ರೈತರಿಗೆ ತಲುಪುತ್ತಿಲ್ಲ ಕೃಷಿ ಸೌಲಭ್ಯ
ಕೃಷಿ ಸಬ್ಸಿಡಿ ಹಣ ನೀಡಲು ಸತಾಯಿಸುತ್ತಿರುವ ಅಧಿಕಾರಿಗಳು
Team Udayavani, Jun 27, 2019, 10:37 AM IST
ಇಂಡಿ: ಪಟ್ಟಣದ ತೋಟಗಾರಿಕೆ ಇಲಾಖೆ ಹೊರನೋಟ.
ಉಮೇಶ ಬಳಬಟ್ಟಿ
ಇಂಡಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿಗಾಗಿ ಪ್ರತಿ ವರ್ಷವೂ ಅನೇಕ ರೈತಪರ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ ಅವುಗಳನ್ನು ರೈತರಿಗೆ ಮುಟ್ಟಿಸಬೇಕಾದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸರ್ಕಾರದ ಯೋಜನೆಗಳು ರೈತರಿಗೆ ತಲುಪದೇ ಇರುವುದು ವಿಪರ್ಯಾಸದ ಸಂಗತಿ.
ಪಟ್ಟಣದ ತೋಟಗಾರಿಕೆ ಇಲಾಖೆ ಸರಕಾರಿ ಸವಲತ್ತುಗಳನ್ನು ರೈತರಿಗೆ ಒದಗಿಸುವಲ್ಲಿ ವಿಫಲವಾಗಿದೆ. ಸರಕಾರದಿಂದ ಬರುವ ಡ್ರಿಪ್, ಕೃಷಿ ಹೊಂಡ, ಪಾಲಿಹೌಸ್ ಸೇರಿದಂತೆ ತೋಟಗಾರಿಕೆ ಬೆಳೆ ಬೆಳೆಯಲು ನೀಡಬೇಕಾದ ಸಬ್ಸೀಡಿ ನೀಡುವಲ್ಲಿ ಇಲಾಖಾ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಕಳೆದ ಐದಾರು ತಿಂಗಳುಗಳಿಂದ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ನೀಡಬೇಕಾದ ಸಬ್ಸಿಡಿ ನೀಡಿಲ್ಲ, ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಣ್ಣ ಟ್ರ್ಯಾಕ್ಟರ್‌ಗಳಿಗೆ ಸಬ್ಸಿಡಿ ಹಣ ನೀಡಿ ರೈತರು ಟ್ರ್ಯಾಕ್ಟರ್ ಖರೀದಿಸಿ ತಮ್ಮ ಹೊಲ-ಗದ್ದೆ ಉಳುಮೆ ಮಾಡಲು ಅನುಕೂಲವಾಗಲೆಂದು ಸಬ್ಸಿಡಿ ಹಣ ವಿತರಣೆ ಮಾಡುತ್ತಿದೆ.
ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆ ಸಬ್ಸಿಡಿ ಹಣ ರೈತರಿಗೆ ಸಿಗಬೇಕಾದರೆ ಕನಿಷ್ಠ ಐದಾರು ತಿಂಗಳು ಕಚೇರಿಗೆ ಅಲೆಯುವಂತಾಗಿದೆ. ಅಧಿಕಾರಿಗಳ- ಕೈ ಕಾಲು ಹಿಡಿದು ಸಬ್ಸಿಡಿ ಹಣ ಜಮಾ ಮಾಡಿ ಕೊಡಿ ಎಂದು ಬೇಡಿಕೊಳ್ಳಬೇಕಾದ ಪರಿಸ್ಥಿತಿ ರೈತರಿಗೆ ಬಂದೊದಗಿದೆ.
