ಬೇಸಿಗೆಯಲ್ಲೂ ನೀರಿಗಿಲ್ಲ ಕೊರತೆ
ನಿರಂತರ ಕುಡಿವ ನೀರಿನ ಯೋಜನೆಯಿಂದ ಸಮಸ್ಯೆ ಪರಿಹಾರ
Team Udayavani, May 27, 2020, 3:56 PM IST
ಗದಗ: ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ವಿಧಿಸಿದ್ದರಿಂದ ಸಾಮಾನ್ಯವಾಗಿ ಜನರು ಮನೆಗಳಲ್ಲೇ ಉಳಿದಿದ್ದರು. ಹೀಗಾಗಿ ನೀರಿನ ಬೇಡಿಕೆ ತುಸು ಹೆಚ್ಚಾಗಿತ್ತು. ಆದರೆ ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಡಿಬಿಒಟಿ ಹಾಗೂ ನಿರಂತರ ಕುಡಿಯುವ ನೀರಿನ ಯೋಜನೆಗಳಿಂದಾಗಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ. ಜಲಕ್ಷಾಮಕ್ಕೆ ತಿಲಾಂಜಲಿ ಹಾಡಿದೆ.
ಬಹುಮುಖ್ಯವಾಗಿ ಗ್ರಾಪಂ ಸಿಬ್ಬಂದಿ ಕೋವಿಡ್ ವಾರಿಯರ್ಸ್ ಗಳಂತೆ ಶ್ರಮಿಸಿದ್ದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಲಿಲ್ಲ. ಬೇಸಿಗೆ ದಿನಗಳು ಆರಂಭವಾಗುತ್ತಿದ್ದಂತೆ ಬಯಲುಸೀಮೆ ಗದಗ ಜಿಲ್ಲೆಯಲ್ಲಿ ಜಲಕ್ಷಾಮ ಆವರಿಸುತ್ತಿತ್ತು. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ತುಂಗಭದ್ರಾ ಮತ್ತು ಮಲಪ್ರಭೆ ನದಿಯಿಂದ ಡಿಬಿಒಟಿ ಯೋಜನೆಯಡಿ ನದಿ ನೀರು ಪೂರೈಸಲಾಗುತ್ತಿದೆ. ಪ್ಯಾಕೇಜ್-1ರಲ್ಲಿ ಮಲಪ್ರಭಾ ನದಿಯಿಂದ ನರಗುಂದ ಮತ್ತು ರೋಣ ತಾಲೂಕಿನ 131 ಹಾಗೂ ಪ್ಯಾಕೇಜ್-2ರಲ್ಲಿ ತುಂಗಭದ್ರಾ ನದಿಯಿಂದ ಮುಂಡರಗಿ, ಗದಗ ಹಾಗೂ ಶಿರಹಟ್ಟಿ ಸೇರಿದಂತೆ 343 ಜನವಸತಿ ಪ್ರದೇಶಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಗದಗ ಸೇರಿದಂತೆ ವಿವಿಧ ಪಟ್ಟಣಗಳಿಗೆ ಪ್ರತ್ಯೇಕ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಇದರಿಂದ ಕಳೆದ ಒಂದು ವರ್ಷದಿಂದ ಅಷ್ಟಾಗಿ ನೀರಿನ ಸಮಸ್ಯೆ ಕಾಡುತ್ತಿಲ್ಲ. ಆದರೆ ಈ ಬಾರಿ ಬೇಸಿಗೆ ಅವ ಧಿಯಲ್ಲೇ ಲಾಕ್ ಡೌನ್ ಜಾರಿಗೊಂಡಿದ್ದರಿಂದ ನೀರಿನ ಬೇಡಿಕೆ ಹೆಚ್ಚಾಗಿದ್ದರೂ, ಅದನ್ನು ನಿಭಾಯಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಯಶಸ್ವಿಯಾಗಿವೆ.
ನಿತ್ಯ ನೀರು ಪೂರೈಕೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆ ಮಂದಿಯಲ್ಲ ಮನೆಯಲ್ಲೇ ಠಿಕಾಣಿ ಹೂಡಿದ್ದರಿಂದ ನೀರಿನ ಬಳಕೆ ಹೆಚ್ಚಾಗಿತ್ತು. ಮನೆಯಲ್ಲಿ ಎಂದಿನಂತೆ ತುಂಬಿಕೊಳ್ಳುತ್ತಿದ್ದ ನೀರು ಮರುದಿನಕ್ಕೆ ಇರುತ್ತಿರಲಿಲ್ಲ. ಇದರಿಂದ ರಾತ್ರಿ ಖಾಲಿ ಕೊಡಗಳೊಂದಿಗೆ ಜನರು ಬೋರ್‌ವೆಲ್ ಹಾಗೂ ನೀರಿನ ಟ್ಯಾಂಕ್‌ನತ್ತ ಹೆಜ್ಜೆ ಹಾಕುವಂತಾಗಿತ್ತು. ಗ್ರಾಮೀಣ ಭಾಗದಲ್ಲಿ ಲಾಕ್ ಡೌನ್ ಆರಂಭಿಕ ದಿನಗಳಲ್ಲಿ ಜನ ಸಂಚಾರವನ್ನು ನಿಯತ್ರಿಸುವುದು ಕಷ್ಟಸಾಧ್ಯವೆನಿಸುತ್ತಿತ್ತು. ಇದರ ಗಂಭೀರತೆಯನ್ನು ಅರಿತಿದ್ದ ಜಿಲ್ಲೆಯ ಹುಲಕೋಟಿ, ಕುರ್ತಕೋಟಿ, ಕಳಸಾಪುರ, ನಾಗಾವಿ, ಡಂಬಳ, ಸಂದಿಗವಾಡ, ನಿಡಗುಂದಿ, ಹೊಳೆಆಲೂರು ಮತ್ತಿತರೆ ಗ್ರಾಪಂ ಆಡಳಿತಗಳು ಪ್ರತಿನಿತ್ಯ ನೀರು ಪೂರೈಕೆ ಆರಂಭಿಸಿದವು.
