ಡಾ| ಅಂಬೇಡ್ಕರ್‌ರ ಛಲ ನಮಗೆಲ್ಲ ಸ್ಫೂರ್ತಿ
ವಿಶ್ವಕ್ಕೆ ಮಾದರಿಯಾದ ಸಂವಿಧಾನ ರಚಿಸಿದ ಮಹಾನ್ ಚೇತನ: ಸಚಿವ ಸಿ.ಸಿ.ಪಾಟೀಲ
Team Udayavani, Apr 15, 2022, 12:25 PM IST
ಗದಗ: ಸ್ವಾತಂತ್ರ್ಯಾ ನಂತರದಲ್ಲಿ ದೇಶಕ್ಕೆ ಬೇಕಾದಂತಹ ಸಂವಿಧಾನ ಹಾಗೂ ಪ್ರಜೆಗಳ ಹಕ್ಕುಗಳ ಕುರಿತು ಡಾ|ಬಿ. ಆರ್.ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ ಮಹಾನ್ ಚೇತನ ಎಂದು ಲೋಕೊಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ಜರುಗಿದ ಡಾ.ಬಿ.ಆರ್.ಅಂಬೇಡ್ಕರ್ ಅವರ 131 ಹಾಗೂ ಡಾ.ಬಾಬು ಜಗಜೀವನರಾಮ್ ಅವರ 115ನೇ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಬಾಲ್ಯದಲ್ಲಿ ಸಾಕಷ್ಟು ತುಳಿತಕ್ಕೊಳಗಾಗಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿ ಅನ್ಯಾಯ ಹಾಗೂ ತುಳಿತಕ್ಕೊಳಗಾದವರ ಧ್ವನಿಯಾಗಿ ನಿಂತಂತಹ ಮಹಾನ್ ಚೇತನರಾಗಿದ್ದರು. ಅವರು ರಚಿಸಿದ ಸಂವಿಧಾನ ಕೇವಲ ಜಾತಿ-ಜನಾಂಗಕ್ಕೆ ಸೀಮಿತವಾಗದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯವಾಗುವಂತೆ ರಚಿಸಲಾಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನ ನಮಗೆಲ್ಲ ರಕ್ಷಣೆ ನೀಡಿ ದೇಶಕ್ಕೆ ಭದ್ರ ಬುನಾದಿ ಹಾಕಿದೆ. ಸಂವಿಧಾನದ ಚೌಕಟ್ಟಿನಲ್ಲಿ ರಚಿಸಲಾದ ಕಾನೂನುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರಿಯಾಗಿವೆ ಎಂದರು.
ಆದರೆ, ಇದರಲ್ಲಿನ ಕೆಲ ಕಾನೂನುಗಳು ಜಾರಿಯಾಗದಿರುವುದು ದುಃಖಕರ ಸಂಗತಿ. ಬಾಬು ಜಗಜೀವನರಾಮ್ ಅವರು ದೇಶದಲ್ಲಿನ ಆಹಾರ ಭದ್ರತೆಗೆ ಒತ್ತು ನೀಡಿ ಹಸಿರು ಕ್ರಾಂತಿಯ ಹರಿಕಾರರಾಗಿದ್ದರು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಬಾಲ್ಯದ ಜೀವನ ನಾವೆಲ್ಲ ಅರಿಯಬೇಕು. ಅವರ ಕಷ್ಟದ ಜೀವನ ಹಾಗೂ ಅವರಲ್ಲಿನ ಛಲ ನಮಗೆಲ್ಲ ಸ್ಫೂರ್ತಿಯಾಗಿದೆ. ಅವರಂತೆ ಛಲದೊಂದಿಗೆ ಪ್ರತಿಯೊಬ್ಬರು ವಿದ್ಯಾವಂತರಾಗಿ ತುಳಿತಕ್ಕೊಳಗಾಗುವವರ ಪರ ಧ್ವನಿ ಎತ್ತಿ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗುವಂತೆ ಸಚಿವ ಸಿ.ಸಿ.ಪಾಟೀಲ ಕರೆ ನೀಡಿದರು.
ನಗರಸಭೆ ಅಧ್ಯಕ್ಷೆ ಉಷಾ ದಾಸರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶ ಕಂಡ ಮಹಾನ್ ನಾಯಕ. ಬಾಲ್ಯದಿಂದಲೇ ಸಾಕಷ್ಟು ನೋವು ಅನುಭವಿಸಿ ಅನ್ಯಾಯಕ್ಕೊಳಗಾದ ಅವರು, ಧೃತಿಗೆಡೆದ ಸಮಾಜದಲ್ಲಿನ ಜಾತಿ ಸಂಕೋಲೆ ವಿರುದ್ಧ ಹೋರಾಡಿ ಪ್ರತಿಯೊಬ್ಬರಿಗೂ ಸಮಾನತೆ ಹಕ್ಕು ಒದಗಿಸಲು ಸಂವಿಧಾನ ರಚಿಸಿದ ಮಹಾ ನಾಯಕ ಎಂದರು.
ಸಾಹಿತಿ ಡಾ.ಎಚ್.ಎಸ್.ಅನುಪಮಾ ಉಪನ್ಯಾಸ ನೀಡಿ, ಭಾರತದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು, ಜಾತಿ-ಮತ, ಕುಲ-ಪಂಗಡಗಳಲ್ಲಿ ಹರಿದು ಹಂಚಿ ಹೋಗಿದ್ದ ದೇಶವನ್ನು ಸಂವಿಧಾನದ ಮೂಲಕ ಏಕೀಕೃತಗೊಳಿಸಿದರು. ದಲಿತ ಮಹಿಳಾ ನಾಯಕಿಯರನ್ನು ಬೆಳೆಸಲು ಕರೆ ನೀಡಿದ ಅನುಪಮಾ, ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂಬೇಡ್ಕರ್ ಅವರ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ನಗರದ ಕೆ.ಎಚ್.ಪಿ. ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ.ಜಿ.ಜೋಗಣ್ಣವರ ಅವರು ಡಾ.ಬಾಬು ಜಗಜೀವನ ರಾಂ ಕುರಿತು ಉಪನ್ಯಾಸ ನೀಡಿ, ಡಾ. ಬಾಬೂಜಿ ಅವರು ಹಸಿರು ಕ್ರಾಂತಿ ಹರಿಕಾರರಾಗಿದ್ದು, ಯಾವುದೇ ಆಸೆ ಆಕಾಂಕ್ಷೆ ಗಳಿಗೆ ಒಳಗಾದವರಲ್ಲ. ದಲಿತರು ಬಲಾಡ್ಯರಾಗಬೇಕು. ಸ್ವಾಭಿಮಾನಿಯಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ 2021ನೇ ಸಾಲಿನಲ್ಲಿ ಎಸ್ ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಯಿತು.
ವೇದಿಕೆ ಮೇಲೆ ವಿಧಾನ ಪರಿಷತ ಸದಸ್ಯ ಎಸ್.ವಿ. ಸಂಕನೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಸಂಗಮೇಶ ದುಂದೂರ, ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ಡಿ., ಜಿಪಂ ಸಿಇಒ ಡಾ.ಬಿ.ಸುಶೀಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಜಿಪಂ ಉಪಕಾರ್ಯದರ್ಶಿ ಬಿ.ಕಲ್ಲೇಶ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.