Team Udayavani, Mar 25, 2019, 4:46 PM IST
ಗದಗ: ನಗರದ ಎಪಿಎಂಸಿ ಆವರಣದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಎರಡನೇ ದಿನವಾದ ರವಿವಾರ ಪ್ರೇಕ್ಷಕರಿಲ್ಲದೇ ಬಣಗುಡುತ್ತಿತ್ತು.
ಗದಗ: ತೋಟಗಾರಿಕೆ ಇಲಾಖೆಯಿಂದ ನಗರದ ವಿವೇಕಾನಂದ ಸಭಾಂಗಣದಲ್ಲಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ಪ್ರೇಕ್ಷಕರ ಕೊರತೆ ಮಧ್ಯೆಯೇ ತೆರೆ ಕಂಡಿತು. ಪ್ರಚಾರದ ಕೊರತೆ, ಬೇಸಿಗೆಯ ಬಿಸಿಲು ಹಾಗೂ ಪರೀಕ್ಷಾ ದಿನಗಳಾಗಿದ್ದರಿಂದ ರೈತರು ಸೇರಿದಂತೆ ಅವಳಿ ನಗರದ ಸಾರ್ವಜನಿಕರು ಫಲಪುಷ್ಪ ಪ್ರದರ್ಶನದತ್ತ ಸುಳಿಯಲಿಲ್ಲ. ಪರಿಣಾಮ ಎರಡು ದಿನಗಳ ಫಲಪುಷ್ಪ ಪ್ರದರ್ಶನ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
ನಗರದ ಎಪಿಎಂಸಿ ಆವರಣದಲ್ಲಿ ಶನಿವಾರ ಆರಂಭಗೊಂಡಿರುವ ಫಲಪುಷ್ಪ ಪ್ರದರ್ಶನ ಭಾನುವಾರ ಸಂಜೆ ತೆರೆ ಕಂಡಿತು. ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ಜಾರಿಗೊಂಡಿದ್ದರಿಂದ ಯಾವುದೇ ರೀತಿಯ ಉದ್ಘಾಟನೆ, ಸಮಾರೋಪ ಸಮಾರಂಭವಿಲ್ಲದೇ ಸಾಂಕೇತಿಕ ಹಾಗೂ ಸಪ್ಪೆಯಾಗಿ ನಡೆಯಿತು.
ಕಳೆಗುಂದಿದ ಫಲಪುಷ್ಪ ಪ್ರದರ್ಶನ: ಬಗೆಬಗೆಯ ಫಲ-ಪುಷ್ಪಗಳಿಂದ ನಾನಾ ಆಕೃತಿಗಳನ್ನು ತಯಾರಿಸಿದ್ದು, ಕಣ್ಮನ ಸೆಳೆಯುವಂತಿತ್ತು. ಆ ಪೈಕಿ ಮಕ್ಕಳನ್ನು ಆಕರ್ಷಿಸಲೆಂದೇ ಬೃಹತ್ ಗಾತ್ರದ ಜಿರಾಫೆ, ಆನೆ, ಪುಷ್ಪಕ ವಿಮಾನ, ಡ್ಯಾನ್ಸಿಂಗ್ ಡಾಲ್ಸ್‌ಗಳನ್ನು ನಿರ್ಮಿಸಲಾಗಿತ್ತು. ಅದರಂತೆ ಈ ಭಾಗದ ಧಾರ್ಮಿಕ ಭಾವನೆಗಳನ್ನು
ಇಮ್ಮುಡಿಗೊಳಿಸಲು ಹೂವಿನಿಂದ ತೋಂಟದಾರ್ಯ ಮಠದ ಹೆಬ್ಟಾಗಿ ನಿರ್ಮಿಸಲಾಗಿತ್ತು. ಕುಂಬಳಕಾಯಿಯಲ್ಲಿ ಸಿದ್ಧಗಂಗಾ ಮಠದ ಲಿಂ.ಶಿವಕುಮಾರ ಸ್ವಾಮೀಜಿ, ಲಿಂ. ಸಿದ್ಧಲಿಂಗ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮಹಾನ್ ದಾರ್ಶನಿಕ ಭಾವಚಿತ್ರಗಳನ್ನು ಕೆತ್ತನೆ ಮಾಡಲಾಗಿತ್ತು. ನೂರಾರು ಹೂ ಕುಂಡಗಳನ್ನು ಜೋಡಿಸಿ, ಜನಾಕರ್ಷಣೆಗೆ ಪ್ರಯತ್ನಿಸಲಾಗಿತ್ತು.
ಹೀಗಾಗಿ ಹೆಂಗಳೆಯರು, ಶಾಲಾ- ಕಾಲೇಜು ಮಕ್ಕಳು, ಸಾರ್ವಜನಿಕರಿಂದ ಫಲಪುಷ್ಪ ಪ್ರದರ್ಶನ ತುಂಬಿ ತುಳಕಬೇಕಿತ್ತು. ಆದರೆ, ಪರೀಕ್ಷೆ ಹಾಗೂ ಸೂರ್ಯನ ಪ್ರಖರತೆ ಹೆಚ್ಚಾಗಿದ್ದರಿಂದ ಇತ್ತ ಯಾರೂ ಸುಳಿಯಲಿಲ್ಲ. ಹೀಗಾಗಿ ಫಲಪುಷ್ಪ ಪ್ರದರ್ಶನ ನೋಡುಗರಿಲ್ಲದೇ ಬಣಗುಡುತ್ತಿತ್ತು.
