11-12 ಲೆಕ್ಕಾಚಾರ; ಬಂಡಾಯದಲ್ಲಿ ಠುಸ್ ಮದ್ದಿನ ವಾಸನೆ
ಅವಿಶ್ವಾಸಕ್ಕೆ ನಾಂದಿ ಹಾಡಿದವರೇ ಯೂಟರ್ನ್?
Team Udayavani, May 24, 2022, 1:19 PM IST
ಮುಂಡರಗಿ: ತಿಂಗಳ ಹಿಂದೆಯಷ್ಟೇ ಅವಿಶ್ವಾಸದ ಮೂಲಕ ಕವಿತಾ ಉಳ್ಳಾಗಡ್ಡಿಯವರನ್ನು ಪುರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಸಲಾಗಿತ್ತು. ಬಿಜೆಪಿ 14 ಸದಸ್ಯರು ಮತ್ತು ಕಾಂಗ್ರೆಸ್‌ನ 6 ಜನ ಸದಸ್ಯರು ಸೇರಿದಂತೆ ಒಟ್ಟು 20 ಪುರಸಭೆ ಸದಸ್ಯರು ಅವಿಶ್ವಾಸಕ್ಕೆ ನಾಂದಿ ಹಾಡಿ ಬಂಡಾಯದ ಬಾವುಟ ಹಾರಿಸಿದ್ದರು. ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ ಪ್ರಭಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಅಧ್ಯಕ್ಷ ಸ್ಥಾನವು ಹಿಂದುಳಿದ ಬ ವರ್ಗದ ಮಹಿಳೆಗೆ ಮೀಸಲಾಗಿದ್ದು, ಈ ವರ್ಗಕ್ಕೆ ಸೇರಿರುವ ಜ್ಯೋತಿ ಹಾನಗಲ್ಲ ಮತ್ತು ಕವಿತಾ ಉಳ್ಳಾಗಡ್ಡಿಯವರ ಮಧ್ಯೆ ಸ್ಪರ್ಧೆ ಏರ್ಪಡಲಿದೆ. ಇದರ ಮಧ್ಯೆಯೇ ಬಂಡಾಯದ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕೆಲವು ಸದಸ್ಯರು ಮತ್ತೆ ಕವಿತಾ ಉಳ್ಳಾಗಡ್ಡಿಯೇ ಅಧ್ಯಕ್ಷರಾಗಲಿ ಎನ್ನುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಬಂಡಾಯದ ಕೋಣೆಯಲ್ಲಿ ಠುಸ್ ಮದ್ದಿನ ವಾಸನೆ ಹೊಡೆಯತೊಡಗಿದೆ. ಬಂಡಾಯದ ಬಾವುಟ ಹಾರಿಸಿದ್ದವರ ಮೊದಲಿನ ಉತ್ಸಾಹ ಉಳಿದಿಲ್ಲ.
ಮೇ 24ರಂದು ಖಾಲಿ ಇರುವ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಬಂಡಾಯದ ಬಾವುಟ ಹಾರಿಸಿದ್ದ ಬಿಜೆಪಿ ಸದಸ್ಯರೇ ಮತ್ತೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷರಾಗಲಿ ಎನ್ನುವ ಮನೋಭೂಮಿಕೆ ಸಿದ್ಧವಾಗಿದೆ. ರಾಜಕೀಯ ಒತ್ತಡ, ಬಿಜೆಪಿ ಪಕ್ಷದ ವರ್ಚಸ್ಸು, ಸಮುದಾಯದ ಪ್ರಭಾವಗಳು ಮತ್ತೆ ಕವಿತಾ ಉಳ್ಳಾಗಡ್ಡಿಯವರೇ ಅಧ್ಯಕ್ಷರಾಗಲಿ ಎನ್ನುವ ಸ್ಥಿತಿ ನಿರ್ಮಿಸಿದೆ. ಹೀಗಾಗಿ ಮತ್ತೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷರಾಗುವ ಸಾಧ್ಯತೆ ಅಲ್ಲಗೆಳೆಯುವಂತೆ ಇಲ್ಲ.
ಅವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿ 14 ಜನ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ 6 ಜನ ಸದಸ್ಯರು ನೂತನ ಅಧ್ಯಕ್ಷೆಯಾಗಿ ಜ್ಯೋತಿ ಹಾನಗಲ್ಲ ಅವರನ್ನು ಆಯ್ಕೆ ಮಾಡುವಲ್ಲಿ ಒಲುವು ಹೊಂದಿದ್ದರು. ಆದರೆ ಬಂಡಾಯದ ಸದಸ್ಯರಲ್ಲಿಯೇ ಬಿರುಕು ಬಿಟ್ಟು ಕವಿತಾ ಉಳ್ಳಾಗಡ್ಡಿಯವರೇ ಮತ್ತೆ ಅಧ್ಯಕ್ಷರಾಗಲಿ ಎಂದು ಒಮ್ಮತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
11-12 ಲೆಕ್ಕಾಚಾರ: ಪುರಸಭೆಯಲ್ಲಿ ಬಿಜೆಪಿಯ 16 ಸದಸ್ಯರು, ಕಾಂಗ್ರೆಸ್‌ನ 6 ಜನ ಸದಸ್ಯರು, ಓರ್ವ ಪಕ್ಷೇತರ ಸದಸ್ಯ ಸೇರಿ ಒಟ್ಟಾರೆ 23 ಸದಸ್ಯರಿದ್ದಾರೆ. 16 ಬಿಜೆಪಿ ಸದಸ್ಯರಲ್ಲಿ 12 ಜನ ಕವಿತಾ ಅವರನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಶಾಸಕರು, ಸಂಸದರ ತಲಾ ಒಂದು ಮತಗಳು ಸೇರಿದರೇಒಟ್ಟು 14 ಮತಗಳು ಕವಿತಾ ಉಳ್ಳಾಗಡ್ಡಿ ಬೆಂಬಲಕ್ಕೆ ಬಂದರೆ ಅಧ್ಯಕ್ಷ ಸ್ಥಾನ ಮರಳಿ ಸಿಗಲಿದೆ. ಮೊದಲಿನಿಂದಲೂ ಬಂಡಾಯದ ಬಾವುಟ ಹಾರಿಸುತ್ತಲೇ ಬಂದಿರುವ ಜ್ಯೋತಿ ಹಾನಗಲ್ಲ ನೂತನ ಅಧ್ಯಕ್ಷೆಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಬಿಜೆಪಿಯ ಐವರು ಸದಸ್ಯರು, ಕಾಂಗ್ರೆಸ್‌ನ 6 ಸದಸ್ಯರು ಅವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ಕವಿತಾ ಗುಂಪಿನಲ್ಲಿ ಇರುವವರು ಮನಸ್ಸು ಬದಲಿಸಿದರೆ ಜ್ಯೋತಿ ಹಾನಗಲ್ಲ ಪಟ್ಟಕ್ಕೇರುವ ಸಾಧ್ಯತೆ ಅಲ್ಲಗೆಳೆಯುವಂತೆ ಇಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಯಾರೇ ಅಧ್ಯಕ್ಷರಾದರೂ ವ್ಯಕ್ತಿಗತ ಅಹಂ, ಪಕ್ಷ-ಜಾತಿ ಭೂತವನ್ನು ಬದಿಗಿಟ್ಟು ಪಟ್ಟಣದ ಅಭಿವೃದ್ಧಿ ಕಡೆಗೆ ಲಕ್ಷ್ಯ ವಹಿಸಬೇಕಿದೆ.
ಪಟ್ಟಣದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಅವಿಶ್ವಾಸದ ಮೂಲಕ ಅಧ್ಯಕ್ಷರನ್ನು ಕೆಳಗಿಸಲಾಗಿತ್ತು. ಆದರೆ ಅವಿಶ್ವಾಸ ಮಾಡಿದವರು ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಸಚಿವ, ಶಾಸಕರು ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಮತ್ತೆ ಕವಿತಾ ಅವರನ್ನು ಅಧ್ಯಕ್ಷೆ ಮಾಡಲು ಹೊರಟಿದ್ದಾರೆ. ಇದರಿಂದ ಪಟ್ಟಣದ ಅಭಿವೃದ್ಧಿಗೆ ಕೊಡಲಿ ಪೆಟ್ಟು ಬೀಳಲಿದೆ. ನಾಗರಾಜ ಹೊಂಬಳಗಟ್ಟಿ, ಕಾಂಗ್ರೆಸ್ ಸದಸ್ಯ
ಮೇ 24ರಂದು ನಡೆಯುವ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯವರೇ ಅಧ್ಯಕ್ಷರಾಗುತ್ತಾರೆ. ಇದರಲ್ಲಿ ಯಾವುದೇ ಸಂದೇಹ ಬೇಡ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಲಾಗುವುದು. ಹೇಮಗಿರೀಶ ಹಾವಿನಾಳ, ಬಿಜೆಪಿ ಮಂಡಲ ಅಧ್ಯಕ್ಷ
-ಹು.ಬಾ. ವಡ್ಡಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.