![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 16, 2021, 4:40 PM IST
ಗದಗ: ನಗರದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಕಾರ್ಯಾರಂಭಗೊಂಡು ನಾಲ್ಕು ವರ್ಷಗಳು ಕಳೆದರೂ 2ನೇ ಹಂತದ ಕಾಮಗಾರಿಗಳಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಹೀಗಾಗಿ ಈವರೆಗೂ ವಿಸಿಐನಿಂದ ಪೂರ್ಣ ಪ್ರಮಾಣದ ಮಾನ್ಯತೆಯೇ ಸಿಕ್ಕಿಲ್ಲ.
ನಾಲ್ಕು ವರ್ಷ ಪಶುವೈದ್ಯಕೀಯ ಪೂರ್ಣಗೊಳಿಸಿದರೂ ಅಂತಿಮ 5ನೇ ವರ್ಷದ ಪ್ರಾಯೋಗಿಕ ಕಲಿಕೆಗೆ ಅರ್ಹರಲ್ಲ. ಹೀಗಾಗಿ ಸರ್ಕಾರದ ಆಲಸ್ಯದಿಂದ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದತ್ತ ಸಾಗಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದ್ದು, ಹೋರಾಟದ ಹಾದಿ ತುಳಿಯುವಂತಾಗಿದೆ.
ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದಿಂದ ನಗರದ ಹೊಂಬಳ ರಸ್ತೆಯಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲಾಗಿದೆ. 2017-18ನೇ ಸಾಲಿನಲ್ಲಿ ಕಾರ್ಯಾರಂಭಿಸಿದ್ದು, ಪಶು ವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ, ಪಶುವೈದ್ಯಕೀಯ ಶರೀರ ಶಾಸ್ತ್ರ, ಮತ್ತು ಜೀವರಾಸಾಯನ ಶಾಸ್ತ್ರ ಹಾಗೂ ಪಶುವೈದ್ಯಕೀಯ ಪರಾವಲಂಭಿ ಶಾಸ್ತ್ರ ಸೇರಿ ಒಟ್ಟು 17 ಬೋಧನಾ ವಿಭಾಗಗಳಿವೆ. ಪ್ರತಿವರ್ಷ 50ರಂತೆ ಒಟ್ಟು 200 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕಾಲೇಜು ಆರಂಭ, 3 ಮತ್ತು 4ನೇ ವರ್ಷದ ತರಗತಿಗಳಿಗೆ ಭಾರತೀಯ ವೈದ್ಯಕೀಯ ಪರಿಷತ್ ಷರತ್ತುಬದ್ಧ ಅನುಮತಿ ನೀಡಿ ಕಾಲೇಜಿನಲ್ಲಿರುವ ನ್ಯೂನತೆಗಳನ್ನು ಒಂದು ವರ್ಷದಲ್ಲಿ ಸರಿಪಡಿಸಿಕೊಳ್ಳುವಂತೆ ಸೂಚಿಸಿತ್ತು. ಆದರೆ, ಗಡುವು ಮುಗಿದು ವರ್ಷ ಕಳೆದರೂ ಷರತ್ತು ಗಳನ್ನು ಪೂರೈಸಿಲ್ಲ.
ಹೀಗಾಗಿ ಕಾಲೇಜಿಗೆ ವಿಸಿಐ ಅಂತಿಮ ಮಾನ್ಯತೆ ದೊರೆಯದೇ ಆ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಕರ್ನಾಟಕ ಪಶುವೈದ್ಯಕೀಯ ಪರಿಷತ್‌ನಿಂದ ತಾತ್ಕಾಲಿಕ ಪ್ರಮಾಣ ಪತ್ರ ದೊರೆಯದು. ಇದಿಲ್ಲದೇ ಪ್ರಯೋಗಿಕ ಕಲಿಕೆ ಮತ್ತು ವೃತ್ತಿ ಆರಂಭಕ್ಕೆ ಅವಕಾಶವಿಲ್ಲ. 4 ವರ್ಷಗಳು ಕಲಿತದ್ದೂ ವ್ಯರ್ಥ ಎಂಬುದು ವಿದ್ಯಾರ್ಥಿಗಳ ಅಳಲು.
