ತುರ್ತು ಸಭೆಯಲ್ಲಿ ಕುಡಿಯುವ ನೀರಿನದ್ದೇ ಚರ್ಚೆ
24x7 ಕುಡಿವ ನೀರಿನ ಕಾಮಗಾರಿ ಪರಿಶೀಲಿಸಿದ ಬಳಿಕವೇ ನಿರ್ವಹಣೆಗೆ ನಗರಸಭೆ ತೀರ್ಮಾನ
Team Udayavani, May 6, 2022, 2:33 PM IST
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಮೇ 15ರ ಒಳಗಾಗಿ ಮೊದಲ 7 ಝೋನ್‌ಗಳಲ್ಲಿ 24×7 ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಂಡರೆ, ನಗರಸಭೆ ಸದಸ್ಯರು, ನಗರಸಭೆ ಹಾಗೂ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳ ಅಧ್ಯಯನ ತಂಡ ವಾರ್ಡ್ ವಾರು ಪರಿಶೀಲಿಸಿದ ಬಳಿಕವೇ ನಿರ್ವಹಣೆ ಬಗ್ಗೆ ತೀರ್ಮಾನಿಸಲು ನಗರಸಭೆ ತುರ್ತು ಸಾಮಾನ್ಯ ಸಭೆ ನಿರ್ಣಯಿಸಿತು.
ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆ ಸಭಾಂಗಣದಲ್ಲಿ ಜರುಗಿದ ತುರ್ತು ಸಾಮಾನ್ಯ ಸಭೆಯಲ್ಲಿ 24×7 ಕುಡಿಯುವ ನೀರು ಯೋಜನೆಯ ವೈಫಲ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸದಸ್ಯರು, ಗುತ್ತಿಗೆ ಸಂಸ್ಥೆಯ ಜನ್ಮ ಜಾಲಾಡಿದರು.
ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಕೃಷ್ಣ ಪರಾಪುರ ಮಾತನಾಡಿ, ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಏ.30ರ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು.
ಬಳಿಕ ನಗರಕ್ಕೆ ಭೇಟಿ ನೀಡಿದ್ದ ಪೌರಾಡಳಿತ ಸಚಿವ ಭೈರತಿ ಬಸವರಾಜ ಅವರು 24×7 ಗುತ್ತಿಗೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸಿದ್ದರೆ, ಇದೀಗ ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕರು ಯೋಜನೆ ನಿರ್ವಹಣೆಯನ್ನು ನಗರಸಭೆಗೆ ಹಸ್ತಾಂತರಿಸಲು ಸೂಚಿಸಿರುವುದು ಹಾಸ್ಯಾಸ್ಪದ. ವಾಸ್ತವವಾಗಿ ಅವಳಿ ನಗರದ 42 ಸಾವಿರ ಮನೆಗಳಿಗೆ ಯೋಜನೆಯಡಿ ನೀರೇ ತಲುಪಿಲ್ಲ. ಪೂರ್ಣಗೊಳ್ಳದ ಕಾಮಗಾರಿಯ ನಿರ್ವಹಣೆ ಉಸಾಬರಿ ನಮಗೇಕೆ ಎಂದು ಗುಡುಗಿದರು.
