ಕೋವಿಡ್ ತಡೆ ನಿಯಮ ಕೈಬಿಟ್ಟ ಹಳ್ಳಿಗರು
ಶೇ.90 ಹಳ್ಳಿಗರು ಧರಿಸುತ್ತಿಲ್ಲ ಮಾಸ್ಕ್
Team Udayavani, May 18, 2020, 10:12 AM IST
ಧಾರವಾಡ: ಬಿರು ಬಿಸಿಲಿನ ಧಗೆಗೆ ಅರಳಿಕಟ್ಟೆಯ ನೆರಳಿಗೆ ಒಟ್ಟಿಗೆ ಮಲಗುವ ನೂರಾರು ಜನ.., ಎಲ್ಲೆಂದರಲ್ಲಿ ಎಲೆ, ಅಡಿಕೆ, ತಂಬಾಕು ತಿಂದು ಉಗುಳುತ್ತಿರುವ ಚಟಗಾರರು, ಕಳ್ಳಭಟ್ಟಿ ಸೇವನೆ, ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜನೆ, ಕರ್ತವ್ಯ ಮರೆತ ಗ್ರಾಮ ಪಂಚಾಯಿತಿಗಳು.., ಒಟ್ಟಿನಲ್ಲಿ ಹಳ್ಳಿಗಳಲ್ಲೀಗ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಸುದ್ದಿಯೇ ಇಲ್ಲ, ಸುರಕ್ಷತಾ ನಿಯಮ ಪಾಲನೆಯೂ ಕಂಡುಬರುತ್ತಿಲ್ಲ.
ಹೌದು.., ಕೇವಲ 15 ದಿನಗಳ ಹಿಂದಷ್ಟೇ ತಮ್ಮ ಗ್ರಾಮಗಳಲ್ಲಿ ಸ್ವಯಂ ಬೇಲಿ ಹಾಕಿಕೊಂಡು, ಹೊರಗಿನಿಂದ ಬಂದವರ ಮೇಲೆ ಸ್ವಯಂಸ್ಫೂರ್ತಿಯಿಂದ ನಿಗಾ ವಹಿಸಿ, ಕೋವಿಡ್ ಮಹಾಮಾರಿ ವಿರುದ್ಧ ಜಿಲ್ಲೆಯ ಹಳ್ಳಿಗರು ತೊಡೆ ತಟ್ಟಿದ್ದರು. ಆದರೆ ಇದೀಗ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ಹಳ್ಳಿಗಳು ಏಕಾಏಕಿ ಸಹಜ ಸ್ಥಿತಿಗೆ ಮರಳಿವೆ. ಗ್ರಾಮಸ್ಥರ ಈ ನಡವಳಿಕೆ ಭವಿಷ್ಯದಲ್ಲಿ ಕೋವಿಡ್ ಮಹಾಮಾರಿ ಅಟ್ಟಹಾಸಕ್ಕೆ ವೇದಿಕೆಯಾಗುವ ಆತಂಕ ಕಾಡುತ್ತಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು, ಹೊರಗಿನಿಂದ ಬಂದ ವ್ಯಕ್ತಿಗಳ ಮೇಲೆ ನಿಗಾ ಇಡುವುದು, ಹೊರಗಡೆಯಿಂದ ತಂದ ಸಾಮಾನುಗಳನ್ನು ಸಂಸ್ಕರಿಸಿ ಬಳಸುವುದು, ಇತ್ಯಾದಿ ವಿಚಾರಗಳಿಂದ ಇದ್ದಕ್ಕಿದ್ದಂತೆ ಹಳ್ಳಿಗರು ದೂರ ಸರಿದಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಕೋವಿಡ್ ಪ್ರಕರಣ ಹಳ್ಳಿಗೆ ಅಂಟಿಕೊಂಡಿಲ್ಲ. ಎಲ್ಲವೂ ನಗರ ಪ್ರದೇಶಗಳದ್ದೇ ಆಗಿವೆ. ಈವರೆಗೂ ಲಾಕ್‌ಡೌನ್ ಇದ್ದಿದ್ದರಿಂದ ಮತ್ತು ಹಳ್ಳಿಗರು ಕೋವಿಡ್ ಗೆ ಹೆದರಿ ಮುನ್ನೆಚ್ಚರಿಕೆ ವಹಿಸಿ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡಿದ್ದರು. ಆದರೆ ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ ಓಡಾಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಭೀಕರ ಪರಿಣಾಮ ಎದುರಿಸುವುದಕ್ಕೆ ಕಾರಣವಾಗುವ ಆತಂಕ ಎದುರಾಗಿದೆ.
