ಸೆಂಟ್ರಲ್ನಲ್ಲಿ ಸೈ ಎನಿಸಿಕೊಳ್ಳುವವರಾರು?
Team Udayavani, Apr 30, 2019, 11:19 AM IST
ಹುಬ್ಬಳ್ಳಿ: ಸುಶಿಕ್ಷಿತರ ಕ್ಷೇತ್ರಗಳಲ್ಲೊಂದು ಎಂದೇ ಪರಿಗಣಿಸಲ್ಪಟ್ಟಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಗೆಲುವಿನ ಕುರಿತು ಚರ್ಚೆ ಭರ್ಜರಿಯಾಗಿಯೇ ನಡೆಯುತ್ತಿದೆ.
ಮತದಾನ ಪೂರ್ಣಗೊಂಡಿದ್ದು, ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಲೆಕ್ಕಾಚಾರ ಶುರುವಾಗಿದೆ.
ಕಳೆದ 5 ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವುದಲ್ಲದೇ ಕಳೆದ 3 ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವಿನಲ್ಲಿ ಕ್ಷೇತ್ರದ ಮತದಾರರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
ಸುಶಿಕ್ಷಿತರ ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯಗಳು, ಪ್ರಣಾಳಿಕೆ ವಿಷಯಗಳು ಗೌಣವಾಗಿ ಲಿಂಗಾಯತ-ವೀರಶೈವ ವಿಷಯಾಧಾರಿತ ಚುನಾವಣೆ ಎಂಬ ವಾತಾವರಣ ಉಂಟಾಗಿದ್ದು ಸುಳ್ಳಲ್ಲ.
ಲಿಂಗಾಯತ ಟ್ರಂಪ್ ಕಾರ್ಡ್ ಪ್ರದರ್ಶನ ದಿಂದ ಕ್ಷೇತ್ರದಲ್ಲಿ ಬಿಜೆಪಿ ತನ್ನ ಚುನಾವಣಾ ರಣತಂತ್ರವನ್ನೇ ಬದಲಿಸಿಕೊಳ್ಳುವುದು ಅನಿವಾರ್ಯವಾಯಿತು. ಲಿಂಗಾಯತ ಬಲೆಯಲ್ಲಿ ಮೋದಿ ಅಲೆ ಸಿಕ್ಕಿ ಗಿರಗಿಟ್ಲೆ ಹಾಕಿತು. ಲಿಂಗಾಯತ ಬಿಜೆಪಿ ಮುಖಂಡರು, ಶಾಸಕರು ಬಿಜೆಪಿಗೆ ಜೈ ಜೈ ಎನ್ನುತ್ತ ಕ್ಷೇತ್ರಾದ್ಯಂತ ಓಡಾಡಬೇಕಾಯಿತು. ಲಿಂಗಾಯತರು ಬಿಜೆಪಿಯಿಂದ ಮುನಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಬಿಜೆಪಿ ಕಾರ್ಯಕರ್ತರು ಮಾತ್ರ ಕ್ಷೇತ್ರಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಲಿಂಗಾಯತ ಅನ್ಯೋನತೆ ಕುರಿತು ಸಂದೇಶಗಳನ್ನು ವೈರಲ್ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಚುನಾವಣೆ ಮುಗಿಯುವವರೆಗೂ ಲಿಂಗಾಯತ ಜಾತಿಯ ಸುತ್ತ ಮಾತ್ರ ಸುತ್ತುವಂತಾಯಿತು. ಇದು ಯಾವ ರೀತಿ ವರ್ಕೌಟ್ ಆಗುತ್ತದೋ ನೋಡಬೇಕು.
