ಕುಳಿತಲ್ಲೇ ರಸ್ತೆ ಗುಂಡಿ ಲೆಕ್ಕಾಚಾರ?
Team Udayavani, Aug 29, 2018, 4:07 PM IST
ಹುಬ್ಬಳ್ಳಿ: ಅವಳಿ ನಗರದ ರಸ್ತೆ ಗುಂಡಿಗಳ ಸಮೀಕ್ಷಾ ವರದಿಯನ್ನು ಕಚೇರಿಯಲ್ಲಿಯೇ ಕುಳಿತು ಸಿದ್ಧಪಡಿಸಲಾಗಿದೆಯಾ? ಮಹಾನಗರದ ರಸ್ತೆಗಳಲ್ಲಿರುವುದು ಕೇವಲ 9839 ಗುಂಡಿಗಳಾ? ಪಾಲಿಕೆ 3 ವಿಭಾಗಗಳ ಪೈಕಿ ಒಂದು ವಿಭಾಗದಲ್ಲಿ ಮಾತ್ರ ಗುಂಡಿಗಳ ಸಂಖ್ಯೆ ಹೆಚ್ಚುವರಿಯಾಯ್ತಾ? ಗುಂಡಿಗಳ ಸಂಖ್ಯೆ ಸಾವಿರದಷ್ಟು ಹೆಚ್ಚಿದರೂ ಗುಂಡಿಬಿದ್ದ ಪ್ರದೇಶದ ವಿಸ್ತೀರ್ಣ-ದುರಸ್ತಿಗೆ ಬೇಕಾದ ಅನುದಾನದಲ್ಲಿ ಹೆಚ್ಚಳ ಯಾಕಾಗಲಿಲ್ಲ? ಪಾಲಿಕೆ ವ್ಯಾಪ್ತಿಯ ಮೂರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಸಮೀಕ್ಷಾ ವರದಿಗಳು ಇಂತಹ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆ. 16ರಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ಮೊದಲನೇ ವರದಿಯಲ್ಲಿ 8842 ಗುಂಡಿಗಳಿದ್ದವು. ಆ. 24ರಂದು ಸಲ್ಲಿಸಿದ ಎರಡನೇ ವರದಿ ಪ್ರಕಾರ ಮಹಾನಗರದಲ್ಲಿ 9839 ಗುಂಡಿಗಳಿವೆ. 8 ದಿನಗಳಲ್ಲಿ ಹೊಸದಾಗಿ ಪತ್ತೆಯಾಗಿದ್ದು ಕೇವಲ 997 ಗುಂಡಿಗಳು ಮಾತ್ರ. ಹೀಗಾಗಿ ಈ ಸಮೀಕ್ಷಾ ವರದಿ ಕಚೇರಿಯಲ್ಲಿ ಅಧಿಕಾರಿಗಳು ಹೊಂದಿಸಿರುವ ಅಂಕಿ-ಅಂಶಗಳ ಲೆಕ್ಕಾಚಾರ ಎಂಬುವುದು ಸಾರ್ವಜನಿಕರ ವಾದವಾಗಿದೆ.
ಮರು ಸಮೀಕ್ಷೆಗೆ ಸೂಚಿಸಿದ್ದ ಡಿಸಿ: ಗುಂಡಿಗಳ ಕುರಿತು ಜನರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ರಸ್ತೆ ಗುಂಡಿಗಳ ಅಂಕಿ-ಅಂಶ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆ. 16ರಂದು ಪಾಲಿಕೆ ಅಧೀಕ್ಷಕ ಅಭಿಯಂತರು ವರದಿ ಸಲ್ಲಿಸಿದರು. ಆ ವರದಿಯಂತೆ ಮಹಾನಗರದ ರಸ್ತೆಗಳಲ್ಲಿ 8842 ಗುಂಡಿಗಳಿತ್ತು. ಇದು ಸಮೀಕ್ಷೆ ನಡೆಸಿ ತಯಾರಿಸಿದ ವರದಿ ಅಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಯಿತು. ಅಲ್ಲದೆ ಇದು ಹಳೆಯ ಸಮೀಕ್ಷೆ ವರದಿ ಎನ್ನುವ ಕಾರಣಕ್ಕೆ ಜಿಲ್ಲಾಧಿಕಾರಿ ದೀಪಾ, ಹೊಸದಾಗಿ ಸಮೀಕ್ಷೆ ನಡೆಸಿ ವಿಸ್ತೃತ ವರದಿ ನೀಡುವಂತೆ ಆದೇಶಿಸಿದ್ದರು.
