ಸೊಂಟ ಉಳುಕೀತು ಜೋಕೆ!
ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳಲ್ಲಿ ತಗ್ಗು-ಗುಂಡಿ; ಜಿಲ್ಲಾಡಳಿತ-ನಗರಾಡಳಿತಕ್ಕೆ ಹಿಡಿಶಾಪ
Team Udayavani, Jul 15, 2022, 4:54 PM IST
ಗದಗ: ರಸ್ತೆಯ ತುಂಬಾ ಗುಂಡಿಗಳು, ಗುಂಡಿಗಳ ತುಂಬಾ ನೀರು. ವಾಹನ ಸವಾರರು ಆಯತಪ್ಪಿ ರಸ್ತೆ ಗುಂಡಿಗಳಲ್ಲಿ ಬಿದ್ದರೆ ಸೊಂಟ ಉಳುಕೋದು ಗ್ಯಾರಂಟಿ!
ಹೌದು… ಇದು ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳ ವಸ್ತುಸ್ಥಿತಿ. ಹಾಗಾಗಿ, ವಾಹನ ಸವಾರರು ಹುಷಾರಾಗಿಯೇ ರಸ್ತೆಗಿಳಿಯಬೇಕಾಗಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ರಸ್ತೆ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ರಸ್ತೆಯ ತುಂಬಾ ತಗ್ಗು-ಗುಂಡಿಗಳು ಬಿದ್ದಿದ್ದು, ದುರಸ್ತಿ ಭಾಗ್ಯ ಮಾತ್ರ ಕಂಡಿಲ್ಲ. ಗುಂಡಿಗಳಿಗೆ ಆಗಾಗ ಮಣ್ಣಿನಿಂದ ತೇಪೆ ಹಚ್ಚುವ ಕಾರ್ಯ ನಡೆಯಿತಾದರೂ ಎರಡೇ ದಿನಗಳಲ್ಲಿ ಮತ್ತೆ ಗುಂಡಿಗಳು ತೆರೆದುಕೊಳ್ಳುತ್ತ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ.
ಗದಗ-ಪಾಲಾ-ಬದಾಮಿ ರಸ್ತೆ, ಮಹಾತ್ಮ ಗಾಂಧಿ ಸರ್ಕಲ್, ಭೂಮರಡ್ಡಿ ಸರ್ಕಲ್, ಮುಳಗುಂದ ನಾಕಾ, ಕಳಸಾಪೂರ ರಸ್ತೆ, ಮುಳಗುಂದ ರಸ್ತೆ, ತಿಲಕ್ ಪಾರ್ಕ್ ರಸ್ತೆ, ಹಳೆ ಕೋರ್ಟ್ ಸರ್ಕಲ್, ಕಾಟನ್ ಸೇಲ್ ಸೊಸೈಟಿ ಮುಂಭಾಗ, ಹೊಸ ಬಸ್ ನಿಲ್ದಾಣ ರಸ್ತೆ, ಜೆ.ಟಿ. ಕಾಲೇಜು ರಸ್ತೆ ಸೇರಿದಂತೆ ಅವಳಿ ನಗರದ 35 ವಾರ್ಡ್‌ಗಳ ರಸ್ತೆಗಳು ಹದಗೆಟ್ಟಿವೆ. ಹಾಗಾಗಿ, ದ್ವಿಚಕ್ರ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವ ಸ್ಥಿತಿ ಬಂದೊದಗಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚಾರ ಅನ್ನೋದು ನರಕವಾಗಿದೆ. ತಾಲೂಕು ಹಾಗೂ ಗ್ರಾಮಗಳಿಂದ ನಗರಕ್ಕೆ ಆಗಮಿಸುವ ಸಾರ್ವಜನಿಕರು ಕುಗ್ರಾಮಕ್ಕೆ ಬಂದಿದ್ದೇವೇನೋ ಎನ್ನುವ ಭಾವನೆ ಮೂಡುತ್ತಿದೆ. ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು ಪ್ರತಿನಿತ್ಯ ಜಿಲ್ಲಾಡ ಳಿತ, ನಗರಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಜಿಟಿ ಜಿಟಿ ಮಳೆಗೆ ಹಾಳಾದ ರಸ್ತೆ
ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಸಿಸಿ ರಸ್ತೆಗಳು ಹೊರತುಪಡಿಸಿ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಬೆಟಗೇರಿ ಶರಣಬಸವೇಶ್ವರ ನಗರ, ನಾಗಮ್ಮತಾಯಿ ಬಡಾ ವಣೆ, ಮಂಜುನಾಥ ನಗರ, ವಸಂತಸಿಂಗ್ ಜಮಾದಾರ್ ನಗರ, ಕಣಗಿನಹಾಳ ರಸ್ತೆ, ಸಂಭಾಪೂರ ರಸ್ತೆ ಸೇರಿ ವಿವಿಧೆಡೆ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಸಂಚಾರ ಸಂಪೂರ್ಣ ದುಸ್ತರವಾಗಿದೆ.
ಕೋಟಿ ಅನುದಾನವೆಲ್ಲಿ?
ಈ ಹಿಂದೆ ಗದಗ-ಬೆಟಗೇರಿ ಅವಳಿ ನಗರದ ರಸ್ತೆ ಸುಧಾರಣೆಗಾಗಿ 10 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರು ತಿಳಿಸಿದ್ದರು. ಆದರೆ, ಬಿಡುಗಡೆಯಾದ ಹಣವೆಲ್ಲಿ. ರಸ್ತೆ ಸುಧಾರಣೆಗಾಗಿ ಕೈಗೊಂಡಿರುವ ಕ್ರಮಗಳೆಲ್ಲಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ರಾಜ್ಯದ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಬೇಕಿದ್ದ ಲೋಕೋಪಯೋಗಿ ಸಚಿವರು ಜಿಲ್ಲೆಯವರಾಗಿದ್ದರೂ ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳ ಸುಧಾರಣೆಗೆ ಗಮನ ಹರಿಸದಿರುವುದು ದುರಂತ. ಶೀಘ್ರ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಹೋರಾಟ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ದುರಸ್ತಿಗೊಳಿಸಬೇಕು. –ಅಶೋಕ ಮಂದಾಲಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಹೆಸರಿಗೆ ಮಾತ್ರ ರಸ್ತೆ ಅಂತ ಹೇಳುತ್ತಿದ್ದೇವೆ. ಆದರೆ, ನಿಜಕ್ಕೂ ಅವು ಗುಂಡಿಗಳು. ಗದಗ-ಬೆಟಗೇರಿ ಅವಳಿ ನಗರದ ಜನರು ರಸ್ತೆಗಿಳಿಯಲು ಭಯ ಪಡುತ್ತಿದ್ದಾರೆ. ಹೆಜ್ಜೆ-ಹಜ್ಜೆಗೂ ತಗ್ಗು-ಗುಂಡಿಗಳು ವಾಹನ ಸವಾರರ ಜೀವ ಹಿಂಡುತ್ತಿವೆ. ಸಾಕಷ್ಟು ಜನರು ಗುಂಡಿಗಳಲ್ಲಿ ಬಿದ್ದು ಎದ್ದಿದ್ದಾರೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ದಿನನಿತ್ಯ ಭಯದಿಂದಲೇ ಸಂಚರಿಸುವಂತಾಗಿದೆ. -ಚಂದ್ರಕಾಂತ ಚವ್ಹಾಣ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜಯ ಕರ್ನಾಟಕ ಸಂಘಟನೆ
-ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.