ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ
•ಒಂದೆರಡು ಗಂಟೆ ಬಿರುಸಿನ ಮಳೆ •ಕೆಸರು ಗದ್ದೆಯಾಗಿ ಮಾರ್ಪಟ್ಟ ರಸ್ತೆ •ಕೃಷಿ ಕಾರ್ಯ ಚುರುಕು
Team Udayavani, Jul 1, 2019, 10:08 AM IST
ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸಂಜೆಯಿಂದಲೇ ಹದವಾದ ಮಳೆಯಾಗಿದೆ. ರಾತ್ರಿಯಿಡೀ ಸುರಿದು ಜಿಟಿ ಮಳೆ ರವಿವಾರ ಸಂಜೆ ವರೆಗೂ ಮುಂದುವರಿದಿತ್ತು. ಈ ಬಾರಿ ಮುಂಗಾರು ಆರಂಭಗೊಂಡು ತಿಂಗಳು ಕಳೆದರೂ ಮಳೆಯಾಗದೇ ಮಂಕಾಗಿದ್ದ ರೈತರು ಈ ಮಳೆಯಿಂದ ಹುರುಪುಗೊಂಡಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ಸಂಜೆಯಿಂದ ಆರಂಭಗೊಂಡಿರುವ ಜಿಟಿಜಿಟಿ ಮಳೆ ಆಗೊಮ್ಮೆ- ಈಗೊಮ್ಮೆ ಬಿಡುವು ನೀಡಿದರೂ, ಕಳೆದ 24 ಗಂಟೆಗಳಿಂದ ಬಿಟ್ಟು ಬಿಡದಂತೆ ಸುರಿಯಿತು. ಶನಿವಾರ ರಾತ್ರಿ ಹಾಗೂ ರವಿವಾರ ಮಧ್ಯಾಹ್ನ ಒಂದೆರಡು ಗಂಟೆಗಳ ಕಾಲ ಬಿರುಸಿನ ಮಳೆಯಾಯಿತು.
ಮಳೆಯಿಂದಾಗಿ ಕೆಲವೆಡೆ ರಾಜಕಾಲುವೆಗಳು ಹಾಗೂ ಚರಂಡಿಗಳಲ್ಲಿ ಕೆರೆ ಕಟ್ಟಿದ್ದರಿಂದ ನೀರು ಸರಾಗವಾಗಿ ಹರಿಯದೇ ಹಲವೆಡೆ ಸ್ಲಂ ಬಡಾವಣೆಗಳಲ್ಲಿ ಚರಂಡಿಗಳು ಉಕ್ಕಿ ರಸ್ತೆಗಳಲ್ಲಿ ಮಳೆ ಹಾಗೂ ಚರಂಡಿ ನೀರು ಹರಿಯಿತು.
ಬೆಟಗೇರಿ ಭಾಗದ ನರಸಾಪುರ, ಒಕ್ಕಲಗೇರಿ ಮತ್ತಿತರೆ ಬಡಾವಣೆಗಳಲ್ಲಿ ಅಲ್ಲಲ್ಲಿ ಚರಂಡಿ ನೀರು ಹರಿಯಲು ಅಡ್ಡಿಯಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಲು ಸ್ಥಳೀಯರು ಹರಸಾಹಸ ನಡೆಸಿದರು. ಬೊಂಬು, ಕಬ್ಬಿಣದ ಸಲಾಕೆ, ಪಿಕಾಸಿಯಿಂದ ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಮಳೆ ನೀರು ಹರಿಯಲು ಅನುವು ಮಾಡಿದರು.
ಕೆಸರು ಗದ್ದೆಯಾಗಿ ಮಾರ್ಪಟ್ಟ ರಸ್ತೆ: ಇಲ್ಲಿನ ಗಂಗಾಪುರ ಪೇಟೆಯ ವೃತ್ತದಿಂದ ಹೊಂಬಳ ನಾಕಾ ವರೆಗಿನ ರಸ್ತೆ ಭಾಗಶಃ ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಇನ್ನುಳಿದ ರಸ್ತೆಗೆ ಕಾಯಕಲ್ಪವಿಲ್ಲದೇ ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಆದಿ ಜಾಂಬವ ನಗರದ ತಿರುವಿನಲ್ಲಿರುವ ಮಾಸ್ತರ್ ಅಂಗಡಿಯಿಂದ ಹೊಂಬಳ ನಾಕಾ ರೈಲ್ವೆ ಗೇಟ್ ವರೆಗಿನ ಸುಮಾರು 200 ಮೀಟರ್ ಉದ್ದದ ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಾಯ್ತೆರೆದಿದೆ. ಬೃಹತ್ ಗುಂಡಿಗಳಲ್ಲಿ ಮಳೆ ನೀರು ನಿಂತಿದೆ. ರಸ್ತೆ ಹಾಗೂ ಗುಂಡಿಗಳನ್ನು ಅಂದಾಜಿಸಲಾಗದೇ ವಾಹನ ಸವಾರರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಪರದಾಡುವಂತಾಗಿದೆ. ಜಿಟಿ ಮಳೆಯಿಂದಾಗಿ ರಸ್ತೆಯಲ್ಲಿ ಮೂರನಾಲ್ಕು ವೃದ್ಧರು ಕಾಲು ಜಾರಿ ಬಿದ್ದಿದ್ದಾರೆ. ವಾಹನಗಳು ಸ್ಕಿಡ್ ಆಗುತ್ತಿವೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ರೈತರಿಗೆ ಹುರುಪು: ಈ ಬಾರಿ ಮುಂಗಾರಿನ ಆರಂಭದಲ್ಲೇ ಮೃಗಶಿರ ಮಳೆ ನಕ್ಷತ್ರ ಕೈಕೊಟ್ಟಿದೆ. ಜೂ. 8ರಿಂದ 21ರ ವರೆಗೂ ಮಳೆಯ ದರ್ಶನವಿಲ್ಲದೇ ರೈತಾಪಿ ಜನರು ಮೋಡಗಳತ್ತ ಮುಖ ಮಾಡುವಂತಾಯಿತು. ಮುಂಗಾರು ಹಂಗಾಮಿನ ಸಂಪೂರ್ಣ ಭರವಸೆ ಕಳೆದುಕೊಂಡಿದ್ದ ಜಿಲ್ಲೆಯ ರೈತರಿಗೆ ಶನಿವಾರ ಮತ್ತು ಭಾನುವಾರ ಸುರಿದ ಮಳೆಯು ಮರುಭೂಮಿಯಲ್ಲಿ ಒಯಾಸಿಸ್ ಕಂಡಂತಾಗಿದೆ. ರೈತಾಪಿ ಜನರಲ್ಲಿ ಹುರುಪು ಹೆಚ್ಚಿಸಿದೆ.