ಪ್ರದರ್ಶನಕ್ಕೆ ಪ್ರಚಾರ ಕೊರತೆ: ನಗರದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಿರುವ ಬಗ್ಗೆ ಇಲಾಖೆ ಅಧಿಕಾರಿಗಳು ಒಮ್ಮೆ ಸುದ್ದಿಗೋಷ್ಠಿ ನಡೆಸಿರುವುದನ್ನು ಹೊರತು ಪಡಿಸಿದರೆ ಹೆಚ್ಚಿನ ಪ್ರಚಾರ ನಡೆಸಿಲ್ಲ. ಸರಕಾರದ ಅನುದಾನ ವಾಪಾಸ್ಸಾಗುತ್ತದೆ ಎಂಬ ಕಾರಣದಿಂದ ತರಾತುರಿ ಕಾಟಾಚಾರಕ್ಕೆ ಆಯೋಜನೆ ಮಾಡಿದ್ದಾರೆ ಆರೋಪಗಳು ಕೇಳಿ ಬಂದಿವೆ.
ಫಲಪುಷ್ಪ ಪ್ರದರ್ಶನ ಈ ಭಾಗದ ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿರುವ ರೈತರಿಗೆ ಮಾರ್ಗದರ್ಶನ ಆಗಬೇಕು. ಆದರೆ, ಹೆಚ್ಚಿನ ರೈತರಿಗೆ ಈ ಕುರಿತು ಮಾಹಿತಿ ತಲುಪಿಲ್ಲ. ಅಲ್ಲಲ್ಲಿ ನಾಲ್ಕಾರು ಜನರ ಮಾತ್ರ ಕಂಡುಬರುತ್ತಿದ್ದರು. ರೈತರು, ಪ್ರೇಕ್ಷಕರ ಕೊರತೆಯಿಂದ ಫಲಪುಷ್ಪ ಪ್ರದರ್ಶನ ಸೊರಗಿದೆ.
ಇಲಾಖೆ ಮೂಲಗಳ ಪ್ರಕಾರ 2018ರ ಸೆಪ್ಟಂಬರ್ -ಅಕ್ಟೋಬರ್ ತಿಂಗಳಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಇಲಾಖೆ ಚಿಂತನೆ ನಡೆಸಿತ್ತು. ಆದರೆ, ಸದ್ಯದಲ್ಲೇ ಜಿಲ್ಲಾ ಉತ್ಸವ ಏರ್ಪಡಿಸಲಾಗುತ್ತದೆ. ಕಳೆದ ವರ್ಷದಂತೆ ಜಿಲ್ಲಾ ಉತ್ಸವದಲ್ಲೇ ಆಯೋಜಿಸುವಂತೆ ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ ಸೂಚಿಸಿದ್ದರು. ಬಳಿಕ ಜನವರಿ 26ರಂದು ಆಯೋಜಿಸಲು ಮುಂದಾದಾಗಲೇ ಅದೇ ಮಾತು ಕೇಳಿ ಬಂದಿತ್ತು. ಕೊನೆಗೆ ಸರಕಾರಕ್ಕೆ ಬಜೆಟ್ ವಾಪಸ್ಸಾಗುತ್ತದೆ ಎಂಬ ಕಾರಣಕ್ಕೆ ಇದೀಗ ಆಯೋಜಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಸಾರ್ವಜನಿಕರನ್ನು ಆಕರ್ಷಿಸುವ ಉದ್ದೇಶದಿಂದ ಎಲ್ಲ ಕಲಾಕೃತಿಗಳನ್ನು ಅತ್ಯಂತ ಸುಂದರವಾಗಿ ಸಿದ್ಧಗೊಳಿಸಿದ್ದೇವೆ. ಆಟೊಗಳಲ್ಲಿ ಧ್ವನಿವರ್ದಕಗಳಲ್ಲಿಟ್ಟು ಎರಡು ದಿನಗಳ ಕಾಲ ಪ್ರಚಾರ ನಡೆಸಿದ್ದೇವೆ. ಆದರೆ, ಪರೀಕ್ಷೆ ಮತ್ತು ಬಿಸಿಲಿನ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಿಲ್ಲ. ಆದರೆ, ಶನಿವಾರ ರಾತ್ರಿ 6ರಿಂದ 11ರ ವರೆಗೆ ಸುಮಾರು 5 ಸಾವಿರ ಜನರು ವೀಕ್ಷಿಸಿದ್ದಾರೆ.
ಎಲ್. ಪ್ರದೀಪ್,
ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಹೂವುಗಳಿಂದ ತಯಾರಿಸಿರುವ ಕಲಾಕೃತಿಗಳು ಅತ್ಯಂತ ಸುಂದರವಾಗಿ ಮೂಡಿಬಂದಿವೆ. ಆದರೆ, ಫಲಪುಷ್ಪ ಪ್ರದರ್ಶನದ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿಯಿಲ್ಲ.
ದೀಪಾ ಪಾಟೀಲ, ಸ್ಥಳೀಯರು.