ಒಂದೆಡೆ ಜಾತಿ ಲೆಕ್ಕಾಚಾರದನ್ವಯ ಮತಗಳನ್ನು ಪಡೆದು ತಮ್ಮ ಅಭ್ಯರ್ಥಿ ಜಯಭೇರಿ ಬಾರಿಸುವುದು ಖಚಿತ ಎಂದು ಚುನಾವಣೆಗೆ ಮುಂಚೆ ಬಡಾಯಿ ಕೊಚ್ಚಿಕೊಂಡವರು ಈಗ ತಣ್ಣಗಾಗಿದ್ದಾರೆ. ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿ ಮಧ್ಯೆ ತುರುಸಿನ ಸ್ಪರ್ಧೆಯಿದೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಜಾತಿ ರಾಜಕಾರಣ ನಡೆಯಲ್ಲ ಎಂದು ಹೇಳುತ್ತಿದ್ದವರು ಕೂಡ ಈಗ ವರಸೆ ಬದಲಿಸಿ ಗೆಲುವಿನ ಅಂತರ ಕಡಿಮೆಯಾಗಲಿದೆ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಮತದಾನ ಪ್ರಮಾಣ ಹೆಚ್ಚಾಗಿದೆ ಆದರೆ ಅಲ್ಪಸಂಖ್ಯಾತರ ಮತದಾರರು ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಮಾಡದಿರುವುದು ಕಾಂಗ್ರೆಸ್‌ಗೆ ಆತಂಕ ಮೂಡಿಸಿದ್ದು ಸುಳ್ಳಲ್ಲ.
ಗ್ರಾಮೀಣ ಭಾಗದ ಮತಗಳ ಚಿಂತೆ ನನಗಿಲ್ಲ. ಹುಬ್ಬಳ್ಳಿ ನಗರದ ಮತದಾರರು ನನ್ನ ಕೈಹಿಡಿದರೆ ಜಯ ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದ್ದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೆಚ್ಚು ಒತ್ತು ನೀಡದ ವಿನಯ ಕುಲಕರ್ಣಿ ಕಾಂಗ್ರೆಸ್ ತೆಕ್ಕೆಯಲ್ಲಿರುವ ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ ಸಭೆಗಳನ್ನು ಮಾಡಿದ್ದರು.
ಲಿಂಗಾಯತ ಜಾತಿಯ ಟ್ರಂಪ್ ಕಾರ್ಡ್ ಎಲ್ಲಿ ಕಾಂಗ್ರೆಸ್‌ಗೆ ವರವಾಗುವುದೋ ಎಂಬ ಭೀತಿಯಿಂದ ಚುನಾವಣಾ ರಣತಂತ್ರ ರೂಪಿಸುವಲ್ಲಿ ಮೇಧಾವಿಯಾಗಿರುವ ಜಗದೀಶ ಶೆಟ್ಟರ ಅವರನ್ನು ಬಳ್ಳಾರಿಯಿಂದ ಕರೆಸಿಕೊಳ್ಳಲಾಯಿತು. ಮಾಜಿ ಮುಖ್ಯಮಂತ್ರಿಯೂ ಆಗಿರುವ ಶೆಟ್ಟರು ಚುನಾವಣೆ ಮುಗಿಯುವವರೆಗೆ ಕ್ಷೇತ್ರಾದ್ಯಂತ ಸಂಚರಿಸಿದರು. ಸಭೆಗಳಲ್ಲಿ ಪಾಲ್ಗೊಂಡರು. ಲಿಂಗಾಯತ ಮುಖಂಡರ ಸಭೆ ನಡೆಸಲಾಯಿತು. ಇದು ಯಾವ ಮಟ್ಟದಲ್ಲಿ ಫಲ ನೀಡಲಿದೆ ಎಂಬುದು ಫಲಿತಾಂಶದ ದಿನವೇ ಗೊತ್ತಾಗಲಿದೆ.
