ಸರ್ವೋಚ್ಛ ನ್ಯಾಯಾಲಯದಲ್ಲಿ 23ರಂದು ಮಹದಾಯಿ ವಿಚಾರಣೆ
Team Udayavani, Jan 15, 2020, 3:07 PM IST
ನರಗುಂದ: ಈಗಾಗಲೇ ಗೋವಾ ಮತ್ತು ಕರ್ನಾಟಕ ರಾಜ್ಯಗಳ ಮೇಲ್ಮನವಿ ಸರ್ವೋತ್ಛ ನ್ಯಾಯಾಲಯದಲ್ಲಿವೆ. ಹೀಗಾಗಿ ಜ. 23ರಂದು ಮಹದಾಯಿ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಕುರಿತಾಗಿ ಸರ್ವೋತ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ನಮಗೆ ನ್ಯಾಯ ದೊರಕುವ ವಿಶ್ವಾಸವಿದೆ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ಮಂಗಳವಾರ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 1643ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯದೇವತೆಯಿಂದ ನಮಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿ ಹಾಗೂ ಹೆಚ್ಚಿನ ನೀರು ಕೇಳಿ ಗೋವಾ ರಾಜ್ಯ ಮೇಲ್ಮನವಿ ಸಲ್ಲಿಸಿದೆ. ಅದರಂತೆ ಕರ್ನಾಟಕ ಕೂಡ ಹಂಚಿಕೆಯಾದ ನೀರು ಬಳಕೆಗೆ ಅನುಮತಿ ಕೋರಿ ಮತ್ತು ಹೆಚ್ಚುವರಿ ನೀರಿನ ಬೇಡಿಕೆಯೊಂದಿಗೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಹಂತದಲ್ಲಿ ನಮಗೆ ನ್ಯಾಯ ದೊರೆತು ಮಹದಾಯಿ ನೀರು ಒದಗುವ ಭರವಸೆ ಮೂಡಿಸಿದೆ ಎಂದು ಹೇಳಿದರು. ಈ ಯೋಜನೆಯಲ್ಲಿ ರಾಜಕಾರಣಿಗಳಿಂದ ನಮಗೆ ಸಹಕಾರ ಸಿಗುವ ಭರವಸೆ ಉಳಿದಿಲ್ಲ. ಯಾಕೆಂದರೆ ಅವರು ನಮಗೆ ಸಹಕಾರ ನೀಡುವುದಾಗಿದ್ದರೆ ಮಹದಾಯಿ ನ್ಯಾಯಾ ಧಿಕರಣ ತೀರ್ಪು ಹೊರಬಿದ್ದ ಕೂಡಲೇ ನಮ್ಮ ಪಾಲಿನ ನೀರು ಒದಗಿಸಿಕೊಡುತ್ತಿದ್ದರು. ಆದ್ದರಿಂದ ನ್ಯಾಯದೇವತೆ ಮೊರೆ ಹೋಗಿದ್ದೇವೆ ಎಂದು ಸೊಬರದಮಠ ಸ್ವಾಮೀಜಿ ಆರೋಪಿಸಿದರು.
ನಾಳೆ ಅಮಿತ್ ಶಾ ಅವರು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಅವರಿಗೆ ಮನವಿ ಸಲ್ಲಿಸುವ ಬಗ್ಗೆ ನಮ್ಮನ್ನು ಕೇಳುತ್ತಿದ್ದಾರೆ. ಆದರೆ ಯಾರಿಗೂ ಮನವಿ ಸಲ್ಲಿಸುವ ಪ್ರಮೇಯ ನಮಗಿಲ್ಲ. ಇಲ್ಲೀವರೆಗೂ ಎಲ್ಲರಿಗೂ ಮನವಿ ಸಲ್ಲಿಸಿ ಸಾಕಾಗಿದೆ. ಇನ್ನೇನಿದ್ದರೂ ನ್ಯಾಯದೇವತೆಯೇ ನಮಗೆ ನ್ಯಾಯ ನೀಡಬೇಕಾಗಿದೆ ಎಂದು ಸೊಬರದಮಠ ಸ್ವಾಮೀಜಿ ಹೇಳಿದರು.
ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಕಾರ್ಯದರ್ಶಿ ಫಕೀರಪ್ಪ ಜೋಗಣ್ಣವರ, ರಾಮಪ್ಪ ಸಾಬಳೆ, ಪುಂಡಲಿಕಪ್ಪ ಯಾದವ, ಬಸವರಾಜ ಮುದೇನಗುಡಿ, ರಾಮಕೃಷ್ಣ ನಿಗಡೆ, ಶಂಕ್ರಪ್ಪ ಜಾಧವ, ಕಲ್ಲಪ್ಪ ಮೊರಬದ, ವೆಂಕಪ್ಪ ಹುಜರತ್ತಿ, ಪರಮೇಶಪ್ಪ ಅಣ್ಣಿಗೇರಿ, ರುದ್ರಗೌಡ ಮುದಿಗೌಡ್ರ, ಶಿವಪ್ಪ ಸಾತನ್ನವರ, ವಿಜಯಕುಮಾರ ಹೂಗಾರ, ಜಯಪಾಲ ಮುತ್ತಿನ, ಚಂದ್ರಪ್ಪ ಮುದಕನ್ನವರ, ಚನ್ನಪ್ಪಗೌಡ ಪಾಟೀಲ, ಶಿವಾನಂದ ಹಳಕಟ್ಟಿ, ಅರ್ಜುನ ಮಾನೆ, ಹನಮಂತ ಸರನಾಯ್ಕರ, ಅನಸಮ್ಮ ಶಿಂಧೆ, ಎಸ್‌ಕೆ. ಗಿರೆಣ್ಣವರ, ಮಾರುತಿ ಬಡಿಗೇರ, ಗಿರಡ್ಡಿ ಕಿಲಬನೂರ, , ಚನ್ನಬಸಪ್ಪ ಕತ್ತಿ ಮುಂತಾದವರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.