ಹಸಿರು ವೃದ್ಧಿಗೆ ಮರ ದತ್ತು ಸ್ವೀಕಾರ ಯೋಜನೆ
ಗದಗ ಉಪ ಅರಣ್ಯ ವಲಯದಿಂದ ರಾಜ್ಯದಲ್ಲೇ ಮೊದಲ ವಿಶಿಷ್ಟ ಯೋಜನೆ
Team Udayavani, Sep 2, 2020, 4:42 PM IST
ಗದಗ: ಪ್ರಾಣಿಗಳ ದತ್ತು ಸ್ವೀಕಾರ ಯಶಸ್ವಿಯಾದ ಬೆನ್ನಲ್ಲೇ ಗಿಡ-ಮರಗಳ ದತ್ತು ಸ್ವೀಕಾರವೂ ಆರಂಭವಾಗಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಗದಗ ಉಪ ಅರಣ್ಯ ವಲಯ ಈ ಯೋಜನೆ ಅನುಷ್ಠಾನಗೊಳಿಸಿದೆ.
ಅರಣ್ಯ ಇಲಾಖೆಯ ವನ್ಯಜೀವಿಗಳ ದತ್ತು ಕಾರ್ಯಕ್ರಮದ ಮಾದರಿಯಲ್ಲೇ ಈ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ವಿಶಿಷ್ಟ ಅಭಿಯಾನದಡಿ ಮಂಗಳವಾರ ಐವರು ತಲಾ ಒಂದೊಂದು ಸಸಿಯನ್ನು ದತ್ತು ಪಡೆದು ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದಾರೆ. ಸಸಿಯೊಂದಕ್ಕೆ ಇಲಾಖೆಯಿಂದ 500 ರೂ. ಶುಲ್ಕ ನಿಗದಿಗೊಳಿಸಲಾಗಿದೆ. ಇಲ್ಲಿನ ಬಿಂಕದಕಟ್ಟಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ದಾನಿಗಳ ಮೂಲಕವೇ ಈ ಸಸಿಗಳನ್ನು ನೆಡಲಾಗುತ್ತದೆ. ಬಳಿಕ ಆ ಸಸಿಗಳ ಪೋಷಣೆಯನ್ನು ಇಲಾಖೆಯೇ ನಿರ್ವಹಿಸಲಿದೆ. ದತ್ತು ಪಡೆದ ಗಿಡದ ಮುಂದೆ ದಾನಿಗಳು ಬಯಸಿದ ನಾಮಫಲಕ ಅಳವಡಿಸಲಾಗುತ್ತದೆ. ಜತೆಗೆ ಮರದ ಸಂಖ್ಯೆ, ತಳಿ ಹಾಗೂ ದಾನಿಗಳು ಹಾಕಿಸಿದ ಹೆಸರನ್ನು ಒಳಗೊಂಡಿರುವ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ.
ಜಾಗೃತಿಯೊಂದಿಗೆ ಹಣ ಸಂಗ್ರಹ: ಇತ್ತೀಚೆಗೆ ಕೋವಿಡ್ ಲಾಕ್‌ಡೌನ್‌ನಿಂದಾಗಿ ಪ್ರಮುಖ ಪ್ರವಾಸಿ ತಾಣಗಳು ಬಾಗಿಲು ಮುಚ್ಚಿವೆ.ಇದರಿಂದ ಅರಣ್ಯ ಇಲಾಖೆಯ ವನ್ಯಜೀವಿ ಧಾಮಗಳು ಹಾಗೂ ಟ್ರೀ ಪಾರ್ಕ್‌ಗಳೂ ಕೂಡ ಹೊರತಾಗಿಲ್ಲ. ಇದರಿಂದ ಇಲಾಖೆ ಆರ್ಥಿಕ ನಷ್ಟ ಅನುಭವಿಸುತ್ತಿದೆ. ಪರಿಣಾಮ ಸಸ್ಯೋದ್ಯಾನದ ಗುತ್ತಿಗೆ ಆಧಾರಿತ ಕೂಲಿ ಕಾರ್ಮಿಕರಿಗೆ ವೇತನ ಪಾವತಿಸುವುದೂ ಕಷ್ಟಕರವಾಗಿದೆ. ಅಲ್ಲದೇ ಸುಮಾರು 200 ಎಕರೆ ಪ್ರದೇಶದಲ್ಲಿರುವ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಇನ್ನೂ ಸಾವಿರಾರು ಗಿಡಮರ ಬೆಳೆಸಬಹುದಾಗಿದೆ. ಇದನ್ನು ಮನಗಂಡ ಸ್ಥಳೀಯ ಅರಣ್ಯ ಅಧಿಕಾರಿಗಳು ಮರಗಳ ದತ್ತು ಸ್ವೀಕಾರ ಯೋಜನೆ ಜಾರಿಗೊಳಿಸಿದ್ದಾರೆ. ಮೊದಲ ಹಂತದಲ್ಲಿ ದತ್ತು ಸ್ವೀಕಾರ ಕಾರ್ಯಕ್ರಮದಡಿ ಒಂದು ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಿದ್ದು, ಸುಮಾರು ಐದು ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಅದನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಅದರಿಂದ ಬರುವ ಬಡ್ಡಿ ಹಣವನ್ನು ಕಾರ್ಮಿಕ ವೇತನಕ್ಕೆ ಬಳಸುವುದು ಇದರ ಉದ್ದೇಶವಾಗಿದೆ.
ತಮ್ಮ ಜೀವನ ಅಮೂಲ್ಯವಾದ ಸಂದರ್ಭದ ಸ್ಮರಣಾರ್ಥ ಇಲ್ಲಿ ಮರಗಳನ್ನು ದತ್ತು ಪಡೆದು ಅವಿಸ್ಮರಣೀಯಗೊಳಿಸಬಹುದು. ದೀರ್ಘ ಆಯುಷ್ಯ ಹೊಂದಿರುವ ಆಲ, ಬೇವು, ಹೊಂಗೆ ಸೇರಿದಂತೆ ಐದಾರು ಬಗೆಯ ಬೃಹತ್ ಮರಗಳನ್ನು ಈ ಯೋಜನೆಯಡಿ ಸೇರಿಸಲಾಗಿದೆ. ದಾನಿಗಳು ಯಾವುದಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಮರಗಳ ದತ್ತು ಕಾರ್ಯಕ್ರಮ ರಾಜ್ಯದಲ್ಲಿ ಇಲ್ಲೇ ಮೊದಲಿಗೆ ಆರಂಭಗೊಂಡಿದೆ. – ಸೂರ್ಯಸೇನ್, ಡಿಸಿಎಫ್, ಗದಗ
-ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…
ಆಕರ್ಷಕ ಪ್ರವಾಸಿ ತಾಣ, ಸುಂದರ ಊರು…ಸೂಡಿ ಪ್ರಾಚೀನ ಪರಂಪರೆಗೆ ಸಾಕ್ಷಿ…
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!