ಗದಗ: ಇಳುವರಿ ಕುಂಠಿತ- ಬಹುಪಯೋಗಿ ನಿಂಬೆ ಬಲು ದುಬಾರಿ
Team Udayavani, Mar 5, 2024, 2:52 PM IST
ಉದಯವಾಣಿ ಸಮಾಚಾರ
ಗದಗ: ಬೇಸಿಗೆ ಸಮೀಪಿಸುತ್ತಿರುವ ಬೆನ್ನಲ್ಲೇ ನಿಂಬೆಹಣ್ಣಿನ ದರದಲ್ಲೂ ದಿಢೀರ್ ಏರಿಕೆ ಕಂಡಿದೆ. ನಿಂಬೆಹಣ್ಣಿನ ಇಳುವರಿ ಕುಂಠಿತ ಹಾಗೂ ಆಮದು ಪ್ರಮಾಣದಲ್ಲಿ ಇಳಿಕೆಯಾಗಿದ್ದರ ಪರಿಣಾಮ ನಿಂಬೆಹಣ್ಣಿನ ದರದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಗದಗನಕ್ಕೇರಿದ್ದ ಬೆಳ್ಳುಳ್ಳಿ ಬೆಲೆ ನಂತರ ಸುಧಾರಣೆ ಕಂಡಿತ್ತು. ಆದರೆ ನಿಂಬೆಹಣ್ಣಿನ ದರದಲ್ಲಿ ಎರಡು ಪಟ್ಟು ಹೆಚ್ಚಾಗಿದ್ದು, ಬೇಸಿಗೆ ಮುಗಿಯುವವರೆಗೆ ದರದಲ್ಲಿ ಇನ್ನೂ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಮೊದಲೆಲ್ಲ 100 ನಿಂಬೆಹಣ್ಣಿಗೆ 250ರಿಂದ 300 ರೂ., ಪ್ರತಿ ನಿಂಬೆಹಣ್ಣಿಗೆ 3ರಿಂದ 5ರೂ.ಗೆ ಸಿಗುತ್ತಿದ್ದ ನಿಂಬೆಹಣ್ಣು ಸದ್ಯ ಮಾರುಕಟ್ಟೆಯಲ್ಲಿ ಸಗಟು ದರವು 100 ನಿಂಬೆಹಣ್ಣಿಗೆ 600 ರಿಂದ 650 ರೂ., ಚಿಲ್ಲರೆ ದರದಲ್ಲಿ ಪ್ರತಿ ನಿಂಬೆಹಣ್ಣಿಗೆ 7 ರಿಂದ 10 ರೂ. ನಿಗದಿಯಾಗಿದೆ. ಅಂದರೆ ದರದಲ್ಲಿ ಎರಡು ಪಟ್ಟು ಏರಿಕೆಯಾದಂತಾಗಿದೆ. ಅವಧಿ ಗೂ ಮುನ್ನವೇ ತಾಪಮಾನ ಏರಿಕೆಯಾಗಿದೆ.
ಎಲ್ಲೆಡೆ ವಿಪರೀತ ಬಿಸಿಲು, ಬಿಸಿ ಹವೆಯಿಂದ ಸಾರ್ವಜನಿಕರು ತಲ್ಲಣಗೊಂಡಿದ್ದಾರೆ. ಇದರ ಬೆನ್ನಲ್ಲೇ ನಿಂಬೆಹಣ್ಣಿನ ದರ ಹೆಚ್ಚಳವಾದಂತಾಗಿದೆ. ಬಿಸಿಲಿನ ಝಳದಿಂದ ದಾಹ ತೀರಿಸಲು ಜನರು ನಿಂಬೆ ಪಾನಕ ಕುಡಿಯುವುದು ಸಾಮಾನ್ಯ. ಆದರೆ ಈ ಬಾರಿ ಇಳುವರಿ ಹಾಗೂ ಪೂರೈಕೆ ಕೊರತೆಯಿಂದ ನಿಂಬೆಹಣ್ಣಿನ ಬೆಲೆ ಏರಿಕೆಯಾಗಿದೆ.
ಗದಗ ಜಿಲ್ಲೆಗೆ ವಿಜಯಪುರ ಸೇರಿದಂತೆ ಆಂಧ್ರ, ತೆಲಂಗಾಣ ರಾಜ್ಯಗಳಿಂದ ಮಾರುಕಟ್ಟೆಗೆ ನಿಂಬೆ ಬರುತ್ತಿದೆಯಾದರೂ ಬೇಡಿಕೆಗೆ ಅನುಗುಣವಾಗಿ ನಿಂಬೆಹಣ್ಣು ಪೂರೈಕೆಯಾಗುತ್ತಿಲ್ಲವಾಗಿದೆ.