ಉಭಯ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ ಎಂದೇ ವಾದ ಮಾಡುತ್ತಿದ್ದಾರೆ. ಹೊಸ ಮತದಾರರು ಉತ್ಸಾಹದಿಂದ ಮತ ನೀಡಿದ್ದು, ಅವರೆಲ್ಲರೂ ಮೋದಿ ನೋಡಿ ಮತ ನೀಡಿದ್ದಾರೆಂಬ ವಾದ ಬಿಜೆಪಿಯವರದ್ದಾಗಿದೆ. ಲಿಂಗಾಯತರನ್ನು ಬಿಜೆಪಿ ಕಡೆಗಣಿಸಿದ್ದರಿಂದ ಅವರು ಈ ಬಾರಿ ‘ಕೆ’ ಕುಲುಕಿದ್ದಾರೆ ಎಂಬುದು ಕಾಂಗ್ರೆಸ್‌ನವರ ಲೆಕ್ಕಾಚಾರ.
ಪ್ರತಿ ಚುನಾವಣೆಯಲ್ಲೂ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮತಗಳ ಅಂತರ ಸರಾಸರಿ 18,000. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 32,000 ಲೀಡ್ ಪಡೆದುಕೊಂಡಿದ್ದರು. ಆಗ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಪಕ್ಷದ ಒತ್ತಡದಿಂದ ಸ್ಪರ್ಧಿಸಿದ್ದರು. ಅಲ್ಲದೇ ನರೇಂದ್ರ ಮೋದಿ ಅಲೆ ಎದುರಿಸಬೇಕಿತ್ತು.
ಬಿಜೆಪಿಯ ಶಕ್ತಿಕೇಂದ್ರವೆನಿಸಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ 1,60,000 ಮತದಾರರು ಮತದಾನ ಮಾಡಿದ್ದು, ಕ್ಷೇತ್ರದ ಮತದಾರರು ಯಾವ ಪಕ್ಷಕ್ಕೆ ಲೀಡ್ ಕೊಡಿಸುವರೋ ಎಂಬುದನ್ನು ಕಾದು ನೋಡಬೇಕು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕನಿಷ್ಟ 40,000 ಮತಗಳ ಲೀಡ್ ಸಿಗುವುದು ನಿಶ್ಚಿತ. ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಪಡೆಯಿದೆ. ಪ್ರತಿ ಚುನಾವಣೆಯಲ್ಲೂ ನಾವು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಪ್ರಚಾರ ನಡೆಸುತ್ತೇವೆ. ನಮ್ಮ ಕಾರ್ಯಕರ್ತರ ಪಡೆ ಸಮರ್ಥವಾಗಿದೆ. ಪಾಲಿಕೆ ಸದಸ್ಯರು ಶಕ್ತಿಮೀರಿ ಶ್ರಮಿಸಿದ್ದಾರೆ. ಪಕ್ಷ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಿದೆ. ಪ್ರಹ್ಲಾದ ಜೋಶಿ ಗೆಲುವಿನ ಅಂತರ ಹೆಚ್ಚಿಸುವಲ್ಲಿ ಕ್ಷೇತ್ರ ಮಹತ್ವದ ಕೊಡುಗೆ ನೀಡಲಿದೆ.
• ನಾಗೇಶ ಕಲಬುರ್ಗಿ,ಬಿಜೆಪಿ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಸಿಗಲಿದೆ. ಕ್ಷೇತ್ರದ ಹೆಚ್ಚಿನ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ್ದಾರೆ. ನಮ್ಮ ಕಾರ್ಯಕರ್ತರು ಕ್ಷೇತ್ರದಲ್ಲಿ ಉತ್ತಮ ರೀತಿಯಿಂದ ಪ್ರಚಾರ ಮಾಡಿದ್ದಾರೆ. ಬದಲಾವಣೆ ಬಯಸಿದ ಮತದಾರರು ಹೊಸ ಮುಖ ನಿರೀಕ್ಷಿಸುತ್ತಿದ್ದಾರೆ. ಎಲ್ಲ ಜಾತಿ ಧರ್ಮಗಳ ಮತದಾರರು ವಿನಯ ಕುಲಕರ್ಣಿ ಅವರಿಗೆ ಮತ ನೀಡಿದ್ದಾರೆ.
• ಅಲ್ತಾಫ ಹಳ್ಳೂರ, ಕಾಂಗ್ರೆಸ್ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ
•ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Karkala; ಕೋರ್ಟ್‌ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.