ತಕ ಹಾಗೂ ಕಂಬದ ಮೂಲಕ ಹಾದು ಹೋಗಿರುವ ಇತರೇ ಲೈನ್ ಗಳು ಸಂಪೂರ್ಣ ನೆಲಕಚ್ಚಿರುವುದರಿಂದ ರೈತ ಬೆಳೆದ ಗೋವಿನಜೋಳ ಬೆಳೆಯೂ ನಾಶವಾಗಿದೆ. ಜಮೀನಿನಲ್ಲಿ ದೈನಂದಿನ ಕೆಲಸಗಳಿಗೆ ತಮ್ಮದೇ ಹೊಲದ ಹತ್ತಿರ ಬರಲೂ ಜೀವದ ಹಂಗು ತೊರೆದು ಬರಬೇಕಾದ ಅನಿವಾರ್ಯತೆ ರೈತನದ್ದಾಗಿದೆ. ಇವರ ಹೊಲಕ್ಕೆ ಕೆಲಸಕ್ಕೆ ಬರಲು ಕೂಲಿ ಕಾರ್ಮಿಕರು ಹಿಂಜರಿಯುತ್ತಿದ್ದಾರೆ.
ಅಪಾಯಕ್ಕೆ ಆಹ್ವಾನ: ಪರಿವರ್ತಕದ ಕಥೆ ಒಂದೆಡೆಯಾದರೆ, ಅಪಾಯಕ್ಕೆ ಆಹ್ವಾನ ನೀಡುವ ವಾಲಿದ ಕಂಬಗಳು ಇನ್ನೊಂದೆಡೆ. ದಿನಂಪ್ರತಿ ಸಾರ್ವಜನಿಕರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಬಿಸರಳ್ಳಿಯಿಂದ ಹಿರೇಹೊನ್ನಿಹಳ್ಳಿ ಮಾರ್ಗವಾಗಿ ಧಾರವಾಡಕ್ಕೆ ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಈ ರಸ್ತೆಯ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳು ಸಂಪೂರ್ಣ ವಾಲಿದ್ದು, ಜೀವ ಬಲಿಗೆ ಕಾಯುವಂತಿವೆ. ಯಾವ ಕ್ಷಣಕ್ಕಾದರೂ ವಿದ್ಯುತ್ ತಂತಿಗಳು ವಾಹನಗಳ ಮೇಲೆ ಹರಿದುಬೀಳುವ ಸನ್ನಿವೇಶವಿದೆ. ಇಲ್ಲಿನ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲಾಗಿದೆ.
ನಿರಂತರ ಬೆಳಗದ ಜ್ಯೋತಿ: ತಾಲೂಕಿನ ಬಹುತೇಕ ಭಾಗಗಳಲ್ಲಿ ನಿರಂತರ ಜ್ಯೋತಿಯ ಕಾಮಗಾರಿಗೆ ಇಲಾಖೆಯವರೇ ಬಳಸಿರುವ ಉಪಕರಣಗಳು ಸಂಪೂರ್ಣ ಕಳಪೆ ಮಟ್ಟದ್ದಾಗಿವೆ. ಇದರಿಂದಾಗಿ ನಿರಂತರವಾಗಿ ಜ್ಯೋತಿ ಬಳಸುವುದನ್ನು ಬಿಟ್ಟು ಕಾರ್ಗತ್ತಲಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಗ್ರಾಮೀಣ ಭಾಗದ ಜನರು ಬೇಸತ್ತು ಹೋಗಿದ್ದಾರೆ.
ನಿರಂತರ ಜ್ಯೋತಿ ಮಾರ್ಗದುದ್ದಕ್ಕೂ ಬಳಸಿರುವ ಇನ್ಸುಲೇಟರ್‌ಗಳು ಹಾಗೂ ಡಿಸ್ಕ್ಗಳು ಕಳಪೆ ಮಟ್ಟದ್ದಾಗಿರುವುದರಿಂದ ವಿದ್ಯುತ್ ಸರಬರಾಜು ಮೇಲಿಂದ ಮೇಲೆ ಸ್ಥಗಿತಗೊಳ್ಳುತ್ತಿದೆ. ಪಾಲಿಮಾರ್ ಇನ್ಸುಲೇಟರ್ ಹಾಗೂ ಪಾಲಿಮಾರ್ ಸ್ಟ್ರೇನ್‌ಗಳನ್ನು ಬಳಸುವುದರಿಂದ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬಹುದೆಂಬುದು ತಾಲೂಕಿನ ಬಹುತೇಕ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ.
ನಿಷ್ಕಾಳಜಿ ಪರಮಾವಧಿ: ಕೆಲವೆಡೆ ಹೊಸದಾದ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು, ಅವೆಲ್ಲವೂ ಅವೈಜ್ಞಾನಿಕವಾಗಿ ನಿರ್ಮಿಸಿ ಸರಬರಾಜು ಮಾಡಲಾಗಿದೆ. ನೂತನ ಕಂಬಗಳ ಮೇಲ್ಮೈ ತುಂಬಾ ನುಣುಪಾಗಿರುವುದರಿಂದ ವಿದ್ಯುತ್ ಸರಬರಾಜು ನಿಲುಗಡೆಗೊಂಡಾಗ ಅದನ್ನು ಸರಿಪಡಿಸಲು ಪವರ್‌ಮನ್ (ಮಾರ್ಗಕರ್ಮಿ)ಗಳು ಕಂಬ ಹತ್ತಲು ಹರಸಾಹಸ ಪಡಬೇಕಾಗಿದೆ. ಜಿಲ್ಲಾ ಹಾಗೂ ಮೇಲ್ಮಟ್ಟದ ಅಧಿಕಾರಿಗಳ ನಿಷ್ಕಾಳಜಿ ಮೇಲಿನ ಎಲ್ಲ ಸಮಸ್ಯೆಗಳಲ್ಲಿ ಜಾಹೀರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸ್ವಲ್ಪ ಈ ಕಡೆಯೂ ಗಮನ ಹರಿಸುವರೇ ಕಾದುನೋಡಬೇಕಿದೆ.
ನಾಲ್ಕು ತಿಂಗಳ ಹಿಂದೆಯೇ ಬಿದ್ದ ಟಿಸಿ ಸರಿ ಮಾಡಾಕ ಲೈನ್ ಮನ್ ಹಿಂದೊಮ್ಮೆ ಬಂದ ನಿಲ್ಸಾಕ್ ನೋಡಿ ಹೋಗ್ಯಾನ್ರಿ. ಮತ್ತ ಇನ್ನೂ ತನಕ ಯಾರೂ ಬಂದೇ ಇಲ್ರಿ. ನಮ್ಮ ಹೊಲದಾಗ ಕೆಲ್ಸಾ ಮಾಡಾಕ ಕೂಲಿಗಳು ಬರಲಿಕ್ಕೂ ಹೆದರಾಕ್ಕತ್ತಾರ್ರೀ.-ಕಲ್ಲಯ್ಯಸ್ವಾಮಿ ಕಂದ್ಲಿ, ಹೊಲದ ಮಾಲೀಕ
-ಪ್ರಭಾಕರ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.