ಅಸಲು ಬಂದರೆ ಸಾಕು: ನಿಂಬೆಹಣ್ಣಿಗೆ ವರ್ಷ ಪೂರ್ತಿ ಬೇಡಿಕೆ ಇರುತ್ತದೆ. ಹಾಗಂತ ವರ್ಷ ಪೂರ್ತಿ ಬೆಲೆ ಹೆಚ್ಚಿರಲ್ಲ. ಬೇಸಿಗೆ ಬಂದಾಗಲಷ್ಟೇ ನಮಗೂ ಸ್ವಲ್ಪ ವ್ಯಾಪಾರ. ಮಾರುಕಟ್ಟೆಯಿಂದ ತರುವಾಗ ನಮಗೆ ಆರಿಸಿಕೊಳ್ಳಲು ಅವಕಾಶವಿಲ್ಲ.ಆದರೆ ಕೊಳ್ಳುವವರು ಹಣ್ಣು ಸಣ್ಣದಿದ್ದರೆ ನಾಲ್ಕು ಕೊಳ್ಳುವ ಕಡೆಗೆ 7-8 ಕೊಡುವಂತೆ ಕೇಳುತ್ತಾರೆ. ಇಲ್ಲವೆ ದೊಡ್ಡದ್ದನ್ನೇ ಹುಡುಕುತ್ತಾರೆ. ಇನ್ನು ಬೇಸಿಗೆಯಲ್ಲಿ ಹೆಚ್ಚು ದಿನ ಹಣ್ಣನ್ನು ಇಡಲು ಆಗದು. ಹೀಗಾಗಿ ಒಮ್ಮೊಮ್ಮೆ ಅಸಲು ಬಂದರೆ ಸಾಕು ಎನ್ನುವಂತಾಗುತ್ತದೆ ಎನ್ನುತ್ತಾರೆ ಚಿಲ್ಲರೆ ವ್ಯಾಪಾರಿ ಲಕ್ಷ್ಮವ್ವ ಭಜಂತ್ರಿ. ಪ್ರತಿ ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಬೇಡಿಕೆ ಮತ್ತು ಬೆಲೆ ಹೆಚ್ಚಾಗುವುದು ಸಹಜ. ಆದರೆ ಕಳೆದ ರಾಜ್ಯಾದ್ಯಂತ ಬರ ಆವರಿಸಿದ್ದರ ಪರಿಣಾಮ ಈ ಬಾರಿ ಇಳುವರಿಯೂ ಕಡಿಮೆಯಾಗಿದೆ. ಇದರಿಂದಾಗಿ ನಿಂಬೆ ಜ್ಯೂಸ್‌ಗೆ 15-15ರೂ., ನಿಂಬು ಸೋಡಾ 20-25 ರೂ. ಆಗಿದೆ. 10 ರೂ. ಇದ್ದ ಬೀದಿ ಬದಿ ಮಾರುವ ಗೋಲಿ ಸೋಡಾ ಈಗ 25 ರೂ. ಗೆ ಏರಿದೆ.
ಧಾರ್ಮಿಕ ಕಾರ್ಯಗಳಿಗೆ ಬಳಕೆ:
ನಿಂಬೆಹಣ್ಣನ್ನು ವಿವಿಧ ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಅಮಾವಾಸ್ಯೆ, ಹುಣ್ಣಿಮೆ, ಶುಕ್ರವಾರ, ಮಂಗಳವಾರ ಹಾಗೂ ಭಾನುವಾರ ಹೀಗೆ ವಿವಿಧ ಸಮಯಗಳಲ್ಲಿ ಪೂಜೆಗೆಂದು ನಿಂಬೆ ಹಣ್ಣನ್ನು ಬಳಸಲಾಗುತ್ತದೆ. ಹೀಗಾಗಿ ದೇವಸ್ಥಾನಗಳ ಸುತ್ತಮುತ್ತಲಿನ ಕೆಲ ವ್ಯಾಪಾರಿಗಳು ಈ ದಿನಗಳಂದು ನಿಂಬೆಹಣ್ಣಿನ ಬೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ.
ನಿಂಬೆ ದರ
ಸಗಟು ದರ: 100 ಹಣ್ಣಿಗೆ 600 ರಿಂದ 650 ರೂ.
ಚಿಲ್ಲರೆ ದರ: ಪ್ರತಿ ಹಣ್ಣಿಗೆ 7 ರಿಂದ 10 ರೂ.
ಬಾಯಾರಿಕೆಯಾದಾಗ ನಿಂಬೆ ಪಾನೀಯ ಕುಡಿದರೆ ಬಾಯಾರಿಕೆ ಕಡಿಮೆಯಾಗುವುದು. ದೇಹಕ್ಕೂ ಚೈತನ್ಯ ತುಂಬುತ್ತದೆ. ದೇಹ ತಂಪಾಗಿಡುತ್ತದೆ. ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ದೇಹ ನಿರ್ಜಲೀಕರಣದಿಂದ ತಪ್ಪಿಸಲು ನಿಂಬೆ ಹಣ್ಣನ್ನು ಬಹಳವಾಗಿ ಬಳಸುತ್ತೇವೆ. ಇದು ದೇಹವನ್ನು ತಂಪಾಗಿ ಇಡುವಲ್ಲಿಯೂ ಸಹಕಾರಿ. ದೇಹಕ್ಕೂ ಚೈತನ್ಯ ನೀಡುತ್ತದೆ.
ಡಾ|ಮಹೇಶ ಹಿರೇಮಠ, ವೈದ್ಯ
ಪ್ರಸಕ್ತ ಬೇಸಿಗೆಯಲ್ಲಿ ನಿಂಬೆಹಣ್ಣಿನ ಇಳುವರಿ ಹಾಗೂ ಪೂರೈಕೆ ಕುಂಠಿತಗೊಂಡಿದ್ದರಿಂದ ನಿಂಬೆಹಣ್ಣಿನ ದರದಲ್ಲಿ ಏರಿಕೆ ಕಂಡು ಬಂದಿದ್ದು, ಮಳೆಗಾಲ ಆರಂಭವಾಗುವವರೆಗೂ ನಿಂಬೆಹಣ್ಣಿನ ದರದಲ್ಲಿ ಇಳಿಕೆಯಾಗುವುದು ಕಷ್ಟ.
ನಿಂಗಪ್ಪ ಬಟ್ಟೂರ, ನಿಂಬೆಹಣ್ಣಿನ ವ್ಯಾಪಾರಿ.
*ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.