ಅದಕ್ಕೆ ಧ್ವನಿಗೂಡಿಸಿದ ಹಿರಿಯ ಸದಸ್ಯ ಎಲ್.ಡಿ.ಚಂದಾವರಿ, 186 ಕೋಟಿ ರೂ. ಮೊತ್ತದಲ್ಲಿ ಈ ಯೋಜನೆಯ ಅನುದಾನ ಪೂರ್ಣ ವ್ಯಯವಾಗಿ ದ್ದರೂ, ಕಾಮಗಾರಿ ಪೂರ್ಣಗೊಂಡಿಲ್ಲ. 14 ಜೋನ್ ಗಳಲ್ಲಿ ಶೇ.70-80ರಷ್ಟು ಮಾತ್ರ ಆಗಿದೆ. ಯೋಜನೆ ಪೂರ್ಣವಾಗದೇ ಹಸ್ತಾಂತರವಾದರೆ ಜನರು ತೆರಿಗೆ ಹಣ ಲೂಟಿಯಾಗಿದೆ ಎಂದು ಹಿಡಿಶಾಪ ಹಾಕುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಚಂದ್ರುತಡಸದ ಮಾತನಾಡಿ, ಮೊದಲ 7 ಝೋನ್ ವ್ಯಾಪ್ತಿಗೆ ವಾರ್ಡ್ ನಂ.15, 16 ಮತ್ತು 17 ಒಳಪಡಲಿದೆ. ಈ ಭಾಗದಲ್ಲಿ ನಿರಂತರ ನೀರು ಪೂರೈಕೆಯಾಗುತ್ತದೆ ಎಂದು ವರಿದಯಲ್ಲಿ ಉಲ್ಲೇಖೀಸಿದ್ದು ಹಸಿ ಸುಳ್ಳು. 15 ದಿನಕ್ಕೆ ಒಂದು ಗಂಟೆ ನೀರು ಬಂದರೆ, ಅದೇ ಪುಣ್ಯ ಎಂದು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ: ಇದರ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರು 24×7 ಗುತ್ತಿಗೆ ಸಂಸ್ಥೆ ಅಧಿ ಕಾರಿಗಳ ವಿರುದ್ಧ ಪಕ್ಷಾತೀತವಾಗಿ ಹರಿಹಾಯ್ದರು. ಕಾಮಗಾರಿ ಆರಂಭಗೊಂಡು ಹಲವು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ನೀರು ಪೂರೈಕೆಯಲ್ಲಿ ಸಮಯ ಪಾಲನೆ ಮಾಡುತ್ತಿಲ್ಲ. ಬೇಕಾಬಿಟ್ಟಿಯಾಗಿ ಮಧ್ಯರಾತ್ರಿ 12 ಗಂಟೆಗೆ, ಬೆಳಗಿನ ಜಾವ 3 ಗಂಟೆಗೆ ಪೂರೈಸಲಾಗುತ್ತಿದೆ. ದಿನವಿಡೀ ದುಡಿದು ಬರುವ ಬಡ ಮಹಿಳೆಯರು 24×7 ನೀರಿಗಾಗಿ ರಾತ್ರಿ ನಿದ್ರೆ ಬಿಟ್ಟು ಕಾಯುವಂತಾಗಿದೆ. ವಾರ್ಡ್‌ಗಳಲ್ಲಿ ಮುಖ ಎತ್ತಿ ಓಡಾಡಲು ಕಷ್ಟವಾಗಿದೆ. ಜನರು ಕೇಳುವ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ ಎಂದು ಮಹಿಳಾ ಸದಸ್ಯೆರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅವಳಿ ನಗರದಲ್ಲಿ ಅಳವಡಿಸಿರುವ 24×7 ಪೈಪ್‌ಲೈನ್ ಜಾಲ ಸಮರ್ಪಕವಾಗಿಲ್ಲ. ಹಲವೆಡೆ ಪೈಪ್‌ಲೈನ್ ಸೋರಿಕೆಯಾಗುತ್ತಿದ್ದು, ಅದರಲ್ಲಿ ಚರಂಡಿ ನೀರು ಸೇರಿಕೊಳ್ಳುತ್ತಿದೆ. ಈ ಬಗ್ಗೆ ಅನೇಕ ಬಾರಿ ಯೋಜನೆಯ ಸ್ಥಳೀಯ ಅಧಿಕಾರಿಗಳಿಗೆ ದೂರಿದರೂ ಸ್ಪಂದಿಸಲ್ಲ. ಇದರಲ್ಲಿ ನಗರಸಭೆ ಅಧಿಕಾರಿಗಳ ವೈಫಲ್ಯವೂ ಇದೆ ಎಂದು ದೂರಿದರು.
ಸಿಒಡಿ ತನಿಖೆ ಬೇಡಿಕೆ: ಯೋಜನೆ ಅನುದಾನ ಪೂರ್ಣ ಪ್ರಮಾಣದಲ್ಲಿ ಪಡೆದಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಅಲ್ಲದೇ, ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಸಿಒಡಿ ತನಿಖೆಗೆ ಒಳಪಡಿಸಬೇಕು. ಆಗ ಗುತ್ತಿಗೆ ಸಂಸ್ಥೆ ಮತ್ತು ನಗರಸಭೆ ಅಧಿಕಾರಿಗಳ ಪಾತ್ರವೂ ಬಯಲಾಗುತ್ತದೆ ಎಂದು ಪಕ್ಷಾತೀತವಾಗಿ ಸದಸ್ಯರು ಒತ್ತಾಯಿಸಿದರು.
