![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 6, 2020, 3:39 PM IST
ಗದಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ 2020-21ನೇ ಸಾಲಿಗೆ ಮಂಡಿಸಿದ ಆಯವ್ಯಯದಲ್ಲಿ ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ 500 ಕೋಟಿ ರೂ. ಘೋಷಿಸಿದ್ದು ಬಿಟ್ಟರೆ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಆದ್ಯತೆ ದೊರಕಿಲ್ಲ. ರಾಜ್ಯ ವಲಯಕ್ಕೆ ಅನ್ವಯಿಸಿರುವ ಯೋಜನೆಗಳಿಂದ ದೊರೆಯುವ ಅಲ್ಪಸ್ವಲ್ಪ ಅನುದಾನದಲ್ಲೇ ಜಿಲ್ಲೆಯ ಜನರು ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಬಜೆಟ್ ಹೊಸ್ತಿಲಲ್ಲೇ ಕೇಂದ್ರ ಸರ್ಕಾರ ಮಹದಾಯಿ ಗೆಜೆಟ್ ಹೊರಡಿಸಿದ್ದರಿಂದ ಈ ಭಾಗದ ಜನರ ನಿರೀಕ್ಷೆಯಂತೆ ಮಹದಾಯಿ ಯೋಜನೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ. ಮಹದಾಯಿ, ಕಳಸಾ-ಬಂಡೂರಿ ನಾಲೆಗಳ ಜೋಡಣೆ ಕಾಮಗಾರಿ ಆರಂಭಿಕ ಹಂತವಾಗಿ 500 ಕೋಟಿ ರೂ. ಅನುದಾನ ಪ್ರಕಟಿಸಿರುವುದು ಈ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ.
ಅಲ್ಲದೇ, ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಸರ್ಕಾರ ಕನಿಷ್ಠ 2 ಸಾವಿರ ಕೋಟಿ ರೂ. ನೀಡಬೇಕು ಎಂಬುದು ರೈತರ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಒತ್ತಾಯವಾಗಿತ್ತು. ಆದರೆ, ಸದ್ಯಕ್ಕೆ ಸರ್ಕಾರ ನೀಡಿರುವ 500 ಕೋಟಿ ರೂ.ಗಳಿಂದ ಯೋಜನೆ ಚಾಲನೆ ಪಡೆಯಲಿದೆ ಎಂದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಶಿರಹಟ್ಟಿಗೆ ಅಗ್ನಿ ಶಾಮಕ ಠಾಣೆ: ಕಳೆದ ನಾಲ್ಕೈದು ವರ್ಷಗಳಿಂದ ಅನ್ಯ ಇಲಾಖೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿರಹಟ್ಟಿ ತಾಲೂಕಿನ ಅಗ್ನಿ ಶಾಮಕ ಠಾಣೆಗೆ ಸ್ವಂತ ಕಟ್ಟಡದ ಭಾಗ್ಯ ಒದಗಿ ಬಂದಿದೆ. ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ. ಈಗಾಗಲೇ ಛಬ್ಬಿ-ಶಿರಹಟ್ಟಿ ಮಾರ್ಗದಲ್ಲಿರುವ ಕ್ರೀಡಾ ಇಲಾಖೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಅಗ್ನಿ ಶಾಮಕ ದಳ ಠಾಣೆ ಸ್ಥಾಪಿಸಲಾಗಿದೆ. ಕಳೆದ 2015ರಿಂದ ಕಾರ್ಯನಿರ್ವಹಿಸುತ್ತಿದೆ. ಇದೀಗ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಿದ್ದರಿಂದ ಸ್ವಂತ ಕಟ್ಟಡದೊಂದಿಗೆ ಸಿಬ್ಬಂದಿಗೆ ಕ್ವಾಟರ್ ತಲೆ ಎತ್ತಲಿದೆ.