ಉಗುಳುವುದು ನಿಲ್ಲುತ್ತಿಲ್ಲ: ಕೋವಿಡ್ ಸೋಂಕು ಹರಡುವುದಕ್ಕೆ ಎಲೆ-ಅಡಿಕೆ ತಿಂದು ಉಗಿಯುವುದು ಪ್ರಮುಖ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಈಗಲೂ ಅರಳಿಕಟ್ಟೆ, ದೇವಸ್ಥಾನ, ಬಸ್ ನಿಲ್ದಾಣ ಸೇರಿದಂತೆ ಎಲ್ಲೆಂದರಲ್ಲಿ ಎಲೆ ಅಡಿಕೆ ತಿಂದು ಉಗುಳುತ್ತಿರುವುದು ಕಂಡುಬರುತ್ತಿದೆ. ಇದನ್ನು ತಡೆಯುವುದು ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಗ್ರಾಪಂಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತೆರೆಮರೆಯಲ್ಲಿ ಅಲ್ಲಲ್ಲಿ ಮದುವೆ, ಉಪನಯನ, ಸೀಮಂತ, ಜನ್ಮದಿನದಂತ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ನಿಧಾನವಾಗಿ ಆರಂಭವಾಗಿವೆ. ಇಷ್ಟೇಯಲ್ಲ, ಕಳೆದ ಒಂದು ವಾರದಿಂದ ಆರಂಭವಾಗಿರುವ ಚಹಾ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಅಸಾಧ್ಯವಾಗಿದೆ.
ಕೃಷಿಗೆ ಕೊಟ್ಟ ಸಲುಗೆ ಮಾರಕ: ಕೃಷಿ ಚಟುವಟಿಕೆ ಮತ್ತು ಬಡ ರೈತರಿಗೆ ಕೊರೊನಾ ಲಾಕ್‌ಡೌನ್‌ನಿಂದ ತೊಂದರೆ ಎದುರಾಗದಂತೆ ನೋಡಿಕೊಳ್ಳಲು ಸರ್ಕಾರ ಹಳ್ಳಿಗರಿಗೆ ಕೆಲವಷ್ಟು ವಿಶೇಷ ಸವಲತ್ತು ನೀಡಿದೆ. ಆದರೆ ಅವುಗಳ ದುರುಪಯೋಗ ಆಗುತ್ತಿದೆ ಎನ್ನಿಸುತ್ತಿದೆ. ಹಳ್ಳಿಗರು ಮಾಸ್ಕ್ ಧರಿಸುವುದನ್ನೇ ಬಿಟ್ಟಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. 10 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಜಿಲ್ಲೆಯ 22ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ನೀಡಿ ಜಾಗೃತಿ ಅಭಿಯಾನ ಕೈಗೊಂಡಿತ್ತು. ಆದರೆ ಹಳ್ಳಿಗರು ಇದೀಗ ಅದೆಲ್ಲವನ್ನು ಮರೆತಿದ್ದಾರೆ.
ಗ್ರಾಪಂಗಳ ನಿರ್ಲಕ್ಷ್ಯ: ಜಿಲ್ಲೆಯಲ್ಲಿ 340ಕ್ಕೂ ಅಧಿಕ ಗ್ರಾಪಂಗಳಿದ್ದು, 2015ರಲ್ಲಿ ಆಯ್ಕೆಯಾದ ಸದಸ್ಯರ ಅವಧಿ ಮುಗಿಯುತ್ತ ಬಂದಿದೆ. ಅವರು ಕೂಡ ಹಳ್ಳಿಗರಿಗೆ ನಿಷ್ಠುರವಾಗಿ ನಿಯಮ ಪಾಲನೆಗೆ ಸೂಚನೆ ನೀಡುವುದನ್ನೇ ನಿಲ್ಲಿಸಿದ್ದಾರೆ. ಯಾರು-ಯಾರಿಗೆ ಯಾಕೆ ಕೆಟ್ಟಾಗಬೇಕು? ಎನ್ನುವ ಪ್ರಶ್ನೆ ಮಾಡಿಕೊಂಡು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿನ ಪುಂಡಪೋಕರಿಗಳ ಹಿಂಡು ಎಲ್ಲೆಂದರಲ್ಲಿ ಮೊದಲಿನಂತೆ ಓಡಾಡಿಕೊಂಡು ನಿಯಮಗಳನ್ನು ಗಾಳಿಗೆ ತೂರುತ್ತಿದೆ.