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಗುತ್ತಿಗೆ ಸಂಸ್ಥೆ(ಎಸ್‌ಪಿಎಂಎಲ್)ಯ ಉಪಾಧ್ಯಕ್ಷರು, 40500 ಮನೆಗಳ ಪೈಕಿ 38000 ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಿದೆ. ಒಟ್ಟು 14 ವಲಯಗಳಲ್ಲಿ 7 ವಲಯಲಗಳನ್ನು ಮೇ 15ರ ಒಳಗಾಗಿ ನಗರಸಭೆಗೆ ಹಸ್ತಾಂತರಿಸಲಾಗುತ್ತದೆ. ಇನ್ನುಳಿದಿದ್ದನ್ನು ಜೂ.14ರ ಒಳಗಾಗಿ ಹಸ್ತಾಂತರಿಸಲಾಗುವುದು. ಜನರು ನಿಗದಿಗಿಂತ ಹೆಚ್ಚಿನ ನೀರು ಸಂಗ್ರಹಿಸಿಡುವುದರಿಂದ ಹೆಚ್ಚಿನ ನೀರು ಪೋಲಾಗುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಅಲ್ಲದೇ, ಎಲ್ಲ ಝೋನ್‌ಗಳು ಪೂರ್ಣಗೊಂಡ ಬಳಿಕ 24×7 ಅಕ್ಷರಶಃ ಸಾಕಾರವಾಗಲಿದೆ ಎಂದು ಅಂಕಿ- ಅಂಶಗಳ ಸಹಿತ ವಿವರಿಸಿದರು.
ಇದರಿಂದ ಸದಸ್ಯರ ಸಿಒಡಿ ಬೇಡಿಕೆ ನೇಪತ್ಯಕ್ಕೆ ಸರಿಯಿತು. ವೇದಿಕೆ ಮೇಲೆ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಉಪಸ್ಥಿತರಿದ್ದರು. ಸದಸ್ಯರಾದ ಅನಿಲ್ ಅಬ್ಬಿಗೇರಿ, ಸುರೇಶ ಕಟ್ಟಿಮನಿ, ವಿನಾಯಕ ಮಾನ್ವಿ, ಬರ್ಕತ್ ಅಲಿ ಮುಲ್ಲಾ, ಜೂನ್‌ಸಾಬ್ ಮನಾಜಿ, ಚುಮ್ಮಿ ನದಾಫ್, ವಿಜಯಲಕ್ಷ್ಮೀ ದಿಂಡೂರ, ಮಾಧುಸಾ ಮೇರವಾಡೆ, ಶ್ವೇತಾ ರವಿದಂಡಿನ, ಗೂಳಪ್ಪ ಮುಶಿಗೇರಿ, ಪ್ರಕಾಶ ಅಂಗಡಿ, ಅನಿತಾ ಗಡ್ಡಿ, ವಿದ್ಯಾವತಿ ಗಡ್ಡಿ, ಮುಲ್ಲಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪೌರಾಯುಕ್ತರು-ಸದಸ್ಯರ ವಾಗ್ವಾದ: ಸಭೆ ಆರಂಭದಲ್ಲೇ 24×7 ಕುಡಿಯುವ ನೀರಿನ ಯೋಜನೆ ಅವಧಿ ಪೂರ್ಣಗೊಂಡಿದೆ. ಯೋಜನೆ ನಿರ್ವಹಣೆ ಹಸ್ತಾಂತರದ ಬಗ್ಗೆ ಕೆಯುಐಡಿಎಫ್‌ಸಿ ಆದೇಶಿಸಿದೆ ಎಂಬ ಪೌರಾಯುಕ್ತ ರಮೇಶ ಸುಣಗಾರ ಅವರ ಹೇಳಿಕೆಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಕಾಲ ವಾಗ್ವಾದ ನಡೆಯಿತು.
