ಹೊಲವೇ ಕೊಚ್ಚಿ ಹೋದ್ರೆ ಯಾರಿಗೆ ಹೇಳ್ಳೋದು?
Team Udayavani, Aug 21, 2019, 9:24 AM IST
ಧಾರವಾಡ: ಎಲ್ಲೆಂದರಲ್ಲಿ ನುಗ್ಗಿ ಕೊರಕಲು ಉಂಟು ಮಾಡಿದ ಮಹಾಮಳೆ, ದಾರಿಗಳನ್ನು ಸರೋವರ ಮಾಡಿದ ಹಳ್ಳಗಳು, ತಗ್ಗು ಪ್ರದೇಶಕ್ಕೆ ನುಗ್ಗಿ ಹರಿದ ಹಳ್ಳಕ್ಕೆ ಸಿಲುಕಿ ಬೆಳೆನಾಶ, ತೇಲಿಕೊಂಡು ಹೋದ ಮರ ಮತ್ತು ದಿಮ್ಮೆಗಳು. ಇವೆಲ್ಲವೂ ಜಿಲ್ಲೆಯಲ್ಲಿ ಮಹಾಮಳೆ ಸೃಷ್ಟಿಸಿದ ಅವಾಂತರ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಮಳೆಯಿಂದಾದ ಬೆಳೆಹಾನಿ, ಮನೆಹಾನಿ, ಆಸ್ತಿ ಹಾನಿಯನ್ನೆನೋ ಸರಿ ಮಾಡಬಹುದು. ಆದರೆ ಹೊಲಕ್ಕೆ ಹೋಲಗಳೇ ಕೊಚ್ಚಿ ಕಿನಾರೆಗಳು ಬಿದ್ದಿರುವುದನ್ನು ಸರಿ ಮಾಡುವವರು ಯಾರು?
ಇಂತಹದೊಂದು ಪ್ರಶ್ನೆಯನ್ನು ಜಿಲ್ಲೆಯಲ್ಲಿ ನೆರೆ ಪ್ರವಾಹಕ್ಕೆ ತಮ್ಮ ಹೊಲಗಳನ್ನೇ ಕಳೆದುಕೊಂಡ ನೂರಾರು ರೈತರು ಕೇಳುತ್ತಿದ್ದಾರೆ. ಬೇಡ್ತಿ, ತುಪರಿ ಮತ್ತು ಬೆಣ್ಣೆ ಹಳ್ಳ ಸೇರಿದಂತೆ 23ಕ್ಕೂ ಅಧಿಕ ಹಳ್ಳಗಳ ಅಕ್ಕಪಕ್ಕದ ಹೊಲಗಳಲ್ಲಿ ರಭಸವಾಗಿ ನುಗ್ಗಿದ ನೀರು ಮಾಡಿದ ಅವಾಂತರಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಹೊಲದಲ್ಲಿನ ಬೆಳೆ ಕೊಚ್ಚಿ ಹೋದರೆ ಅದಕ್ಕೆ ಸರ್ಕಾರ ಒಂದಿಷ್ಟು ಪರಿಹಾರ ಕೊಡುತ್ತದೆ. ರೈತರು ಒಂದಿಷ್ಟು ಕಣ್ಣೀರು ಸುರಿಸಿ ಸೈರಿಸಿಕೊಳ್ಳಬಹುದು. ಆದರೆ ಹಳ್ಳಗಳು ಹರಿದ ರಭಸಕ್ಕೆ ಹೊಲಕ್ಕೆ ಹೊಲಗಳೇ ಗುರುತು ಸಿಕ್ಕದಷ್ಟು ಕೊಚ್ಚಿಕೊಂಡು ಹೋಗಿದ್ದು ಮಾಲೀಕರನ್ನು ಕಂಗಾಲು ಮಾಡಿಟ್ಟಿದೆ.
