ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಿದೆ ಇಚ್ಛಾಶಕ್ತಿ
ಕ್ರೀಡಾ ಖ್ಯಾತಿಯ ಪಟ್ಟಣಕ್ಕೆ ಬೇಕು ಪೂರಕ ಸೌಲಭ್ಯ ; ಕ್ರೀಡಾಪಟುಗಳ ಭವಿಷ್ಯ ಡೋಲಾಯಮಾನ
Team Udayavani, Jul 21, 2022, 4:51 PM IST
ಗಜೇಂದ್ರಗಡ: ಭೌಗೋಳಿಕವಾಗಿ ಚಿಕ್ಕದಾಗಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ ಗಜೇಂದ್ರಗಡ ತಾಲೂಕಿನಲ್ಲಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕ್ರೀಡಾಂಗಣ ಸೇರಿದಂತೆ ಮತ್ತಿತರ ಪೂರಕ ಸೌಲಭ್ಯಗಳೇ ಇಲ್ಲದಂತಾಗಿದೆ. ಇದು, ಕ್ರೀಡಾಪಟುಗಳು ಹಾಗೂ ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.
ಹೌದು, ಐತಿಹಾಸಿಕ ಹಿನ್ನೆಲೆಯೊಂದಿಗೆ ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ಪಟ್ಟಣ ಎಂಬ ಹೆಗ್ಗಳಿಕೆಯ ಜೊತೆಗೆ ವಾಣಿಜ್ಯ ಕ್ಷೇತ್ರದಲ್ಲೂ ತೀವ್ರಗತಿಯಲ್ಲಿ ಬೆಳೆಯುತ್ತಿರುವ ನಗರದಲ್ಲಿ ಕ್ರೀಡೆಗೆ ಉತ್ತೇಜನ ನೀಡುವಂತಹ ಯಾವೊಂದು ಮೈದಾನ ಇಲ್ಲದಿರುವುದು ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಆರ್ಥಿಕವಾಗಿ ದೊಡ್ಡ ಮಾರುಕಟ್ಟೆಯಿದ್ದರೂ ಕ್ರೀಡಾ ಸೌಲಭ್ಯಗಳಲ್ಲಿ ಸಂಪೂರ್ಣ ಶೂನ್ಯ ಸಾಧನೆಯಾಗಿದೆ.
ಕ್ರೀಡಾಪಟುಗಳಿಗಿಲ್ಲ ಪೂರಕ ವಾತಾವರಣ: ಐತಿಹಾಸಿಕವಾಗಿ ಗಜೇಂದ್ರಗಡ ಶ್ರೀಮಂತವಾಗಿದೆ. ಆದರೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಶಿಖರವೇರುತ್ತಿರುವ ಯುವ ಪೀಳಿಗೆಗೆ ಪೂರಕವಾದ ಕ್ರೀಡಾಂಗಣ, ಸಕಲರಣೆಗಳನ್ನು ಒದಗಿಸುವಲ್ಲಿ ಬಡವಾಗಿದೆ. ತಾಲೂಕಿನ ಕ್ರೀಡಾಪಟುಗಳು ಕ್ರೀಡೆಯ ವಿವಿಧ ವಿಭಾಗಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅಂತಹವರಿಗೆ ನೆರವಾಗಲು ಕನಿಷ್ಟ ಸರ್ಕಾರದಿಂದ ಕ್ರೀಡಾಂಗಣವಾಗಲಿ, ಸಲಕರಣೆಗಳಾಗಲಿ, ಆರೋಗ್ಯ ವೃದ್ಧಿಗೆ ಸರ್ಕಾರಿ ಜಿಮ್ ಸಹ ಇಲ್ಲದಿರುವುದು ಬೇಸರಕ್ಕೆ ಕಾರಣವಾಗಿದೆ.
ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ: ತಾಲೂಕಿನಲ್ಲಿ ದೊಡ್ಡ ಮಟ್ಟದ ಯುವಕರ ಪಡೆಯಿದೆ. ಕ್ರಿಕೆಟ್, ಕಬಡ್ಡಿ, ವಾಲಿಬಾಲ್‌ನಂತಹ ಕ್ರೀಡೆಗಳು ವರ್ಷವಿಡೀ ನಡೆಯುತ್ತಿರುತ್ತವೆ. ಆದರೆ, ಮೈದಾನದ ಕೊರತೆಯಿಂದ ಖಾಸಗಿಯವರ ಬಯಲು ಜಾಗೆ, ಹೊಲಗಳಲ್ಲಿನ ಜಾಗೆಯಲ್ಲಿ ಪಂದ್ಯಾವಳಿಗಳನ್ನು ಏರ್ಪಡಿಸುವ ದುಸ್ಥಿತಿ ಈ ಭಾಗದ ಯುವಕರಿಗೆ ಬಂದೊದಗಿದೆ. ಆದರೆ, ಈವರೆಗೂ ಕ್ಷೇತ್ರದಲ್ಲಿ ಚುನಾಯಿತರಾದ ಜನಪ್ರತಿನಿಧಿ ಗಳು ಯಾವುದೇ ಮೈದಾನ ನಿರ್ಮಾಣಕ್ಕೆ ಮುಂದಾಗಿಲ್ಲ. ತಾಲೂಕು ಮಟ್ಟದ ಜಿಮ್ ತೆರೆಯಲು ಸರ್ಕಾರದಿಂದ ಲಕ್ಷಾಂತರ ರೂ. ಅನುದಾನ ಬಿಡುಗಡೆಯಾದರೂ ಅನುಷ್ಠಾನಗೊಳಿಸಲು ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲದಂತಾಗಿದೆ ಎನ್ನುವುದು ಕ್ರೀಡಾಭಿಮಾನಿಗಳ ಅಸಮಾಧಾನ.
ಕ್ರೀಡಾ ಕ್ಷೇತ್ರಕ್ಕೆ ಜನಪ್ರತಿ ನಿಧಿಗಳ ಕೊಡುಗೆ ಶೂನ್ಯ: ರೋಣ ಮತಕ್ಷೇತ್ರಕ್ಕೆ ಒಳಪಡುವ ಗಜೇಂದ್ರಗಡ ತಾಲೂಕು ಕ್ಷೇತ್ರದಲ್ಲಿಯೇ ಕೇಂದ್ರಬಿಂಧುವಾಗಿದೆ. ಆದರೂ, ನಗರದಲ್ಲಿ ಕ್ರೀಡಾ ಸೌಲಭ್ಯಗಳು ಮರೀಚಿಕೆಯಾಗಿವೆ. ಮತಕ್ಷೇತ್ರದಲ್ಲಿ ಬಹು ಅವಧಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರ ನಡೆಸಿವೆ. ಆದರೆ, ಗಜೇಂದ್ರಗಡದಲ್ಲಿ ಹೇಳಿಕೊಳ್ಳಲು ಸಹ ಯಾವುದೇ ಮೈದಾನವಿಲ್ಲ. ಕ್ರೀಡಾ ಸಾಮಗ್ರಿಗಳಿಲ್ಲ. ಜಿಮ್ ಕೇಂದ್ರವಂತೂ ಇಲ್ಲವೇ ಇಲ್ಲ. ಹೀಗಾಗಿ, ಕ್ರೀಡಾ ಕ್ಷೇತ್ರಕ್ಕೆ ಈ ಭಾಗದ ಜನಪ್ರತಿನಿಧಿಗಳ ಕೊಡುಗೆ ಶೂನ್ಯ ಎನ್ನುವಂತಾಗಿದೆ.
ಪ್ರತಿಭೆಗಳಿಗಿಲ್ಲ ಸೌಕರ್ಯ: ತಾಲೂಕಿನಲ್ಲಿ ಹಾಕಿ, ಕ್ರಿಕೆಟ್, ಫುಟ್ ಬಾಲ್, ಅಥ್ಲೆಟಿಕ್ಸ್, ಕಬಡ್ಡಿ ಸೇರಿದಂತೆ ಸಾಕಷ್ಟು ಕ್ರೀಡೆಗಳಲ್ಲಿ ಸ್ಥಳೀಯ ಪ್ರತಿಭೆಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತಾಲೂಕಿನ ಗೌರವ ಹೆಚ್ಚಿಸಿದ್ದಾರೆ. ಆದರೂ, ಕ್ರೀಡಾಪಟುಗಳಿಗೆ ಉತ್ತಮ ಆಟದ ಮೈದಾನದ ಸೌಲಭ್ಯವಿಲ್ಲ. ಬೆಳಿಗ್ಗೆ ಸಾಕಷ್ಟು ಮಹಿಳೆಯರು, ಪುರುಷರು ಇರುವ ಕಾಲಕಾಲೇಶ್ವರ ರಸ್ತೆಯಲ್ಲಿಯೇ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಆದರೆ, ಕ್ರೀಡಾಂಗಣ ಇಲ್ಲದ್ದರಿಂದ ಕ್ರೀಡಾಪಟುಗಳು, ಸೇನೆಗೆ ಸೇರುವ ಯುವಕರು ರಸ್ತೆಯಲ್ಲಿಯೇ ವ್ಯಾಯಾಮ ಮಾಡುವ ಸ್ಥಿತಿಯಿದೆ.