ಒಂದು ಚಿಕ್ಕ ಕೆಲಸವಿದ್ದರೂ ಹತ್ತಾರು ಬಾರಿ ಕಚೇರಿಗೆ ಅಲೆದಾಡಬೇಕು. ಇಲ್ಲದಿದ್ದರೆ ನಾವು ನೀಡಿದ ಅರ್ಜಿ ಫಾರ್ಮ್ ಕಸದ ಬುಟ್ಟಿ ಕಾಣುತ್ತದೆ. ಈ ಹಿಂದೆ ಪಾಟೀಲ ಎಂಬ ಅಧಿಕಾರಿ ಇದ್ದರು ಅವರು ಯಾವತ್ತೂ ಯಾವ ರೈತರಿಗೂ ತೊಂದರೆ ನೀಡಿರಲಿಲ್ಲ. ಈಗಿನ ಅಧಿಕಾರಿಗಳು ರೈತರ ಯಾವುದೇ ಕೆಲಸಕ್ಕೂ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಎಂದು ಅನೇಕ ರೈತರು ಆರೋಪಿಸಿದ್ದಾರೆ.
ಸರ್ಕಾರದಿಂದ ಸಬ್ಸಿಡಿ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ರೈತರಿಗೆ ಸಬ್ಸಿಡಿ ನೀಡಿಲ್ಲ. ಹಣ ಬಂದ ತಕ್ಷಣ ರೈತರ ಖಾತೆಗೆ ನೇರವಾಗಿ ಜಮಾ ಮಾಡುತ್ತೇವೆ.
•ಆರ್.ಟಿ. ಹಿರೇಮಠ
ತೋಟಗಾರಿಕೆ ಇಲಾಖಾ ಅಧಿಕಾರಿ, ಇಂಡಿ
ಕಳೆದ ಐದು ತಿಂಗಳಿನಿಂದ ಟ್ರ್ಯಾಕ್ಟರ್ ಸಬ್ಸಿಡಿಗಾಗಿ ಕಚೇರಿಗೆ ಅಲೆದಾಡಿದ್ದೇನೆ. ರಾಠೊಡ ಎಂಬ ಅಧಿಕಾರಿ ಮುಂದಿನ ತಿಂಗಳು ನಿಮ್ಮ ಬಿಲ್ ಜಮಾ ಆಗುತ್ತದೆ ಎಂದು ಹೇಳಿದ್ದರು. ಆದರೆ ಅವರಿಗೆ ವರ್ಗಾವಣೆಯಾದಾಗ ನನ್ನ ಸಬ್ಸಿಡಿ ಫಾರ್ಮ್ ಮೇಲೆ ರಿಜೆಕ್ಟ್ ಎಂದು ಬರೆದು ಹೋಗಿದ್ದಾರೆ. ತದನಂತರ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿ ಪ್ರತಿ ಬಾರಿ ಹೋದಾಗ ಮುಂದಿನ ವಾರ ಮಾಡುತ್ತೇವೆ ಎಂದು ಹೇಳುತ್ತಾರೆ ವಿನಃ ಸಬ್ಸಿಡಿ ಮಾತ್ರ ಇದುವರೆಗೂ ಜಮಾ ಮಾಡಿಲ್ಲ.
•ಶ್ರಾವಣಕುಮಾರ ಜಾಧವ
ಇಂಗಳಗಿ ಗ್ರಾಮದ ರೈತ
ನಮ್ಮ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದೇವೆ. ಸಬ್ಸಿಡಿ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರಿಂದ ನಾವು ಕೃಷಿ ಹೊಂಡ ನಿರ್ಮಿಸಿಕೊಂಡೆವು. ಆದರೆ ಐದು ತಿಂಗಳು ಕಳೆದರೂ ಸಬ್ಸಿಡಿ ಜಮಾ ಆಗಿಲ್ಲ. ಹತ್ತಾರು ಬಾರಿ ಕಚೇರಿಗೆ ಅಲೆದಾಡಿ ಸುಸ್ತಾಗಿ ಸಾಕಾಗಿ ಕಚೇರಿಗೆ ಹೋಗುವುದನ್ನೇ ಬಿಟ್ಟಿದ್ದೇನೆ.
•ಈಶ್ವರ ಪಾಟೀಲ ಹಂಚನಾಳ ರೈತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.