ವಿಪರ್ಯಾಸವೆಂದರೆ ಎರಡನೇ ವರದಿಯಲ್ಲಿ ಅಂತಹ ದೊಡ್ಡ ವ್ಯತ್ಯಾಸವೇನಿಲ್ಲ. ಮೊದಲನೇ ವರದಿಯನ್ನೇ ಯಥಾವತ್ತಾಗಿ ಭಟ್ಟಿ ಇಳಿಸಿದಂತಿದೆ. ಅವಳಿ ನಗರದ ಮೂರು ವಲಯಗಳ ಪೈಕಿ ಹುಬ್ಬಳ್ಳಿ ಉತ್ತರ ವಿಭಾಗದಲ್ಲಿ ಮಾತ್ರ 997 ಗುಂಡಿಗಳು ಹೆಚ್ಚುವರಿಯಾಗಿವೆ ಎಂದು ನಮೂದಿಸಿ, ದುರಸ್ತಿಗೊಳಿಸಿದ ವಿಸ್ತೀರ್ಣವನ್ನು ಸೇರ್ಪಡೆಗೊಳಿಸಿ ಕೈತೊಳೆದುಕೊಂಡಂತಿದೆ ವರದಿ.
ಹೊಸ ವರದಿಯ ನ್ಯೂನತೆಗಳೇನು?
ಆ. 24ರಂದು ಸಲ್ಲಿಸಿದ ಎರಡನೇ ವರದಿ ಪ್ರಕಾರ ಧಾರವಾಡ ಹಾಗೂ ಹುಬ್ಬಳ್ಳಿ ದಕ್ಷಿಣ ವಿಭಾಗದಲ್ಲಿ ಒಂದೇ ಒಂದು ಗುಂಡಿಗಳು ನಿರ್ಮಾಣವಾಗಿಲ್ಲ! ಉತ್ತರ ವಿಭಾಗದಲ್ಲಿ ಮಾತ್ರ ಹೆಚ್ಚುವರಿ 997 ಗುಂಡಿಗಳು ಪತ್ತೆಯಾಗಿವೆ. ವಿಚಿತ್ರ ಅಂದರೆ ಇಷ್ಟೊಂದು ಗುಂಡಿಗಳು ಹೆಚ್ಚುವರಿ ಪತ್ತೆಯಾಗಿದ್ದರೂ ಚಮೀ ವಿಸ್ತೀರ್ಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ರಸ್ತೆ ದುರಸ್ತಿಗೆ ಬೇಕಾಗಿರುವ ಅನುದಾನದಲ್ಲೂ ಯಾವುದೇ ಬದಲಾವಣೆಯಿಲ್ಲ. ಹಿಂದಿನ ವರದಿಯಲ್ಲಿರುವಂತೆ ಈ ವರದಿಯಲ್ಲೂ ಒಟ್ಟಾರೆ ಮಹಾನಗರದಲ್ಲಿ 84,317 ಚಮೀ ವಿಸ್ತೀರ್ಣದ ರಸ್ತೆ ಹಾಳಾಗಿವೆ. ಇದಕ್ಕೆ 4.36 ಕೋಟಿ ಅನುದಾನ ಅಗತ್ಯವಾಗಿದೆ ಎನ್ನುವುದು ಹಳೆಯ ವರದಿಯ ನಕಲಿದ್ದಂತಿದೆ.
2ನೇ ವರದಿಯೂ ಅನುಮಾನಕ್ಕೆಡೆ
ಎರಡು ವರದಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಗಳೇನಿಲ್ಲ. ಉತ್ತರ ವಿಭಾಗದ 4 ಮತ್ತು 5ನೇ ವಲಯ ಕಚೇರಿಯಲ್ಲಿ ವ್ಯಾಪ್ತಿಯಲ್ಲಿ ಮಾತ್ರ ಹೊಸದಾಗಿ 997 ಗುಂಡಿಗಳು ಪ್ರಮಾಣ ಹೆಚ್ಚಾಗಿದೆ. ಉಳಿದ 10 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಒಂದೇ ಒಂದು ಗುಂಡಿ ಹೆಚ್ಚಾಗಿಲ್ಲ. ಗುತ್ತಿಗೆ ನೀಡಿದ ನಂತರದಲ್ಲಿ ಒಟ್ಟು 84,317 ಚಮೀ ವಿಸ್ತೀರ್ಣದಲ್ಲಿ 22,171 ಚಮೀ ವಿಸ್ತೀರ್ಣದ ರಸ್ತೆಗಳ ದುರಸ್ತಿ ಕಾರ್ಯವಾಗಿದೆ. 4,5,7,8,9,10 ಹಾಗೂ 11ನೇ ವಲಯದ ಕಾಮಗಾರಿ ಪ್ರಗತಿಯಲ್ಲಿದೆ ಎಂಬುವುದು ಮಾತ್ರ ಹೊಸ ಅಂಶವಾಗಿದೆ. ಎರಡನೇ ವರದಿಯನ್ನು ಕೂಡ ಅನುಮಾನದಿಂದ ನೋಡುವಂತಾಗಿದೆ.