ಬೆಳಿಗ್ಗೆ ವಾಯುವಿಹಾರಕ್ಕೆ ಹೆಚ್ಚಿನವರು ಶಾಲೆಗಳ ಮೈದಾನವನ್ನೇ ಆಶ್ರಯಿಸಬೇಕಾಗಿದೆ. ಒಂದೆರಡು ಗಂಟೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮಾಡಲು ಆಗಮಿಸಿದರೂ, ಸೂಕ್ತ ಮೈದಾನದ ಕೊರತೆಯಿದೆ. ಸರಿಯಾದ ಸ್ಥಳವಿಲ್ಲದೇ, ಹೆಚ್ಚಿನ ಜನರು ರಸ್ತೆ, ಶಾಲಾ ಆವರಣದಲ್ಲಿಯೇ ವ್ಯಾಯಾಮ ಮಾಡುವುದು ಸಾಮಾನ್ಯವಾಗಿದೆ. ಈಗಲಾದರೂ ಜನಪ್ರತಿನಿಧಿಗಳು ಎಚ್ಚೆತ್ತು, ಕ್ರೀಡಾಂಗಣ, ಜಿಮ್ ಕೇಂದ್ರ ತೆರೆಯಲು ಮುಂದಾಗಬೇಕು ಎಂಬುದು ತಾಲೂಕಿನ ಯುವಜನತೆಯ ಆಗ್ರಹವಾಗಿದೆ.
ಗಜೇಂದ್ರಗಡ ನೂತನ ತಾಲೂಕು ಕೇಂದ್ರವಾಗಿದ್ದು, ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸೂಚಿಸಿದೆ. ಈಗಾಗಲೇ ಜಮೀನಿನ ಹುಡುಕಾಟ ಸಹ ನಡೆಸಿದ್ದೆವೆ. ಆದರೆ, ಪೂರ್ಣ ಪ್ರಮಾಣದ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ 10 ಎಕರೆ ಜಮೀನಿನ ಅವಶ್ಯಕತೆ ಇದೆ. ಜಮೀನು ದೊರೆತ ತಕ್ಷಣವೇ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುತ್ತೇವೆ. -ವಿಠ್ಠಲ್ ಜಾಬಗೌಡರ, ಜಿಲ್ಲಾ ಸಹಾಯಕ ನಿರ್ದೇಶಕ, ಕ್ರೀಡಾ-ಯುವಜನ ಸಬಲೀಕರಣ ಇಲಾಖೆ
ಗಜೇಂದ್ರಗಡ ಪಟ್ಟಣದಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಆದರೆ, ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಇಲ್ಲಿ ಕಡೆಗಣಿಸಲಾಗಿದೆ. ತಾಲೂಕು ಕ್ರೀಡಾಂಗಣ ಇಲ್ಲದ ಕಾರಣ, ರನ್ನಿಂಗ್, ಜಾಗಿಂಗ್ ಟ್ರ್ಯಾಕ್ ಕೊರತೆಯಿಂದ ರಸ್ತೆಯಲ್ಲೇ ಜಾಗಿಂಗ್, ರನ್ನಿಂಗ್ ಪ್ರ್ಯಾಕ್ಟೀಸ್ ಮಾಡುವ ದುಸ್ಥಿತಿ ಎದುರಾಗಿದೆ. –ಯಮನಪ್ಪ ಗರೇಬಾಳ, ಸೇನೆ ಸೇರಲು ತರಬೇತಿ ಪಡೆಯುತ್ತಿರುವ ಸ್ಥಳೀಯ ಯುವಕ
-ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.