ಅ.16ರಂದು ರೈತರಿಂದ ಬೆಂಗಳೂರು ಚಲೋ
Team Udayavani, Sep 18, 2019, 11:19 AM IST
ನರಗುಂದ: ನವಿಲುತೀರ್ಥ ಜಲಾಶಯದಲ್ಲಿ ರೈತ ಸೇನಾ ಕರ್ನಾಟಕ ಕಾರ್ಯಕ್ರಮದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಮಹದಾಯಿ ರೈತ ಮಹಿಳೆಯರು.
ನರಗುಂದ: ಮಹದಾಯಿ ನ್ಯಾಯಾಧಿಕರಣ ಹಂಚಿಕೆ ಮಾಡಿದ ನೀರು ಪಡೆಯಲು ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ರಾಜ್ಯಪಾಲರ ಮಧ್ಯೆ ಪ್ರವೇಶಕ್ಕೆ ಆಗ್ರಹಿಸಿ ಮುಂದೂಡಲಾಗಿದ್ದ ಬೆಂಗಳೂರು ಚಲೋ ಅ. 16ರಂದು ಕೈಗೊಳ್ಳಲು ಮಹದಾಯಿ ಹೋರಾಟಗಾರರು ಮುನವಳ್ಳಿ ನವಿಲುತೀರ್ಥ ಜಲಾಶಯದಲ್ಲಿ ಘೋಷಿಸಿದ್ದಾರೆ.
ಮಂಗಳವಾರ ಭರ್ತಿಯಾದ ಜಲಾಶಯಕ್ಕೆ ಬಾಗಿನ ಅರ್ಪಿಸಲು ಎಲ್ಲ ಮಹದಾಯಿ ಹೋರಾಟಗಾರರು ತೆರಳಿದ ಸಂದರ್ಭದಲ್ಲಿ ಅಲ್ಲಿನ ಗುರುಕುಮಾರೇಶ್ವರ ಒಡಕಿಹೊಳಿಮಠ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಎರಡು ನಿರ್ಣಯ ಪ್ರಕಟಿಸಿದರು. ನ್ಯಾಯಾಧಿಕರಣ ಹಂಚಿಕೆ ಮಾಡಿದ ನದಿ ನೀರು ಬಳಕೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ರಾಜ್ಯಪಾಲರ ಮಧ್ಯೆ ಪ್ರವೇಶಕ್ಕೆ ಒತ್ತಾಯಿಸಿ ಅ. 16ರಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಅಚ್ಚುಕಟ್ಟು ಪ್ರದೇಶದ ಎಲ್ಲ ಹೋರಾಟಗಾರರು ಬೆಂಗಳೂರು ಚಲೋ ನಡೆಸಿ ರಾಜಭವನ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ.
ಗೆಜೆಟ್ ನೋಟಿಫಿಕೇಶನ್‌ಗೆ ಮಧ್ಯೆ ಪ್ರವೇಶಕ್ಕೆ ರಾಜ್ಯಪಾಲರು ಭರವಸೆ ನೀಡಬೇಕು. ಇಲ್ಲದಿದ್ದರೆ ನೀವು ಹೋರಾಟ ಮಾಡಿದ ತಪ್ಪಿಗೆ ವಿಷ ಕುಡಿಯಿರಿ ಎಂದು ಆದೇಶ ನೀಡುವರೆಗೆ ಬೆಂಗಳೂರಿನಲ್ಲಿ ಧರಣಿ ನಡೆಸುವ ನಿರ್ಣಯ ಕೈಗೊಂಡಿದ್ದೇವೆಂದು ಸೊಬರದಮಠ ಸ್ವಾಮೀಜಿ ಪ್ರಕಟಿಸಿದರು.
ಹುಬ್ಬಳ್ಳಿ-ಧಾರವಾಡ ಜನರ ಸಹಕಾರ ಪಡೆಯಲು ಸೆ. 25ರಂದು ಹುಬ್ಬಳ್ಳಿಯಲ್ಲಿ ಅಲ್ಲಿನ ಜನರೊಂದಿಗೆ ರಾಜ್ಯಪಾಲರಿಗೆ ಪತ್ರ ಚಳವಳಿ ನಡೆಸಲು ಎರಡನೇ ನಿರ್ಣಯ ಕೈಗೊಳ್ಳಲಾಗಿದೆ ಎಂದು ವೀರೇಶ ಸೊಬರದಮಠ ಸ್ವಾಮೀಜಿ ಪ್ರಕಟಿಸಿದರು.
