ತಾಲೂಕಾಸ್ಪತ್ರೆಗೆ ಶಾಸಕರ ಅನಿರೀಕ್ಷಿತ ಭೇಟಿ
Team Udayavani, Dec 31, 2019, 11:06 AM IST
ಕಲಘಟಗಿ: ತಾಲೂಕಾಸ್ಪತ್ರೆಗೆ ಶಾಸಕ ಸಿ.ಎಂ. ನಿಂಬಣ್ಣವರ ಸೋಮವಾರ ದಿಢೀರ್ ಭೇಟಿ ನೀಡಿ ಹೊರರೋಗಿಗಳ ದೂರುಗಳನ್ನು ಆಲಿಸಿದರಲ್ಲದೆ, ಸ್ವಚ್ಛತೆ ಹಾಗೂ ವ್ಯವಸ್ಥೆಗಳನ್ನು ಪರಿಶೀಲಿಸಿ ಸಮರ್ಪಕವಾಗಿ ಸೇವೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.
ಗ್ರಾಮೀಣ ಪ್ರದೇಶಗಳಿಂದ ಆರ್ಥಿಕ ದುರ್ಬಲರೇ ದೊಡ್ಡ ಪ್ರಮಾಣದಲ್ಲಿ ಆಸ್ಪತ್ರೆಗೆ ಬರುತ್ತಾರೆ. ಅವರೆಲ್ಲರಿಗೂ ಸಮರ್ಪಕವಾದ ಔಷಧೋಪಚಾರ ಸೇವೆ ಒದಗಿಸಬೇಕೆಂದು ಸೂಚಿಸಿದರು. ರೋಗಿಗಳಿಂದ ಶುಲ್ಕ ಪಡೆಯಲಾಗುತ್ತಿದೆ ಎಂಬ ಆರೋಪ ದಟ್ಟವಾಗಿದೆ.
ಬಡರೋಗಿಗಳಿಂದ ಯಾವುದೇ ಶುಲ್ಕ ವಸೂಲಿ ಮಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಔಷಧ ವಿತರಣಾ ಕೇಂದ್ರವು ಒಂದೇ ಇರುವುದರಿಂದ ರೋಗಿಗಳು ಬಹುಸಮಯವನ್ನು ಅಲ್ಲಿಯೇ ವ್ಯಯಿಸಬೇಕಾಗಿದೆ. ತಕ್ಷಣ ಔಷಧ ವಿತರಣೆಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಎಂ.ಎಸ್. ಚವ್ಹಾಣ ಅವರಿಗೆ ಸೂಚಿಸಿದರು.
ಆಸ್ಪತ್ರೆ ಆವರಣ ಕಸ ಕಡ್ಡಿಗಳಿಂದ ತುಂಬಿದ್ದು, ಪೋಸ್ಟ್ ಮಾರ್ಟಂ ಕೋಣೆಗೆ ಹೋಗುವ ರಸ್ತೆಯಲ್ಲಿಯೂ ಗಿಡಗಳು ಬೆಳೆದಿವೆ. ಅವೆಲ್ಲವನ್ನೂ ತಕ್ಷಣ ಸ್ವತ್ಛಗೊಳಿಸಿ ರೋಗಿಗಳಿಗೆ ಉತ್ತಮ ಪರಿಸರವನ್ನು ಒದಗಿಸುವ ವ್ಯವಸ್ಥೆ ಮಾಡಬೇಕು. ದೈನಂದಿನ ಆಡಳಿತ ವ್ಯವಸ್ಥೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗಬೇಕು. ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಿರಬೇಕು. ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸಲಾಗದಿದ್ದರೆ ರಾಜೀನಾಮೆ ನೀಡಿ ಎಂದು ತಾಕೀತು ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಯಶ್ವಂತ ಮದಿನಕರ ಮಾತನಾಡಿ, ಪ್ರತಿ ತಿಂಗಳಿಗೊಮ್ಮೆ ಅಲ್ಲದೇ ಮಧ್ಯದಲ್ಲಿಯೂ ಅನಿರೀಕ್ಷಿತ ಭೇಟಿ ನೀಡಿ ಎಲ್ಲದರ ಪರಿಶೀಲನೆ ನಡೆಸುವುದಲ್ಲದೇ ರೋಗಿಗಳಿಗೆ ಸಮರ್ಪಕವಾದ ಔಷಧೋಪಚಾರದ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ತಾಲೂಕಿನಾದ್ಯಂತದಿಂದ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಪ್ರತಿನಿತ್ಯ ಸುಮಾರು 700ರಿಂದ 800 ಹೊರ ರೋಗಿಗಳು ಬರುತ್ತಿದ್ದಾರೆ. ಆದರೆ ಆಸ್ಪತ್ರೆಯ ಆವರಣ ಚಿಕ್ಕದಾಗಿದೆ. 100 ಹಾಸಿಗೆಯ ಆಸ್ಪತ್ರೆ ಕಾಮಗಾರಿ ಪೂರ್ತಿಗೊಳ್ಳುತ್ತಿದ್ದಂತೆಯೇ ಅಲ್ಲಿ ಇದಕ್ಕೂ ಉತ್ತಮ ಸೇವೆ ಒದಗಿಸಲಾಗುವುದು. ಸಿಎಂಒ ಸೇರಿದಂತೆ ಕೇವಲ 8 ಜನ ವೈದ್ಯರಿದ್ದು, ಅವರಲ್ಲಿ ಒಬ್ಬರು ರಾತ್ರಿ ಸಮಯದಲ್ಲಿ ಸೇವೆ ಸಲ್ಲಿಸಬೇಕಾಗಿದೆ. ಮಾರನೇ ದಿನ ಅವರಿಗೆ ರಜೆ ಇರುತ್ತದೆ. ಕೇವಲ 5 ರಿಂದ 6 ವೈದ್ಯರು ಪ್ರತಿನಿತ್ಯ ಸುಮಾರು 150 ರೋಗಿಗಳ ಪರೀಕ್ಷೆ ಮಾಡುತ್ತಾರೆ.
ಡಿ ದರ್ಜೆ ನೌಕರರು 32ರಲ್ಲಿ ಕೇವಲ 12 ಜನರಿಂದಲೇ ಕಾರ್ಯ ನಿರ್ವಹಿಸಲಾಗುತ್ತಿದೆ. ಹೀಗಿದ್ದಾಗ್ಯೂ ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಿ ಉತ್ತಮ ಸೇವೆ ನೀಡುವುದಾಗಿ ಶಾಸಕರಿಗೆ ಭರವಸೆ ನೀಡಿದರು. ಶಾಸಕರ ಆಪ್ತ ಸಹಾಯಕ ಮಾರುತಿ
ಹಂಚಿನಮನಿ, ತಾಪಂ ಸದಸ್ಯ ಈರಯ್ಯ ಸಿದ್ದಾಪ;ಉರಮಠ, ಪರಶುರಾಮ ರಜಪೂತ, ಮಾಂತೇಶ ತಹಸೀಲ್ದಾರ, ಡಾ| ಬಸವರಾಜ ಬಾಸೂರ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.