ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
ಡೈಕೋಫಾಲ್‌ನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
Team Udayavani, Jan 3, 2025, 5:20 PM IST
ಉದಯವಾಣಿ ಸಮಾಚಾರ
ಗದಗ: ಜಿಲ್ಲೆಯಲ್ಲಿ ಮಾವು ಗಿಡಗಳು ಮೈತುಂಬಾ ಹೂವುಗಳನ್ನು ಹೊದ್ದು ನಿಂತಿದ್ದು ಬೆಳೆಗಾರರ ಮುಖದಲ್ಲಿ ಸಂತಸದ ಗೆರೆ ಮೂಡಿಸಿವೆ. ಕಳೆದ ಐದಾರು ವರ್ಷಗಳಿಂದ ಬರಗಾಲ, ಹವಾಮಾನ ವೈಪರಿತ್ಯ, ಕೀಟಬಾಧೆಯಿಂದ ಇಳುವರಿ ಕುಂಠಿತಗೊಂಡಿದ್ದರಿಂದ ಮಾವು ಬೆಳೆಗಾರರು ಸಂಕಷ್ಟ ಎದುರಿಸಿದ್ದರು. ಪ್ರಸಕ್ತ ವರ್ಷ ಮಾವು ಉತ್ತಮ ಇಳುವರಿ
ಬರಬಹುದೆಂಬ ನಿರೀಕ್ಷೆಯಲ್ಲಿ ಮಾವು ಬೆಳೆಗಾರರು ಹರ್ಷಗೊಂಡಿದ್ದಾರೆ.
ನೀರನ್ನು ಕಡಿಮೆ ಬಯಸುವ, ಒಣ ಪ್ರದೇಶದಲ್ಲಿ ಮಾವು ಸೂಕ್ತವಾಗಿ ಬೆಳೆಯುತ್ತದೆ. ಪ್ರಸಕ್ತ ವರ್ಷ ಮಾವಿನ ಗಿಡಗಳಲ್ಲಿ ಹೂವುಗಳು ನಳನಳಿಸುತ್ತಿವೆ. ಈಗ ಕಾಣಿಸಿಕೊಂಡಿರುವ ಹೂವುಗಳೆಲ್ಲವೂ ಕಾಯಿ ಕಟ್ಟಲು ಸಾಧ್ಯವಿಲ್ಲವಾದರೂ ಈಗಿರುವ ಹೂವಿನಲ್ಲಿ ಶೇ. 75ರಷ್ಟಾದರೂ ಗಿಡಗಳಲ್ಲಿ ಉಳಿದು ಕಾಯಿ ಕಟ್ಟಿದರೂ ಬಂಪರ್ ಬೆಳೆ ಕಾಣಬಹುದಾಗಿದೆ. ಆದರೆ ಮುಂದಿನ ದಿನಗಳಲ್ಲಿ ಹೂವು ಕಾಯಿಯಾಗುವ ಸಂದರ್ಭದಲ್ಲಿ ಯಾವುದೇ ರೋಗ ಬರದಿರಲಿ ಎಂದು ಪ್ರಕೃತಿಮಾತೆಯಲ್ಲಿ ಮೊರೆ ಇಡುತ್ತಿದ್ದಾರೆ.
ಜಿಲ್ಲೆಯಲ್ಲಿರುವ ಮಾವು ಪ್ರದೇಶ: ಗದಗ ತಾಲೂಕಿನಲ್ಲಿ ಹುಲಕೋಟಿ, ಕುರ್ತಕೋಟಿ, ದುಂದೂರ, ಶ್ಯಾಗೋಟಿ ಸೇರಿದಂತೆ 500 ಹೆಕ್ಟೇರ್, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಹಮ್ಮಿಗಿ, ನಾಗರಳ್ಳಿ, ಹೆಸರೂರು ಭಾಗದ 110 ಹೆಕ್ಟೇರ್, ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ, ಬಾಲೆಹೊಸೂರ, ಶಿಗ್ಲಿ ಭಾಗದ 130 ಹೆಕ್ಟೇರ್, ರೋಣ ತಾಲೂಕಿನ ನರೇಗಲ್, ಗಜೇಂದ್ರಗಡ, ರಾಜೂರು,
ಕುಂಟೋಜಿ ಭಾಗದ 60 ಹೆಕ್ಟೇರ್, ನರಗುಂದ ತಾಲೂಕಿನ ವಿವಿಧೆಡೆ 10 ಹೆಕ್ಟೇರ್ ಸೇರಿದಂತೆ ಒಟ್ಟು 700 ರಿಂದ 800 ಹೆಕ್ಟೇರ್ ಪ್ರದೇಶ ಮಾವು ಹೊಂದಿದೆ. 500-600 ಹೆಕ್ಟೇರ್ ಇಳುವರಿ ಕೊಡುವ ಪ್ರದೇಶ ಹೊಂದಿದೆ.
ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮಾವು ಬರಲಿದೆ. ಜತೆಗೆ ಹುಲಕೋಟಿಯಲ್ಲಿರುವ ವಿವಿಧ ಜಾತಿಯ ಹಣ್ಣುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇರುತ್ತದೆ. ವಿವಿಧ ಮಾವು ತಳಿ: ಜಿಲ್ಲೆಯಲ್ಲಿ ಅಲ್ಫಾನ್ಸೋ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಅದರ ಜತೆಗೆ ಆಫೂಸ್, ಕೇಸರ, ದಶೇರಿ, ಮಲ್ಲಿಕಾ, ತೋತಾಪುರಿ, ನೀಲಂನಂತಹ ಮಾವಿನ ವಿವಿಧ
ತಳಿಗಳನ್ನು ಬೆಳೆಯುತ್ತಾರೆ.
ಜಿಲ್ಲೆಯಲ್ಲಿ ಈ ಬಾರಿ ಋತುಮಾನದ ರಾಜ ಮಾವು ನಿರೀಕ್ಷೆ ಮೀರಿ ಬೆಳೆಯುವ ಲಕ್ಷಣಗಳು ಕಂಡು ಬರುತ್ತಿವೆ. ಮಾಮರಗಳಲ್ಲಿ
ಸಖತ್ ಹೂವು ಬಿಡಲಾರಂಭಿಸಿದ್ದು ಬಂಪರ್ ಬೆಳೆ ಬರಬಹುದೆಂದು ನಿರೀಕ್ಷಿಸಲಾಗಿದೆ.
ಕೀಟ-ರೋಗ ಬಾಧೆ: ಉತ್ಕೃಷ್ಟ ಗುಣಮಟ್ಟದ ಹಣ್ಣು ಪಡೆಯಲು ಪೋಷಕಾಂಶಗಳ ನಿರ್ವಹಣೆ ಜತೆಗೆ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಅತೀ ಅವಶ್ಯ. ಹೂವು ಬಿಡುವ ಸಮಯದಲ್ಲಿ ಮಳೆ ಮತ್ತು ಮೋಡ ಕವಿದ ವಾತಾವರಣವಿದ್ದಲ್ಲಿ ಬೂದು ರೋಗ ಬೀಳುವ ಅಪಾಯ ಇದೆ.
ಬೂದು ರೋಗ ಹಾಗೂ ಜಿಗಿ ಹುಳುವಿನ ಬಾಧೆ ತಡೆಗಟ್ಟಲು 40 ಗ್ರಾ ಕಾರ್ಬರಿಲ್ ಅಥವಾ 2.5 ಮೀಲಿ ಇಮಿಡಾಕ್ಲೋಪೀಡ್ 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎಲೆಗಳ ಮೇಲೆ ಹಳದಿ ಚುಕ್ಕೆಗಳಾಗುತ್ತವೆ. ನಂತರ ಒಣಗುತ್ತವೆ. ಇದರ ನಿಯಂತ್ರಣಕ್ಕಾಗಿ 25 ಮಿ.ಲೀ. ಡೈಕೋಫಾಲ್‌ನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
10 ಟನ್ ನಿರೀಕ್ಷೆ
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮಾವು 700 ಹೆಕ್ಟೇರ್ ಪ್ರದೇಶ ಹೊಂದಿದೆ. ಕಳೆದೆರಡು ವರ್ಷಗಳಲ್ಲಿ ಹೆಕ್ಟೇರ್ ಗೆ 6ರಿಂದ 9 ಟನ್ ಇಳುವರಿ ಪಡೆದಿದ್ದ ಮಾವು ಬೆಳೆಗಾರರು ಪ್ರಸಕ್ತ ವರ್ಷ ಹಕ್ಟೇರ್ ಪ್ರದೇಶದಲ್ಲಿ 8-10 ಟನ್ ಮಾವು ಬೆಳೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕಳೆದ ಮೂರು ವರ್ಷದಿಂದ ಸರಿಯಾದ ರೀತಿಯಲ್ಲಿ ಇಳುವರಿ ಬರಲಿಲ್ಲ. ಆದರೆ ಪ್ರಸಕ್ತ ವರ್ಷ ಉತ್ತಮ ಇಳುವರಿ ಬರಬಹುದೆಂದು ಅಂದಾಜಿಸಲಾಗಿದೆ ಎನ್ನುತ್ತಾರೆ ಮಾವು ಬೆಳೆಗಾರರು.
