ಕಲ್ಲು ಹೃದಯ ಕರಗಿಸುತ್ತೆ ಸಂಗೀತ: ಸ್ವಾಮೀಜಿ
ಮುಕ್ತಿಮಂದಿರ ಧರ್ಮಕ್ಷೆ ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರ ಅಭಿಮತ
Team Udayavani, Jun 24, 2022, 12:49 PM IST
ಲಕ್ಷ್ಮೇಶ್ವರ: ಸಂಗೀತ ಎಲ್ಲ ಮನೋರೋಗಗಳನ್ನು ಗುಣಪಡಿಸುವ ದಿವ್ಯ ಔಷಧಿಯಾಗಿದೆ. ಕಲ್ಲು ಹೃದಯ ಕರಗಿಸುವ ಶಕ್ತಿಯುಳ್ಳ ಶುದ್ಧ ಸಂಗೀತ ಕೇಳುವುದರಿಂದ ದೇಹ ಮತ್ತು ಮನಸ್ಸು ಎರಡೂ ಉಲ್ಲಸಿತಗೊಳ್ಳುತ್ತವೆ. ಇಂದಿನ ತಾಂತ್ರಿಕ ಯುಗದ ಒತ್ತಡದ ಬದುಕಿಗೆ ಸಂಗೀತ ಅತ್ಯವಶ್ಯಕ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯ ಅಂಧ ಸಂಗೀತ ಗಾಯಕ ಮೆಹಬೂಬಸಾಬ ಹರ್ಲಾ ಪೂರ ಅವರ ನೇತೃತ್ವದಲ್ಲಿ ಪಟ್ಟಣದ ಪುರಾಣಿಕಮಠ ಲೇಔಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ|ಪಂ| ಪುಟ್ಟರಾಜ ಗವಾಯಿಗಳ ಕೃಪಾ ಸಂಗೀತಾಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಶುಭಾಶೀರ್ವಚನ ನೀಡಿದರು.
ಸಂಗೀತ ಮಕ್ಕಳಿಗೆ ಸಂಸ್ಕಾರ ಕಲಿಸುವ ಸಾಧನವಾಗಿದೆ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಪಟ್ಟಣದಲ್ಲಿ ಸಂಗೀತ ಶಾಲೆಯ ಅವಶ್ಯಕತೆಯಿತ್ತು. ಇದೀಗ ಗಾನ ಗಂಧರ್ವ ಪಂಡಿತ್ ಪುಟ್ಟರಾಜ ಗವಾಯಿಗಳವರ ಹೆಸರಲ್ಲಿ ಅಂಧ ಕಲಾವಿದ ಹರ್ಲಾಪೂರದ ಮೆಹಬೂಬಸಾಬ್ ಅವರಿಂದ ಸಂಗೀತ ಶಾಲೆ ಪ್ರಾರಂಭಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಪಟ್ಟಣ ಸೇರಿ ತಾಲೂಕಿನ ಸಂಗೀತಾಸಕ್ತರು ಈ ಸಂಗೀತ ಶಾಲೆಯ ಶ್ರೇಯೋಭಿವೃದ್ಧಿಗೆ ಕೈ ಜೋಡಿಸ ಬೇಕು ಮತ್ತು ಮಕ್ಕಳಿಗೆ ಸಂಗೀತದ ಶಿಕ್ಷಣ ಕಲ್ಪಿಸಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಡಾ|ಪಂ| ಶ್ರೀ ಕಲ್ಲಯ್ಯಜ್ಜನವರು ಶುಭ ಹಾರೈಸಿ ಮಾತನಾಡಿ, ಹುಟ್ಟು ಕುರುಡರಾದ ಮೆಹಬೂಬ ಸಾಬ್ ಅವರು ಮುಸ್ಲಿಮರಾಗಿದ್ದರೂ ವಿಭೂತಿ, ರುದ್ರಾಕ್ಷಿ ಧಾರಣೆಯಿಂದ ಪುಟ್ಟರಾಜ ಋಷಿಗಳ ಕೃಪಾಶೀರ್ವಾದಿಂದ ಸಂಗೀತ ಸರಸ್ವತಿಯನ್ನು ಒಲಿಸಿಕೊಂಡಿದ್ದಾರೆ. ತಾವು ಕಲಿತ ವಿದ್ಯೆಯನ್ನು ಇತರರಿಗೆ ಕಲಿಸುವ ಮತ್ತು ಆ ಮೂಲಕ ಪುಟ್ಟರಾಜ ಗವಾಯಿಗಳ ಹೆಸರುಳಿಸುವ ಕಾರ್ಯಕ್ಕೆ ಮುಂದಾಗಿರುವುದು ಹಮ್ಮೆಯ ಸಂಗತಿ ಎಂದರು.