ಇನ್ನುಳಿದಂತೆ ವಿವಿಧ ಇಲಾಖೆ ಹಾಗೂ ಯೋಜನೆಗಳಡಿ ರಾಜ್ಯ ವಲಯದಲ್ಲಿ ಮಾಡಿರುವ ಘೋಷಣೆಯಡಿ ದೊರೆಯುವ ಸೌಲಭ್ಯಗಳಿಗೆ ಜಿಲ್ಲೆಯ ಜನರು ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ವಿವಿಧ ಏತ ನೀರಾವರಿ ಯೋಜನೆ 5000 ಕೋಟಿ ರೂ. ಆದರೆ, ಯಾವುದಕ್ಕೆ ಎಷ್ಟು ಎಂಬುದು ಸ್ಪಷ್ಟಪಡಿಸಿಲ್ಲ. ಜಿಲ್ಲೆಯ ಸಿಂಗಟಾಲೂರು ಏತನೀರಾವರಿ ಹಾಗೂ ಕೃಷ್ಣಾ “ಬಿ’ ಸ್ಕೀಂ ಯೋಜನೆಗಳು ಪ್ರಮುಖವಾಗಿದ್ದರೂ, ಅವುಗಳು ಬಜೆಟ್‌ನಲ್ಲಿ ಸ್ಥಾನ ಪಡೆದಿವೆಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೇಂದ್ರ ಸರ್ಕಾರದ 6000 ರೂ. ಗಳೊಂದಿಗೆ ರಾಜ್ಯ ಸರ್ಕಾರ 4000 ರೂ. ಹೆಚ್ಚುವರಿ ನೆರವು ಘೋಷಿಸಿದ್ದು, ರೈತರಿಗೆ ವಾರ್ಷಿಕ 10 ಸಾವಿರ ರೂ. ದೊರೆಯಲಿದೆ. ರಾಜ್ಯದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, 76 ತಾಲೂಕುಗಳಲ್ಲಿ ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಚಟುವಟಿಕೆಗೆ ಕೈಗೊಳ್ಳಲಾಗುತ್ತಿದೆ. ಫಸಲ್ ಬೀಮಾ ಯೋಜನೆಯಡಿ ರೈತರ ವಿಮಾ ಪಾಲನ್ನು ಸಕಾಲದಲ್ಲಿ ಬಿಡುಗಡೆಗೊಳಿಸಲು ರೂ. 900 ಕೋಟಿ ಒದಗಿಸಲಾಗಿದೆ. ಕೃಷಿ ಉತ್ಪನ್ನಗಳ ಬೆಲೆ ಕುಸಿತಗೊಂಡ ಸಂದರ್ಭದಲ್ಲಿ ಖರೀದಿ ಕೇಂದ್ರಗಳ ಮೂಲಕ ರೈತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ಪಾವತಿಸಿ ಖರೀದಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಗೆ ವಿಳಂಬವಾದಾಗ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಲು ಸ್ಥಾಪಿಸಿರುವ ಆವರ್ತ ನಿಧಿಯ ಮೊತ್ತವನ್ನು 2,000 ಕೋಟಿ ರೂ. ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಸುಸ್ತಿ ಸಾಲ ಬಡ್ಡಿ ಮನ್ನಾ: ಕೃಷಿ ಕ್ಷೇತ್ರದಲ್ಲಿ ಸೂಕ್ಷ್ಮ ನೀರಾವರಿ ಸೌಲಭ್ಯಕ್ಕಾಗಿ 627 ಕೋಟಿ ರೂ. ಒದಗಿಸಲು ಉದ್ದೇಶಿಸಿದೆ. ಸಹಕಾರಿ ಸಂಸ್ಥೆಗಳಿಂದ ಮಧ್ಯಮಾವಧಿ ಮತ್ತು ದೀರ್ಘಾವ ಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಿದೆ. ಇದಕ್ಕಾಗಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರೂ. 460 ಕೋಟಿ ಒದಗಿಸಲಾಗುತ್ತಿದ್ದು, ರಾಜ್ಯದಲ್ಲಿನ 92,000 ರೈತರಿಗೆ ಅನುಕೂಲವಾಗಲಿದ್ದು, ಜಿಲ್ಲೆಯ ರೈತರಿಗೂ ಇದು ವರವಾಗಲಿದೆ.