ಪ್ರಸಕ್ತ ವರ್ಷ ಮಾವು ಉತ್ತಮ ಇಳುವರಿ ಪಡೆಯಲು ಪೂರಕ ವಾತಾವರಣವಿದ್ದು, ಹೂವು ಬಿಡುವ ಸಮಯದಲ್ಲಿ ಇಬ್ಬನಿ, ಮಳೆ ಹಾಗೂ ಮೋಡ ಮುಸುಕಿದ ವಾತಾವರಣ ಇರದ ಕಾರಣ ಕೀಟ ಬಾಧೆ ಅಷ್ಟಾಗಿ ಕಾಣಿಸಿಲ್ಲ. ಮಾವು ಗಿಡದ ತುಂಬೆಲ್ಲ ಹೂವುಗಳು ಅರಳಿದ್ದು, ಕೆಲವೆಡೆ ಮಿಡಿ ಕಾಯಿಗಳು ಬಿಟ್ಟಿವೆ. ಮುಂದೆ ಬರಬಹುದಾದ ರೋಗಗಳ ನಿಯಂತ್ರಣಕ್ಕೆ ರೈತರಿಗೆ ತಾಂತ್ರಿಕ ಸಲಹೆ ನೀಡಲಾಗಿದೆ. ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣಾ ಕ್ರಮಗಳು ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ.
ಗಿರೀಶ ಹೊಸೂರು,
ಸಹಾಯಕ ತೋಟಗಾರಿಕೆ ನಿರ್ದೇಶಕರ
ಕಳೆದ ಬಾರಿ ಮೋಡ ಮುಸುಕಿದ ವಾತಾವರಣ ಹಾಗೂ ಇಬ್ಬನಿ ಬಿದ್ದ ಪರಿಣಾಮ ಉತ್ತಮವಾಗಿ ಹೂ ಬಿಟ್ಟಿದ್ದರೂ ಕಾಯಿ ಬಿಡುವ ಹಂತದಲ್ಲಿ ಉದುರಿ ಹೋಗಿದ್ದರಿಂದ ಇಳುವರಿ ಕಡಿತಗೊಂಡಿತ್ತು. ಪ್ರಸಕ್ತ ವರ್ಷ ಮೋಡ ಸೇರಿದಂತೆ ಇಬ್ಬನಿ ತೊಂದರೆ ಕಾಣಿಸಿಕೊಂಡಿಲ್ಲ. ಈ ಸಲ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. ಮಾವಿನ ಗಿಡಗಳ ತುಂಬಾ ಹೂವು ತುಂಬಿಕೊಂಡಿದೆ. ಯಾವುದೇ ರೋಗ ಬರಲಿಲ್ಲ ಅಂದರೆ ಉತ್ತಮ ಲಾಭ ಬರುವ ನಿರೀಕ್ಷೆ ಇದೆ. ಫೆಬ್ರುವರಿ ಅಂತ್ಯದಲ್ಲಿ ಮಾವಿನ ಇಳುವರಿ ಬಗ್ಗೆ ಸ್ಪಷ್ಟತೆ ದೊರೆಯಲಿದೆ.
ರಾಜೇಶ, ಮಾವು ಬೆಳೆಗಾರ
*ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…
ಆಕರ್ಷಕ ಪ್ರವಾಸಿ ತಾಣ, ಸುಂದರ ಊರು…ಸೂಡಿ ಪ್ರಾಚೀನ ಪರಂಪರೆಗೆ ಸಾಕ್ಷಿ…
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.