Gadag: ಗದುಗಿನಲ್ಲಿ ಮರುಕಳಿಸುತ್ತಿದೆ ಕರ್ನಾಟಕ ನಾಮಕರಣ ಗತವೈಭವ
ಕಲಾ ತಂಡಗಳು ಪಾಲ್ಗೊಂಡು ಐವತ್ತು ವರ್ಷಗಳ ಹಿಂದಿನ ದಿನಗಳ ಇತಿಹಾಸ ನೆನಪಿಸಲಿವೆ
Team Udayavani, Nov 3, 2023, 5:38 PM IST
ಗದಗ: ಕರ್ನಾಟಕ ಏಕೀಕರಣಗೊಂಡು, ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ಒಂದೂವರೆ ದಶಕದ ಬಳಿಕ ಕರ್ನಾಟಕ ನಾಮಕರಣಗೊಂಡ ಸಂಭ್ರಮಕ್ಕೆ “ಗದುಗು’ (ಇಂದಿನ ಗದಗ) ಕೂಡ ಸಾಕ್ಷೀಕರಿಸಿತ್ತು. ಪ್ರಸ್ತುತ “ಸುವರ್ಣ ಮಹೋತ್ಸವ’ ಸಂಭ್ರಮದ ಹೊತ್ತಿನಲ್ಲಿ 50 ವರ್ಷದ ಹಿಂದೆ ಕರ್ನಾಟಕ ನಾಮಕರಣ ಹರ್ಷೋತ್ಸವದ ಘಳಿಗೆಗೆ ಮುದ್ರಣ ಕಾಶಿ, ಗದಗ-ಬೆಟಗೇರಿ ಹಿಂದಿನ ಇತಿಹಾಸ ಮರು ಸೃಷ್ಟಿಸಿಕೊಂಡಿದೆ. ಐದು ದಶಕಗಳ ಹಿಂದೆ ನಡೆದ ಕಾರ್ಯಕ್ರಮ ಮಾದರಿಯಲ್ಲೇ ಗದುಗಿನಲ್ಲಿ ಮತ್ತೊಂದು ಐತಿಹಾಸಿಕ ಕಾರ್ಯಕ್ರಮವನ್ನು ಜಿಲ್ಲೆಯ ಜನ ಸಾಕ್ಷೀಕರಿಸುತ್ತಿದ್ದಾರೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಬೇಕೆಂಬ ದಿಸೆಯಲ್ಲಿ ಗದಗ ಭಾಗದವರು ವಿಶೇಷ ಪ್ರಯತ್ನ
ಮಾಡಿದ್ದಾರೆ. ಕುಮಾರವ್ಯಾಸ ಅವರು ತಮ್ಮ ಕಾವ್ಯಕ್ಕೆ ಕರ್ನಾಟಕ ಭಾರತ ಕಥಾಮಂಜರಿ ಹೆಸರು ನೀಡಿದ್ದರೆ, ದುರ್ಗಸಿಂಹ ಹಾಗೂ ಆಲೂರು ವೆಂಕಟರಾಯರು ಕರ್ನಾಟಕ ಹೆಸರನ್ನು ಉಲ್ಲೇಖಿಸಿದ್ದಾರೆ. ಜಿಲ್ಲೆಯ ಅಂದಿನ ಪ್ರಮುಖರಾದ ಅಂದಾನಪ್ಪ ದೊಡ್ಡಮೇಟಿ, ಕೆ.ಎಚ್. ಪಾಟೀಲ, ಎಂ.ಎಂ. ಕಣವಿ, ಸೇರಿ ಹಲವರು ಕರ್ನಾಟಕ ನಾಮಕರಣವಾಗಲು ಶ್ರಮಿಸಿದ್ದಾರೆ.
ಅಲ್ಲದೇ, ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಸಾಯಿಬಾಬಾ ಅವರು ಕೂಡ ಸಾಕ್ಷಿಯಾಗಿರುವಂತಹ ಸತ್ವಯುತ
ದಿ| ಕಾಟನ್ ಸೇಲ್ ಸೊಸೈಟಿ ಆವರಣದ ನೆಲದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ
ಪ್ರಾಮುಖ್ಯತೆ ಪಡೆದಿದೆ.
