ಕುಡಿಯಲು ನೀರು ಕೊಡಿ, ಇಲ್ಲ ವಿಷ ಕೊಡಿ
•ರೋಣದಲ್ಲಿ ಕುಡಿವ ನೀರಿನ ಸಮಸ್ಯೆ •25 ರೊಳಗೆ ನೀರು ಬಿಡುವುದಾಗಿ ಜಿಲ್ಲಾಧಿಕಾರಿ ಭರವಸೆ
Team Udayavani, May 15, 2019, 12:37 PM IST
ರೋಣ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ರೋಣ ಪುರಸಭೆ ಸದಸ್ಯರು ಪ್ರತಿಭಟನೆ ನಡೆಸಿದರು.
ರೋಣ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಖಾಂತರ ರೋಣ ಪಟ್ಟಣಕ್ಕೂ ಕುಡಿಯುವ ನೀರನ್ನು ಪೂರೈಸಬೇಕು ಎಂದು ಆಗ್ರಹಿಸಿ ಪಟ್ಟಣದ ಪುರಸಭೆ ಸದಸ್ಯರು, ಮಠಾಧೀಶರು, ಪಟ್ಟಣದ ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಿದ್ಧಾರೂಢ ಮಠದಿಂದ ಪ್ರತಿಭಟನೆ ಪ್ರಾರಂಭಗೊಂಡು ಪ್ರಮುಖ ರಸ್ತೆಗಳಾದ ಸೂಡಿ ವೃತ್ತ, ಮುಲ್ಲಾನಬಾವಿ ವೃತ್ತ ಹಾಗೂ ಪೋತರಾಜನ ಕಟ್ಟೆ ಮೂಲಕ ಸಂಚರಿಸಿ ಪುರಸಭೆ ಆವರಣದಲ್ಲಿ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.
ಪುರಸಭೆ ಸದಸ್ಯ ಮುಖಂಡ ಮಿಥುನ್ ಪಾಟೀಲ ಮಾತನಾಡಿ, ಸದ್ಯ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಪಟ್ಟಣದಲ್ಲಿ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಹಾಹಾಕಾರ ಪ್ರಾರಂಭವಾಗಿದೆ. 15 ದಿನಗಳಿಗೊಮ್ಮೆ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿದ್ದು, ಜನ ಜಾನುವಾರಗಳಿಗೆ ಕುಡಿಯಲು ಹನಿ ನೀರಿಗೂ ಪರಿತಪಿಸುವಂತಾಗಿದೆ. ಅಲ್ಲದೆ ಪಟ್ಟಣದ ಭೂಮಿಯು ಒಣ ಭೂಮಿಯಾಗಿದ್ದು, ಇಲ್ಲಿ ನದಿ, ಕೆರೆ, ಹಳ್ಳಗಳ ನೀರಿನ ಮೂಲಗಳಿಲ್ಲ. ಇದರಿಂದಾಗಿ ಪಟ್ಟಣದ ಜನ ಬೋರ್‌ವೆಲ್ ಹಾಗೂ ಚೊಳಚಗುಡ್ಡದಿಂದ ಬರುವ ನದಿ ನೀರನ್ನೇ ನಂಬಿ ಜೀವನ ನಡೆಸುವಂತಾಗಿದೆ. ಆದ್ದರಿಂದ ಕೂಡಲೆ ಜಿಲ್ಲಾಧಿಕಾರಿಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಪಟ್ಟಣಕ್ಕೆ ನೀರನ್ನು ಒದಗಿಸಬೇಕು. ಇಲ್ಲವಾದರೆ ನೀರಿಗಾಗಿ ಮುಂದೆ ನಡೆಯುವ ಹೋರಾಟಕ್ಕೆ ಜಿಲ್ಲಾಡಳಿತವೇ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದರು.