ಡೋರಿ-ಬೆಣಚಿ ಹಳ್ಳದಲ್ಲಿ 100 ಎಕರೆಗೂ ಹೆಚ್ಚು ಹೊಲ ಕೊಚ್ಚಿಕೊಂಡು ಹೋಗಿದೆ. ಇಲ್ಲಿ ದೈತ್ಯ ಗುಂಡಿಗಳು ಬಿದ್ದಿವೆ. ಇನ್ನು ಕರೆಮ್ಮನ ಹಳ್ಳದಲ್ಲಿ ವೀರಾಪುರ, ರಾಮಾಪುರ ಗ್ರಾಮಗಳ 20ಕ್ಕೂ ಹೆಚ್ಚು ರೈತರ 40 ಎಕರೆ ಭೂಮಿ ಕೊರಕಲಾಗಿದೆ. ಬೇಡ್ತಿ ಹಳ್ಳದುದ್ದಕ್ಕೂ 150 ರೈತರ ಅಂದಾಜು 230 ಎಕರೆಯಷ್ಟು ಭೂಮಿ ಕೊರಕಲಾಗಿದ್ದು, ಅಲ್ಲಲ್ಲಿ ಮಣ್ಣಿನ ರಸ್ತೆಗಳೇ ಕೊಚ್ಚಿಕೊಂಡು ಹೋಗಿವೆ. ತುಪರಿ ಹಳ್ಳದ ಅಕ್ಕಪಕ್ಕದ 35ಕ್ಕೂ ಹೆಚ್ಚು ರೈತರ 200 ಎಕರೆ ಭೂಮಿ ಕೊರಕಲಾಗಿದೆ. ಬೆಣ್ಣೆ ಹಳ್ಳದ ಪಕ್ಕದಲ್ಲಿನ 37ಕ್ಕೂ ಹೆಚ್ಚು ರೈತರ 180 ಎಕರೆಗೂ ಅಧಿಕ ಭೂಮಿ ಕೊರಕಲು ಬಿದ್ದಿದೆ ಎಂದು ರಾಜ್ಯ ರೈತ ಸಂಘದ ಮುಖಂಡರು ಅಂದಾಜು ಮಾಡಿದ್ದು, ಇದಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ತುಪರಿ ಹಳ್ಳ ಈ ಹಿಂದೆ ಯಾವಾಗಲೂ ಇಷ್ಟೊಂದು ಅವಾಂತರಗಳನ್ನು ಮಾಡಿಲ್ಲ. ಈ ಬಾರಿ ಹೊಲಕ್ಕೆ ಹೊಲಗಳೇ ಕೊಚ್ಚಿಕೊಂಡು ಹೋಗಿವೆ. ಅಂತಹ ರೈತರಿಗೆ ಸರ್ಕಾರ ಹೆಚ್ಚಿನ ಪರಿಹಾರ ಕೊಡಬೇಕು.•ವೀರೇಶ ಚಿಕಣಿ, ಲೋಕೂರು ಗ್ರಾಮಸ್ಥ
ಜಿಲ್ಲೆಯಲ್ಲಿ ಸುಜಲ ಜಲಾನಯನ ಯೋಜನೆಯಡಿ ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನ ಹಳ್ಳಗಳ ಪಕ್ಕದಲ್ಲಿ ಲಕ್ಷಗಟ್ಟಲೇ ಗಿಡಮರಗಳನ್ನು ಬೆಳೆಯಲಾಗಿದೆ. ಆದರೆ ಪ್ರಾಣಿಗಳಿಂದ ರೈತರ ಬೆಳೆ, ಗಿಡ ಹಾನಿಯಾದರೆ ಮಾತ್ರ ಅರಣ್ಯ ಇಲಾಖೆಯಿಂದ ಪರಿಹಾರ ಕೊಡುತ್ತೇವೆ. ನೈಸರ್ಗಿಕ ವಿಕೋಪಗಳಿಂದ ಹಾನಿಯಾದರೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲು ಅವಕಾಶವಿಲ್ಲ.•ಮಹೇಶಕುಮಾರ್, ಡಿಎಫ್‌ಒ
ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಹೊಲಗಳು ಅಲ್ಲಲ್ಲಿ ಕಿತ್ತುಕೊಂಡು ಹೋಗಿರುವ ಕುರಿತು ರೈತರೇ ಮಾಹಿತಿ ನೀಡಿದ್ದಾರೆ. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಬೆಳೆಗಳಲ್ಲಿ ಭಾರಿ ನೀರು ನಿಂತಿದ್ದರೆ ಅದನ್ನು ಮೇಲಕ್ಕೆತ್ತಲು ಪರಿಹಾರ ನೀಡುತ್ತೇವೆ. ಹೊಲಕ್ಕೆ ಹೊಲವೇ ಕಿತ್ತು ಹೋದರೆ ಅದಕ್ಕೆ ಪರಿಹಾರ ನೀಡುವ ಕುರಿತು ಇರುವ ಕಾನೂನು ಅವಕಾಶಗಳನ್ನು ಪರಿಶೀಲನೆ ನಡೆಸಿ ಕ್ರಮ ವಹಿಸುತ್ತೇವೆ.•ದೀಪಾ ಚೋಳನ್, ಜಿಲ್ಲಾಧಿಕಾರಿ
ಗಿಡಗಳಿಗೆ ಪರಿಹಾರವಿಲ್ಲ: ಅರಣ್ಯ ಇಲಾಖೆ ಸ್ಪಷ್ಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.