ಮಳೆಯಿಂದ ಗುಂಡಿಗಳೇ ಆಗಿಲ್ವೆ?
ಎರಡ್ಮೂರು ತಿಂಗಳ ಹಿಂದೆ ಗುಂಡಿ ಮುಚ್ಚುವುದಕ್ಕಾಗಿ ಗುತ್ತಿಗೆ ನೀಡಲು ಸಮೀಕ್ಷೆ ಮಾಡಿಸಲಾಗಿದೆ ಎನ್ನುವುದು ಮಹಾಪೌರ ಸುಧೀರ ಸರಾಫ್ ಅವರ ಹೇಳಿಕೆ. ಆದರೆ ಮೂರು ತಿಂಗಳ ಈಚೆಗೆ ಮಹಾನಗರದಲ್ಲಿ ಮಳೆಯಾಗಿದ್ದು, ಗುಂಡಿಗಳು ನಿರ್ಮಾಣವಾಗಲಿಲ್ಲವೇ ಎಂಬ ಪ್ರಶ್ನೆ ಸಾಮಾನ್ಯ. ಕೆಲ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿಲ್ಲ ಎಂದು ಪಾಲಿಕೆ ಮೂಲಗಳೇ ಸ್ಪಷ್ಟಪಡಿಸಿವೆ. ಇತ್ತೀಚೆಗೆ ಪಾಲಿಕೆ ಆವರಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಅವಳಿ ನಗರದಲ್ಲಿ 31 ಸಾವಿರ ಗುಂಡಿಗಳು ಇರಬಹುದು ಎಂದು ಅಂದಾಜು ವ್ಯಕ್ತಪಡಿಸಿದ್ದರು. ಹೀಗಾಗಿ ಪಾಲಿಕೆ ಅಭಿಯಂತರ ವರದಿಯ ಖಾತರಿ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ.
ಮೊದಲು ಸಲ್ಲಿಸಿದ ವರದಿ ಹಿಂದಿನ ಅಂಕಿ-ಅಂಶಗಳು ಎನ್ನುವ ಕಾರಣಕ್ಕೆ ಸಮೀಕ್ಷೆ ನಡೆಸಿ ವಿಸ್ತೃತವಾಗಿ ಇನ್ನೊಂದು ವರದಿ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರಂತೆ ಎರಡನೇ ವರದಿ ನೀಡಿದ್ದಾರೆ. ಇನ್ನೂ ಈ ವರದಿಯನ್ನು ನೋಡಿಲ್ಲ.
ದೀಪಾ ಚೋಳನ್, ಜಿಲ್ಲಾಧಿಕಾರಿ
ನಮ್ಮ ಮಹಾನಗರ ಇರುವುದೇ ಗುಂಡಿಯಲ್ಲಿ. ಪ್ರತಿ ವರ್ಷ ಗುಂಡಿಗಳನ್ನು ಮುಚ್ಚುವುದೇ ಪಾಲಿಕೆಯ ದೊಡ್ಡ ಕಾರ್ಯ. ಪಾಲಿಕೆಯಿಂದ ಸಮೀಕ್ಷೆ ಮಾಡಿದ್ದನ್ನು ನಾನಂತೂ ಕಂಡಿಲ್ಲ. ಈ ವರದಿಯಲ್ಲಿ ತೋರಿಸಿರುವುದಕ್ಕಿಂತ ಗುಂಡಿಗಳು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿವೆ. ಎರಡು ವರದಿಗಳ ಅಂಕಿ-ಅಂಶಗಳನ್ನು ನೋಡಿದರೆ ಇದೊಂದು ಬೋಗಸ್ ವರದಿಯಾಗಿದ್ದು, ಅಧಿಕಾರಿಗಳೇ ಸೇರಿಕೊಂಡು ತಯಾರಿಸಿರುವ ವರದಿ ಎನ್ನುವುದರಲ್ಲಿ ಅನುಮಾನವಿಲ್ಲ.
ಡಾ| ಎಂ.ಸಿ. ಸಿಂಧೂರ, ವೈದ್ಯ
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.