ಅಂದೂ 3 ದಿನ, 3 ಕಡೆ-ಇಂದೂ 3 ದಿನ-3 ಕಡೆ ಕಾರ್ಯಕ್ರಮ:
ಮೈಸೂರು ರಾಜ್ಯಕ್ಕೆ 1973ರ ನ.1ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಕರ್ನಾಟಕ ರಾಜ್ಯ’ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕ ಹಂಪಿ ಮತ್ತು ಗದುಗಿನಲ್ಲಿ ಕ್ರಮವಾಗಿ ನ. 2 ಮತ್ತು 3ರಂದು ಅದ್ಧೂರಿ ಕಾರ್ಯಕ್ರಮ ನಡೆದು, ಕರ್ನಾಟಕ ನಕ್ಷೆಗೆ ಪೂಜೆ ನೆರವೇರಿಸಲಾಗಿತ್ತು. ಪ್ರಸ್ತುತ “ಕರ್ನಾಟಕ ನಾಮಕರಣ ಸಂಭ್ರಮ-50′ ರ ಆಚರಣೆಗೆ ಅದೇ ಮಾದರಿಯಲ್ಲಿ ಮೂರು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹೀಗಾಗಿ, 1973 ರ ಕರ್ನಾಟಕ ನಾಮಕರಣ ಮಹೋತ್ಸವ ಕಾರ್ಯಕ್ರಮಗಳು “ನಾಮಕರಣ ಸಂಭ್ರಮ-50’ರ ಕಾರ್ಯಕ್ರಮದಲ್ಲಿ ಸಹ ಪುನರಪಿಯಾಗುತ್ತಿರುವುದು ವಿಶೇಷ. “ಕರ್ನಾಟಕ ರಾಜ್ಯ’ ಎಂದು ಅಧಿಕೃತವಾಗಿ ಘೋಷಿಸುವ ನಾಮಕರಣೋತ್ಸವ ಸಮಿತಿಗೆ ಹುಲಕೋಟಿಯ ಕೆ.ಎಚ್. ಪಾಟೀಲ ಅವರೇ ಅಧ್ಯಕ್ಷರಾಗಿದ್ದರು. ಹೀಗಾಗಿ, ಗದುಗಿನ ಕಾಟನ್ ಸೇಲ್ ಸೊಸೈಟಿಯಲ್ಲಿ ನಡೆದ ಸಮಾರಂಭದಲ್ಲಿ ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ, ಅಂದಿನ ಸಿಎಂ ಡಿ. ದೇವರಾಜ ಅರಸು ಅವರನ್ನು ಸನ್ಮಾನಿಸಲಾಗಿತ್ತು.
ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು 1973ರ ನ. 3ರಂದು ಹಂಪಿಯಿಂದ ಬಂದ ಕನ್ನಡ ಜ್ಯೋತಿಯನ್ನು ವೀರನಾರಾಯಣ ದೇವಸ್ಥಾನದ ಬಳಿ ಸ್ವೀಕರಿಸಿ, ನಾಡದೇವತೆ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕರ್ನಾಟಕ ನಾಮಕರಣ ಮಹೋತ್ಸವದ ಮೆರವಣಿಗೆಗೆ ಚಾಲನೆ ನೀಡಿ ಪಾಲ್ಗೊಂಡಿದ್ದರು.
ಪ್ರಸ್ತುತ 2023ರ ನ. 3ರಂದು “ಕರ್ನಾಟಕ ನಾಮಕರಣ ಸಂಭ್ರಮ-50’ರ ಮೆರವಣಿಗೆಗೆ ಇಂದಿನ ಸಿಎಂ ಸಿದ್ದರಾಮಯ್ಯನವರು ವೀರನಾರಾಯಣ ದೇವಸ್ಥಾನ ಬಳಿ ಹಂಪಿಯಿಂದ ಬಂದ “ಕರ್ನಾಟಕ ಜ್ಯೋತಿ’ ಸ್ವೀಕರಿಸಿ, ನಾಡ ದೇವತೆ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮೂಲಕ ಚಾಲನೆ ಸಿಗಲಿದೆ. ಅಲ್ಲಿಂದ ಜಾಮೀಯಾ ಮಸೀದಿ, ಬಸವೇಶ್ವರ ವೃತ್ತ, ಕೆ.ಎಚ್. ಪಾಟೀಲ ವೃತ್ತ, ಭೂಮರಡ್ಡಿ ವೃತ್ತ, ಜನರಲ್ ಕಾರಿಯಪ್ಪ ವೃತ್ತದ ಮೂಲಕ ದಿ. ಗದಗ ಕಾಟನ್ ಸೇಲ್ ಸೊಸೈಟಿ ತಲುಪಲಿದೆ. ಮೆರವಣಿಗೆಯಲ್ಲಿ ಕಲಾ ತಂಡಗಳು ಪಾಲ್ಗೊಂಡು ಐವತ್ತು ವರ್ಷಗಳ ಹಿಂದಿನ ದಿನಗಳ ಇತಿಹಾಸ ನೆನಪಿಸಲಿವೆ.
