ಪಾವತಿಯಾಗದ ವಿದ್ಯುತ್ ಶುಲ್ಕ; ಭೀಷ್ಮ ಕೆರೆ ಕತ್ತಲಲ್ಲಿ
ಪ್ರವಾಸಿಗರ ಕೊರತೆ-ಬಾರದ ಆದಾಯ-ಬೋಟಿಂಗ್ ಬಂದ್ ವಿದ್ಯುತ್ ಶುಲ್ಕ ಪಾವತಿಸದ ಕಾರಣ ವಿದ್ಯುತ್ ಕಡಿತ
Team Udayavani, May 30, 2022, 11:55 AM IST
ಗದಗ: ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ಕಾಟದಿಂದ ಇನ್ನೂ ಹಲವು ಕ್ಷೇತ್ರಗಳು ಚೇತರಿಸಿಕೊಂಡಿಲ್ಲ. ಇದರಿಂದ ಇಲ್ಲಿನ ಭೀಷ್ಮ ಕೆರೆ ಉದ್ಯಾನವೂ ಹೊರತಾಗಿಲ್ಲ. ಕೋವಿಡ್ ಆತಂಕ ದೂರವಾದ ಬಳಿಕವೂ ಪ್ರವಾಸಿಗರ ಸಂಖ್ಯೆ ಸುಧಾರಣೆಯಾಗಿಲ್ಲ. ಪರಿಣಾಮ ವಿದ್ಯುತ್ ಶುಲ್ಕ ಪಾವತಿಸಲಾಗದ ಸ್ಥಿತಿಗೆ ತಲುಪಿದ್ದು, ಕಳೆದ ಎರಡು ದಿನಗಳಿಂದ ವಿಶ್ವಗುರು ಬಸವೇಶ್ವರ ಉದ್ಯಾನ ಮತ್ತು ಪುತ್ಥಳಿ ಕತ್ತಲೆಯಲ್ಲೇ ಮುಳುಗಿದೆ.
ಜ|ತೋಂಟದ ಸಿದ್ಧರಾಮ ಸ್ವಾಮೀಜಿಗಳ ಒತ್ತಾಸೆಯಂತೆ ಒಂದೂವರೆ ದಶಕದ ಹಿಂದೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಶ್ರೀರಾಮುಲು ಪ್ರಯತ್ನದಿಂದ 111 ಅಡಿ ಎತ್ತರದ ಪುತ್ಥಳಿ ನಿರ್ಮಿಸಲಾಗಿತ್ತು. ಪುತ್ಥಳಿಯ ಕೆಳಭಾಗದಲ್ಲಿ ಬಸವೇಶ್ವರರರ ಜೀವನ ದರ್ಶನ ಮತ್ತು ಸಾಮಾಜಿಕ ಕ್ರಾಂತಿಯ ಪ್ರಮುಖ 10ಕ್ಕೂ ಹೆಚ್ಚು ಸನ್ನಿವೇಶಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಸಿಮೆಂಟ್ ಕಲಾಕೃತಿಗಳಲ್ಲಿ ಬಿಂಬಿಸಲಾಗಿದೆ. ಸುಂದರವಾದ ಮ್ಯೂಸಿಯಂ ಸ್ಥಾಪಿಸಲಾಗಿದೆ. ಹಿನ್ನೆಲೆ ಧ್ವನಿಯಲ್ಲಿ ಪ್ರತಿಯೊಂದು ಸನ್ನಿವೇಶ ಬಗ್ಗೆ ವಿವರಿಸಲಾಗುತ್ತಿದೆ. ಇದು ಪ್ರಮುಖ ಆಕರ್ಷಣೆಯಾಗಿದೆ.