ಸಂಗೀತ ಕ್ಷೇತ್ರವನ್ನು ಪ್ರೀತಿಸುವ, ಪ್ರೋತ್ಸಾಹಿಸಿ ಪೋಷಿಸುವ ಮನಸ್ಸು ನಮ್ಮೆಲ್ಲರದ್ದಾಗಬೇಕು. ಜೊತೆಗೆ ಸರಕಾರದ ಪ್ರೋತ್ಸಾಹ ಇಂತಹ ಕಲಾವಿದರಿಗೆ ಇನ್ನಷ್ಟು ಅವಶ್ಯಕವಾಗಿದೆ. ಸಂಗೀತ ಸೇವೆಗಾಗಿಯೇ ಜೀವನ ಮುಡಿಪಾಗಿಟ್ಟ ಕಲಾವಿದರು ಮತ್ತು ಪೋಷಕರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.
ಗಂಜಿಗಟ್ಟಿ ಶಿವಲಿಂಗೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು, ಹೂವಿನ ಶಿಗ್ಲಿಯ ಚನ್ನವೀರ ಮಹಾ ಸ್ವಾಮಿಗಳು ಮಾತನಾಡಿ, ಸಂಗೀತ ಮತ್ತು ನಾಟಕ ಕ್ಷೇತ್ರಕ್ಕೆ ಲಕ್ಷ್ಮೇಶ್ವರದ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ಅಂಧ ಸಂಗೀತ ಕಲಾವಿದರಿಂದ ಸಂಗೀತ ಸೇವೆ ನಡೆಯುತ್ತಿರುವುದು ಸಂತಸ ತಂದಿದೆ. ಎಲ್ಲ ಧರ್ಮ, ಜಾತಿ ಮೀರಿದ ಸಂಗೀತ ದೇವರನ್ನು ಕಾಣಲು ಇರುವ ಏಕೈಕ ಸುಲಭ ಮಾರ್ಗ ಎಂದರೆ ತಪ್ಪಾಗದು. ಸಂಗೀತ ಮನಸ್ಸಿನ ಆನಂದವನ್ನು ಇಮ್ಮಡಿಗೊಳಸುತ್ತದೆ. ಸಂಗೀತಕ್ಕೆ ಒಲಿಯದ ಮನವಿಲ್ಲ. ಪಶುಪಕ್ಷಿಗಳು, ಗಿಡ ಮರಗಳು ಕೂಡಾ ಸಂಗೀತವನ್ನು ಸವಿಯಬಲ್ಲವು. ಸಂಗೀತಕ್ಕೆ ಎಲ್ಲವನ್ನೂ ಗೆಲ್ಲಬಲ್ಲ ಶಕ್ತಿಯಿದೆ. ಅಂತಹ ವಾತಾವರಣ ಸೃಷ್ಟಿಸುವ ಸಂಗೀತ ಕಲಾವಿದರು ಮತ್ತು ಶಾಲೆಗಳನ್ನು ಪ್ರೋತ್ಸಾಹಿಸಬೇಕೆಂದರು.
ಹಿರಿಯ ಗಾಯಕ ಉಸ್ತಾದ ಹುಮಾಯೂನ್ ಹರ್ಲಾಪೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಶಾಸಕರಾದ ರಾಮಣ್ಣ ಲಮಾಣಿ, ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ, ರಾಮಕೃಷ್ಣ ದೊಡ್ಡಮನಿ, ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ, ಉಪಾಧ್ಯಕ್ಷೆ ಮಂಜವ್ವ ನಂದೆಣ್ಣವರ, ಶಿವಾನಂದ ಬೆಂತೂರ, ಬಸಣ್ಣ ಬೆಟಗೇರಿ, ಪುರಾಣಿಕಮಠ ಸಹೋದರರು, ಡಾ|ಚಂದ್ರು ಲಮಾಣಿ, ಪೀರಸಾಬ ಕೌತಾಳ, ಮೆಹಬೂಬ್‌ಸಾಬ ಕುಟುಂಬಸ್ಥರಿದ್ದರು.
ಕಲಾವಿದ ಶಂಭಯ್ಯ ಹಿರೇಮಠ ನಿರೂಪಿಸಿದರು. ಅನೇಕರು ಸಂಗೀತ ಶಾಲೆ ನಿರ್ಮಾಣಕ್ಕೆ ಅಳಿಲು ಸೇವೆ ಸಲ್ಲಿಸಿದರು. ಅಂಧ ಸಂಗೀತ ಕಲಾವಿದ ಮೆಬಬೂಬಸಾಬ್ ಹರ್ಲಾಪೂರ ಪ್ರಾರ್ಥನಾ ಸಂಗೀತ ನೀಡಿ ತನ್ನ ಸಂಗೀತ ಸೇವೆಗೆ ಕೈ ಜೋಡಿಸಬೇಕೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.