ಹಂಚಿಕೆಯಾದ ನೀರು ಸದ್ಬಳಕೆಗೆ ಯಾವುದೇ ಅಡೆತಡೆಯಿಲ್ಲ. ಗೋವಾದ ಆಕ್ಷೇಪಣೆಯೂ ಇಲ್ಲ. ಯಾವ ತಕರಾರು ಇಲ್ಲ. ಎಲ್ಲವೂ ಕಟ್ಟು ಕಥೆಗಳಾಗಿವೆ. ಇಡೀ ಜೀವ ಸಂಕುಲಕ್ಕೆ ಕುಡಿಯುವ ನೀರಿಗಾಗಿ ನಾವು ಹೋರಾಟ ಮಾಡುತ್ತ ಬಂದಿದ್ದೇವೆ. ಯಾವುದೇ ಪಕ್ಷ, ರಾಜಕಾರಣಿಗಳ ಬಗ್ಗೆ ಮಾತನಾಡುವ ಹಕ್ಕು ನಮಗಿಲ್ಲ.ನ್ಯಾಯದೇವತೆ ಹಂಚಿಕೆ ಮಾಡಿದ ನೀರನ್ನು ನಾವು ನ್ಯಾಯಯುತವಾಗಿ ಪಡೆದುಕೊಳ್ಳಲು ರಾಜ್ಯಪಾಲರ ಮಧ್ಯೆ ಪ್ರವೇಶಕ್ಕೆ ಒತ್ತಾಯಿಸಲಿದ್ದೇವೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕಿಲ್ಲಾ ತೋರಗಲ್ಲ ಗಚ್ಚಿನ ಹಿರೇಮಠದ ಶ್ರೀ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ, ರೈತರ ಗೋಳು ಯಾರಿಗೂ ಕೇಳುತ್ತಿಲ್ಲ. ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಮನೆಗೊಬ್ಬ ಹೋರಾಟಗಾರರು ಹುಟ್ಟಿಕೊಂಡಾಗ ಎಂತಹ ಸರ್ಕಾರಗಳೂ ತಲೆಬಾಗುತ್ತವೆ ಎಂದು ಕರೆ ನೀಡಿದರು.
ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ, ಬ್ಯಾಹಟ್ಟಿಯ ಮರುಳಸಿದ್ಧ ಶಿವಾಚಾರ್ಯರು, ಸವದತ್ತಿ ಮಲ್ಲಿಕಾರ್ಜುನ ಸ್ವಾಮೀಜಿ, ರೇಣುಕ ಶಿವಯೋಗಿ ಶಿವಾಚಾರ್ಯರು, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಸವದತ್ತಿ ಶಿವಬಸವ ಸ್ವಾಮೀಜಿ, ಮಂಜಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲಿಂಗರಾಜ ಸರದೇಸಾಯಿ, ರೈತ ಸೇನಾ ಕರ್ನಾಟಕ ಸವದತ್ತಿ ತಾಲೂಕಾಧ್ಯಕ್ಷ ಪಂಚಪ್ಪ ಹಣಸಿ ಮುಂತಾದವರು ವೇದಿಕೆಯಲ್ಲಿದ್ದರು.
ಗಂಡುಮೆಟ್ಟಿದ ನಾಡಿನಲ್ಲಿ ಹುಟ್ಟಿದ ರೈತರು ವಿಷ ಸೇವಿಸುವಂತ ಕೆಲಸ ಬೇಡ. ನೀವೆಲ್ಲ ದಿಟ್ಟತನದಿಂದ ಹೋರಾಟ ಮಾಡಿ ನಿಮ್ಮ ಹಕ್ಕು ಪಡೆಯಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಶ್ರೀಗಳು ರೈತರಿಗೆ ಕಿವಿಮಾತು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.