ಆನಂತರ ದಿನಗಳೆದಂತೆ ಬಸವೇಶ್ವರರ ಪುತ್ಥಳಿ ಸುತ್ತಲೂ ಸುಂದರವಾದ ಉದ್ಯಾನ ಅಭಿವೃದ್ಧಿ ಹಾಗೂ ಪ್ರವಾಸಿಗರ ಆಕರ್ಷಣೆಗಾಗಿ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಭೀಷ್ಮಕೆರೆ ಆವರಣದಲ್ಲಿ ಬೋಟಿಂಗ್ ಆರಂಭಿಸಲಾಯಿತು. ನಿರೀಕ್ಷೆಯಂತೆ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿತ್ತು. ಪ್ರತಿ ನಿತ್ಯ ನೂರಾರು ಜನರು ಮತ್ತು ಹಬ್ಬ, ಹರಿದಿನಗಳಲ್ಲಿ ಸಾವಿರಾರು ಜನರು ಭೇಟಿ ನೀಡುತ್ತಿದ್ದರು. ಇದರಿಂದ ಕೆಲ ವರ್ಷಗಳವರೆಗೆ ಉತ್ತಮ ಆದಾಯ ಬಂದಿತ್ತು.
ವಿದ್ಯುತ್ ಸಂಪರ್ಕ ಕಡಿತ: ಕೋವಿಡ್ ಮುಗಿದು ವರ್ಷ ಕಳೆಯುತ್ತಿದ್ದರೂ, ಭೀಷ್ಮಕೆರೆ ಉದ್ಯಾನಕ್ಕೆ ಸಂದರ್ಶಿತರ ಸಂಖ್ಯೆ ಇನ್ನೂ ಇಳಿಮುಖವಾಗಿಯೇ ಇದೆ. ವಾರಾಂತ್ಯ 150 ರಿಂದ 200 ಜನರು ಮಾತ್ರ ಆಗಮಿಸುತ್ತಿದ್ದಾರೆ. ಅದರಿಂದ ಬರುವ ಆದಾಯದಿಂದ ಸಕಾಲಕ್ಕೆ ವಿದ್ಯುತ್ ಬಿಲ್ ಪಾವತಿಸಲೂ ಸಾಧ್ಯವಾಗುತ್ತಿಲ್ಲ. ಕಳೆದ ಮಾರ್ಚ್‌ನಿಂದ ಈಚೆಗೆ ಸುಮಾರು 36 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿದ್ದರಿಂದ ಶನಿವಾರ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಎಂದಿನಂತೆ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರು, ಮ್ಯೂಸಿಯಂನಲ್ಲಿ ಬೆಳಕಿನ ಸೌಲಭ್ಯವಿಲ್ಲದ ಕಾರಣ ತಮ್ಮ ಮೊಬೈಲ್ ಟಾರ್ಚ್ ಬಳಸಿ ವೀಕ್ಷಿಸುವಂತಾಗಿದೆ. ಹಿನ್ನೆಲೆ ಧ್ವನಿಯೂ ಬಂದ್ ಆಗಿದ್ದರಿಂದ ಅಡಿ ಬರಹ ಓದಲು ಹೆಣಗಾಡುತ್ತಾರೆ. ಗಾಳಿ, ಬೆಳಕು ಇಲ್ಲದ್ದರಿಂದ ಕೆಲವೇ ಹೊತ್ತಿನಲ್ಲಿ ಜನರು ಹೊರ ಬರುವಂತಾಗುತ್ತದೆ ಎಂಬುದು ವಿಪರ್ಯಾಸ.