ವಿಸಿಐ ವಿಧಿಸಿದ ಷರತ್ತುಗಳೇನು?: ಮೊದಲ ಹಂತದಲ್ಲಿ ಈವರೆಗೆ 50 ಕೋಟಿ ರೂ. ಮೊತ್ತದಲ್ಲಿ ಕಾಲೇಜು ಕಟ್ಟಡ, ಆಸ್ಪತ್ರೆ ಕಟ್ಟಡ, ವಿದ್ಯಾರ್ಥಿನಿಲಯ, ಅತಿಥಿ ಗೃಹ ನಿರ್ಮಿಸಲಾಗಿದೆ. ಆದರೆ, ಈ ಹಿಂದೆ ಎರಡು ಬಾರಿ ಗದಗ ಪಶುವೈದ್ಯಕೀಯ ಕಾಲೇಜಿಗೆ ಈ ಹಿಂದೆ ಭೇಟಿ ನೀಡಿದ್ದ ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಸದಸ್ಯ ತಂಡ, ಕಾಲೇಜಿನ ಅಂತಿಮ ಮಾನ್ಯತೆಗೆ ಅಗತ್ಯವಿರುವ ಕೆಲಸ ಕಾರ್ಯಗಳನ್ನು ಪಟ್ಟಿ ಮಾಡಿದೆ. ಆ ಪೈಕಿ ಕಾಲೇಜಿನ ಒಟ್ಟು ಮಂಜೂರಾತಿ ಹುದ್ದೆಗಳಲ್ಲಿ ಕನಿಷ್ಠ ಶೇ. 60 ರಷ್ಟಿರಬೇಕು. 2ನೇ ಹಂತದ ಕಾಮಗಾರಿಗಳಾದ ವಿದ್ಯಾರ್ಥಿನಿಯರ ವಸತಿ ನಿಲಯ, ಪ್ರಯೋಗಾಲಯ, ಚಿಕಿತ್ಸಾಲಯ, ಚಿಕಿತ್ಸಾ ಉಪಕರಣಗಳು, ಪೀಠೊಪಕರಣಗಳನ್ನು ಆದಷ್ಟು ಬೇಗ ಖರೀದಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿತ್ತಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಗತ್ಯ ಅನುದಾನವನ್ನೂ ಮಂಜೂರು ಮಾಡುತ್ತಿಲ್ಲ ಎನ್ನಲಾಗಿದೆ.
ಒಟ್ಟು 91 ಹುದ್ದೆಗಳಲ್ಲಿ 63 ಹುದ್ದೆ ಖಾಲಿ!: ಕಾಲೇಜಿನಲ್ಲಿ ಒಟ್ಟು 91 ಮಂಜೂರಾತಿ ಹುದ್ದೆಗಳ ಪೈಕಿ 63 ಹುದ್ದೆಗಳು ಖಾಲಿ ಉಳಿದಿವೆ. 28ರಲ್ಲಿ ಡೀನ್ ಸೇರಿದಂತೆ ಬೆರಳೆಣಿಕೆಯಷ್ಟು ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಇನ್ನುಳಿದ ಹುದ್ದೆಗಳಲ್ಲಿ ಸಹಾಯಕ ಪ್ರಾಧ್ಯಾಪಕರು ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬೊಬ್ಬರು ಮೂರ್‍ನಾಲ್ಕು ವಿಭಾಗಗಳಲ್ಲಿ ಬೋಧಿಸುತ್ತಿದ್ದು, ಗುಣಾತ್ಮಕ ಬೋಧನೆ ಮತ್ತು ಕಲಿಕೆಗೆ ಹಿನ್ನಡೆಯಾಗುತ್ತಿದೆ.