ಗುಲಗಂಜಿ ಮಠದ ಗುರುಪಾದ ಸ್ವಾಮಿಗಳು ಮಾತನಾಡಿ, ಗಜೇಂದ್ರಗಡಕ್ಕೆ ಯಾವ ರೀತಿಯಾಗಿ ಬಹುಗ್ರಾಮ ಕುಡಿವ ನೀರಿನ ಯೋಜನೆ ವಿಸ್ತರಿಸಲಾಗಿದೆಯೋ ಅದೇ ರೀತಿ ರೋಣ ನಗರಕ್ಕೂ ವಿಸ್ತರಿಸಬೇಕು. ಪಟ್ಟಣದ ನೀರಿನ ಸಮಸ್ಯೆಗಾಗಿ ಸದಸ್ಯರು ಪಕ್ಷಾತೀತ ಹೋರಾಟ ಮಾಡುತ್ತಿರುವುದು ಪಟ್ಟಣದಲ್ಲಿ ಇದು ಒಳ್ಳೆಯ ಬೆಳವಣಿಗೆಯಾಗಿದೆ. ಹೋರಾಟ ಯಶಸ್ವಿಯಾಗುವವರೆಗೆ ಹೋರಾಟಗಾರರೊಂದಿಗೆ ನಾನು ಇರುತ್ತೇನೆ. ಈ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ರೋಣ ತಹಶೀಲ್ದಾರ್ ಶರಣಮ್ಮ ಕಾರಿ ಆಗಮಿಸಿ, ಇನ್ನು ಎರಡು ಮೂರು ದಿನಗಳಲ್ಲಿ ನೀರನ್ನು ಒದಗಿಸುತ್ತೇವೆ. ಈ ಕುರಿತಾಗಿ ನಾನು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಎರಡು ದಿನಗಳ ಕಾಲಾವಕಾಶವನ್ನು ನೀಡಿ ನೀರನ್ನು ಪೂರೈಸುತ್ತೇವೆ ಎಂದು ಹೇಳುತ್ತಿದ್ದಂತೆ ಆಕ್ರೋಶಗೊಂಡ ಪ್ರತಿಭಟನಾಕಾರರು, ಕಳೆದ ಐದು ತಿಂಗಳುಗಳಿಂದ ಇದೇ ಉತ್ತರ ಹೇಳುತ್ತ ಬಂದಿದ್ದಿರಿ. ಇದುವರೆಗೂ ಸಮಸ್ಯೆಗೆ ಸೂಕ್ತ ಪರಿಹಾರ ಮಾತ್ರ ದೊರೆತಿಲ್ಲ. ನೀರು ಕೊಡಿ ಇಲ್ಲವಾದರೆ ವಿಷ ಕೊಡಿ. ನಮ್ಮ ಸಮಸ್ಯೆ ಪರಿಹರಿಸಿ. ಅಲ್ಲಿಯವರೆಗೂ ಜಾಗ ಬಿಟ್ಟು ಕದಲುವುದಿಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂಬ ಪಟ್ಟು ಹಿಡಿದರು. ಜಿಲ್ಲಾಧಿಕಾರಿಗಳ ಪರವಾಗಿ ನಗರಾಭಿವೃದ್ದಿ ಕೋಶಾಧಿಕಾರಿ ಬರುವರೆಗೆ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಅವರು ಬಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ಪಟ್ಟಣದ ಮುಖಂಡರಾದ ಅಶೋಕ ನವಲಗುಂದ, ಪುರಸಭೆ ಸದಸ್ಯರಾದ ಗದಿಗೆಪ್ಪ ಕಿರೇಸೂರ, ಬಾವಸಾಬ ಬೇಟಗೇರಿ, ವಿಜಯ ಗಡಗಿ, ಸಂತೋಷ ಕಡಿವಾಲ, ಬಸನಗೌಡ ರಂಗನಗೌಡ್ರ, ಅಶೋಕ ದೇಶಣ್ಣವರ, ಮಲ್ಲಪ್ಪ ಮಾಡಲಗೇರಿ, ಮೌನೇಶ ಹಾದಿಮನಿ, ಸಂಗು ನವಲಗುಂದ, ಬಸನಗೌಡ ಬಸನಗೌಡ್ರ, ಬಸವರಾಜ ಕೊಟಗಿ,ಅಸ್ಲಾ ಕೊಪ್ಪಳ, ಖಾಧೀರಸಾಬ ಸಂಕನೂರ, ಎ.ಎ. ತಹಶೀಲ್ದಾರ, ದುರಗಪ್ಪ ಹಿರೇಮನಿ, ಈಶ್ವರಪ್ಪ ಕಡುಬಿನಕಟ್ಟಿ, ಅಂದಪ್ಪ ಗಡಗಿ, ದಾವಲಸಾಬ ಬಾಡಿನ, ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.