ರಾಜ್ಯಮಟ್ಟದಲ್ಲಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ವಿದ್ಯಾರ್ಥಿ ನಿಲಯಗಳು, ಶಾಲಾ-ಕಾಲೇಜುಗಳ ಸ್ಥಾಪನೆ, ನೆರೆ ಪೀಡಿತ ಗ್ರಾಮಗಳಲ್ಲಿ ಶಾಲೆ-ಮನೆಗಳ ನಿರ್ಮಾಣ ಘೋಷಣೆಗಳಿಂದ ಜಿಲ್ಲೆಗೂ ಅನುಕೂಲವಾಗುತ್ತದೆ. ಈ ಬಾರಿ ಬಜೆಟ್‌ನಲ್ಲಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಈ ಹಿಂದಿನ ಸರ್ಕಾರ ಘೋಷಿಸಿದ್ದ ಹಾಗೂ ಜಿಲ್ಲೆಯ ಪ್ರಮುಖ ಬೇಡಿಕೆಗಳು ಗೌಣವಾಗಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿರುವ ರಾಜ್ಯದ 2020-2021ರ ಆಯವ್ಯಯ ಸರ್ವಾಂಗೀಣ ಅಭಿವೃದ್ಧಿಯತ್ತ ಹೆಜ್ಜೆಯನ್ನಿರಿಸಿರುವುದನ್ನು ಸೂಚಿಸುತ್ತದೆ. ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವರ್ಗದ ಹಾಗೂ ವಯೋಮಾನದವರಿಗೆ ಅನುಕೂಲಕರ-ಹರ್ಷದಾಯಕ ಮತ್ತು ಪ್ರಗತಿಪರ ಬಜೆಟ್ ಮಂಡಿಸಿದ್ದಾರೆ. -ಸಿ.ಸಿ. ಪಾಟೀಲ, ಉಸ್ತುವಾರಿ ಸಚಿವ
ಸರ್ವಾಂಗೀಣ ಅಭಿವೃದ್ಧಿಯ ಗುರಿ : ಬಜೆಟ್‌ನಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಗುರಿ ಪ್ರಕಟಿಸಿದ್ದಾರೆ. 2,33,134 ಕೋಟಿ ರೂ. ಮೊತ್ತದ ಬೃಹತ್ ಗಾತ್ರದ ಬಜೆಟ್ ಮಂಡಿಸಿದ್ದು, ಹಿಂದಿನ ಪ್ರತಿಷ್ಠಿತ ಯೋಜನೆಗಳಾದ ಭಾಗ್ಯ ಲಕ್ಷ್ಮೀ ಯೋಜನೆ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮುಂದುವರಿಸುವ ಜೊತೆಗೆ ಕೃಷಿ-ತೋಟಗಾರಿಕೆಗೆ 7889 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಗೆ 15595 ಕೋಟಿ ರೂ., ನಗರಾಭಿವೃದ್ಧಿಗೆ ರೂ. 27,952 ಕೋಟಿ ರೂ., ಶಿಕ್ಷಣಕ್ಕೆ 29,768 ಕೋಟಿ ರೂ., ಆರೋಗ್ಯಕ್ಕೆ 10,122 ಕೋಟಿ ರೂ. ಮೀಸಲಿಟ್ಟಿದ್ದಾರೆ. 22.50 ಲಕ್ಷ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ಶಸ್ತ್ರ ಚಿಕಿತ್ಸೆ ಸೌಲಭ್ಯ ಕಲ್ಪಿಸಿರುವುದು ಸ್ವಾಗತಾರ್ಹ. – ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ
ಅಭೂತಪೂರ್ವ ಬಜೆಟ್ : ಮಹದಾಯಿ ಯೋಜನೆಗೆ 500 ಕೋಟಿ ಅನುದಾನ, ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಅನುದಾನದಲ್ಲಿ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಳಿಸಬಹುದು. ತೋಟಗಾರಿಕೆ ಉತ್ಪನ್ನಗಳ ಸಮರ್ಪಕ ಕೊಯ್ಲೋತ್ತರ ನಿರ್ವಹಣೆಗೆ ವಿವಿಧ ಜಿಲ್ಲೆಗಳ 10 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 75 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 5000 ಮೆ. ಟನ್ ಸಾಮರ್ಥ್ಯದ ಶೀತಲ ಗೃಹಗಳ ನಿರ್ಮಾಣ, ಹೊಸದಾಗಿ ತೋಟಗಾರಿಕೆ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ-ಅತೀ ಸಣ್ಣ ರೈತರಿಗೆ ಪ್ರತಿ ಹೆಕ್ಟೇರ್ 5000 ರೂ. ಗಳಂತೆ ಗರಿಷ್ಠ 10,000 ರೂ. ನೆರವು ನೀಡುವುದಾಗಿ ಘೋಷಿಸಲಾಗಿದೆ. ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ ನೀಡಲಾಗಿದೆ.-ಮೋಹನ ಮಾಳಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ
ಸಮಪಾಲು-ಸಮಬಾಳು ಗುರಿಯೊಂದಿಗೆ ಮಂಡಿಸಿದ ಮುಂಗಡ ಪತ್ರದಲ್ಲಿ ಉತ್ತರ ಕರ್ನಾಟಕಕ್ಕೆ ಅದರಲ್ಲೂ ಗದಗ ಜಿಲ್ಲೆಗೆ ಯಾವುದೇ ಸೌಲಭ್ಯ ಪ್ರಸ್ತಾಪಿಸದಿರುವುದು ನಿರಾಶಾದಾಯಕ. ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಕೊಡುಗೆ ನೀಡದಿರುವುದು, ಸೆಸ್ ಕಡಿಮೆ ಮಾಡುವ ಕುರಿತು ಪ್ರಸ್ತಾಪಿಸದಿರುವುದು ಮತ್ತು ಕರ ಸಮಾಧಾನ ಸ್ಕೀಂ ಜಾರಿ ಮಾಡದಿರುವುದು ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ. – ಶರಣಬಸಪ್ಪ ಕುರಡಗಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ
ಪ್ರಸಕ್ತ ಹಣಕಾಸು ವರ್ಷಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿರುವ ಬಜೆಟ್ ಉತ್ತರ ಕರ್ನಾಟಕದ ಪಾಲಿಗೆ ಸಂಪೂರ್ಣ ನಿರಾಶಾದಾಯಕವಾಗಿದೆ. ಅದರಲ್ಲೂ ಮಹದಾಯಿ ಯೋಜನೆಗೆ 500 ಕೋಟಿ ರೂ. ಘೋಷಿಸಿರುವುದು ಬಿಟ್ಟರೆ, ಗದುಗಿಗೆ ವಿಶೇಷ ಯೋಜನೆಗಳ ಪ್ರಸ್ತಾಪವೇ ಇಲ್ಲ. ಈ ಭಾಗದ ಕಪ್ಪತ್ತಗುಡ್ಡದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು, ಸಂಶೋಧನಾ ಕೇಂದ್ರದ ನಿರೀಕ್ಷೆ, ಬಂಕಾಪುರ-ರೋಣ ಹೆದ್ದಾರಿ, ಸಿಂಗಟಾಲೂರು ಏತ ನೀರಾವರಿ ಈ ಭಾಗದ ಯಾವುದೇ ಯೋಜನೆಗಳಿಗೆ ಒತ್ತು ನೀಡಿಲ್ಲ. – ಜಿ.ಎಸ್. ಪಾಟೀಲ, ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದೆ. ರೈತರ ಕುರಿತು ಮುನ್ನೋಟದ ಯೋಜನೆಗಳು, ಸಾಲ ಮನ್ನಾ ಬಗ್ಗೆ ಚಕಾರವೆತ್ತಿಲ್ಲ. ಇದು ರೈತರ ಕಣ್ಣೀರೊರೆಸುವ ತಂತ್ರ. ಜಾಲವಾಡಗಿ ಮತ್ತು ಸಾಲಸವಾಡ ಏತ ನೀರಾವರಿ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವನೆ ಮಾಡಿಲ್ಲ. ಏತ ನೀರಾವರಿ ಬಗ್ಗೆ ಸಂಪುಟ ಸಭೆಯಲ್ಲಿ ಮಾತ್ರ ಒಪ್ಪಿಗೆ ಬಾಕಿ ಉಳಿದಿತ್ತು. -ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ
ಬಜೆಟ್‌ನಲ್ಲಿ ಮಹದಾಯಿ ಯೋಜನೆಗೆ ಅನ್ಯಾಯವಾಗಿದೆ. ಕನಿಷ್ಠ 1000 ಕೋಟಿ ರೂ. ಮೀಸಲಿಡುವ ಬದಲಿಗೆ ಕೇವಲ 500 ಕೋಟಿ ರೂ. ಅನುದಾನ ನೀಡಿ 40 ವರ್ಷದ ಸುದೀರ್ಘ ಹೋರಾಟಕ್ಕೆ ಅವಮಾನ ಮಾಡಿದೆ. ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆದ್ಯತೆ ನೀಡದೇ ನಿರ್ಲಕ್ಷಿಸಿದೆ. ಸೈಯ್ಯದ್ ಖಾಲಿದ್ ಕೊಪ್ಪಳ, ಅಖೀಲ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ
-ವೀರೇಂದ್ರ ನಾಗಲದಿನ್ನಿ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
You seem to have an Ad Blocker on.
To continue reading, please turn it off or whitelist Udayavani.