ಮರುಕಳಿಸದಿರಲಿ ಹಾಸನ, ಶಿವಮೊಗ್ಗ ಪರಿಸ್ಥಿತಿ: ಗದಗ ಸೇರಿದಂತೆ ರಾಜ್ಯದಲ್ಲಿರುವ ಐದು ಪಶುವೈದ್ಯಕೀಯ ಕಾಲೇಜುಗಳಿವೆ. ಆ ಪೈಕಿ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ಕಾಲೇಜುಗಳಿಗೂ ಮೂಲ ಸೌಕರ್ಯಗಳ ಕೊರತೆಯಿಂದ ವಿಸಿಐ ಅಂತಿಮ ಮಾನ್ಯತೆ ನಿರಾಕರಿಸಿತ್ತು. ಆಯಾ ಕಾಲೇಜಿನಲ್ಲಿ ನಾಲ್ಕು ವರ್ಷ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 5ನೇ ವರ್ಷದ ಪ್ರವೇಶ ದೊರೆಯಲಿಲ್ಲ. ಪರಿಣಾಮ ಅಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಎರಡು ಮೂರು ವರ್ಷಗಳ ಕಾಲ ಬೀದಿಗಿಳಿದು ಹೋರಾಟ ನಡೆಸುವಂತಾಯಿತು. ಗದಗ ಕಾಲೇಜಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ಗಮನಾರ್ಹ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾಲೇಜಿಗೆ ಅಗತ್ಯ ಬೋಧಕರನ್ನು ನೇಮಿಸಿ, ಅನುದಾನ ನೀಡಿ, ವಿಸಿಐ ಷರತ್ತುಗಳನ್ನು ಪೂರ್ಣಗೊಳಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ
ಮುಂಬರುವ ಮಾರ್ಚ್‌ನಿಂದ ಕಾಲೇಜಿನ ವಿದ್ಯಾರ್ಥಿಗಳು 5ನೇ ವರ್ಷದಲ್ಲಿ ಪ್ರಯೋಗಿಕ ಕಲಿಕೆಗೆ ವಿಸಿಐ ಮಾನ್ಯತೆ ಬೇಕೇಬೇಕು. ಅದಕ್ಕಾಗಿ ಬಾಕಿ ಇರುವ 2ನೇ ಹಂತದ ಕಾಮಗಾರಿಗಳಿಗಾಗಿ 65 ಕೋಟಿ ರೂ. ಅನುದಾನ ಕೋರಲಾಗಿದೆ. ಜೊತೆಗೆ ಅಗತ್ಯ ಸಿಬ್ಬಂದಿಯನ್ನೂ ನಿಯೋಜಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. –ಆರ್. ನಾಗರಾಜ, ಪಶು ವೈದ್ಯಕೀಯ ಕಾಲೇಜಿನ ಡೀನ್
ಮೂಲಸೌಲಭ್ಯ ಹಾಗೂ ಸಮರ್ಪಕ ಬೋಧಕ ಸಿಬ್ಬಂದಿ ಕೊರತೆಯಿಂದ ಕಾಲೇಜಿಗೆ ಈವರೆಗೂ ಮಾನ್ಯತೆ ದೊರೆತಿಲ್ಲ. ವಿಸಿಐ ಮಾನ್ಯತೆ ಇಲ್ಲದೇ, ಐದು ವರ್ಷಗಳ ಕಾಲ ಕಷ್ಟಪಟ್ಟು ಪದವಿ ಪಡೆದರೂ, ಪ್ರಮಾಣ ಪತ್ರಕ್ಕೆ ಮಹತ್ವವೇ ಇಲ್ಲ. ಶಿಕ್ಷಣಕ್ಕಾಗಿ ಸಾಲಸೋಲ ಮಾಡಿ ಇಷ್ಟು ದಿನ ಕಲಿತಿದ್ದು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. –ನಿಶ್ಚಿತ್ ಕುಮಾರ್, 4ನೇ ವರ್ಷದ ವಿದ್ಯಾರ್ಥಿ
ಕಾಲೇಜಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಸದನದಲ್ಲಿ ನಿಯಮ 72ರ ಅಡಿ ಸರ್ಕಾರದ ಗಮನ ಸೆಳೆಯುತ್ತೇನೆ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. –ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ
–ವೀರೇಂದ್ರ ನಾಗಲದಿನ್ನಿ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
You seem to have an Ad Blocker on.
To continue reading, please turn it off or whitelist Udayavani.