ಕೃಷಿ ಇಲಾಖೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿತ್ತು. ಆದರೆ, ಮಳೆ ಕೊರತೆಯಿಂದ ಜೂ. 15ರ ವರೆಗೆ ಕೇವಲ 43,714 ಹೆಕ್ಟೇರ್‌ನಲ್ಲಿ ಮಾತ್ರ (ಶೇ. 17.80) ಬಿತ್ತನೆಯಾಗಿದೆ.
ಸಮರ್ಪಕ ಮಳೆಯಾಗಿದ್ದರೆ ಈ ವೇಳೆಗೆ ಹೆಸರುಕಾಳು ಮೊಳಕೆಯೊಡೆದು, ಇಡೀ ಜಮೀನು ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ, ಈ ಬಾರಿ ಕೇವಲ 30,557 ಹೆಕ್ಟೇರ್‌ನಲ್ಲಿ (ಶೇ.30.6) ಮಾತ್ರ ಹೆಸರು ಬಿತ್ತನೆಯಾಗಿದೆ. ಒಟ್ಟು 1 ಲಕ್ಷ ಹೆಕ್ಟೇರ್‌ನಲ್ಲಿ ಹೆಸರುಕಾಳು ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿತ್ತು. ಹೆಸರುಕಾಳು ಬಿತ್ತನೆ ಅವ ಈಗಾಗಲೇ ಮುಗಿದಿದೆ. ಆದರೆ, ಕೆಲವೆಡೆ ರೈತರು ಧೈರ್ಯ ಮಾಡಿ ಈರುಳ್ಳಿ ಮತ್ತು ಹೆಸರುಕಾಳು ಎರಡೂ ಬೀಜಗಳನ್ನು ಮಿಶ್ರಣ ಮಾಡಿ ಬಿತ್ತಿದ್ದಾರೆ.
ಹೆಸರು, ತೊಗರಿ, ಮೆಕ್ಕೆಜೋಳ, ಶೇಂಗಾ, ಬಿಟಿ ಹತ್ತಿ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳು. ಒಟ್ಟು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಮತ್ತು 33,000 ಹೆಕ್ಟೇರ್‌ನಲ್ಲಿ ಬಿ.ಟಿ ಹತ್ತಿ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ಶೇ. 12ರಷ್ಟು ಗೋವಿನ ಜೋಳ ಮತ್ತು ಶೇ. 17.6ರಷ್ಟು ಬಿ.ಟಿ ಹತ್ತಿ ಬಿತ್ತನೆ ಆಗಿದೆ. 44 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ಶೇ. 1.9ರಷ್ಟು ಬಿತ್ತನೆ ಆಗಿದೆ. ಕಳೆದ ಬಾರಿ ಮುಂಗಾರಿನಲ್ಲಿ ಹೆಸರುಕಾಳು ಕೈಕೊಟ್ಟಾಗ ಬಳ್ಳಿ ಶೇಂಗಾ ರೈತರ ಕೈ ಹಿಡಿದಿತ್ತು.
ಕೆಲವೆಡೆ ಕೃಷಿಹೊಂಡಗಳಿಗೆ ಸಾಕಷ್ಟು ನೀರು ಹರಿದು ಬಂದಿದೆ. ಇಂತಹದೇ ಇನ್ನೊಂದೆರಡು ಮಳೆ ಲಭಿಸಿದರೆ ಕೃಷಿ ಹೊಂಡಗಳು ಬಹುತೇಕ ಭರ್ತಿಯಾಗಲಿವೆ ಎನ್ನುತ್ತಾರೆ ರೈತರು. ಮಳೆ ಸುರಿದ ಬೆನ್ನಲ್ಲೇ, ಬಿತ್ತನೆ ಬೀಜಗಳಿಗೆ ದಿಢೀರ್ ಬೇಡಿಕೆ ಹೆಚ್ಚಾಗಿದೆ. ರೈತರು ಸಮೀಪದ ಸಹಕಾರಿ ಸಂಘ, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ ಖರೀದಿಗೆ ವಿಚಾರಿಸುತ್ತಿದ್ದಾರೆ. ಮಳೆಯಾಗದ್ದರಿಂದ ಯೂರಿಯಾ, ಡಿಎಪಿ, ಎಂಎಪಿ, ಕಾಂಪ್ಲೆಕ್ಸ್ ಸೇರಿ 6145 ಟನ್ ಗೊಬ್ಬರ ಮಾರಾಟವಾಗದೆ ಬಾಕಿ ಉಳಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.