ಡಿಬಿಒಟಿ ಸಂಪರ್ಕವಿದ್ದರೂ, ನೀರಿನ ಅಭಾವ ಕಾಣಿಸಿದ್ದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು, ನೀರು ಪೂರೈಕೆಗೆ ಕ್ರಮ ಜರುಗಿಸಲಾಗಿದೆ. ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಆಯಾ ಗ್ರಾಪಂ ವಾಟರ್ ಮ್ಯಾನ್‌ಗಳು ಅಚ್ಚುಕಟ್ಟಾಗಿ ಸೇವೆ ಸಲ್ಲಿಸಿದ್ದಾರೆ. ಇದರಿಂದಾಗಿ ಯಾವುದೇ ಭಾಗದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಂಡು ಬರಲಿಲ್ಲ ಎನ್ನುತ್ತಾರೆ ಜಿಪಂ ಅಧಿಕಾರಿಗಳು.
ಪಟ್ಟಣದಲ್ಲಿ ನಾಲ್ಕೈದು ದಿನಕ್ಕೆ ನೀರು: ಕಳೆದ ಹಿಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಇಲ್ಲಿನ ಹಮ್ಮಿಗಿ ಬ್ಯಾರೇಜ್‌ನಲ್ಲಿ ಜೂನ್ ತಿಂಗಳವರೆಗೆ ಸಾಕಾಗುಷ್ಟು ನೀರಿನ ಸಂಗ್ರಹವಿತ್ತು. ಆದರೆ ಗದಗ-ಬೆಟಗೇರಿ ಮತ್ತು ಮುಂಡರಗಿ ಪಟ್ಟಣಕ್ಕೆ ಮೂರು ದಿನಗಳಿಗೊಮ್ಮೆ ನೀರು ಹರಿಸಿದ್ದರಿಂದ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಆದರೆ ಅಧಿಕಾರಿಗಳು ತಿಂಗಳ ಹಿಂದೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿಸಿದ್ದಾರೆ. ಇದರಿಂದಾಗಿ ತುಂಗಭದ್ರಾ ನದಿಯಿಂದ ನೀರು ಪೂರೈಕೆಯಾಗುವ ಪ್ರದೇಶಗಳಿಗೆ ಸದ್ಯಕ್ಕೆ ನೀರಿನ ಸಮಸ್ಯೆ ಎದುರಾಗದು ಎನ್ನಲಾಗಿದೆ.
ಪ್ರತಿ ಬಾರಿ ಬೋರ್‌ವೆಲ್‌ಗಳು ಬತ್ತಿಹೋಗುತಿದ್ದವು. ಆದರೆ ಡಿಬಿಒಟಿ ಸಂಪರ್ಕದ ಬಳಿಕ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಜನರು ಗುಂಪು ಸೇರುವುದನ್ನು ತಪ್ಪಿಸಲು ಪ್ರತಿ ಮನೆಗೆ ನೀರು ಪೂರೈಕೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿದಿನ ಸತತ 2-3 ಗಂಟೆಗಳ ಕಾಲ ನೀರು ಹರಿಸಲಾಗಿದೆ. –ಸಾವಿತ್ರಿ ಕೃಷ್ಣಾ ಚವ್ಹಾಣ, ಕಳಸಾಪುರ ಗ್ರಾಪಂ ಅಧ್ಯಕ್ಷೆ
ನಮ್ಮ ಗ್ರಾಮದಲ್ಲಿ ಪ್ರತಿನಿತ್ಯ ಎರಡು ಬಾರಿ ನಳದ ನೀರು ಬರುತ್ತಿತ್ತು. ಇದರಿಂದ ಲಾಕ್‌ಡೌನ್ ವೇಳೆ ನೀರಿನ ಸಮಸ್ಯೆ ಎದುರಾಗಲಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಪಂ ಅಧಿಕಾರಿಗಳು ಒಳ್ಳೆಯ ಕ್ರಮ ಕೈಗೊಂಡಿದ್ದಾರೆ. –ಮಹದೇವಪ್ಪಗೌಡ ಪಾಟೀಲ, ಸಂದಿಗವಾಡ
– ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.