ಮೈಸೂರು ರಾಜ್ಯಕ್ಕೆ “ಕರ್ನಾಟಕ ನಾಮಕರಣ’ ಆದಾಗ ಅಂದು ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಮೈಸೂರಿನವರು. “ಕರ್ನಾಟಕ ನಾಮಕರಣ’ದ ಸುವರ್ಣ ಸಂಭ್ರಮದಲ್ಲಿ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಮೈಸೂರಿನವರೇ ಎಂಬುದು ವಿಶೇಷ.
ಅಂದಾನಪ್ಪ ದೊಡ್ಡಮೇಟಿ ಅವರ ನಂತರ “ಕರ್ನಾಟಕ ನಾಮಕರಣ’ ಬೇಡಿಕೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ರಾಜಕೀಯವಾಗಿ ಪ್ರಮುಖ ಪಾತ್ರ ವಹಿಸಿದವರು ಕೆ.ಎಚ್. ಪಾಟೀಲ ಅವರು. “ಕರ್ನಾಟಕ ನಾಮಕರಣ’ ಹೊತ್ತಿನಲ್ಲಿ ಅರಸು ಸರ್ಕಾರದಲ್ಲಿ ಮಂತ್ರಿಯಾಗಿದ್ದ ಕೆ.ಎಚ್. ಪಾಟೀಲ ಅವರು ನಾಮಕರಣ ಹರ್ಷೋತ್ಸವದ ಜವಾಬ್ದಾರಿಯ ಪರಿಣಾಮ ಕನ್ನಡದ ಜ್ಯೋತಿಯನ್ನು ಗದುಗಿಗೆ ತಂದಿದ್ದರು. ಇಂದು ಅವರ ಪುತ್ರ, ಎಚ್. ಕೆ. ಪಾಟೀಲ ಅವರು ಅದೇ ಮೈಸೂರಿನವರಾದ ಸಿದ್ದರಾಮಯ್ಯನವರ ಮಂತ್ರಿ ಮಂಡಳದಲ್ಲಿ ಕಾನೂನು ಸಚಿವರಾಗಿದ್ದು, “ಕರ್ನಾಟಕ ನಾಮಕರಣ’ದ ಸುವರ್ಣ ಸಂಭ್ರಮ ಆಚರಣೆ, ಹಿಂದಿನಂತೆ ಇಂದೂ ಗದುಗಿನಲ್ಲಿ ಆಚರಿಸಲು ವಿಶೇಷವಾಗಿ ಶ್ರಮಿಸುತ್ತಿದ್ದಾರೆ. ಇತಿಹಾಸ ಮರುಕಳಿಸುತ್ತದೆ ಎನ್ನುವುದಕ್ಕೆ ಇದೇ ನಿದರ್ಶನ ಎನ್ನಬಹುದು.
1973ರ ನ. 3ರಂದು ಗದಗನಲ್ಲಿ ಕನ್ನಡ ಜ್ಯೋತಿ ಮೆರವಣಿಗೆ ಆಗಿತ್ತು. ಅಂದಿನ ಸಿಎಂ ಡಿ. ದೇವರಾಜ ಅರಸು ಸರ್ಕಾರದಲ್ಲಿ ಅಂದು ಮಂತ್ರಿಯಾಗಿದ್ದ ಕೆ.ಎಚ್. ಪಾಟೀಲ ಅವರ ಸಾರಥ್ಯದಲ್ಲಿ ಗದುಗಿನಲ್ಲಿ ನಡೆದ ಮೆರವಣಿಗೆಯ ಹಾದಿಯಲ್ಲೇ “ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ’ದ ಮೆರವಣಿಗೆಯೂ ಸಾಗಲಿದೆ ಎಂಬುದು ಈ ಬಾರಿಯ ಮತ್ತೊಂದು ವಿಶೇಷ.
*ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.