ದಡದಲ್ಲೇ ಉಳಿದ ದೋಣಿಗಳು: ಕೋವಿಡ್ ನಂತರ ದೋಣಿ ವಿಹಾರ ನಿರ್ವಹಣೆಗಾಗಿ ಜಿಲ್ಲಾಡಳಿತ ಸುಮಾರು 4 ಲಕ್ಷ ರೂ. ಮೊತ್ತಕ್ಕೆ ಒಂದು ವರ್ಷದ ಅವಧಿಗೆ ಖಾಸಗಿ ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿತ್ತು. ಆದರೆ ಪ್ರವಾಸಿಗರ ಕೊರತೆಯಿಂದಾಗಿ ಹೂಡಿದ ಹಣವೂ ವಾಪಸ್ಸಾಗದ್ದರಿಂದ ಗುತ್ತಿಗೆದಾರರು ಅರ್ಧಕ್ಕೆ ಕೈಚೆಲ್ಲಿದ್ದಾರೆ. ಅಲ್ಲದೇ ಭೀಷ್ಮಕೆರೆಯ ಇತರೆ ಭಾಗದಲ್ಲಿ ನಗರಸಭೆ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ಪಿಐಎಲ್ ದಾಖಲಾಗಿದ್ದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಪರಿಣಾಮ ದಿನಗಳೆದಂತೆ ಭೀಷ್ಮಕೆರೆ ಕಳೆಗುಂದುತ್ತಿದೆ.
ಕೊರೊನಾ ನಂತರ ಭಿಷ್ಮಕೆರೆ ಉದ್ಯಾನದ ಆದಾಯ ನಿರೀಕ್ಷಿತ ಮಟ್ಟದಲ್ಲಿ ಚೇತರಿಸಿಕೊಂಡಿಲ್ಲ. ಆದರೆ ವಿದ್ಯುತ್ ಬಿಲ್ ಪಾವತಿಸಲಾಗದಷ್ಟಲ್ಲ. ಸಾಲು ಸಾಲು ರಜೆ ಬಂದಿದ್ದರಿಂದ ಬಿಲ್ ಪಾಸಾಗಿಲ್ಲ. ಆ ಕಡತ ಜಿಲ್ಲಾಧಿಕಾರಿಗಳ ಬಳಿಯಿದ್ದು, ಸೋಮವಾರ ಮಧ್ಯಾಹ್ನದ ವೇಳೆ ಚೆಕ್ ಹೆಸ್ಕಾಂಗೆ ಸೇರಲಿದೆ. ಬೋಟಿಂಗ್ ಪುನಾರಂಭಿಸುವ ಬಗ್ಗೆ ನಗರಸಭೆ ಆಡಳಿತ ಮಂಡಳಿ ನಿರ್ಧರಿಸಬೇಕಿದೆ. -ಬಸವರಾಜ ಬಳ್ಳಾರಿ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ
ನಾವು ಬಾಗಲಕೋಟೆಯಿಂದ ಕುಟುಂಬ ಸಮೇತ ಬಂದಿದ್ದೇವೆ. ಬಿಂಕದಕಟ್ಟಿ ಉದ್ಯಾನ, ಸಾಲುಮರದ ತಿಮ್ಮಕ್ಕ ಉದ್ಯಾನ ವೀಕ್ಷಿಸಿಕೊಂಡು ಸಂಜೆ ಭೀಷ್ಮಕೆರೆಯ ಬಸವೇಶ್ವರರ ಪುತ್ಥಳಿ, ಮ್ಯೂಸಿಯಂ ವೀಕ್ಷಿಸಿ ಮರಳಿ ಊರಿಗೆ ತೆರಳಲು ಉದ್ದೇಶಿಸಿದ್ದೆವು. ಎಲ್ಲವೂ ಅಂದುಕೊಂಡಂತೆ ಆದರೂ, ಭೀಷ್ಮಕೆರೆ ಮ್ಯೂಸಿಯಂನಲ್ಲಿ ವಿದ್ಯುತ್ ಕಡಿತವಾಗಿದ್ದರಿಂದ ಏನೂ ನೋಡಲು ಆಗಲಿಲ್ಲ ಎಂಬುದು ಬೇಸರ ಮೂಡಿಸಿದೆ. ಮೃತ್ಯುಂಜಯ ಬಿರಾದಾರ, ಬಾಗಲಕೋಟೆ ನಿವಾಸಿ
-ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
Diesel theft; ಗದಗ: ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.