ಕೆಲವು ಗ್ರಾಪಂಗಳು ಸ್ವಯಂಪ್ರೇರಣೆಯಿಂದ ಜನರಲ್ಲಿ ಜಾಗೃತಿ ಮೂಡಿಸಿ, ಅಭಿಯಾನ ಮಾಡಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡುವಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದವು. ಇದಕ್ಕೆ ಆರಂಭದಲ್ಲಿ ಗ್ರಾಮೀಣರು ಉತ್ತಮವಾಗಿ ಸ್ಪಂದಿಸಿದ್ದರು. ಆದರೀಗ ಪೂರ್ಣ ಪ್ರಮಾಣದಲ್ಲಿ ಎಲ್ಲವನ್ನು ಮರೆತಿದ್ದಾರೆ.
ಹಳ್ಳಿಗೆ ಹಳ್ಳಿಯೇ ಸೀಲ್‌ಡೌನ್ ಆದೀತು! ಈವರೆಗೂ ಜಿಲ್ಲೆಯ ಹಳ್ಳಿಗರು ಸುರಕ್ಷಿತವಾಗಿದ್ದಿದ್ದು ನಿಜ. ಆದರೆ ಮಾವು ಮಾರಾಟ ಮಾಡಿದ ವ್ಯಕ್ತಿಯೊಬ್ಬ ಇದೀಗ ಹಳ್ಳಿಗಳ ಜೊತೆಗೆ ನೇರ ಸಂಪರ್ಕ ಹೊಂದಿದ್ದು, ಆತನಲ್ಲಿ ಕೋವಿಡ್-19 ಪತ್ತೆಯಾಗಿದೆ. ಅಲ್ಲದೇ ಪ್ರತಿದಿನಹಳ್ಳಿಗರು ಹುಬ್ಬಳ್ಳಿ-ಧಾರವಾಡಕ್ಕೆ ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡಲು ಮತ್ತು ಇತರೆ ಸಂತೆ- ವಹಿವಾಟಿಗಾಗಿ ಬರುತ್ತಿರುತ್ತಾರೆ. ಈ ವೇಳೆ ಅವರು ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ನಗರದಲ್ಲಿ ವಾರ್ಡ್‌ಗಳ ಸೀಲ್‌ಡೌನ್ ಆದಂತೆಯೇ ಹಳ್ಳಿಗೆ ಹಳ್ಳಿಗಳೂ ಸೀಲ್‌ಡೌನ್ ಆಗುವ ದಿನಗಳು ದೂರವಿಲ್ಲ ಎನ್ನುತ್ತದೆ ಜಿಲ್ಲಾಡಳಿತ.
ಜಿಲ್ಲೆಯಲ್ಲಿ ಕೋವಿಡ್ ತಡೆಗೆ ಈಗಲೂ ಅಭಿಯಾನ ಜಾರಿಯಲ್ಲಿದೆ. ಹಳ್ಳಿಗರು ಕೋವಿಡ್ ತಡೆ ಸುರಕ್ಷತಾ ನಿಯಮಗಳ ಪಾಲನೆ ಕೈ ಬಿಡಬಾರದು. ಮುಂದಿನ ದಿನಗಳಲ್ಲಿ ಇದರಿಂದ ತೊಂದರೆಯಾಗುತ್ತದೆ. ಹಳ್ಳಿಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಮತ್ತೂಮ್ಮೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. – ದೀಪಾ ಚೋಳನ್, ಜಿಲ್ಲಾಧಿಕಾರಿ
ಲಾಕ್‌ಡೌನ್ ಸಡಿಲಿಕೆ ದುರುಪಯೋಗ ಆಗದಂತೆ ಹಳ್ಳಿಗರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಮುಂದೆ ಕಷ್ಟ ಅನುಭವಿಸಬೇಕಾಗುತ್ತದೆ. ಕೋವಿಡ್ ಸುರಕ್ಷತಾ ಕ್ರಮಗಳಿಂದ ದೂರ ಸರಿಯಬಾರದು. ಈ ಕುರಿತು ಕಟ್ಟೆಚ್ಚರ ವಹಿಸಲು ಗ್ರಾಪಂಗಳಿಗೆ ಸೂಚಿಸಿದ್ದೇನೆ. – ಡಾ| ಬಿ.ಸಿ. ಸತೀಶ, ಜಿಪಂ ಸಿಇಒ
-ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.