ಇಂಡಿ: ಮತಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಈ ಭಾಗದಲ್ಲಿ ದಶಕಗಳ ಕಾಲದಿಂದ ನನೆಗುದಿಗೆ ಬಿದ್ದ ಅನೇಕ ಕಾಮಗಾರಿಗಳನ್ನು ಕಳೆದ ಅವಧಿಯಲ್ಲಿ ಮಾಡಲಾಗಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಇಂಗಳಗಿ ಗ್ರಾಮದ ನೂತನ ಗ್ರಾಪಂ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಪವಾರ ವಸತಿ ಹಳ್ಳಕ್ಕೆ ಸೇತುವೆ ಸಹಿತ ಬಾಂದಾರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಳೂರ ಇಂಗಳಗಿ, ಮಾವಿನಹಳ್ಳಿ ಸೇರಿ ಗ್ರಾಮ ಪಂಚಾಯತ್ ಇತ್ತು. ಆದರೆ ಅಧಿಕಾರ ವಿಕೇಂದ್ರಿಕರಣವಾಗಲಿ ಅದರ ಜೊತೆಗೆ ಅನುದಾನ ಹಂಚಿಕೆ ಪ್ರಮಾಣ ಕೂಡಾ ಹೆಚ್ಚಾಗಿ ಅಭಿವೃದ್ಧಿ ಹೊಂದಲಿ ಎಂಬ ಸದಾಶಯದಿಂದ ನೂತನವಾಗಿ ಇಂಗಳಗಿ ಗ್ರಾಪಂ ಮಾಡಲಾಗಿದೆ ಎಂದರು.
ಪ್ರಸ್ತುತ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪ್ರಥಮ ಆದ್ಯತೆ ನೀಡುವ ಮೂಲಕ ಅಂತಹ ಸಮಸ್ಯೆಗಳನ್ನು ತ್ವರಿತವಾಗಿ ಈಡೇರಿಸಲು ಈಗಾಗಲೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂತಹ ಯಾವುದೆ ಸಮಸ್ಯೆಯಾಗಲಿ ಇಲ್ಲ, ಇನ್ನಿತರ ಯಾವುದೆ ಗ್ರಾಮದ ಬೇಕು, ಬೇಡಿಕೆಗಳನ್ನು ಈಡೇರಿಸಲು ಸದಾ ಬದ್ಧನಾಗಿದ್ದೇನೆ.
ಮಳೆ ಅವಲಂಬಿಸಿ ಬದುಕು ಕಟ್ಟಿಕೊಂಡ ನಮಗೆ ಸದಾ ನಿಸರ್ಗ ಪದೆ ಪದೆ ಕೈ ಕೊಡಾತ್ತ ಇರುವುದರಿಂದ ಅಂರ್ತಜಲ ಮಟ್ಟ ಕುಸಿತಾ ಇದೆ. ಸದಾ ಬರಗಾಲಕ್ಕೆ ತುತ್ತಾಗಿ ನಮ್ಮ ಬದುಕು ದಯನೀಯವಾಗಿದ್ದು ಸರಕಾರ ಏನೆ ಸಹಾಯ ಮಾಡಿದರೂ ತಾತ್ಕಾಲಿಕ, ನಿಸರ್ಗವೇ ನಮಗೆ ಕಾಪಾಡಬೇಕು. ಬಾಂದಾರ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಣೆಗಾಗಿ ಬಾಂದಾರಗಳು ನಿರ್ಮಾಣ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ತಾಯವ್ವಾ ಹರಿಜನ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಪಿಕೆಪಿಎಸ್ ಅಧ್ಯಕ್ಷ ಅಪ್ಪಾಸಾಹೇಬ ಪವಾರ, ನಿವೃತ್ತ ಮುಖ್ಯ ಶಿಕ್ಷಕ ಪ್ರಭು ಹೊಸಮನಿ, ವಜ್ರಕಾಂತ ಹೂಗಾರ, ವಿಠ್ಠಲ ದಾದಾ ಕುಲಕರ್ಣಿ, ಸಿದ್ರಾಮಯ್ಯ ಮಠಪತಿ, ತಾಪಂ ಸದಸ್ಯ ಅಶೋಕ ನಾಯಕ, ತಾಪಂ ಇಒ ವಿಜಯಕುಮಾರ ಆಜೂರ, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಧಿಕಾರಿ ಬಿ.ವೈ. ಬಿರಾದಾರ, ವಜೀರ ಪಟೇಲ, ವಿಠ್ಠಲ ಜಾಧವ ವೇದಿಕೆಯಲ್ಲಿದ್ದರು.
ಪಿಡಿಒ ಬಗಲಿ, ಕಾಯದರ್ಶಿ ನದಾಫ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಕೆ.ಎಸ್. ಬಿರಾದಾರ, ಅಪ್ಪಾಶಾ ಲಾಳಸೇರಿ, ಗ್ರಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಅಹಿರಸಂಗ, ದಾದಾಸಾಹೇಬ ಪವಾರ, ಗ್ರಾಪಂ ಸದಸ್ಯರಾದ ಗುರು ಹಕ್ಕಿ, ಆಶಿಮ ಮುಲ್ಲಾ, ಧರ್ಮು ಚಾಬುಕಸವಾರ, ಶಿವಾಜಿ ರಾಠೊಡ, ಪಿಂಟು ಮಾನೆ, ತಿಪ್ಪಣ್ಣ ಕಾಂಬಳೆ ಹಾಗೂ ಶಿವಪ್ಪ ತೋಗರಿ, ಶಿವಗೋಡ ಹೂಗಾರ, ಸುಭಾಷ್ ಥೋರತ, ಅಶೋಕ ಬಳಬಟ್ಟಿ, ಸೈಫನ್ ಮುಲ್ಲಾ, ಪ್ರಭು ಚಾಬುಕಸವಾರ, ಗುಡುಸಾಬ ಅಹಿರಸಂಗ, ಬಸವರಾಜ ಜಾಧವ, ಚಿಕ್ಕಯ್ಯ ಬನಸೋಡೆ ಸೇರಿದಂತೆ ಅನೇಕರಿದ್ದರು.