ಪೂಜೆ ಮಾಡಿದವರ ತಪ್ಪಲ್ಲ: 24×7 ಕುಡಿಯುವ ನೀರಿನ ಯೋಜನೆ ವೈಫಲ್ಯವನ್ನು ಒತ್ತಿ ಹೇಳಿದ ಬಿಜೆಪಿ ಸದಸ್ಯ ಅನಿಲ್ ಅಬ್ಬಿಗೇರಿ, ವಿನಾಯಕ ಮಾನ್ವಿ ಅವರು, ಯಾವ ಮಹೂರ್ತದಲ್ಲಿ ಭೂಮಿಪೂಜೆ ನೆರವೇರಿಸಿದ್ದಾರೋ ಗೊತ್ತಿಲ್ಲ. ವರ್ಷಗಳು ಕಳೆದರೂ ಪೂರ್ಣಗೊಳ್ಳುತ್ತಿಲ್ಲ ಎಂದು ಹರಿಹಾಯ್ದರು. ಅದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್‌ನ ಲಕ್ಷ್ಮೀ ಸಿದ್ದಮನಹಳ್ಳಿ, ಎಲ್ಲರೂ ಒಳ್ಳೆಯದಾಗಲಿ ಎಂದೇ ಪೂಜೆ ಮಾಡಿರುತ್ತಾರೆ. ವಿನಾಕಾರಣ ಅವರಿವರನ್ನು ದೂಷಿಸಬೇಡಿ. ನಿಮಗೆ ನಂಬಿಕೆ ಇಲ್ಲವಾದರೆ ನಿಮ್ಮ ಅಮೃತ ಹಸ್ತದಿಂದಲೇ ಪೂಜೆ ಮಾಡಿ ಎಂದು ತಿರುಗೇಟು ನೀಡಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರೇಕ್ಷಕರ ಗ್ಯಾಲರಿಯಲ್ಲಿ ಪತಿ ದೇವರು: ಸಭೆ ಆರಂಭವಾಗುತ್ತಿದ್ದಂತೆ ಮಹಿಳಾ ಸದಸ್ಯರ ಪತಿರಾಯರು ಮಾಧ್ಯಮ ಪ್ರತಿನಿಧಿಗಳ, ಅಧಿಕಾರಿಗಳ ಗ್ಯಾಲರಿಯಲ್ಲಿ ಆಸೀನರಾಗಿದ್ದರು. ಈ ಬಗ್ಗೆ ಗಮನಿಸಿದ ಅಧ್ಯಕ್ಷೆ ಉಷಾ ದಾಸರ, ಸಿಬ್ಬಂದಿ ಮೂಲಕ ಬಿ.ಬಿ.ಅಸೂಟಿ, ಅಬ್ದುಲ್ ಮುನಾಫ್ ಮುಲ್ಲಾ ಅವರನ್ನು ಹೊರಗೆ ಕಳುಹಿಸಿದರು. ಅದಕ್ಕೆ ಸ್ವಪಕ್ಷದ ನಾಯಕರು ಆಕ್ಷೇಪಿಸಿ, ಇದೇನು ಹೊಸ ನಿಯಮ ಎಂದು ಪೇಚಿಗೆ ಸಿಲುಕಿದರು.
ಕ್ರಿಮಿನಲ್ ಕೇಸ್ ಹಾಕಿ: ಮಹತ್ವಾಕಾಂಕ್ಷಿ 24×7 ನೀರು ಯೋಜನೆ ವಿಫಲಕ್ಕೆ ಗುತ್ತಿಗೆ ಸಂಸ್ಥೆಯ ವ್ಯವಸ್ಥಾಪಕ ಸದಾನಂದ ಕೂಡಾ ಪ್ರಮುಖ ಕಾರಣ. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಅನುದಾನ ವಸೂಲಿಗೆ ಆದೇಶಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಸದಸ್ಯರು ಒತ್ತಾಯಿಸಿದರು.
ಸಭೆಗೆ ಆಟೋ ಚಾಲಕರ ಮುತ್ತಿಗೆ: ಇಲ್ಲಿನ ಜನರಲ್ ಕಾರ್ಯಪ್ಪ ವೃತ್ತದಿಂದ ಹೊಸ ಬಸ್ ನಿಲ್ದಾಣದ ವರೆಗಿನ ರಸ್ತೆ ಹದಗೆಟ್ಟಿರುವುದನ್ನು ಖಂಡಿಸಿ ಆಟೋ ಚಾಲಕರು ತುರ್ತು ಸಭೆಗೆ ಮುತ್ತಿಗೆ ಹಾಕಿದರು. ತಕ್ಷಣವೇ ದುರಿಸ್ತಿಗೆ ಆದೇಶಿಸುವಂತೆ ಪಟ್ಟು ಹಿಡಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಅವರನ್ನು ಸಾಗಹಾಕಲಾಯಿತು. ಆದರೆ, ಆ ರಸ್ತೆ ಲೋಕೋಪಯೋಗಿ ಇಲಾಖೆಯದ್ದು ಎಂಬುದು ಆ ನಂತರ ನಡೆದ ಚರ್ಚೆಯಲ್ಲಿ ಬೆಳಕಿಗೆ ಬಂದಿತು. ಹಾಗಾಗಿ, ಸಂಬಂಧಿ ಸಿದ ಅಧಿಕಾರಿಗಳಿಗೆ ಸೂಚಿಸಲು ಸದಸ್ಯರು ಕೋರಿದರು.
- ಸದಸ್ಯರು-ಅಧಿಕಾರಿಗಳ ಮಧ್ಯೆ ವಾಗ್ವಾದ
- ಕುಡಿಯುವ ನೀರು ಯೋಜನೆಯ ವೈಫಲ್ಯ ಎಳೆಎಳೆಯಾಗಿ ಬಿಚ್ಚಿಟ್ಟ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.